ತೆರೆಯ ಮೇಲೆ ಗಾಂಧಿ ಬಾಲ್ಯ

ಶುಕ್ರವಾರ, ಮೇ 24, 2019
29 °C

ತೆರೆಯ ಮೇಲೆ ಗಾಂಧಿ ಬಾಲ್ಯ

Published:
Updated:
Prajavani

ಒಂಬತ್ತು ಬಾರಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿರುವ ಕನ್ನಡದ ಖ್ಯಾತ ನಿರ್ದೇಶಕ ಪಿ.ಶೇಷಾದ್ರಿ ಅವರು ಡಾ.ಶಿವರಾಮ ಕಾರಂತರ ಕಾದಂಬರಿ ಆಧರಿತ ‘ಮೂಕಜ್ಜಿಯ ಕನಸುಗಳು’ ಚಿತ್ರ ನಿರ್ಮಿಸಿದ ಬೆನ್ನಲ್ಲೇ ಈಗ ಅಂತಹದೇ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾಕ್ಕೆ ಕೈಹಾಕಿದ್ದಾರೆ. ಅವರು ಈ ಬಾರಿ ಆ್ಯಕ್ಷನ್‌ ಕಟ್ ಹೇಳುತ್ತಿರುವುದು ಕಾದಂಬರಿಗೆ ಅಲ್ಲ, ಬಯೋಪಿಕ್‌ಗೆ. ಅದೂ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಬಾಲ್ಯಕ್ಕೆ! ಈ ಸಿನಿಮಾದ ಹೆಸರು ‘ಮೋಹನದಾಸ’. ಈಗ ಪ್ರೀಪ್ರೊಡಕ್ಷನ್‌ ನಡೆಯುತ್ತಿದ್ದು, ಜೂನ್‌ ಮೊದಲ ವಾರದಿಂದ ಶೂಟಿಂಗ್‌ ಶುರುವಾಗಲಿದೆ. 

‌ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ‘ಮುನ್ನುಡಿ’ ಸಿನಿಮಾ ನಿರ್ಮಿಸಿದ ‘ನವ್ಯಚಿತ್ರ ಕ್ರಿಯೇಷನ್ಸ್‌’ ಬ್ಯಾನರ್‌ ಅಡಿಯಲ್ಲೇ ಚಿತ್ರ ನಿರ್ಮಾಣವಾಗಲಿದೆ. ಈ ಕ್ರಿಯೇಷನ್ಸ್‌ನಲ್ಲಿರುವ ಒಂಬತ್ತು ಮಂದಿ ನಿರ್ಮಾಪಕರೂ ‘ಮೋಹನದಾಸ’ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ತಂಡಕ್ಕೆ ಮತ್ತಷ್ಟು ಹೊಸ ಸ್ನೇಹಿತರು ಕೂಡಿಕೊಂಡಿದ್ದಾರೆ. ಇನ್ನಷ್ಟು ಆಸಕ್ತರನ್ನು ಸೇರಿಸಿಕೊಳ್ಳಲಿದ್ದೇವೆ. ಸಿನಿಮಾ ನೈಜವಾಗಿ ಮೂಡಿಬರಬೇಕು ಎನ್ನುವ ಹಂಬಲವಿದೆ ಎನ್ನುತ್ತಾರೆ ನಿರ್ದೇಶಕ ಪಿ.ಶೇಷಾದ್ರಿ.

‘ಮೂಕಜ್ಜಿಯ ಕನಸುಗಳು’ ಸಿನಿಮಾದ ಛಾಯಾಗ್ರಹಣ ಮಾಡಿರುವ ಭಾಸ್ಕರ್‌ ಈ ಚಿತ್ರದಲ್ಲೂ ತಮ್ಮ ಕ್ಯಾಮೆರಾ ಕೈಚಳಕ ತೋರಿಸಲಿದ್ದಾರೆ. ಸಂಕಲನ ಕೆಂಪರಾಜು ಅವರದ್ದಾದರೆ, ಪ್ರವೀಣ್‌ ಗೋಡ್ಖಿಂಡಿ ಸಂಗೀತ ಸಂಯೋಜಿಸಲಿದ್ದಾರೆ.

ಆಡಿಷನ್‌ ಇನ್ನೂ ನಡೆಯುತ್ತಲೇ ಇದೆ

‘ಮೋಹನದಾಸ’ನಿಗಾಗಿ ಸಣಕಲು ದೇಹ, ಅಗಲ ಕಿವಿ, ಚೂಪಾದ ಮೂಗು, ಹೊಳಪು ಕಣ್ಣುಗಳ ಬಾಲಕನನ್ನು ಹುಡುಕುತ್ತಿದ್ದೇವೆ. ಗಾಂಧಿಯ ಇಬ್ಬರು ಸಹೋದರರು ಮತ್ತು ಜತೆಗಾರರ ಪಾತ್ರಗಳಿಗೆ, ತಂದೆ ಕರಮ್‌ಚಂದ್‌ ಗಾಂಧಿ, ತಾಯಿ ಪುತಲಿಬಾಯಿ ಪಾತ್ರಗಳಿಗೂ ತಕ್ಕುದಾದ ಕಲಾವಿದರ ಶೋಧ ನಡೆಯುತ್ತಿದೆ. ಆದಷ್ಟು ಮೋಹನದಾಸನ ಪಾತ್ರಕ್ಕೆ ಕನ್ನಡದ ಹುಡುಗನನ್ನೇ ಹುಡುಕುತ್ತಿದ್ದೇವೆ. ಬೇಸಿಗೆ ಶಿಬಿರಗಳಿಗೆ ಭೇಟಿ ನೀಡಿ ಆಡಿಷನ್‌ ನಡೆಸುತ್ತಿದ್ದೇವೆ. ಈಗಾಗಲೇ 800 ಮಕ್ಕಳ ಆಡಿಷನ್‌ ನಡೆಸಲಾಗಿದೆ. ಇದರಲ್ಲಿ ಶೇ 20ರಷ್ಟು ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದು, ಅಂತಿಮ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಗಾಂಧಿ ಬಾಲ್ಯವನ್ನು ಸಿನಿಮಾದಲ್ಲಿ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ. ‘ಮೂಕಜ್ಜಿಯ ಕನಸುಗಳು’ ಸಿನಿಮಾ ಮಾಡಿದಷ್ಟೇ ಇದೂ ಕಷ್ಟದ ಕೆಲಸ ಎಂದು ಮಾತು ವಿಸ್ತರಿಸುತ್ತಾರೆ ಶೇಷಾದ್ರಿ. 

ಬೋಳವಾರು ಕೃತಿ ಸ್ಫೂರ್ತಿ

ಈ ಸಿನಿಮಾ ಮಾಡಬೇಕೆಂಬ ಕನಸು ಚಿಗುರೊಡೆದಿದ್ದು ನಾಲ್ಕೈದು ವರ್ಷಗಳ ಹಿಂದೆ. ಬೋಳವಾರು ಅವರ ‘ಪಾಪು ಗಾಂಧಿ ಬಾಪು ಗಾಂಧಿಯಾದ ಕಥೆ’ ಪುಸ್ತಕ ಓದಿದಾಗ. ಗಾಂಧಿಯ ಬಾಲ್ಯ ಕುರಿತು ನಾನೇಕೆ ಒಂದು ಸಿನಿಮಾ ಮಾಡಬಾರದು ಎನ್ನುವ ಆಲೋಚನೆ ಹೊಳೆಯಿತು. ಆಗ ಗಾಂಧಿಯ ಬಾಲ್ಯದ ಬಗ್ಗೆ ಆಳ ಅಧ್ಯಯನ ಮಾಡಲು ಆರಂಭಿಸಿದೆ. ಈ ನೆಲದಲ್ಲಿ ಗಾಂಧಿಯನ್ನು ಪ್ರೀತಿಸುವವರು, ವಿರೋಧಿಸುವವರೂ ಇದ್ದಾರೆ. ಆದರೆ, ಯಾರೂ ನೆಗ್ಲೆಕ್ಟ್‌ ಮಾಡಲಾಗದ ವ್ಯಕ್ತಿ ಗಾಂಧಿ. ಇಂಡಿಯಾದ ಐಕಾನ್‌ ಕೂಡ ಎಂದು ಹೇಳುತ್ತಾರೆ ಕಲಾತ್ಮಕ ಚಿತ್ರಗಳ ಈ ನಿರ್ದೇಶಕ. 

ಗಾಂಧಿ ಕುರಿತ ಸಿನಿಮಾಗಳ ಬಗ್ಗೆ ಯೋಚಿಸಿದಾಗ ಮುಖ್ಯವಾಗಿ ಎರಡು ಸಿನಿಮಾಗಳಷ್ಟೇ ಕಾಣುತ್ತವೆ. ಒಂದು; ಅಟೆನ್‌ಬರೊ ಅವರ ‘ಗಾಂಧಿ’. ಈ ಸಿನಿಮಾದಲ್ಲಿ ದಕ್ಷಿಣ ಆಫ್ರಿಕಾದಿಂದ ಶುರುವಾಗುವ ಕಥೆ, ಗಾಂಧಿ ಗುಂಡೇಟಿಗೆ ಎದೆಕೊಟ್ಟು ಹುತಾತ್ಮರಾಗುವವರೆಗೆ ಮಾತ್ರ ಇದೆ. ಇನ್ನೊಂದು; ಶ್ಯಾಮ್‌ ಬೆನಗಲ್‌ ಅವರ ‘ಮೇಕಿಂಗ್‌ ಮಹಾತ್ಮ’ ಸಿನಿಮಾ. ಅದರಲ್ಲಿ ಇಂಗ್ಲೆಂಡಿಗೆ ಓದಲು ಗಾಂಧಿ ಸೂಟ್‌ ಧರಿಸಿ ಹೋಗುವಲ್ಲಿಂದ ಹಿಡಿದು ವಾಪಸ್‌ ಬರುವವರೆಗಿನ ಚಿತ್ರಣ ಮಾತ್ರ ಇದೆ. ಗಾಂಧಿ ಬಾಲ್ಯದ ಕುರಿತು ಯಾರೂ ಸಿನಿಮಾ ಮಾಡಿಲ್ಲ. ಮಹಾತ್ಮನ ಬಾಲ್ಯ ಕುರಿತು ಯಾರಿಗೂ ಕುತೂಹಲವಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿತ್ತು. ನಾಲ್ಕು ವರ್ಷಗಳಿಂದ ಚಿತ್ರಕಥೆ ಹೆಣೆಯುತ್ತಿದ್ದೆ. ಹಿಂದಿನ ವರ್ಷ ಗಾಂಧೀಜಿಯ 150ನೇ ಜಯಂತಿ ಘೋಷಣೆಯಾದಾಗ ತುಂಬಾ ಥ್ರಿಲ್‌ ಆದೆ. ಸಿನಿಮಾ ಮಾಡಲು ಇದೇ ಸರಿಯಾದ ಸಮಯ ಎಂದುಕೊಂಡು, ಈ ವರ್ಷವೇ ಸಿನಿಮಾ ಮಾಡಲು ನಿರ್ಧರಿಸಿದೆ ಎನ್ನುವ ಮಾತು ಸೇರಿಸುತ್ತಾರೆ ಶೇಷಾದ್ರಿ. 

ಬಹಳಷ್ಟು ಮಂದಿಗೆ ಗಾಂಧಿಯ ಬಾಲ್ಯ ಬಹಳ ಅದ್ಭುತವಾಗಿತ್ತೆಂಬ ಕಲ್ಪನೆ ಇದೆ. ಬಾಲ್ಯದಲ್ಲಿ ಸಿಗರೆಟ್‌ ಸೇದಿದ್ದು, ಮಾಂಸ ತಿಂದಿದ್ದು, ಪಶ್ಚಾತ್ತಾಪದ ಪತ್ರವನ್ನು ತಂದೆಗೆ ಬರೆದಿದ್ದು... ಹೀಗೆ ಗಾಂಧಿಯ ಬಾಲ್ಯದ ಬಗ್ಗೆ ಪಠ್ಯಗಳಲ್ಲಿ ಅಲ್ಲಲ್ಲಿ ಒಂದಿಷ್ಟು ವಿವರಗಳು ಮಾತ್ರ ಸಿಗುತ್ತವೆ. ಅದಕ್ಕೂ ಮೀರಿದ ಅನೇಕ ಕುತೂಹಲಕರ ಸಂಗತಿಗಳು ಗಾಂಧಿ ಬಾಲ್ಯದಲ್ಲಿವೆ. ಗಾಂಧಿಯ ತಂದೆ ದಿವಾನರಾಗಿದ್ದರೂ ಸಾಮಾನ್ಯ ಹುಡುಗನ ಬಾಲ್ಯದಂತೆಯೇ ಇತ್ತು  ಗಾಂಧಿಯ ಬಾಲ್ಯ. ನಮ್ಮ ಹಾಗೆಯೇ ಅವರಿಗೂ ಕೀಳರಿಮೆ, ಭಯ ಇತ್ತು. ಅವರು ನಮ್ಮಂತೆಯೇ ಎಲ್ಲ ತಪ್ಪುಗಳನ್ನು ಮಾಡಿದ್ದರು. ಆದರೆ, ಒಬ್ಬ ಸಾಮಾನ್ಯ ಹುಡುಗ ಮಹಾತ್ಮನಾಗಿದ್ದು ಅಚ್ಚರಿ ಹುಟ್ಟಿಸುವ ಸಂಗತಿ. ಐನ್‌ಸ್ಟೀನ್‌ ಹೇಳುವ ಮಾತು ನೆನಪಿಸಿಕೊಳ್ಳುವುದಾದರೆ, ಇಂತಹ ಒಬ್ಬ ವ್ಯಕ್ತಿ ಪ್ರಪಂಚದಲ್ಲಿ ಓಡಾಡುತ್ತಿದ್ದ ಎನ್ನುವುದನ್ನು ಜನ ಮುಂದೆ ನಂಬುವುದೇ ಇಲ್ಲ. ಬಾಲ್ಯದಲ್ಲಿ ತುಂಟಾಟ, ತಪ್ಪು, ಚೇಷ್ಟೆ ಮಾಡಿದರೂ ನಂತರ ಅದನ್ನು ತಿದ್ದುಕೊಂಡು ಪರಿವರ್ತಿತರಾದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಗಾಂಧಿಯೇ ಬಹುದೊಡ್ಡ ಪಾಠ. ಗಾಂಧಿಯ ಬಾಲ್ಯವನ್ನು  ಪ್ರಪಂಚದ ಮಕ್ಕಳಿಗೆ ತೋರಿಸಿ ಅವರನ್ನು ಮೋಟಿವೇಟ್‌ ಮಾಡಬೇಕಿದೆ. ಹಾಗಾಗಿ ಹಿಂದಿ, ಇಂಗ್ಲಿಷ್‌ನಲ್ಲೂ ಈ ಸಿನಿಮಾ ಮಾಡುತ್ತಿದ್ದೇವೆ ಎನ್ನುತ್ತಾರೆ ಅವರು.

ಎಲ್ಲೆಲ್ಲಿ ಶೂಟಿಂಗ್‌?

ಗುಜರಾತ್‌ನ ಪೋರಬಂದರಿನಲ್ಲಿರುವ ಹುಟ್ಟಿದ ಮನೆ ‘ಕೀರ್ತಿಮಂದಿರ’ದಲ್ಲಿ ಆರು ವರ್ಷದವರೆಗಿನ ಬಾಲ್ಯವನ್ನು ಅವರು ಕಳೆದರು. ನಂತರ 13 ವರ್ಷದವರೆಗಿನ ಬಾಲ್ಯವನ್ನು ರಾಜ್‌ಕೋಟ್‌ನ ‘ಕಬಾಗಾಂಧಿ ನೋಡೆಲಾ’ದಲ್ಲಿ (ಕರಮ್‌ಚಂದ್‌ ಗಾಂಧಿ ಎನ್ನುವ ಬದಲು ಗುಜರಾತಿಗಳು ಕಬಾಗಾಂಧಿ ಎಂದೇ ಕರೆಯುತ್ತಿದ್ದರು. ಹಾಗಾಗಿ ಆ ಮನೆಗೆ ಕಬಾಗಾಂಧಿ ನೋಡೆಲಾ ಹೆಸರು ಬಂದಿದೆ) ಕಳೆದರು. ಎರಡೂ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ನಿರ್ಮಾಪಕರಲ್ಲಿ ಒಬ್ಬರಾದ ಸಂಪತ್‌.

‘ಈ ಎರಡು ಮನೆಗಳಿಗೆ ಹೊಂದಿಕೆಯಾಗುವಂತೆ ಬೆಂಗಳೂರಿನಲ್ಲಿ ಸೆಟ್‌ ಹಾಕಿ, ಶೂಟಿಂಗ್‌ ಮಾಡಬೇಕಿದೆ. ಪ್ರತಿ ಸನ್ನಿವೇಶವನ್ನು ಒಂದೂವರೆ ಶತಮಾನದ ಹಿಂದಕ್ಕೆ ಕೊಂಡೊಯ್ಯಬೇಕಿದೆ. ಈಗ ರಸ್ತೆ, ಟೋಪೋಗ್ರಫಿ ಎಲ್ಲವೂ ಬದಲಾಗಿರುವುದರಿಂದ ಅಂತಹ ಸೆಟ್‌ ನಿರ್ಮಾಣವೂ ನಮಗೊಂದು ಸವಾಲು’ ಎನ್ನುತ್ತಾರೆ ಅವರು. v

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !