ಮಂಗಳವಾರ, ಮೇ 18, 2021
24 °C
ಆಶ್ವಾಸನೆಯಾಗಿ ಉಳಿದ ಭ‌ರವಸೆ

ಅನಿಲ ಸಿಲಿಂಡರ್‌ ಸ್ಫೋಟ: 5 ತಿಂಗಳಾದರೂ ಸಿಗದ ಸೂರು

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ‘ಜಿಲ್ಲಾಧಿಕಾರಿ, ಅಧಿಕಾರಿಗಳು ಬಂದು ಹೋಗಿ ಐದು ತಿಂಗಳಾಯಿತು. ಅವರು ನೀಡಿದ ಆಶ್ವಾಸನೆ ಹಾಗೆಯೇ ಉಳಿದಿದೆ. ಬೇರೆಯವರ ಮನೆಯ ಪಡಸಾಲೆಯಲ್ಲಿ ಬದುಕು ಸಾಗಿಸುತ್ತಿದ್ದೇವೆ. ಮಲಗಲು ಸ್ಥಳವಿಲ್ಲದೆ ಇರುವುದರಿಂದ ಮಕ್ಕಳು ಬಸ್ ನಿಲ್ದಾಣದಲ್ಲೇ ಮಲಗುತ್ತಿದ್ದಾರೆ. ಅ‌ಧಿಕಾರಿಗಳು ನಮ್ಮತ್ತ ಗಮನಹರಿಸುತ್ತಿಲ್ಲ...’

– ತಾಲ್ಲೂಕಿನ ಮಹದೇಶ್ವರ ಬೆಟ್ಟದ ತಂಬಡಿಗೇರಿಯ ಗುರುನಗರದಲ್ಲಿ ಮೇ ತಿಂಗಳ 28ರಂದು ಅನಿಲ ಸಿಲಿಂಡರ್‌ ಸ್ಫೋಟಗೊಂಡು ಮನೆ ಕಳೆದುಕೊಂಡ ಸಾಕಮ್ಮ ಅವರ ದುಃಖದ ಮಾತಿದು.  

ಈ ದುರ್ಘಟನೆಯಲ್ಲಿ ಎರಡು ಕುಟುಂಬಗಳು ಮನೆ ಕಳೆದುಕೊಂಡಿದ್ದವು. ಸ್ಫೋಟದಿಂದಾಗಿ ಮನೆಗಳ ಚಾವಣಿ ಹಾರಿ ಹೋಗಿತ್ತು. ಮನೆ ಬಳಕೆಯ ವಸ್ತುಗಳೆಲ್ಲ ಸುಟ್ಟು ಕರಕಲಾಗಿದ್ದವು. ಎರಡು ಕುಟುಂಬಗಳಲ್ಲಿ ಎಂಟು ಜನರಿದ್ದಾರೆ. ಈ ಕುಟುಂಬಗಳು ಸಮೀಪದವರ ಮನೆಯ ಪಡಸಾಲೆಯಲ್ಲಿ ಆಶ್ರಯ ಪಡೆದಿವೆ.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ ಅಧಿಕಾರಿಗಳ ದಂಡೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಎರಡೂ ಕುಟುಂಬಗಳಿಗೆ ಸಾಂತ್ವನ ಹೇಳಿತ್ತು. ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನೂ ಅಧಿಕಾರಿಗಳು ನೀಡಿದ್ದರು. ಆದರೆ, ಅನಾಹುತ ಸಂಭವಿಸಿ ಐದು ತಿಂಗಳಾದರೂ ಅಧಿಕಾರಿಗಳು ನೀಡಿದ್ದ ಭರವಸೆ ಈಡೇರಿಸಿಲ್ಲ ಎಂಬುದು ಕುಟುಂಬ ಸದಸ್ಯರ ಅಳಲು. 

‘ತಿಂಗಳೊಳಗೆ ಮನೆ ನಿರ್ಮಿಸಿಕೊಡುವ ಮತ್ತು ಮಕ್ಕಳಿಗೆ ದೇವಸ್ಥಾನದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೌಕರಿ ನೀಡಲು ಕ್ರಮ ವಹಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದರು. ಆದರೆ, ಅದು ಇನ್ನೂ ಈಡೇರಿಲ್ಲ’ ಎಂದು ಸಾಕಮ್ಮ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.     

‘ಪಂಚಾಯಿತಿಗೆ ಹೋಗಿ ಕೇಳಿದರೆ ನಿಮ್ಮ ಹೆಸರಿನಲ್ಲಿ ಇನ್ನು ಮನೆ ಮಂಜೂರಾಗಿಲ್ಲ ಎನ್ನುತ್ತಾರೆ. ನಾವು ಎಷ್ಟು ದಿನ ಪಡಸಾಲೆಯಲ್ಲಿ ಬದುಕು ಸಾಗಿಸುವುದು? ಹೃದಯ ಕಾಯಿಲೆಯಿಂದ ಬಳಲುತ್ತಿರುವ ನಮಗೆ ಮಕ್ಕಳೇ ಆಧಾರ. ಅವರಿಗಾದರೂ ದೇವಸ್ಥಾನದ ವತಿಯಿಂದ ನೌಕರಿ ದೊರೆತರೆ ಸ್ವಲ್ಪ ಸುಧಾರಿಸಿಕೊಳ್ಳಬಹುದು. ಆದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಬಸವಣ್ಣ ಬೇಸರಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಮಹದೇಶ್ವರ ಬೆಟ್ಟದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್‌, ‘ಘಟನೆಯಲ್ಲಿ ಮನೆ ಕಳೆದುಕೊಂಡ ಎರಡು ಕುಟುಂಬಗಳಿಗೆ  ಆದ್ಯತೆ ನೀಡಿ ಮನೆ ನಿರ್ಮಿಸಿಕೊಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಕಳೆದ ತಿಂಗಳಿಂದ ಗ್ರಾಮ ಪಂಚಾಯಿತಿಗೆ ಮನೆಗಳೇ ಮಂಜೂರಾಗಿಲ್ಲ. ಮಂಜೂರಾದ ಕೂಡಲೇ ಎರಡು ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

***

ಹೊರಗುತ್ತಿಗೆ ಆಧಾರದ ಮೇರೆಗೆ ನೌಕರಿ ನೀಡುವಂತೆ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನಾಲ್ಕೈದು ಬಾರಿ ಅರ್ಜಿ ಸಲ್ಲಿಸಿದ್ದೇನೆ.
–ಶಿವಕುಮಾರ್, ಸಂತ್ರಸ್ತ ಕುಟುಂಬದ ಸದಸ್ಯ‌

ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ಬಗ್ಗೆ ಚರ್ಚೆಯಾಗಿದೆ. ಅವರಿಗೆ ನೌಕರಿ ನೀಡುವ ಸಂಬಂಧ ನನಗೆ ಯಾವುದೇ ಮಾಹಿತಿಯಿಲ್ಲ.
–ರಾಜಶೇಖರ ಮೂರ್ತಿ, ಪ್ರಾಧಿಕಾರದ ಉಪ ಕಾರ್ಯದರ್ಶಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು