‘ಯೇ ದಿಲ್ ಹೈ ಮುಷ್ಕಿಲ್’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ರೂಪದರ್ಶಿ– ನಟಿ ಲೀಸಾ ಹೇಡನ್ ಅವರಿಗೆ ನಟನೆಯ ಅಸಲಿ ಮಜಾ ದೊರಕಿದೆಯಂತೆ.
ಇದೇ ಗುಂಗಿನಲ್ಲಿ ಅವರು ತಮ್ಮ ಸಹ ಕಲಾವಿದರನ್ನು ಮನಸೋ ಇಚ್ಛೆ ಹಾಡಿ ಹೊಗಳಿದ್ದಾರೆ.
‘ಅನುಷ್ಕ ಸಂಪೂರ್ಣ ನೇರ ನಡೆಯ ವೃತ್ತಿಪರ ನಟಿ. ಅವರ ಜತೆ ಕೆಲಸ ಮಾಡುವುದು ತುಂಬ ಸುಲಭ’ ಎಂದಿರುವ ಅವರು ರಣಬೀರ್ ಕಪೂರ್ ಅವರನ್ನೂ ‘ಕೂಲ್’ ಎಂದು ಹೊಗಳಿದ್ದಾರೆ.
‘ರಣಬೀರ್ ಜತೆ ನಟಿಸುವುದು ತುಂಬ ಖುಷಿಯ ವಿಷಯ. ಅವರು ಅಷ್ಟೇ ಲವಲವಿಕೆಯಿಂದ ಇರುತ್ತಾರೆ’ ಎಂದು ಲೀಡಾ ಇತ್ತೀಚೆಗೆ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
‘ಯೇ ದಿಲ್ ಹೈ ಮುಷ್ಕಿಲ್’ ಸಿನಿಮಾ ಅಕ್ಟೋಬರ್ 28ರಂದು ತೆರೆಕಾಣಲಿದೆ. ಈ ಸಿನಿಮಾದಲ್ಲಿ ತಮ್ಮ ಪಾತ್ರದ ಕುರಿತು ಕೇಳಿದ ಪ್ರಶ್ನೆಗೆ ಲೀಸಾ ‘ಈ ಪಾತ್ರದಲ್ಲಿ ಅಭಿನಯಿಸುತ್ತಿರುವಾಗ ನನಗೆ ನಟನೆಯ ಅಸಲಿ ಮಜಾ ಸಿಕ್ಕಿದೆ. ಅಷ್ಟನ್ನು ಮಾತ್ರ ಹೇಳಬಲ್ಲೆ’ ಎಂದು ಅವರು ಅಭಿಮಾನಿಗಳ ಎದೆಯಲ್ಲಿ ಕುತೂಹಲದ ಕಿಡಿ ಹೊತ್ತಿಸಿದ್ದಾರೆ.
ಸದ್ಯಕ್ಕೆ ಲೀಸಾ ಎಂ ಟೀವಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯಾಸ್ ನೆಕ್ಸ್ಟ್ ಟಾಪ್ ಮಾಡೆಲ್’ ಷೋಗೆ ನಿರ್ಣಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಷೋದಲ್ಲಿ 13 ಸ್ಪರ್ಧಿಗಳು ಕಣದಲ್ಲಿದ್ದಾರೆ.