‘ಬಾಹುಬಲಿ–2: ದಿ ಕನ್ಕ್ಲೂಷನ್’ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ರಾನಾ ದಗ್ಗುಬಾಟಿ ಅವರು ‘ನೇನೆ ರಾಜ ನೇನೆ ಮಂತ್ರಿ’ ಚಿತ್ರದಲ್ಲಿ ರಾಜಕಾರಣಿಯಾಗಿ ಮಿಂಚಿದ್ದಾರೆ. ಈ ಚಿತ್ರದ ಟೀಸರ್ ಯೂಟ್ಯೂಬ್ನಲ್ಲಿ ಮಂಗಳವಾರ ಬಿಡುಗಡೆಯಾಗಿದೆ.
40 ಸೆಕೆಂಡುಗಳ ಈ ಟೀಸರ್ನಲ್ಲಿ ಕೈಗೆ ಕೋಳ, ಮುಖಕ್ಕೆ ಕಪ್ಪು ಬಟ್ಟೆ ತೊಟ್ಟ ರಾನಾ ದಗ್ಗುಬಾಟಿ ಜೈಲಿನ ಒಳಗೆ ಹೋಗುವ ದೃಶ್ಯ ಚಿತ್ರದ ಬಗ್ಗೆ ಕುತೂಹಲ ಕೆರಳಿಸುವಂತಿದೆ. ಟೀಸರ್ನಲ್ಲಿ ಬಿಳಿ ರೇಷ್ಮೆ ಶರ್ಟ್, ಪಂಚೆಯಲ್ಲಿ ರಾಣಾ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ತೇಜ ನಿರ್ದೇಸಿದ್ದು, ಸುರೇಶ್ ಬಾಬು ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಕಾಜಲ್ ಅಗರ್ವಾಲ್, ಕ್ಯಾಥರಿನ್ ತೆರೆಸಾ, ನವದೀಪ್ ಹಾಗೂ ಆಶುತೋಷ್ ರಾನಾ ನಟಿಸಿದ್ದಾರೆ.
ರಾನಾ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಮೊದಲ ಚಿತ್ರ ‘ಲೀಡರ್’ನಲ್ಲೂ ರಾಜಕಾರಣಿ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ಆ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತ್ತು. ಇದೀಗ ಬಹು ವರ್ಷಗಳ ನಂತರ ಮತ್ತೆ ರಾನಾ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.