ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಸಿಂಪಿಗರ ಮೂರು ತಲೆಮಾರು

Last Updated 5 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಭಾರತವನ್ನು ಬ್ರಿಟಿಷರ ಬಿಗಿಮುಷ್ಟಿಯಿಂದ ಬಿಡಿಸುವ ಆಂದೋಲನದ ರೂಪುರೇಷೆಗಳನ್ನು ತಯಾರು ಮಾಡುತ್ತಿದ್ದ ಬಾಪೂಜಿ ಸ್ವಾವಲಂಬಿ ಭಾರತ ನಿರ್ಮಾಣದತ್ತಲೂ ದೃಷ್ಟಿ ಇಟ್ಟುಕೊಂಡೇ ನಡೆಯುತ್ತಿದ್ದರು. ಸ್ವದೇಶಿ ವಸ್ತುಗಳನ್ನೇ ಉಪಯೋಗಿಸುವ ಮೂಲಕ ಸ್ಥಳೀಯ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವುದರ ಜೊತೆಗೆ ವಿದೇಶಿ ಅವಲಂಬನೆಯನ್ನು ತಪ್ಪಿಸಬೇಕೆಂಬುದೇ ಗಾಂಧೀಜಿ ಅವರ ಮುಖ್ಯ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಆದ್ಯತೆ ಪಡೆದುಕೊಂಡ ವಿಚಾರಗಳಲ್ಲೊಂದು ‘ಖಾದಿ’.

ಹೊದೆಯಲು, ಹಾಸಲು ಹಾಗೂ ಧರಿಸಲು ನಮ್ಮದೇ ಮಾರ್ಗವನ್ನು ಅನುಸರಿಸಿ ವಸ್ತ್ರ ಸಿದ್ಧಪಡಿಸುವ ಕ್ರಮ ಭಾರತದೆಲ್ಲೆಡೆ ಶುರುವಾಗಿ ಖಾದಿಗೆ ಮಹತ್ವ ಬಂತು. ಸ್ವಾತಂತ್ರ್ಯ ಚಳವಳಿಗಾರರು ಮಾತ್ರವಲ್ಲ ಸಾರ್ವಜನಿಕರೂ ಖಾದಿ ಬಳಸಲು ಆರಂಭಿಸಿದರು. ಆಗ ಹಲವೆಡೆ ಖಾದಿ ಉತ್ಪನ್ನಗಳನ್ನು ತಯಾರಿಸುವ ಕೇಂದ್ರಗಳು ಮತ್ತು ಖಾದಿ ವಸ್ತ್ರಗಳನ್ನು ಮಾರುವ ಅಂಗಡಿಗಳು ಆರಂಭಗೊಂಡವು.

ಹಳೆಯ ಬೆಂಗಳೂರಿನ ಕೋಟೆ ಪ್ರದೇಶದಲ್ಲಿ ‘ಖಾದಿ ವಸ್ತ್ರಾಲಯ’ ಪ್ರಾರಂಭಗೊಂಡು ಏಳೆಂಟು ದಶಕಗಳೇ ಕಳೆದಿರಬಹುದು. ಆಗ ಜನೋಪಯೋಗಿ ಕೆಲಸಗಳಿಗೆ ಕೈಜೋಡಿಸುತ್ತಿದ್ದ ದೊಡ್ಡಣ್ಣ ಶೆಟ್ಟರ ಸಂಸ್ಥೆಗಳ ಆವರಣದಲ್ಲಿ ಖಾದಿ ವಸ್ತ್ರಾಲಯ ಉದ್ಘಾಟನೆಗೊಂಡಿತು. ಖಾದಿ ಬಟ್ಟೆ ಕೊಂಡ ಸ್ಥಳದಲ್ಲಿಯೇ ಪೈಜಾಮ–ಜುಬ್ಬಾ ಟೋಪಿ ಹೊಲಿದು ಕೊಡುವ ಸಿಂಪಿಗರೊಬ್ಬರಿಗೂ ಉದ್ಯೋಗ ಸಿಕ್ಕಿತು.

ನೂಲು ಪಡೆದು ತಾವೇ ಕೈಮಗ್ಗದಿಂದ ನೇಯ್ದ ಬಟ್ಟೆಯನ್ನು ಖಾದಿ ವಸ್ತ್ರಾಲಯಕ್ಕೆ ಕೊಟ್ಟು ಮಜೂರಿ (ಕೂಲಿ) ಪಡೆಯುವ ಪರಿಪಾಠ ರೂಢಿಗೆ ಬಂದದ್ದು ಆಗಲೇ. ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯಿಂದ ಖಾದಿ ಧರಿಸುವವರಿಗೆ ಸ್ಥಳವಾಗಿದ್ದ ಈ ವಸ್ತ್ರಾಲಯದಲ್ಲಿ ಬಟ್ಟೆ ಹೊಲಿಯುವ ಕಾಯಕ ಮಾಡುತ್ತಿದ್ದ ಬಿ.ಎಲ್‌. ಸಾಗಪ್ಪರಾವ್‌ ಕುಟುಂಬ ಮೂರು ತಲೆಮಾರುಗಳ ನಂತರವೂ ಅದೇ ವೃತ್ತಿಯನ್ನು ಮುಂದುವರಿಸಿರುವುದು ಗಮನಾರ್ಹ. ಯಾವ ವೃತ್ತಿಯನ್ನು ಯಾರು ಬೇಕಾದರೂ ಕಲಿಯಬಹುದು ಎನ್ನುವ ಈ ಕಾಲದಲ್ಲಿ ಖಾದಿ ಹೊಲಿಯುವ ಕುಟುಂಬ ಆ ಕಸುಬನ್ನು ಜೀವನೋಪಾಯಕ್ಕಾಗಿ ಅವಲಂಬಿಸಿ ಅದನ್ನು ವಿಸ್ತರಿಸಲು ಪ್ರಯತ್ನಿಸಿರುವುದು ‘ಸಾಗಪ್ಪರಾವ್‌ ಮನೆತನ’ದ ಹೆಚ್ಚುಗಾರಿಕೆಯೂ ಹೌದು.

ಸ್ವಾತಂತ್ರ್ಯಪೂರ್ವದಲ್ಲಿ ಸಾಗಪ್ಪರಾವ್‌ ಆರಂಭಿಸಿದ ಖಾದಿ ಬಟ್ಟೆ ಹೊಲಿಯುವ ವೃತ್ತಿಯನ್ನು ಅವರ ಮಕ್ಕಳಾದ ಲಕ್ಷ್ಮಣರಾವ್‌, ಅಶ್ವಥ್ ನಾರಾಯಣ ರಾವ್‌ ಹಾಗೂ ಬದರಿನಾಥ್‌ ಮುಂದುವರಿ ಸಿ­ದರು. ಇವರಲ್ಲಿ 72ರ ಹರೆಯದ ಬಿ.ಎಸ್‌. ಅಶ್ವಥ್‌ ನಾರಾಯಣ ರಾವ್‌ ಅವರ ಮೂವರೂ ಮಕ್ಕಳೂ ಇದೇ ಕಸುಬನ್ನು ಹಿಡಿದಿದ್ದಾರೆ.

ಕೋಟೆ ಖಾದಿ ವಸ್ತ್ರಾಲಯದಿಂದ ಕಿಲಾರಿ ರಸ್ತೆಯ ಪುಟ್ಟ ಕೋಣೆಯಲ್ಲಿ ಖಾದಿ ಹೊಲಿಯುವುದನ್ನು ಅಶ್ವಥ್‌ ನಾರಾಯಣ ರಾವ್‌ ಆರಂಭಿಸಿ ಏನಿಲ್ಲವೆಂದರೂ ಅರ್ಧ ದಶಕ ಕಳೆದಿದೆ. ದೇಹ ಗಟ್ಟಿಮುಟ್ಟಾಗಿದ್ದರೂ ಕಣ್ಣಿನ ಸಮಸ್ಯೆಯಿಂದ ಅವರಿಗೀಗ ಕಸುಬು ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಅವರ ಮಾರ್ಗದರ್ಶನದಲ್ಲೇ ಎರಡು ಟೈಲರ್‌ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಸಂಜಯ್‌ ಕುಮಾರ್‌, ಶ್ರೀನಿವಾಸ್‌ ಹಾಗೂ ಮಂಜುನಾಥ್‌ ಖಾದಿ ಹೊಲಿಯುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ.

‘ಆಗ ಇದ್ದಿದ್ದೇ ಒಂದು ಅಂಗಡಿ, ಅಲ್ಲಿ ಸಿಗುತ್ತಿದ್ದದ್ದು ನೂಲು ವಸ್ತ್ರಗಳೇ. ಈಗ ಕಾಲ ಬದಲಾಗಿದೆ, ಕೈಯಲ್ಲೇ ತಯಾರಿಸುವ ಬಟ್ಟೆ ದಿನೇದಿನೇ ಕಡಿಮೆಯಾಗುತ್ತಿದ್ದು, ಖಾದಿ ಗಿರಣಿ ಬಟ್ಟೆ ತಯಾರಿಕೆ ಹೆಚ್ಚುತ್ತಿದೆ’ ಎನ್ನುತತಾರೆ ಅಶ್ವಥ್‌ ನಾರಾಯಣ ರಾವ್‌. ಮೊದಲು ನಿರ್ದಿಷ್ಟ ವ್ಯಕ್ತಿಗಳು ಮಾತ್ರ ಖಾದಿ ಧರಿಸುತ್ತಿದ್ದರು ಈಗ ಖಾದಿ ಇಷ್ಟಪಡುವವರ ಸಂಖ್ಯೆ ಹೆಚ್ಚಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬೆಂಗಳೂರಿನಲ್ಲಿ ಖಾದಿಯನ್ನು ಮಾರುವ 30–35 ಅಂಗಡಿಗಳಿವೆ. ಆಗಾಗ ಖಾದಿ ಪ್ರದರ್ಶನಗಳು ವ್ಯವಸ್ಥೆಯಾಗುತ್ತಿವೆ. ಖಾದಿಯಲ್ಲಿ ಹೊಸ ಹೊಸ ಆಕರ್ಷಣೆಗಳು ಹುಟ್ಟಿಕೊಂಡಿದ್ದು, ಇದಕ್ಕೆ ಬೇಡಿಕೆ ಹೆಚ್ಚಿದೆ ಎನ್ನುವ ಅಶ್ವಥ್‌ ನಾರಾಯಣ ರಾವ್‌, ಖಾದಿ ಧರಿಸುವ ಆದರ್ಶ ಮಾತ್ರ ಕಾಣುತ್ತಿಲ್ಲ ಎನ್ನುತ್ತಾರೆ.
ಕಿಲಾರಿ ರಸ್ತೆಯ ‘ಕರ್ನಾಟಕ ಖಾದಿ ಭಂಡಾರ್‌’ 1960ರ ನಂತರ ನಾಡಿನ ಹಲವು ಮುಖಂಡರ ಬಟ್ಟೆ ಕೊಳ್ಳುವ ಹಾಗೂ ಹೊಲಿಸುವ ಕಾಯಂ ಅಂಗಡಿ. ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ, ಧರ್ಮಸಿಂಗ್‌, ಕೆ.ಎಚ್‌. ಪಾಟೀಲ್‌, ಡಿ.ಆರ್‌. ಪಾಟೀಲ್‌, ಹುಚ್ಚಮಾಸ್ತಿಗೌಡ, ಕೆ.ಎಚ್‌. ರಂಗನಾಥ್‌, ಎಂ. ಚಂದ್ರಶೇಖರ್‌, ವಿ.ಎಸ್‌. ಕೃಷ್ಣಯ್ಯರ್‌, ಎಚ್‌.ಕೆ. ಪಾಟೀಲ್‌, ಆಸ್ಕರ್‌ ಫರ್ನಾಂಡೀಸ್‌ ಮುಂತಾದವರ ಅಚ್ಚುಮೆಚ್ಚಿನ ಅಂಗಡಿ ಇದು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಇಪ್ಪತ್ತು ವರ್ಷ ನಿರಂತರವಾಗಿ ಬಟ್ಟೆ ಹೊಲಿದುಕೊಟ್ಟ ಹೆಗ್ಗಳಿಕೆ ಅಶ್ವಥ್‌ ನಾರಾಯಣ ರಾವ್‌ ಅವರದು.
‘ಇತ್ತೀಚಿನ ವರ್ಷಗಳಲ್ಲಿ ಆಂಧ್ರ–ತ್ರಿಪುರ, ಪಶ್ಚಿಮ ಬಂಗಾಲ, ತಮಿಳುನಾಡು, ಮೀರತ್‌, ಬಾಗಲ್‌ಪುರ್‌ ಮೊದಲಾದ ಕಡೆಗಳಿಂದ ಗಿರಣಿಗಳ ಬಟ್ಟೆ ಹೆಚ್ಚು ಬರುತ್ತಿದೆ. ಗಿರಾಕಿಗಳೂ ಅದನ್ನು ಇಷ್ಟಪಡುತ್ತಾರೆ. ಒಮ್ಮೆ ಅಳತೆ ನೀಡಿದ ಗ್ರಾಹಕರು ದೂರವಾಣಿಯಲ್ಲಿ ಬೇಡಿಕೆ ಸಲ್ಲಿಸುತ್ತಾರೆ. ಅವರಿಗೆ ಬಟ್ಟೆ ಹೊಲಿದು ಬಸ್‌ನಲ್ಲಿ ಪಾರ್ಸಲ್‌ ಕಳಿಸುತ್ತೇವೆ’ ಎನ್ನುತ್ತಾರೆ ಮಂಜುನಾಥ್‌.

ಬಿಳಿ ಬಣ್ಣದ ಖಾದಿಗೆ ಈಗಲೂ ಹೆಚ್ಚಿನ ಬೇಡಿಕೆ. ರಾಜಕಾರಣಿಗಳು ಧರಿಸುವ ಬಣ್ಣ ಇದು. ಚೌಕಳಿ, ಆಕರ್ಷಕ ವಿನ್ಯಾಸಗಳನ್ನು ಯುವಕರು ಹೆಚ್ಚು ಬಯಸುತ್ತಾರೆ. ಅವರ ಇಷ್ಟದ ಪ್ರಕಾರ ಬಟ್ಟೆ ಸಿದ್ಧಗೊಳ್ಳುತ್ತದೆ.ಚೆನ್ನಾಗಿ ಫಿಟ್‌ ಆಗುವುದನ್ನು ಇಷ್ಟಪಡುವ ಗಿರಾಕಿಗಳು ಡಜನ್‌ಗಟ್ಟಲೆ ಶರ್ಟ್–ಜುಬ್ಬಾಗಳಿಗೆ ಬೇಡಿಕೆ ಇಡುವುದೂ ಉಂಟು. ಪುಟ್ಟ ಗಲ್ಲಿಯಲ್ಲಿರುವ ಈ ಖಾದಿ ಅಂಗಡಿಯಲ್ಲಿ ಯಾವಾಗಲೂ ಹೆಚ್ಚಿನ ಗಿರಾಕಿಗಳು ಇರುವುದಿಲ್ಲ, ಆದರೆ ಬಟ್ಟೆ ಹೊಲಿಯಲು ಸಿಗುವ ಆರ್ಡರ್‌ಗಳು ಮಾತ್ರ ಕಡಿಮೆಯಾಗುವುದಿಲ್ಲ. ವರ್ಷಕ್ಕೆರಡು ಸೀಸನ್‌ನಲ್ಲಿ (ಗಾಂಧಿ ಜನ್ಮದಿನ ಹಾಗೂ ಬಾಪೂ ಪುಣ್ಯತಿಥಿ) ಸರ್ಕಾರ ಖಾದಿ ಬಟ್ಟೆಗಳಿಗೆ ಪ್ರೋತ್ಸಾಹ ನೀಡಲು ರಿಯಾಯತಿ ನೀಡುತ್ತದೆ. ಆಗ ಖಾದಿ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚು, ಅಶ್ವಥ್‌ನಾರಾಯಣ ರಾವ್‌ ಅವರ ಪ್ರಕಾರ ‘ಆ ರಿಯಾಯಿತಿಯು ಬಟ್ಟೆ ವ್ಯಾಪಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಬಟ್ಟೆ ಹೊಲಿದು ಕೊಡುವುದು ವರ್ಷದುದ್ದಕ್ಕೂ ಯಥಾಪ್ರಕಾರವಾಗಿರುತ್ತದೆ. ಅದರಿಂದಲೇ ನಮ್ಮ ಬದುಕಿನ ಬಂಡಿ ನಡೆಯುತ್ತಿದೆ’ ಎನ್ನುತ್ತಾರವರು.

ಚಿತ್ರಗಳು: ಕೇಶವ ವಿಟ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT