ಸ್ವಚ್ಛತೆಯ ಕಾಳಜಿಗೆ ರಾಷ್ಟ್ರೀಯ ಪುರಸ್ಕಾರ

ಭಾನುವಾರ, ಮೇ 26, 2019
30 °C

ಸ್ವಚ್ಛತೆಯ ಕಾಳಜಿಗೆ ರಾಷ್ಟ್ರೀಯ ಪುರಸ್ಕಾರ

Published:
Updated:
Prajavani

ಹತ್ತನೇ ತರಗತಿ ಎಂದರೆ ವಿದ್ಯಾರ್ಥಿಗಳ ಪಾಲಿಗೆ ಮಹತ್ವದ ಘಟ್ಟ. ಅದರಲ್ಲೂ ಈ ಕಾಲದ ಬಹುತೇಕ ಮಕ್ಕಳು ಅಂಕಬೇಟೆಯ ಸ್ಪರ್ಧೆಗೆ ಇಳಿದಿರುತ್ತಾರೆ. ಹೆಚ್ಚೆಚ್ಚು ಓದಬೇಕು, ಹೆಚ್ಚೆಚ್ಚು ಅಂಕಗಳಿಸಬೇಕು ಎಂಬುದಷ್ಟೇ ಬಹುತೇಕ ವಿದ್ಯಾರ್ಥಿಗಳ ಮೆದುಳಲ್ಲಿ ಹೊಳೆಯುತ್ತಿರುವ ಯೋಚನೆ. ಇಂಥ ಸಂದರ್ಭದಲ್ಲಿ , ಬೆಂಗಳೂರಿನ ಗಿರಿನಗರದ ಮಾರ್ಟಿನ್ ಲೂಥರ್ ಇಂಗ್ಲಿಷ್‌ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಬಿ. ಆರ್.ಪ್ರತ್ಯಕ್ಷ, ತುಸು ವಿಭಿನ್ನವಾಗಿ ಯೋಚಿಸುತ್ತಾರೆ. ‘ಓದೂ ಬೇಕು, ಜತೆಗೆ ಸಾಮಾಜಿಕ ಕಾರ್ಯಕ್ಕೂ ತಾನು ತೊಡಗಿಕೊಳ್ಳಬೇಕು’ ಎಂದು ಹಂಬಲಿಸುವ ವ್ಯಕ್ತಿತ್ವ ಅವರದ್ದು. ಇಂಥ ಪ್ರತಿಭಾನ್ವಿತ ವಿದ್ಯಾರ್ಥಿನಿ ಪ್ರತ್ಯಕ್ಷ, ಇಲ್ಲಿವರೆಗೂ ಸಾಮಾಜಿಕ ಜಾಗೃತಿ ಮೂಡಿಸುವ 152 ನಾಟಕಗಳನ್ನು ಪ್ರದರ್ಶಿಸಿ, ಜನರ ಗಮನ ಸೆಳೆದಿದ್ದಾಳೆ.

ಈ ವಿದ್ಯಾರ್ಥಿನಿಯ ಸಾಧನೆ ದೂರದ ದೆಹಲಿಗೂ ಮುಟ್ಟಿದೆ. ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವುದಕ್ಕಾಗಿ 2019ನೇ ಸಾಲಿನ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಶಕ್ತಿ’ ಪುರಸ್ಕಾರವೂ ಅರಸಿಕೊಂಡು ಬಂದಿದೆ. ಇತ್ತೀಚೆಗೆ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಆರನೇ ವಯಸ್ಸಿನಿಂದಲೇ ಪ್ರತ್ಯಕ್ಷ ಅವರಿಗೆ ರಂಗದ ಮೇಲೆ ಅಭಿನಯಿಸುವ ಆಸಕ್ತಿ ಮೂಡಿತು. ನಾಟಕ ಪ್ರದರ್ಶನ ನೀಡುವುದಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದರು. ಹೀಗಿದ್ದಾಗ, ತಾವು ಕಂಡ ಕೆಲವು ಪ್ರದೇಶಗಳಲ್ಲಿನ ಮೂಲ ಸೌಕರ್ಯಗಳ ಸಮಸ್ಯೆ ಇವರನ್ನು ಕಾಡಿತು. ಮುಖ್ಯವಾಗಿ ಬಯಲು ಬಹಿರ್ದೆಸೆ ಸಮಸ್ಯೆ ಹೆಚ್ಚು ಆಲೋಚಿಸುವಂತೆ ಮಾಡಿತು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ರಂಗಕಲೆಯನ್ನೇ ಬಳಸಿಕೊಂಡರು. ನಾಟಕದ ಮೂಲಕವೇ ಈ ಸಮಸ್ಯೆಗೆ  ಕೈಲಾದ ಸಹಾಯ ಮಾಡಬೇಕೆಂದು ನಿರ್ಧರಿಸಿ, ತಂದೆ ಬಿ.ಜಿ. ರಾಮಕೃಷ್ಣ ಮತ್ತು ಸಹೋದರರ ನೆರವಿನಿಂದ ‘ಪಾಯಿಖಾನೆ’ ಎಂಬ ಏಕವ್ಯಕ್ತಿ ನಾಟಕವನ್ನು ರಚಿಸಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಶೌಚಾಲಯದ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ನಾಟಕ ಪ್ರದರ್ಶನಕ್ಕಾಗಿ ಮೂಲ ಸೌಕರ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿನ ಜನರನ್ನು ಸೇರಿಸಿ ಅವರ ಎದುರಲ್ಲೇ ನಾಟಕ ಅಭಿನಯಿಸಿ, ಸ್ವಚ್ಛತಾ ಜಾಗೃತಿ ಮೂಡಿಸುತ್ತಿದ್ದಾರೆ. ನಾಟಕದ ನಂತರ, ಆ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವ ಕರಪತ್ರಗಳನ್ನೂ ಹಂಚುತ್ತಿದ್ದಾರೆ. ಈ ಕರಪತ್ರದಲ್ಲಿ, ವೈಜ್ಞಾನಿಕವಾಗಿ ಶೌಚಾಲಯ ನಿರ್ಮಾಣ, ಇಂಗು ಗುಂಡಿಗಳ ರಚನೆ, ಕಡಿಮೆ ದರದಲ್ಲಿ ಶೌಚಾಲಯ ನಿರ್ಮಿಸುವ ವಿಧಾನವನ್ನು ವಿವರಿಸುತ್ತಿದ್ದಾರೆ.

ಶೌಚಾಲಯ ನಿರ್ಮಾಣಕ್ಕೆ ನೆರವಾಗಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ‘ಹಸನ’ ಎಂಬ ಟ್ರಸ್ಟ್‌ ಕೂಡ ಆರಂಭಿಸಿದ್ದಾರೆ. ನಾಟಕ ಪ್ರದರ್ಶನದ ನಂತರ ಸಾರ್ವಜನಿಕರು ಮೆಚ್ಚಿ ಉಡುಗೊರೆ, ನಗದು ಬಹುಮಾನಗಳನ್ನೂ ನೀಡಿದ್ದೂ ಇದೆ. ಈ ಹಣವನ್ನು ಮತ್ತು ಉಳಿತಾಯ ಮಾಡಿದ್ದ ಹಣವನ್ನು ಸೇರಿಸಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಈ ವಿದ್ಯಾರ್ಥಿನಿಯ ನಾಟಕ ಪ್ರದರ್ಶನವನ್ನು ನೋಡಿದ ಮಂಗಳೂರು ಜಿಲ್ಲಾಧಿಕಾರಿ, ಇವರ ಸಂಪರ್ಕ ಸಂಖ್ಯೆ ಪಡೆದು ‘ಬಾಲಶಕ್ತಿ ಪುರಸ್ಕಾರ’ಕ್ಕೆ ಶಿಫಾರಸು ಮಾಡಿದ್ದಲ್ಲದೇ, ‘ಇಂಥ ಜಾಗೃತಿ ಕಾರ್ಯಕ್ರಮಗಳು ಮತ್ತಷ್ಟು ಮಾಡಿ’ ಎಂದು ಹುರಿದುಂಬಿಸಿದ್ದರು. ಪ್ರಶಸ್ತಿ ಸ್ವೀಕರಿಸಿದ ಪ್ರತ್ಯಕ್ಷ, ಅದನ್ನು ನಗರ ಮತ್ತು ಹಳ್ಳಿಗಳನ್ನು ನಿತ್ಯ ಸ್ವಚ್ಛವಾಗಿಡಲು ಶ್ರಮಿಸುವ ಸ್ವಚ್ಛ ಸೇನಾನಿಗಳಾದ ಪೌರಕಾರ್ಮಿಕರಿಗೆ ಅರ್ಪಿಸಿದ್ದಾರೆ.

ಶಿಕ್ಷಣದ ಕೊರತೆಯೇ ಮೂಲ ಸೌಕರ್ಯ ಸಮಸ್ಯೆಗಳಿಗೆ ಮೂಲ ಕಾರಣ. ಹೀಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ಕಲ್ಪಿಸಬೇಕೆಂದು ಪ್ರತ್ಯಕ್ಷ ಯೋಚಿಸುತ್ತಿದ್ದಾರೆ. ಮುಂದೆ ಶಿಕ್ಷಕಿಯಾಗಿ ಕೆಲಸ ಮಾಡಬೇಕೆಂಬ ಗುರಿಯೂ ಇದೆ.

ಪ್ರಧಾನಿ ಉಡುಗೊರೆ

‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲಶಕ್ತಿ’ ಪಡೆದ ಪ್ರತ್ಯಕ್ಷ ಅವರಿಗೆ ಈ ವರ್ಷ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶ ಒದಗಿಬಂತು. ಪರೇಡ್‌ನಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ಹೋಗಿದ್ದ ಪ್ರತ್ಯಕ್ಷ ರಾಷ್ಟ್ರಪತಿಯವರಿಂದ ಪುರಸ್ಕಾರ ಸ್ವೀಕರಿಸಿ, ನಂತರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಪ್ರಧಾನಿಯವರೊಂದಿಗೆ ಮಾತನಾಡಿದ ಅನುಭವಗಳನ್ನೂ ಹಂಚಿಕೊಂಡಿದ್ದು ಹೀಗೆ.

‘ದೇಶದಿಂದ ಒಟ್ಟು 26 ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಅದರಲ್ಲಿ ನಾನೂ ಒಬ್ಬಳು. ಪ್ರಧಾನಿ ನರೇಂದ್ರ ಮೋದಿಯವರು ನಮ್ಮೊಂದಿಗೆ 40 ನಿಮಿಷ ಮಾತನಾಡಿಸಿದರು. 

ದೆಹಲಿಯ ವಾತಾವರಣಕ್ಕೆ ಹೊಂದಿಕೊಳ್ಳಲಾಗದೇ ನನ್ನ ಗಂಟಲು ಕೆಟ್ಟಿತ್ತು. ಅದನ್ನು ಗಮನಿಸಿದ ಪ್ರಧಾನಿಯವರು. ಎಲ್ಲಿಂದ ಬಂದಿದ್ದೀರಿ ಎಂದು ಕೇಳಿದರು, ನಾನು ಕರ್ನಾಟಕದಿಂದ ಬಂದಿದ್ದೇನೆ ಎಂದೆ. ಕೂಡಲೇ ತಮ್ಮ ಬಳಿ ಇದ್ದ ಶಾಲು ತೆಗೆದು ಕೊಟ್ಟು, ಹೊದ್ದುಕೊಳ್ಳಲು ಹೇಳಿದರು. ‘ಇಲ್ಲಿನ ವಾತಾವರಣಕ್ಕೆ ನೀವು ಬೇಗ ಹೊಂದಿಕೊಳ್ಳುವುದು ಕಷ್ಟ’ ಎಂದು ಹೇಳಿದರು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. 

‘ಇಂಥ ಪ್ರಶಸ್ತಿ ಪುರಸ್ಕಾರಗಳು ಚಿಕ್ಕ ವಯಸ್ಸಿಗೇ ದೊರೆತಾಗ, ನಮ್ಮ ಬಾಲ್ಯವೇ ಕಳೆದು ಹೋಗುತ್ತದೆ. ನೀವು ಏನೇ ಸಾಧನೆ ಮಾಡಿದರೂ ನಿಮ್ಮ ಆಟ–ಪಾಠಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು. ಎಲ್ಲ ಮಕ್ಕಳಂತೆ ನೀವು ನಲಿಯುತ್ತಾ ಬೆಳೆಯಬೇಕು’ ಎಂದು ಸಲಹೆ ನೀಡಿದ್ದಾಗಿ, ಖುಷಿಯಿಂದ ನೆನೆಸಿಕೊಂಡರು.

***
‘ನಾನು ಈ ದೇಶದ ಪ್ರಜೆ. ಈ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಸೇವಾ ಮನೋಭಾವ ಮನದಲ್ಲಿದ್ದರೆ, ಯಾರು ಬೇಕಾದರೂ ಸಮಾಜ ಕಾರ್ಯದಲ್ಲಿ ತೊಡಗಬಹುದು. ಇದಕ್ಕೆ ವಯಸ್ಸಿನ ಭೇಧಗಳಿಲ್ಲ’
–ಪ್ರತ್ಯಕ್ಷ, ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !