ಶನಿವಾರ, ಮೇ 21, 2022
23 °C
ಪಾಲಿಕೆ ನಿರ್ಣಯ ವಿರೋಧಿಸಿ ಬಿಜೆಪಿ ಸಭಾತ್ಯಾಗ * ಚುನಾವಣಾ ಆಯೋಗಕ್ಕೆ ದೂರು

ನವ ಬೆಂಗಳೂರು ಯೋಜನೆ ಕಾಮಗಾರಿ ಕೆಆರ್‌ಐಡಿಎಲ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ 2018–19 ಹಾಗೂ 2019–20ರಲ್ಲಿ ಮಂಜೂರಾದ ಅನುದಾನ ಹಾಗೂ ವಾರ್ಡ್‌ ಮಟ್ಟದ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಕೆಆರ್‌ಐಡಿಎಲ್‌) ಮೂಲಕ ಪ್ರಾರಂಭಿಸಲು ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಶನಿವಾರ ನಿರ್ಣಯ ಕೈಗೊಳ್ಳಲಾಯಿತು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಟೆಂಡರ್‌ ಕರೆಯದೆಯೇ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸುವ ಈ ನಿರ್ಣಯ ಕಾನೂನು ಬಾಹಿರ. ಸಚಿವ ಸಂಪುಟಕ್ಕೆ ಮಾತ್ರ ಈ ರೀತಿ ನಿರ್ಣಯ ಕೈಗೊಳ್ಳುವ ಅಧಿಕಾರ ಇದೆ’ ಎಂದು ವಿರೋಧ ವ್ಯಕ್ತಪಡಿಸಿದರು.  

ವಿಶೇಷ ಆಯುಕ್ತ ಮನೋಜ್‌ ಕುಮಾರ್‌ ಮೀನಾ, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಯಾವುದೇ ಹೊಸ ನಿರ್ಧಾರ ತಳೆಯುವುದು ಸರಿಯಲ್ಲ. ಮೇ 23ರ ವರೆಗೆ ಕಾಯುವುದು ಸೂಕ್ತ’ ಎಂದು ಸಲಹೆ ನೀಡಿದರು.

ಇದಕ್ಕೆ ಕ್ರಿಯಾಲೋಪ ಎತ್ತಿ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಎಂ.ಕೆ.ಗುಣಶೇಖರ್‌, ‘ಕುಡಿಯುವ ನೀರು ಪೂರೈಕೆಯಂತಹ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವ ಅಧಿಕಾರ ಸ್ಥಳೀಯಾಡಳಿತ ಸಂಸ್ಥೆಗಿದೆ. ನವ ಬೆಂಗಳೂರು ಯೊಜನೆಯ ಅನುದಾನವನ್ನು ಈ ವರ್ಷವೇ ಬಳಸದಿದ್ದರೆ ಸರ್ಕಾರ  ಅದನ್ನು ಹಿಂದಕ್ಕೆ ಪಡೆಯಬಹುದು. ನೀತಿಸಂಹಿತೆ ಮುಗಿಯುವರೆಗೆ ಕಾದು, ಮಳೆಗಾಲದಲ್ಲಿ ರಾಜಕಾಲುವೆ ಹಾಗೂ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಂಡು ಏನುಪಯೋಗ’ ಎಂದು ಪ್ರಶ್ನಿಸಿದರು.

‘ಇದು ಹೊಸ ನೀತಿ ಏನಲ್ಲ. ಹಾಗಾಗಿ ನೀತಿ ಸಂಹಿತೆ ಉಲ್ಲಂಘನೆ ಆಗದು’ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್‌ ಸಮರ್ಥಿಸಿಕೊಂಡರು.

‘ನಿಮಗೆ ತಾಕತ್ತು ಇದ್ದರೆ ಮತಕ್ಕೆ ಹಾಕಿ ನಿರ್ಣಯಕ್ಕೆ ಅನುಮೋದನೆ ಪಡೆಯಿರಿ’ ಎಂದು ವಿರೋಧ ಪಕ್ಷದವರು ಸವಾಲೆಸೆದರು. ಆಡಳಿತ ಪಕ್ಷದವರು ಇದಕ್ಕೆ ಸೊಪ್ಪು ಹಾಕಲಿಲ್ಲ.  ಪರ– ವಿರೋಧದ ಚರ್ಚೆ ತಾರಕಕ್ಕೇರಿದಾಗ ಮೇಯರ್‌ ಗಂಗಾಂಬಿಕೆ ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಸಭೆ ಮತ್ತೆ ಆರಂಭವಾದಾಗ ವಿರೋಧ ಪಕ್ಷದವರು, ‘ನಿರ್ಣಯವನ್ನು ಹಿಂಪಡೆಯಿರಿ’ ಎಂದು ಒತ್ತಾಯಿಸಿದರು. ಆಡಳಿತ ಪಕ್ಷವು ಇದಕ್ಕೊಪ್ಪದಿದ್ದಾಗ ಸಭಾತ್ಯಾಗ ನಡೆಸಿದರು.

‘ಲೋಕಸಭಾ ಚುನಾವಣೆಯ ಮತ ಎಣಿಕೆ ಬಳಿಕ ರಾಜ್ಯ ಸರ್ಕಾರ ಬೀಳುತ್ತದೆ ಎಂಬ ಮುನ್ಸೂಚನೆ ಸಿಕ್ಕಿದ್ದರಿಂದ ಈ ರೀತಿ ಮಾಡುತ್ತಿದ್ದೀರಿ. ₹ 4,200 ಕೋಟಿ ವೆಚ್ಚದ ಕಾಮಗಾರಿಯನ್ನು ಕೆಆರ್‌ಐಡಿಎಲ್‌ಗೆ ವಹಿಸುವ ನಿರ್ಣಯದ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಗುತ್ತಿಗೆದಾರರಿಂದ ಲಂಚ ಪಡೆದಿರುವ ಆಡಳಿತ ಪಕ್ಷದವರು ಋಣ ತೀರಿಸಲು ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ’ ಎಂದು ಪದ್ಮನಾಭ ರೆಡ್ಡಿ ಆರೋಪಿಸಿದರು.

ಟೆಂಡರ್‌ ಕರೆಯದೆಯೇ ಕಾಮಗಾರಿ ನಡೆಸಲು ಸಿದ್ಧತೆ ನಡೆದಿರುವ ಕುರಿತು ‘ಪ್ರಜಾವಾಣಿ’ ಫೆ. 20ರಂದು ‘ಕಪ್ಪುಪಟ್ಟಿ ಸಂಸ್ಥೆಗೆ ನವ ಬೆಂಗಳೂರು ಯೋಜನೆ’ ಹೆಸರಿನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ₹ 4261 ಕೋಟಿ ವೆಚ್ಚದ ಕಾಮಗಾರಿಯನ್ನು ಟೆಂಡರ್‌ ಆಹ್ವಾನಿಸದೆಯೇ ಕೆಆರ್‌ಐಡಿಎಲ್‌ಗೆ ಮೂಲಕ ಅನುಷ್ಠಾನಗೊಳಿಸುವ ಕುರಿತು ಕೌನ್ಸಿಲ್‌ ಸಭೆಯ ನಿರ್ಣಯ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಹೊರತುಪಡಿಸಿ ಬೇರಾವುದೇ ಕಾಮಗಾರಿ ನಡೆಸುವುದಕ್ಕೆ ನೀತಿಸಂಹಿತೆ ಮುಗಿಯುವವರೆಗೆ ಅವಕಾಶ ಕಲ್ಪಿಸಬಾರದು’ ಎಂದು ಒತ್ತಾಯಿಸಿ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಮುಖ್ಯ ಚುನಾವಣಾಧಿಕಾರಿಗೆ ಶನಿವಾರ ದೂರು ನೀಡಿದರು.

ನೀರು ಪೂರೈಕೆ ನಿರ್ವಹಣೆಯೂ ಕೆಆರ್‌ಐಡಿಎಲ್‌ಗೆ

14ನೇ ಹಣಕಾಸು ಆಯೋಗದ ಅನುದಾನ ಮತ್ತು ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಇತರ ಅನುದಾನಗಳ ಕಾಮಗಾರಿಯನ್ನೂ ಟೆಂಡರ್‌ ಆಹ್ವಾನಿಸದೆಯೇ ಕೆಆರ್‌ಐಡಿಎಲ್‌ ಮುಖಾಂತರ ನಡೆಸುವ ಕುರಿತೂ ಪಾಲಿಕೆ ಸರ್ವಾನುಮತದ ನಿರ್ಣಯ ಕೈಗೊಂಡಿತು.

‘ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲು ಪಾಲಿಕೆ ಎರಡು ಬಾರಿ ಟೆಂಡರ್‌ ಕರೆದಾಗಲೂ ಯಾರೂ ಭಾಗವಹಿಸಿಲ್ಲ. ಟ್ಯಾಂಕರ್‌ ಮಾಲೀಕರು ಮನಬಂದಂತೆ ಕೊಳವೆಬಾವಿಗಳಿಂದ ನೀರೆತ್ತಲು ಕಾನೂನಿನಲ್ಲಿ ಅವಕಾಶ ಇಲ್ಲ. ಜನರ ಸಮಸ್ಯೆ ಬಗ್ಗೆ ಕನಿಷ್ಠ ಸಹಾನುಭೂತಿಯೂ ಇಲ್ಲದ ಟ್ಯಾಂಕರ್‌ ಮಾಫಿಯಾ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಉದ್ದಿಮೆ ಪರವಾನಗಿ ಪಡೆಯದೇ ನೀರು ಪೂರೈಸುವ ಟ್ಯಾಂಕರ್‌ ವಶಕ್ಕೆ ಪಡೆಯಬೇಕು’ ಎಂದು ಗುಣಶೇಖರ ಒತ್ತಾಯಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು