ಕೆರೆ ಸ್ವಚ್ಛತೆಗೆ ಮುಂದಾದ ಕೊತ್ತತ್ತಿ ಯುವಜನರು

7
ಸಾಫ್ಟ್‌ವೇರ್‌ ಎಂಜಿನಿಯರ್‌, ವಕೀಲರು, ಶಿಕ್ಷಕರು, ಸ್ವ ಉದ್ಯೋಗಿಗಳಿಂದ‌ ಕೆರೆ ಸಂರಕ್ಷಣೆ

ಕೆರೆ ಸ್ವಚ್ಛತೆಗೆ ಮುಂದಾದ ಕೊತ್ತತ್ತಿ ಯುವಜನರು

Published:
Updated:
Deccan Herald

ಮಂಡ್ಯ: ಓದು ಮುಗಿಸಿ ಉದ್ಯೋಗಕ್ಕಾಗಿ ಪಟ್ಟಣ, ನಗರ ಸೇರಿದ್ದ ಕೊತ್ತತ್ತಿ ಗ್ರಾಮದ ಯುವಜನರು ಗ್ರಾಮದಲ್ಲಿರುವ ಕೆರೆಯ ಉಳಿವಿಗಾಗಿ ಒಂದಾಗಿದ್ದಾರೆ. ‘ಕೆರೆ ಸಂರಕ್ಷಣಾ ಸಮತಿ’ ಕಟ್ಟಿಕೊಂಡಿರುವ ಅವರು ಕೆರೆಯಲ್ಲಿ ಬೆಳೆದು ನಿಂತಿರುವ ಜೊಂಡು ಕಿತ್ತು, ಹೂಳೆತ್ತಲು ಮುಂದಾಗಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ವಕೀಲರು, ಶಿಕ್ಷಕರು, ಸ್ವ–ಉದ್ಯೋಗಿಗಳು ಕೆರೆ ಅಭಿವೃದ್ಧಿಗಾಗಿ ಕೈಜೋಡಿಸಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಂತಿರುವ ಐತಿಹಾಸಿಕ ಕೆರೆಯಲ್ಲಿ ಅವರು ಶ್ರಮದಾನ ಮಾಡುತ್ತಿದ್ದು ಆನೆಕಿವಿ ಜೊಂಡು ಕಿತ್ತು ಕೆರೆ ಸ್ವಚ್ಛತೆ ಮಾಡುತ್ತಿದ್ದಾರೆ. ನೂರಾರು ಎಕರೆ ವಿಸ್ತಾರವಾದ ಕೆರೆಯಲ್ಲಿ ಪ್ರಸ್ತುತ ಹೂಳು ತುಂಬಿಕೊಂಡಿದೆ. ಸುತ್ತಲೂ ಭೂಮಿ ಒತ್ತುವರಿಯಾಗಿ ಕೆರೆಯ ಆವರಣ ಕಡಿಮೆಯಾಗುತ್ತಿದೆ. ಸ್ವಚ್ಛತೆ ಇಲ್ಲದ ಕಾರಣ ಕೆರೆಯ ಪರಿಸರ ಹಾಳಾಗಿದೆ. ಒಂದು ಕಾಲದಲ್ಲಿ ಈ ನೀರನ್ನು ಜನರು ಕುಡಿಯುವುದಕ್ಕೆ ಬಳಸುತ್ತಿದ್ದರು. ಆದರೆ ಈಗ ಜಾನುವಾರು ಕೂಡ ನೀರು ಕುಡಿಯಲು ಹಿಂದೇಟು ಹಾಕುವಂತಾಗಿದೆ.

ಕೆರೆ ಹಾಳಾಗುತ್ತಿರುವುದನ್ನು ಗಮನಿಸಿರುವ ಗ್ರಾಮದ ಯುವಕರು ಕೆರೆಯ ಉಳಿವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಕೇವಲ ಒಂದು ಗುಂಪು ಶ್ರಮದಾನ ಮಾಡಿದರೆ ಕೆರೆ ಸ್ವಚ್ಛಗೊಳ್ಳುವುದಿಲ್ಲ ಎಂಬ ಅರಿವು ಯುಕರಲ್ಲಿದೆ. ಶ್ರಮದಾನ ಕೈಗೊಂಡರೆ ಮುಂದೆ ಗ್ರಾಮದ ಜನರು ಸ್ವಚ್ಛತೆಗೆ ಕೈಜೋಡಿಸುತ್ತಾರೆ ಎಂಬ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದಾರೆ. ತಮ್ಮ ಕೈಯಿಂದ ಹಣ ಹಾಕಿ ಕೆರೆ ಶುದ್ಧತೆಗೆ ಹೊರಟಿರುವ ಇವರು  ಇತರರಿಗೆ ಮಾದರಿಯಾಗಿದ್ದಾರೆ. ಊರಿನವರ ಗಮನ ಸೆಳೆಯುವುದಕ್ಕಾಗಿ ಬ್ಯಾನರ್‌, ಭಿತ್ತಿಚಿತ್ರ, ಕರಪತ್ರಗಳನ್ನು ಮನೆಮನೆಗೆ ಹಂಚುತ್ತಿದ್ದಾರೆ. ಜೊತೆಗೆ ಗ್ರಾಮದಲ್ಲಿ ಸಾಂಸ್ಕೃತಿಕ ಹಾಗೂ ಗ್ರಾಮೀಣ ಕ್ರೀಡೆ ಆಯೋಜನೆ ಮಾಡುತ್ತಾ ಜನರಲ್ಲಿ ಕೆರೆಯ ಮಹತ್ವವನ್ನು ಸಾರುತ್ತಿದ್ದಾರೆ.

‘ಕೆರೆಯ ಆರಂಭಿಕ ಭಾಗದಲ್ಲಿ ಬೆಳೆದಿರುವ ಗಿಡ, ಪೊದೆ ಹಾಗೂ ಜೊಂಡನ್ನು ಭಾನುವಾರ ಸ್ವಚ್ಛತೆ ಮಾಡಿದೆವು. ಜೆಸಿಬಿ ಯಂತ್ರ ಬಳಸಿ ಗಿಡಗಂಟಿಯನ್ನು ತೆರವುಗೊಳಿಸಲಾಯತು. ಜಲಚರಗಳಿಗಾಗಿ ಸ್ವಚ್ಛ ಕೆರೆ ಸಂರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಊರಿನ ನೈರ್ಮಲ್ಯ ಕಾಪಾಡುವುದು, ಕೆರೆಯ ಸುತ್ತಾ ಸಸಿ ಬೆಳೆಸುವುದು, ಹಸಿರು ಪರಿಸರ ಸಂರಕ್ಷಿಸುವುದು, ಪ್ರಮುಖ ವಿಹಾರ ತಾಣವನ್ನಾಗಿ ರೂಪಿಸುವುದು ಉದ್ದೇಶವಾಗಿದೆ’ ಎಂದು ಸಮಿತಿಯ ಅಧ್ಯಕ್ಷ, ಸಾಫ್ಟ್‌ವೇರ್‌ ಎಂಜಿನಿಯರ್‌ ಕೆ.ಎಸ್‌.ಯೋಗೀಶ್‌ ಹೇಳಿದರು.

ಸಮಿತಿಯಲ್ಲಿ ವಕೀಲ ಕೆ.ಎಂ.ಭಾಸ್ಕರ್, ಶಿಕ್ಷಕರಾದ ಭಾಸ್ಕರ್, ರಾಜು, ಪಾಪಣ್ಣ, ಸುರೇಶ್, ಶ್ರೀನಿವಾಸ, ಪವನ್‌ಕುಮಾರ್ ಹಾಗೂ ಸುದರ್ಶನ್ ವಿನೋದ್ ಕುಮಾರ್, ಪ್ರಸನ್ನ, ಮನು, ಮೆಡಿಕಲ್ ಯೋಗಿ, ರಾಕೇಶ್, ಸಂತೋಷ್, ಸುಖೇಶ್, ದಿಲೀಪ್, ಚೇತನ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಸ್‌.ರವಿ, ಶಾಂತರಾಜ್, ಪ್ರದೀಪ್, ಸುನೀಲ್ ಮುಂತಾದ ಯುವಕರ ತಂಡ ಕೆರೆ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಗ್ರಾಮದ ಮುಖಂಡರಾದ ರಾಜೇಗೌಡ, ಎಂ.ಚೌಡಯ್ಯ, ಸಣ್ಣೇಗೌಡ  ಯುವಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಜೊಂಡು ಕೀಳುವ ಯಂತ್ರದ ವಿನ್ಯಾಸ
ಕೆರೆ ಸ್ವಚ್ಛತಾ ಕಾರ್ಯವನ್ನು ಕೈಯಿಂದ ಮಾಡಲು ಸಾಧ್ಯವಿಲ್ಲ. ಇದನ್ನು ಮನಗಂಡ ಯುವಕರು ಜೊಂಡು ಕೀಳಲು ಹೊಸ ಯಂತ್ರವೊಂದನ್ನು ವಿನ್ಯಾಸ ಮಾಡುತ್ತಿದ್ದಾರೆ. ಊರಿನವರೇ ಆದ, ಬಿಐಟಿ ಪ್ರಾಧ್ಯಾಪಕ ಕೆ.ಸಿ.ಜಯರಾಂ, ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ಉಪನ್ಯಾಸಕ ಕೆ.ಜೆ ಮಹೇಂದ್ರ ಬಾಬು ಮೇಲುಸ್ತುವಾರಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಯಂತ್ರದ ತಯಾರಿಕೆಯಲ್ಲಿ ತೊಡಗಿದ್ದಾರೆ. ಈ ಯುವಕರು ಹಮ್ಮಿಕೊಳ್ಳುತ್ತಿರುವ ಹೊಸತನದ ಕಾರ್ಯಕ್ರಮಗಳಿಗಾಗಿ ಫೇಸ್‌ಬುಕ್‌ನಲ್ಲಿ ‘ಕೊತ್ತತ್ತಿ ಕೆರೆ ಸಂರಕ್ಷಣಾ ಸಮಿತಿ’ ಪೇಜ್‌ನಲ್ಲಿ ತೆರೆದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !