ಮಂಡ್ಯ ಲೋಕಸಭೆ: ಮತಎಣಿಕೆಗೆ ಕ್ಷಣಗಣೆ, ಯಾರಾಗುವರು ನಾಲ್ಕು ತಿಂಗಳ ಸಂಸದರು?

7
ಜಿಲ್ಲಾ ಚುನಾವಣಾಧಿಕಾರಿ ನೇತೃತ್ವ, ಮಧ್ಯಾಹ್ನದ ವೇಳೆಗೆ ಫಲಿತಾಂಶ

ಮಂಡ್ಯ ಲೋಕಸಭೆ: ಮತಎಣಿಕೆಗೆ ಕ್ಷಣಗಣೆ, ಯಾರಾಗುವರು ನಾಲ್ಕು ತಿಂಗಳ ಸಂಸದರು?

Published:
Updated:
Deccan Herald

ಮಂಡ್ಯ: ಲೋಕಸಭೆ ಉಪ ಚುನಾವಣೆ ಮತಎಣಿಕೆ ಕಾರ್ಯ ಮಂಗಳವಾರ ನಡೆಯಲಿದ್ದು ಕ್ಷೇತ್ರದಾದ್ಯಂತ ಕುತೂಹಲ ಮೂಡಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ದೊರೆಯಲಿದ್ದು ಬಾಕಿ ಉಳಿದಿರುವ ನಾಲ್ಕ ತಿಂಗಳ ಅವಧಿಗೆ ಯಾರು ಸಂಸತ್‌ ಸದಸ್ಯರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.

ನ.3ರಂದು ನಡೆದ ಉಪ ಚುನಾವಣೆಯಲ್ಲಿ ಶೇ 52.63 ಮತದಾನವಾಗಿದೆ. ಸರ್ಕಾರಿ ಮಹಾವಿದ್ಯಾಲಯದಲ್ಲಿ ಮತಎಣಿಕೆ ನಡೆಯಲಿದ್ದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ನೇತೃತ್ವ ವಹಿಸಲಿದ್ದಾರೆ. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡ, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಹಾಗೂ ಏಳು ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಪತ್ರಿಯೊಂದು ಎಣಿಕೆ ಟೇಬಲ್‍ಗೆ ಒಬ್ಬ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕರು ಹಾಗೂ ಒಬ್ಬ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ.

ಮತ ಎಣಿಕಾ ಕಾರ್ಯ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್‌.ನಗರ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಎಣಿಕೆ ಕಾರ್ಯ ಸರ್ಕಾರಿ ಮಹಾವಿದ್ಯಾಲಯದ ಮುಖ್ಯಕಟ್ಟಡದ ಕೊಠಡಿ ಸಂಖ್ಯೆ 5,6,7,8,9,12, 14ರಲ್ಲಿ ನಡೆಯಲಿದೆ. ಮೇಲುಕೋಟೆ ಹಾಗೂ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಎಣಿಕೆ ಕಾರ್ಯ ಮುಖ್ಯಕಟ್ಟಡದ ಮೊದಲ ಅಂತಸ್ತಿನ ಕೊಠಡಿ ಸಂಖ್ಯೆ 16, 19, 20, 23 ರಲ್ಲಿ ನಡೆಯಲಿದೆ. ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಕಾರ್ಯ ಕಾಲೇಜಿನ ಸ್ನಾತಕೋತ್ತರ ಬ್ಲಾಕ್‌ನ ನೆಲ ಮಹಡಿ ಕೊಠಡಿ ಸಂಖ್ಯೆ 24,25ರಲ್ಲಿ ನಡೆಯಲಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತ ಎಣಿಕೆ ಕಾರ್ಯ ಕಾಲೇಜಿನ ಸ್ನಾತಕೋತ್ತರ ಬ್ಲಾಕ್ ನ ಮೊದಲ ಅಂತಸ್ತಿನಲ್ಲಿರುವ ಕೊಠಡಿ ಸಂಖ್ಯೆ 28, 31 ರಲ್ಲಿ ನಡೆಯಲಿದೆ.

ಎಣಿಕೆ ಕಾರ್ಯಕ್ಕೆ ಚುನಾವಣಾ ವಿಭಾಗದ ಸಿಬ್ಬಂದಿ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಜನರ ನಿಯಂತ್ರಣಕ್ಕಾಗಿ ಕಾಲೇಜು ಮೈದಾನದಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಅರೆಸೇನಾ ಪಡೆ ತುಕಡಿ ಹಾಗೂ ಸ್ಥಳೀಯ ಪೊಲಿಸರು ಭದ್ರತೆ ಒದಗಿಸಿದ್ದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನೇತೃತ್ವ ವಹಿಸಿದ್ದಾರೆ. 774 ಸಿಬ್ಬಂದಿ ಭದ್ರತೆಯಲ್ಲಿ ಕಾರ್ಯನಿರ್ವಹಿಸುವರು. ಪ್ರತಿ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ವೀಕ್ಷಕರು ಎಣಿಕೆ ಕಾರ್ಯದ ಮೇಲೆ ನಿಗಾ ವಹಿಸಲಿದ್ದಾರೆ.

ಮತಎಣಿಕೆ ಕಾರ್ಯಕ್ಕೆ 110 ಟೇಬಲ್ ಬಳಸಲಾಗುತ್ತಿದ್ದು ಬೆಳಿಗ್ಗೆ 8 ಗಂಟೆಗೆ ಮತಎಣಿಕೆ ಆರಂಭವಾಗಲಿದೆ. 136 ಸೂಕ್ಷ್ಮ ವೀಕ್ಷಕರು ಸೇರಿ 120 ಎಣಿಕೆ ಮೇಲ್ವಿಚಾರಕರು ಹಾಗೂ 120 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಚುನಾವಣಾ ಫಲಿತಾಂಶ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು , ರಾಜಕೀಯ ಪಕ್ಷಗಳ ಮುಖಂಡರು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಕೋರಿದ್ದಾರೆ.

ನಿರಾಸಕ್ತಿ: ಫಲಿತಾಂಶದ ಬಗ್ಗೆ ಜನರಲ್ಲಿ ಕುತೂಹಲವಿದೆ. ಆದರೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ನಿರಾಸಕ್ತಿ ಇದೆ. ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡರೇ ಜಯ ಸಾಧಿಸುತ್ತಾರೆ ಎಂಬ ನಿರೀಕ್ಷೆ ಅವರಲ್ಲಿ ಇರುವ ಕಾರಣ ಫಲಿತಾಂಶದ ಬಗ್ಗೆ ಅವರಲ್ಲಿ ಯಾವುದೇ ಕುತೂಹಲ ಇಲ್ಲವಾಗಿದೆ.

ಮತದಾನ ಮುಗಿದ ನಂತರ ಬೆಂಗಳೂರಿಗೆ ತೆರಳಿರುವ ಎಲ್‌.ಆರ್‌.ಶಿವರಾಮೇಗೌಡ ಜೆಡಿಎಸ್‌ ಮುಖಂಡರ ಜೊತೆ ಎರಡೂ ದಿನ ಮಾತುಕತೆ ನಡೆಸಿದ್ದಾರೆ. ಭಾನುವಾರ ಎಚ್‌.ಡಿ.ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇನ್ನು ಕಾಂಗ್ರೆಸ್‌ ಮುಖಂಡರಲ್ಲಿ ಫಲಿತಾಂಶದ ಬಗ್ಗೆ ಯಾವ ನಿರೀಕ್ಷೆ ಇಲ್ಲ. ಮತಎಣಿಕೆ ಸ್ಥಳಕ್ಕೂ ಅವರು ಬರುವ ಸಾಧ್ಯತೆ ಇಲ್ಲ. ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಯತ್ತಗದಹಳ್ಳಿ ಗ್ರಾಮದಲ್ಲಿ ಫಲಿತಾಂಶ ಕುರಿತು ಗ್ರಮಸ್ಥರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !