ಬಣ್ಣಗಳಲ್ಲಿ ಮೂಡಿದ ಮನಸ್ಸಿನ ಪ್ರತಿಬಿಂಬ

7

ಬಣ್ಣಗಳಲ್ಲಿ ಮೂಡಿದ ಮನಸ್ಸಿನ ಪ್ರತಿಬಿಂಬ

Published:
Updated:

ಆ ಯುವಕ ಹೆಚ್ಚು ಮೌನಿ. ಆದರೆ, ಅವರ ಕಲಾಕೃತಿಗಳು ಮಾತನಾಡುತ್ತವೆ. ಒಂದಲ್ಲ, ಎರಡಲ್ಲ ನೂರಾರು ಶಬ್ದಗಳನ್ನು ಜೋಡಿಸಿ, ಕಥೆ, ಕಾದಂಬರಿಯನ್ನೇ ಕಟ್ಟಿಕೊಡುತ್ತವೆ. ಕಲ್ಪನಾ ಶಕ್ತಿ ಇರುವವರಿಗೆ ಇನ್ನೂ ಹೆಚ್ಚಿನ ಸಾಹಿತ್ಯವನ್ನು ಕಟ್ಟಿಕೊಟ್ಟರೂ ಅಚ್ಚರಿಯಿಲ್ಲ. ಆದರೆ, ಈತನಿಗೆ ಬಾಹ್ಯ ಶಬ್ದಗಳು ಸ್ಪಷ್ಟವಾಗಿ ಕೇಳುವುದಿಲ್ಲ. ಆದರೆ, ಮನಸ್ಸಿನ ಮಾತುಗಳು ಸದಾ ಜಾಗೃತವಾಗಿರುತ್ತವೆ.

ಬಹರೇನ್‌ನಲ್ಲಿ ವಾಸವಾಗಿರುವ ಕಾರವಾರದ ಸಾಯಿ ಮಂದಿರ ರಸ್ತೆಯ ಮೊಹಮ್ಮದ್ ಆತಿಫ್ ಈಗ ಇಂಥ ಕೌಶಲದಿಂದಲೇ ಪ್ರಸಿದ್ಧರಾಗುತ್ತಿದ್ದಾರೆ. ವಾಕ್ ಮತ್ತು ಶ್ರವಣದೋಷವಿರುವ ಅವರು ತಮ್ಮಲ್ಲಿರುವ ಕಲಾ ಪ್ರತಿಭೆಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅವರು ವಿಶೇಷವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಮಾತು ಬಾರದಿದ್ದರೂ, ಕಿವಿ ಕೇಳಿಸದಿದ್ದರೂ, ತಮ್ಮೊಳಗಿನ ಭಾವನೆಗಳನ್ನು ಚಿತ್ರಗಳ ಮೂಲಕ ಹೊರ ಹಾಕುತ್ತಾರೆ. ಸಹಜತೆಗೆ ಅತ್ಯಂತ ಹತ್ತಿರವಾಗುವಂತೆ ಚಿತ್ರಿಸುತ್ತಾರೆ.

19 ವರ್ಷ ವಯಸ್ಸಿನ ಆತಿಫ್‌ ಅವರ ಚಿತ್ರಕಲೆ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಲಿದೆ ಎಂದು ಭಾವಿಸಿದ  ಬಹರೇನ್‌ನ ‘ಬಾಲ್ ಅಲ್ ಬಹರೈನ್’ ಶಾಪಿಂಗ್ ಮಾಲ್ ಆಡಳಿತವು ಇವರಿಗೆ ಉಚಿತವಾಗಿ ಮಳಿಗೆಯೊಂದನ್ನು ನೀಡಿದೆ. ಮಾಲ್‌ಗೆ ಭೇಟಿ ನೀಡುವ ಪ್ರವಾಸಿಗರು ಆತಿಫ್ ಅವರು ರಚಿಸಿರುವ ಚಿತ್ರಗಳನ್ನು ಖರೀದಿಸುತ್ತಿದ್ದಾರೆ. ಪ್ರವಾಸಿಗರು ಬಯಸುವ ಚಿತ್ರಗಳನ್ನು ಅವರ ಎದುರೇ ರಚಿಸುತ್ತಾರೆ. ತಮ್ಮ ನ್ಯೂನತೆಯನ್ನು ಮರೆತು ಬಣ್ಣಗಳ ಜತೆ ಬೆರೆಯುತ್ತಾರೆ. ಅವರ ಕಲಾಕೃತಿಗಳನ್ನು ಮನಸಾರೆ ಮೆಚ್ಚಿಕೊಂಡ ಪ್ರವಾಸಿಗರು ನಾಲ್ಕಾರು ಸಾಲುಗಳ ಶ್ಲಾಘನೆ ಬರೆದು ಆತಿಫ್ ಜತೆ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.


ಮೊಹಮ್ಮದ್ ಆತಿಫ್ ಬರೆದಿರುವ ಚಿತ್ರಗಳಲ್ಲೊಂದು.

ಪೋಷಕರ ಪ್ರೋತ್ಸಾಹ

‘ಆತಿಫ್ ಜನಿಸಿ ನಾಲ್ಕು ತಿಂಗಳಾದಾಗ ಶ್ರವಣ ಸಮಸ್ಯೆಯಿರುವುದು ಗೊತ್ತಾಯಿತು. ಚಿಕಿತ್ಸೆ ನೀಡಿದ ಕಾರವಾರದ ವೈದ್ಯರೊಬ್ಬರು ಸರಿಯಾದ ಪರಿಮಾಣದ ಶಬ್ದ ಗ್ರಹಿಸುವ ಯಂತ್ರವನ್ನು ನೀಡಲಿಲ್ಲ. ಕೊನೆಗೆ ಮಂಗಳೂರು, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದೆವು. ಈಗ ಯಂತ್ರದ ಸಹಾಯದಿಂದ ಸುಮಾರಿಗೆ ಕೇಳಿಸಿಕೊಳ್ಳುತ್ತಾನೆ. ಮಗನಿಗೆ ವಿಶೇಷ ಆರೈಕೆ ಅಗತ್ಯವಿದೆ ಎಂದು ತಿಳಿದಾಗ ನಾವು ಕಂಗೆಡಲಿಲ್ಲ. ಬದಲು ಆತನಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ನೀಡಿದೆವು’ ಎನ್ನುತ್ತಾರೆ ಆತಿಫ್‌ನ ತಂದೆ ಅನ್ವರ್ ಸಯ್ಯದ್.


ಮೊಹಮ್ಮದ್ ಆತಿಫ್ ಬರೆದಿರುವ ಚಿತ್ರಕ್ಕೆ ವಿದೇಶಿ ಪ್ರವಾಸಿಗರು ಮೆಚ್ಚುಗೆ ಸೂಚಿಸಿರುವುದು.

ಮನೆಯಲ್ಲೇ ತರಬೇತಿ

‘ಅವನಿಗೆ ನಾವು ನಾಲ್ಕು ವರ್ಷಗಳ ತನಕ ಬೇಬಿ ಸಿಟ್ಟಿಂಗ್ ಮಾದರಿಯಲ್ಲಿ ಮನೆಯಲ್ಲೇ ತರಬೇತಿ ಕೊಡಿಸಿದೆವು. ಅದಾದ ಬಳಿಕ ಒಂದನೇ ತರಗತಿಗೆ ಬಹರೈನ್‌ ಶಾಲೆಗೆ ಕಳುಹಿಸಿಕೊಟ್ಟೆವು. ಮೂರನೇ ತರಗತಿಯವರೆಗೆ ಅವನ ಅಕ್ಕ ನೆರಳಿನಂತೆ ಕಾಪಾಡಿದಳು. ಏಳನೇ ತರಗತಿಯವರೆಗೂ ಅವನು ಸಾಮಾನ್ಯ ಮಕ್ಕಳಂತೆ ಇದ್ದ. ಬಳಿಕ ಓದಿನತ್ತ ಹೆಚ್ಚು ಆಸಕ್ತಿ ತೋರಲಿಲ್ಲ’ ಎನ್ನುತ್ತಾರೆ ಅವರ ತಾಯಿ ಹೀನಾ ಸಯ್ಯದ್.

ಬಹರೇನ್‌ನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಅನ್ವರ್, ತಮ್ಮ ಮಗನಿಗೆ ಅಡುಗೆಯಲ್ಲೂ ಆಸಕ್ತಿಯಿರುವುದನ್ನು ಗುರುತಿಸಿದರು. ಈ ನಿಟ್ಟಿನಲ್ಲಿ ಕಾರವಾರದ ಕರಾವಳಿ ತರಬೇತಿ ಸಂಸ್ಥೆಯಲ್ಲಿ ಮ್ಯಾನೇಜ್‌ಮೆಂಟ್ ಅಧ್ಯಯನಕ್ಕೆ ಕಳುಹಿಸುತ್ತಿದ್ದಾರೆ. ಆರು ತಿಂಗಳು ಇಲ್ಲಿದ್ದು, ನಂತರ ಪುನಃ ಬಹರೈನ್‌ಗೆ ತೆರಳಲಿದ್ದಾರೆ.

ಟೊಯೊಟಾ ಡ್ರೀಮ್ ಕಾರ್ ವಿಜೇತ

‘ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆ ಟೊಯೊಟಾ ಬಹರೈನ್‌ನಲ್ಲಿ ‘ಡ್ರೀಮ್ ಕಾರ್’ ಎಂಬ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧಿಗಳು ತಮ್ಮ ಮನಸ್ಸಿನಲ್ಲಿರುವ ಕಾರಿನ ವಿನ್ಯಾಸವನ್ನು ಬಿಡಿಸಬೇಕಿತ್ತು. ಸಯ್ಯದ್ ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅನ್ವರ್ ಸಯ್ಯದ್.

ತಮ್ಮ ಗೆಳೆಯರೊಬ್ಬರಿಂದ ಅನಿಮೇಷನ್‌ನ ಮೂಲ ಪಾಠಗಳನ್ನು ಕಲಿತಿರುವ ಆತಿಫ್ ಒಳಾಂಗಣ ವಿನ್ಯಾಸವನ್ನೂ ಮಾಡುತ್ತಾರೆ. ಬಹರೇನ್‌ನ ಕೆಲವು ಕಾಫಿ ಬಾರ್‌ಗಳಿಗೆ ಆಕರ್ಷಕ ವಿನ್ಯಾಸ ಮಾಡಿ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಇದರ ಜತೆಗೆ ಕುದುರೆ ಸವಾರಿ, ಕರಾಟೆ, ಈಜು, ಸ್ಕೇಟಿಂಗ್‌ನಂತಹ ಕ್ರೀಡೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !