ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಲೋಕದ ಅಂಚೆ ಚೀಟಿ ಸರದಾರ

Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ಈಗಾಗಲೇ ಜಾಗತಿಕ ಫುಟ್‌ಬಾಲ್ ಟೂರ್ನಿಯ ಕಾವು ಆವರಿಸುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ದೇಶಗಳಲ್ಲಿ ಜನಪ್ರಿಯವಾಗಿರುವ ಕಾಲ್ಚೆಂಡಿನಾಟದ ಜಾತ್ರೆ ಬ್ರೆಜಿಲ್‌ನಲ್ಲಿ ಕಳೆಗಟ್ಟಿದೆ. ಫುಟ್‌ಬಾಲ್ ಬಗ್ಗೆ  ಅತೀವ ಪ್ರೀತಿ ಇಟ್ಟು ಕೊಂಡಿರುವ ಎಸ್.ಸಂತೋಷ್ ಈ ಆಟವನ್ನು ಆಡುವುದಿಲ್ಲ. ಆದರೆ ಫುಟ್‌ಬಾಲ್ ಕುರಿತ ಜಗತ್ತಿನ ಎಲ್ಲಾ ದೇಶಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾನೆ.

ಬೆಂಗಳೂರಿನ ಪೆಸೆಟ್‌ನಲ್ಲಿ ಬಿ.ಸಿ.ಎ ಓದುತ್ತಿರುವ ಸಂತೋಷ್‌ಗೆ ಫುಟ್‌ಬಾಲ್ ಅಂಚೆ ಚೀಟಿಗಳ ಸಂಗ್ರಹದ ಆಸಕ್ತಿ ಮೂಡಲು ಸ್ಫೂರ್ತಿ ನೀಡಿದವರು ಅವರ ಮಾವ ಹಾಗೂ ಪ್ರಸಿದ್ಧ ಅಂಚೆಚೀಟಿ ಸಂಗ್ರಾಹಕ ಮಣಿ ಜಗನ್ನಾಥ್. ಕ್ರಿಕೆಟ್ ಆಡುತ್ತಿದ್ದ ಸಂತೋಷ್ ಮೊದಲು ಶುರುವಿಟ್ಟಿದ್ದು ಬಾಲ್‌ಗೇಮ್‌ಗಳ ಅಂಚೆ ಚೀಟಿಗಳ ಸಂಗ್ರಹಕ್ಕೆ. ಅದರಲ್ಲಿ ಬಾಸ್ಕೆಟ್‌ಬಾಲ್, ಟೇಬಲ್ ಟೆನ್ನಿಸ್, ಹಾಕಿ, ಕ್ರಿಕೆಟ್, ಗಾಲ್ಫ್, ವಾಟರ್‌ಪೋಲೊ ಫುಟ್‌ಬಾಲ್, ಹ್ಯಾಂಡ್‌ಬಾಲ್ ಕುರಿತಂತೆ ಪ್ರಪಂಚದ ವಿವಿಧ ದೇಶಗಳು ಹೊರ ತಂದಿರುವ ನಾನಾ ಬಗೆಯ, ವಿವಿಧ ಬಣ್ಣಗಳ ಅಂಚೆ ಚೀಟಿಗಳನ್ನು ಸಂಗ್ರಹಿಸುತ್ತಿದ್ದರು.

ನಂತರ ಇದರ ವ್ಯಾಪ್ತಿ ದೊಡ್ಡದಾಗುತ್ತಿದೆ ಎನ್ನಿಸಿ ಕೇವಲ ಫುಟ್‌ಬಾಲ್‌ಗೆ ತಮ್ಮ ಸಂಗ್ರಹವನ್ನು ಸೀಮಿತಗೊಳಿಸಿಕೊಂಡ ಸಂತೋಷ್, ಈ ಆಟದ ಅಧ್ಯಯನದಲ್ಲಿ ತೊಡಗಿದರು. ಆಟದ ಕುರಿತಂತೆ ಬೇರೆ ಬೇರೆ ಮಗ್ಗಲುಗಳನ್ನು ಅಭ್ಯಾಸ ಮಾಡಿ ಆ ಬಗ್ಗೆ ಪ್ರಕಟವಾಗಿರುವ ಅಂಚೆಚೀಟಿಗಳನ್ನು ಬೇರೆ ಬೇರೆ ದೇಶಗಳಿಂದಲೂ ಕಲೆಹಾಕಿ, ಅದಕ್ಕೆ ಸೂಕ್ತ ಅಡಿ ಟಿಪ್ಪಣಿಗಳನ್ನು ಸಿದ್ಧಪಡಿಸಿದರು.

ಚೀನಾ, ಹಾಂಕಾಂಗ್, ಚೆನ್ನೈ, ಜೋಹಾನ್ಸ್‌ಬರ್ಗ್, ನವದೆಹಲಿಯಲ್ಲಿ ಜರುಗಿದ ಅಂಚೆ ಚೀಟಿ ಪ್ರದರ್ಶನಗಳಲ್ಲಿ ತಮ್ಮ ಫುಟ್‌ಬಾಲ್ ಸಂಗ್ರಹವನ್ನು ಪ್ರದರ್ಶಿಸಿರುವ ಸಂತೋಷ್‌ಗೆ ಅನೇಕ ಪ್ರಶಂಸಾಪತ್ರಗಳು, ಪುರಸ್ಕಾರಗಳು ಸಂದಿವೆ. ಕರ್ನಾಫೆಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶಿಕೆ ಎಂಬ ಗೌರವಕ್ಕೂ ಇವರ ಫುಟ್‌ಬಾಲ್ ಸಂಗ್ರಹ ಪಾತ್ರವಾಗಿದೆ.

ಜಗತ್ತಿನ ಶ್ರೇಷ್ಠ ಪುಟ್ಬಾಲ್ ಆಟಗಾರರು, ಪ್ರಖ್ಯಾತ ಫುಟ್‌ಬಾಲ್ ಕ್ರೀಡಾಂಗಣಗಳು, ಫುಟ್‌ಬಾಲ್‌ನ ವಿವಿಧ ಶೈಲಿಯ ಆಟಗಳು, ವಿಶ್ವಕಪ್ ಗೆದ್ದ ತಂಡಗಳು ಹೀಗೆ ಫುಟ್‌ಬಾಲ್‌ಗೆ ಸಂಬಂಧಿಸಿದ ಒಂದು ಸಾವಿರಕ್ಕೂ ಹೆಚ್ಚು ಅಂಚೆ ಚೀಟಿಗಳ ಪ್ರದರ್ಶಿಕೆಗಳನ್ನು ಹೊಂದಿರುವ ಸಂತೋಷ್, ದೇಶ ವಿದೇಶಗಳ ಸಮಾನ ಮನಸ್ಕ ಗೆಳೆಯರಿಂದ ಅಂಚೆ ಚೀಟಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.  ಇವುಗಳಲ್ಲಿ ಹೆಚ್ಚಿನ ಪಾಲು ಫುಟ್‌ಬಾಲ್‌ಗೆ ಸಂಬಂಧಿಸಿದವು.

ವಿಶ್ವಕಪ್ ಬಂತೆಂದರೆ ಸಂತೋಷ್ ಅವರಿಗೆ ಹಬ್ಬದಂತೆ. ಕಾರಣ ಈ ಸಂದರ್ಭದಲ್ಲಿ ಫುಟ್‌ಬಾಲ್ ಆಡುವ ಬಹುತೇಕ ದೇಶಗಳು ವಿಶೇಷ ಅಂಚೆ ಚೀಟಿಗಳನ್ನು ಹೊರತರಲಿದ್ದು, ಅವುಗಳಲ್ಲಿ ವಿಶಿಷ್ಟ ಅಂಚೆ ಚೀಟಿಗಳನ್ನು ತಮ್ಮ ಸಂಗ್ರಹಕ್ಕೆ ಸೇರ್ಪಡೆ ಮಾಡಬಹುದೆನ್ನುವುದು ತಮಗೆ ಖುಷಿಯ ಸಂಗತಿ ಎನ್ನುತ್ತಾರೆ ಎಸ್. ಸಂತೋಷ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT