ಚಂದ್ರಯಾನ: ರಾಕೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ

ಗುರುವಾರ , ಏಪ್ರಿಲ್ 25, 2019
31 °C

ಚಂದ್ರಯಾನ: ರಾಕೆಟ್‌ ಎಂಜಿನ್‌ ಯಶಸ್ವಿ ಪರೀಕ್ಷೆ

Published:
Updated:
Prajavani

ವಾಷಿಂಗ್ಟನ್‌: ಭವಿಷ್ಯದಲ್ಲಿ ಚಂದ್ರಯಾನ ಕೈಗೊಳ್ಳುವ ಗಗನಯಾತ್ರಿಗಳನ್ನು ಕರೆದೊಯ್ಯುವ  ರಾಕೆಟ್‌ ಎಂಜಿನ್‌ನ ಪರೀಕ್ಷೆಯನ್ನು ನಾಸಾ ಶುಕ್ರವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 

ಚಂದ್ರಯಾನ ಕಾರ್ಯಾಚರಣೆಯಲ್ಲಿ ಈ ರಾಕೆಟ್‌ ಎಂಜಿನ್‌ ಪರೀಕ್ಷೆ ಮಹತ್ವದ ಮೈಲಿಗಲ್ಲಾಗಿದೆ ಎಂದು ನಾಸಾ ಹೇಳಿದೆ. 

ಮಿಸಿಸಿಪ್ಪಿಯ ಸೇಂಟ್‌ ಲೂಯಿಸ್‌ನಲ್ಲಿನ ಸ್ಟೆನ್ನಿಸ್‌ ಬಾಹ್ಯಾಕಾಶ ಕೇಂದ್ರದಲ್ಲಿ ಈ ರಾಕೆಟ್‌ ಅನ್ನು ಗುರುವಾರ ಉಡಾಯಿಸಲಾಗಿತ್ತು. ನಾಲ್ಕು ವರ್ಷಗಳ ಸತತ ಪ್ರಯತ್ನದ ನಂತರ, ಈಗ  ಪರೀಕ್ಷೆ ಯಶಸ್ವಿಯಾಗಿದೆ. 

‘ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕರೆದೊಯ್ಯಲು ಮತ್ತು ಕರೆತರಲು ಈಗ ಈ ‘ಆರ್‌ಎಸ್‌–25 ರಾಕೆಟ್‌ ಎಂಜಿನ್‌’ ಸಿದ್ಧವಾಗಿದೆ. ಭವಿಷ್ಯದಲ್ಲಿ ಮಂಗಳಯಾನ ಕೈಗೊಳ್ಳಲೂ ಈ ಎಂಜಿನ್‌ ನೆರವಿಗೆ ಬರುತ್ತದೆ ಎಂದು ನಾಸಾದ ವಿಜ್ಞಾನಿ ಜಾನಿ ಹೆಫ್ಲಿನ್‌ ಹೇಳಿದ್ದಾರೆ. 

ಈ ಎಂಜಿನ್‌ನನ್ನು ಚಂದ್ರನಲ್ಲಿಗೆ ಕಳಿಸಿದರೆ, ಇದೇ ಮೊದಲ ಬಾರಿಗೆ ಸ್ಪೇಸ್‌ ಲಾಂಚ್‌ ಸಿಸ್ಟಂ (ಎಸ್‌ಎಲ್‌ಎಸ್‌) ರಾಕೆಟ್‌ ಅನ್ನು ಬಾಹ್ಯಾಕಾಶಕ್ಕೆ ಕಳಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಆರ್‌ಎಸ್‌–25 ರಾಕೆಟ್‌ ಎಂಜಿನ್‌ನ ಪರೀಕ್ಷೆ ಪ್ರಾರಂಭವಾಗಿದ್ದು 2015ರ ಜನವರಿ 9ರಂದು.  ನಾಸಾವು ಮೊದಲ ಬಾರಿಗೆ ಎಸ್‌ಎಲ್‌ಎಸ್‌ ಎಂಜಿನ್‌ ಪರೀಕ್ಷೆ ನಡೆಸಿದ್ದು, 2016ರ ಮಾರ್ಚ್‌ 10ರಂದು. ಅಲ್ಲಿಂದ ಇಲ್ಲಿಯವರೆಗೆ ನಾಸಾ 32 ಬಾರಿ ಇಂತಹ ಪರೀಕ್ಷೆ ನಡೆಸಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಬಾರಿ ಪರೀಕ್ಷೆಗೊಳಪಟ್ಟ ಎಂಜಿನ್‌ಗಳು ಇವು ಎಂದು ನಾಸಾ ಹೇಳಿದೆ. 

ಎಂತಹ ಪರಿಸ್ಥಿತಿಯಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಈ ಎಂಜಿನ್‌ನನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ ಎಂಜಿನ್‌ ನಿಯಂತ್ರಕಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇವುಗಳು ಎಂಜಿನ್‌ನ ಮೆದುಳಿನಂತೆ ಕಾರ್ಯನಿರ್ವಹಿಸಲಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !