ನೇಪಾಳ: ಖಾಸಗಿ ಶಾಲೆಗಳಲ್ಲಿ ಚೀನಿ ಬೋಧನೆ

ಬುಧವಾರ, ಜೂಲೈ 17, 2019
29 °C
ನೆರೆ ರಾಷ್ಟ್ರದಲ್ಲಿನ ಬೆಳವಣಿಗೆಯಿಂದ ಭಾರತಕ್ಕೆ ಆತಂಕ

ನೇಪಾಳ: ಖಾಸಗಿ ಶಾಲೆಗಳಲ್ಲಿ ಚೀನಿ ಬೋಧನೆ

Published:
Updated:

ಕಠ್ಮಂಡು: ಚೀನಿ ಭಾಷೆಯನ್ನು ಕ್ರಮಬದ್ಧವಾಗಿ ಬೋಧಿಸುವ ನೇಪಾಳದ ಖಾಸಗಿ ಶಾಲಾ ಶಿಕ್ಷಕರಿಗೆ ಸಂಬಳ ನೀಡುವ ಕ್ರಮವನ್ನು ಚೀನಾ ಕೈಗೊಂಡಿದೆ.

ಅಭಿವೃದ್ಧಿ ಹೆಸರಿನಲ್ಲಿ ಚೀನಾ, ಹಿಮಾಲಯ ದೇಶದಲ್ಲಿ ಭಾಷೆ–ಸಂಸ್ಕೃತಿ ಹೇರಿಕೆಗೆ ಮುಂದಾಗಿರುವುದು ನೆರೆಯ ದೇಶವಾದ ಭಾರತವನ್ನು ಚಿಂತೆಗೀಡು ಮಾಡಲಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. 

ಸಂಬಳ ನೀಡುವ ಕ್ರಮದಿಂದಾಗಿ ಬಹುತೇಕ ಖಾಸಗಿ ಶಾಲೆಗಳು ಮ್ಯಾಂಡರಿನ್ ಭಾಷಾ ಬೋಧನೆಯನ್ನು ಕಡ್ಡಾಯಗೊಳಿಸಿವೆ. ಯಾವುದಾದರೂ ಒಂದು ವಿದೇಶಿ ಭಾಷೆಯನ್ನು ಕಲಿಸುವ ಸ್ವಾತಂತ್ರ್ಯವನ್ನು ಪಠ್ಯಕ್ರಮ ಅಭಿವೃದ್ಧಿ ಕೇಂದ್ರ (ಸಿಡಿಸಿ) ನೀಡಿದೆ. ವಿದೇಶಿ ಭಾಷೆಯನ್ನು ಶಾಲಾ ವೇಳೆಯಲ್ಲಿ ಬೋಧಿಸಬಾರದು. ಅಲ್ಲದೆ ಕಡ್ಡಾಯಗೊಳಿಸಲೂ ಬಾರದು ಎಂದು ‘ಸಿಡಿಸಿ’ ನಿಯಮಗಳು ಹೇಳುತ್ತವೆ. ಆದರೆ, ಈ ನಿಬಂಧನೆಗಳನ್ನು ಖಾಸಗಿ ಶಾಲೆಗಳು ಗಾಳಿಗೆ ತೂರಿವೆ. 

ಒನ್‌ ಬೆಲ್ಟ್–ಒನ್ ರೋಡ್‌ (ಒಬಿಒಆರ್) ಯೋಜನೆಗೆ ನೇಪಾಳ ಸಮ್ಮತಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಕಾಮಗಾರಿ ನಡೆಯುತ್ತಿದೆ. ಇದೀಗ ಭಾಷೆಯನ್ನು ಹೇರುವ ಮೂಲಕ ಹಿಮಾಲಯದ ರಾಜ್ಯಗಳ ಮೇಲೆ ಪಾರಮ್ಯ ಸಾಧಿಸಲು ಚೀನಾ ಮುಂದಾಗಿದೆ ಎಂದು ಹೇಳಲಾಗಿದೆ. 

ಉತ್ತರ ಕೊರಿಯಾ ಪ್ರಜೆಗಳಿಂದ ವ್ಯಾಪಾರ: ಅಮೆರಿಕ ಕಳವಳ
ಕಠ್ಮಂಡು:
ನೇಪಾಳದಲ್ಲಿ ಉತ್ತರ ಕೊರಿಯಾ ಪ್ರಜೆಗಳ ವ್ಯಾಪಾರ ಚಟುವಟಿಕೆಗಳು ಹೆಚ್ಚುತ್ತಿರುವುದಕ್ಕೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ.

ಉತ್ತರ ಕೊರಿಯಾದವರನ್ನು ದೇಶದಲ್ಲಿ ಪೋಷಿಸಬಾರದು ಎಂದೂ ನೇಪಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಉತ್ತರ ಕೊರಿಯಾದ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಧಾರಕ್ಕೆ ಸದಸ್ಯ ರಾಷ್ಟ್ರವಾಗಿರುವ ನೇಪಾಳ ಗೌರವ ನೀಡಬೇಕು ಎಂದೂ ಹೇಳಿದೆ.

ನೇಪಾಳಕ್ಕೆ ಭೇಟಿ ನೀಡಿರುವ ಉತ್ತರ ಕೊರಿಯಾದಲ್ಲಿರುವ ಅಮೆರಿಕದ ವಿಶೇಷ ರಾಯಭಾರಿ ಮಾರ್ಕ್‌ ಲ್ಯಾಂಬರ್ಟ್‌ ಅವರು, ಈ ವಿಚಾರದ ಕುರಿತು ಸಂಸದರು, ಅಧಿಕಾರಿಗಳು  ಹಾಗೂ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷದ (ಎನ್‌ಸಿಪಿ) ಗಮನ ಸೆಳೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನೇಪಾಳವನ್ನು ನೆಲೆಯಾಗಿಟ್ಟುಕೊಂಡು ಉತ್ತರ ಕೊರಿಯಾದವರು ಸೈಬರ್‌ ಅಪರಾಧ ಕೃತ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ ಎಂದೂ ಲ್ಯಾಂಬರ್ಟ್‌ ಕಳವಳ ವ್ಯಕ್ತಪಡಿಸಿರುವುದಾಗಿ ಅವರನ್ನು ಭೇಟಿಯಾಗಿರುವ ನೇಪಾಳದ ಸಂಸದರೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !