ಇಬ್ಬಡ್ಲ ಕೃಷಿ ಕೇರಳದ ಪಾಠಗಳು

7

ಇಬ್ಬಡ್ಲ ಕೃಷಿ ಕೇರಳದ ಪಾಠಗಳು

Published:
Updated:
ಇಬ್ಬಡ್ಲ ಕೃಷಿ ಕೇರಳದ ಪಾಠಗಳು

ಇಬ್ಬಡ್ಲ ಗೊತ್ತಿದೆಯಾ? ಬಹುಜನಕ್ಕೆ ಅಷ್ಟಾಗಿ ಪರಿಚಯವಿಲ್ಲದ ಬಳ್ಳಿ ತರಕಾರಿ ಇದು. ತರಕಾರಿ ಅನ್ನೋದಕ್ಕಿಂತಲೂ ಹಣ್ಣೆಂದೇ ಹೇಳಬೇಕು. ಇದರ ಮಂದರಸ, ಪಾಯಸ ಕುಡಿದರೆ ಸಾಕು, ನಿಮಗಿದು ಮತ್ತೆ ಮರೆತೇ ಹೋಗದು. ಇಂಗ್ಲಿಷಿನಲ್ಲಿ ಸ್ನ್ಯಾಪ್ ಮೆಲನ್. ಹೊನ್ನಾವರ ಭಾಗದಲ್ಲಿ ಇಬ್ಬಡ್ಲ ಎಂದು ಹೆಸರು.ಇದೇ ಅಥವಾ ಸ್ವಲ್ಪ ಆಕಾರ, ಗಾತ್ರ ಹೊರಮೈ ವ್ಯತ್ಯಾಸವಿರುವ ಇದರ ವಿವಿಧ ತಳಿಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಇವೆ. ಇಬ್ಬಟ್ಟಲು, ಬನಸ್ಪತ್ರೆ, ಕ್ಯಾಕ್ರಿಕೆ, ಚಿಬ್ಬಳು- ಇನ್ನೂ ಹಲವು ಹೆಸರುಗಳಿವೆ. ಮುಖ್ಯ ಬಳಕೆ, ಬೇಸಿಗೆಯಲ್ಲಿ ದೇಹ ತಂಪಾಗಿಸುವುದು.ಮಾಗುವಾಗ ಇದು ಬಿರುಕು ಬಿಡುತ್ತದೆ. ಬಿರುಕು ಬಿಟ್ಟಿತೋ, ಅದರ ಆಯಸ್ಸು ತಾಸುಗಳ ಲೆಕ್ಕದ್ದು. ಅಂದರೆ ಕೊಳೆಯಲು ಇಳಿಲೆಕ್ಕ ಶುರು. ತೀರಾ ಅಲ್ಪಕಾಲಿಕ ತಾಳಿಕೆ ಇಬ್ಬಡ್ಲದ ಶಾಪ. ಮಾತ್ರವಲ್ಲ, ದೂರ ಸಾಗಾಟ ತಲೆನೋವಾಗಿರುವುದು ಈ ಹಣ್ಣು ಇನ್ನಷ್ಟು ಜನಪ್ರಿಯತೆ ಆಗದಿರಲು ಕಾರಣ. ಬೆಳೆ ಬರುವ ಕಾಲದಲ್ಲಿ ಮಳೆ ಸುರಿಯಿತೋ, ಕನಸೆಲ್ಲಾ ಮಣ್ಣುಪಾಲು.ಕೇರಳದಲ್ಲಿ ಈ ಹಣ್ಣಿಗೆ ಎರಡು ಹೆಸರು. ಕಕ್ಕರಿ, ಪೊಟ್ಟು ವೆಳ್ಳರಿ. ಹಣ್ಣಾಗುವಾಗ ಒಡೆಯುವ (ಪೊಟ್ಟು–ಒಡೆಯುವುದು; ವೆಳ್ಳರಿ–ಸೌತೆ.) ಕಾರಣ ಪೊಟ್ಟು ವೆಳ್ಳರಿ. ತ್ರಿಶೂರು ಜಿಲ್ಲೆಯ ಕೊಡುಂಗಲ್ಲೂರು ತವರು. ಅಲ್ಲಿನ ಮರಳುಭರಿತ ಗದ್ದೆಗಳಲ್ಲಿ ಭತ್ತದ ಬೆಳೆಯ ನಂತರ ಇದನ್ನು ಬೆಳೆಸುತ್ತಾರೆ. ಡಿಸೆಂಬರ್‌ನಿಂದಲೇ ಮೇ ಈ ಹಣ್ಣಿನ ಸೀಸನ್ನು.ಹಿಂದೆಲ್ಲಾ ಬೇಕಾದವರು ಹೋಗಿ ಗದ್ದೆಯಿಂದಲೇ ಖರೀದಿಸುತ್ತಿದ್ದರು. ಒಂದು ಥರ ತೆರೆಮರೆಯ ವ್ಯವಹಾರ ಎನ್ನಬಹುದು. ದಶಕದ ಹಿಂದೆ ಯಾಹ್ಯಾ ಎಂಬ ಯುವಕ ಇದನ್ನು ಹೆದ್ದಾರಿಗೆ ತಂದರು. ಅಲ್ಲಿ ಹಣ್ಣು ಮತ್ತು ಅದರ ಜ್ಯೂಸ್ ಮಾರಾಟ ಆರಂಭಿಸಿದರು. ಇದು ದೊಡ್ಡ ಪ್ರಮಾಣದಲ್ಲಿ ಕ್ಲಿಕ್ ಆಯಿತು. ಹೆದ್ದಾರಿ ನಂಬರ್ 17ರಲ್ಲಿ ಇಂದು ಚಾವಕ್ಕಾಡಿನಿಂದ ಎರ್ನಾಕುಲಂವರೆಗೆ ಸಂಚರಿಸಿ ನೋಡಿ. ನೂರಾರು ‘ಕಕ್ಕರಿ ಸ್ಟಾಲು’ಗಳು ವರ್ಷದ ಇದೇ ವ್ಯವಹಾರ ನಡೆಸುತ್ತವೆ.ಈ ಹೆದ್ದಾರಿಯ 80 ಕಿಲೋಮೀಟರ್ ಭಾಗವೀಗ ಪಯಣಿಗರಿಗೆ ವರ್ಷಾರ್ಧ ಕಾಲ ಕಕ್ಕರಿ ಜ್ಯೂಸ್ ಕುಡಿಸುತ್ತಿದೆ. ಆ ಮೂಲಕ ಈ ಹಣ್ಣಿನ ಪರಿಮಳ ವ್ಯಾಪಿಸಿದೆ. ಆದರೆ, ಇನ್ನೊಂದೆಡೆ ಇದರ ಕೃಷಿಗೆ ಹಿನ್ನಡೆ ಆಗಿದೆ. ಕಾರ್ಮಿಕ ಕೊರತೆ, ಅಕಾಲಿಕ ಮಳೆಯಿಂದ ಲುಕ್ಸಾನು ಇತ್ಯಾದಿ ಕಾರಣಗಳಿಂದ ಕಕ್ಕರಿ ಕೃಷಿ ಕುಗ್ಗತೊಡಗಿದೆ.ಈ ನಡುವೆ ಒಂದು ಹೊಸ ಬೆಳವಣಿಗೆ ನಡೆದಿದೆ. ಕಕ್ಕರಿ ಮರಳುಮಿಶ್ರಿತ ತೆರೆದ ಗದ್ದೆಯಲ್ಲಷ್ಟೇ ಬೆಳೆಸಲು ಸಾಧ್ಯ. ಬೇರೆಡೆ ನಡೆಯದು ಎನ್ನುವ ಅಭಿಪ್ರಾಯ ವ್ಯಾಪಕವಾಗಿದೆ.ಮಾಲಾ ಭಾಗದ ಕೆಲ ಯುವಕರು ಊರವರ ಪರಿಹಾಸ ಲೆಕ್ಕಿಸದೆ ಇದನ್ನು ಒಳನಾಡಿನ ಕೆಮ್ಮಣ್ಣಿನಲ್ಲಿ, ತೆಂಗಿನ ಮರಗಳ ಹೆಡೆಯಲ್ಲಿ ಬೆಳೆಯಹೊರಟರು.ಗೆದ್ದೂ ಬಿಟ್ಟರು. ಹೊಸ ಪ್ರದೇಶದಲ್ಲಿ ಪೊಟ್ಟು ವೆಳ್ಳರಿ ಬೆಳೆ ಪ್ರಯೋಗ ಮಾಡಿದ ಸಾಹಸಿಗಳಲ್ಲಿ ರಂಜಿತ್ ಪ್ರಮುಖರು. ಕೊಡುಂಗಲ್ಲೂರಿನ ಸಾಂಪ್ರದಾಯಿಕ ರೀತಿಯಲ್ಲೇ ಇವರು ಮಾಲಾ ಮರಳಿಲ್ಲದ ಅರೆನೆರಳಲ್ಲೂ ಈ ಹಣ್ಣು ಬೆಳೆದರು.‘ಪೊಟ್ಟು ವೆಳ್ಳರಿಗೆ ನೀರಾವರಿ ಬಹಳ ಎಚ್ಚರಿಕೆಯಿಂದ ನಡೆಯಬೇಕು. ಹೆಚ್ಚಾದರೆ ಬೆಳೆಗೆ ಶಿಲೀಂಧ್ರ ಹತ್ತಿ ಕೊಳೆತುಹೋಗುತ್ತದೆ. ಕಡಿಮೆ ಆದರೆ ಕಾಯಿಯ ಬೆಳವಣಿಗೆ ಸರಿ ಆಗುವುದಿಲ್ಲ’ ಎನ್ನುತ್ತಾರೆ ರಂಜಿತ್. ‘ಕಣಿಗಳಲ್ಲಿ ಹರಿ ನೀರಾವರಿ ಮೂಲಕ ನೀರುಣಿಸಲು ಐದಾರು ಗಂಟೆ ಬೇಕಾಗಿತ್ತು. ಉಸ್ಸಪ್ಪಾ ಬೇಡವಿತ್ತು ಎನ್ನುತ್ತಿತ್ತು ಒಳಮನಸ್ಸು.ಎರಡೇ ತಿಂಗಳ ಬೆಳೆ ಲಾಭ ತಂದರೂ ಏದುಸಿರು ಬಿಡಿಸುತ್ತಿತ್ತು. ಬೆಳೆ ಹೆಚ್ಚಿಸಲು ದಾರಿಯೇ ಇರಲಿಲ್ಲ’ ಎನ್ನುತ್ತಾರೆ ಅವರು. ರಂಜಿತ್ ಮತ್ತವರ ಗೆಳೆಯರು ಈ ಸಮಸ್ಯೆಗೀಗ ಪರಿಹಾರ ಕಂಡುಕೊಂಡಿದ್ದಾರೆ. ಅವರು ನಿಖರ ಕೃಷಿ (ಪ್ರೆಸಿಶನ್ ಫಾರ್ಮಿಂಗ್) ಅನುಸರಿಸತೊಡಗಿದ್ದಾರೆ.ಪ್ಲಾಸ್ಟಿಕ್ ಮುಚ್ಚಿಗೆ, ಅದರೊಳಗಿನಿಂದಲೇ ಹನಿ ನೀರಾವರಿ, ಗೊಬ್ಬರ, ಸೂಕ್ಷ್ಮಪೋಷಕಾಂಶ ಸರಬರಾಜು ಎಲ್ಲವೂ ‘ಒಳಗೊಳಗಿನಿಂದಲೇ’ ನಡೆಯುತ್ತದೆ. ಹೀಗೆ ಮಾಡಿದಾಗ, ಒಂದಷ್ಟು ಅದೃಷ್ಟವೂ ಜತೆಗಿದ್ದರೆ, ಹೂ ಬಿಡುವುದು, ಕೊಯ್ಲು, ಇಳುವರಿ ಎಲ್ಲವೂ ನಿಖರವಾಗಿ ನಡೆಯುತ್ತದೆ.ರಂಜಿತ್, ಸಿನೋಜ್ ಕೆ.ಎಸ್ ಮತ್ತು ಜೋಸೆಫ್ ಪಳ್ಳನ್- ಈ ಮೂವರು ಸೇರಿ ಕಳೆದ ಸಾಲಿನಲ್ಲಿ ಐನೂರು ಟನ್ ಪೊಟ್ಟು ವೆಳ್ಳರಿ ಬೆಳೆದಿದ್ದಾರೆ. ರಂಜಿತ್ ಒಬ್ಬರೇ ಹತ್ತು ಲಕ್ಷ ರೂಪಾಯಿಯ ಹಣ್ಣು ಮಾರುಕಟ್ಟೆಗೆ ಕಳಿಸಿದ್ದಾರೆ. ಈಗ ರಖಂ ವ್ಯಾಪಾರಿಗಳು ಎಕರೆಗೆ ಒಂದರಿಂದ ಒಂದೂಕಾಲು ಲಕ್ಷ ರೂಪಾಯಿ ತೆತ್ತು ಇವರ ಹೊಲದಿಂದಲೇ ಒಯ್ಯುತ್ತಾರೆ. ಕೊಯ್ಲು, ಸಾಗಾಟ ಇತ್ಯಾದಿ ಅವರದೇ.ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಬಿತ್ತುವ ಸೀಸನ್. ಒಂದು ಜಾಗದಲ್ಲಿ ವರ್ಷಕ್ಕೆ ಒಂದೇ ಬೆಳೆ. ಸತತ ಹಣ್ಣು ಪೂರೈಸಲು ನಾವು 10–15ದಿನಕ್ಕೊಮ್ಮೆ ಬೇರೆಬೇರೆ ಜಾಗದಲ್ಲಿ ಬಿತ್ತುತ್ತೇವೆ. ಎಲ್ಲಾ ಸರಿಯಾಗಿದ್ದರೆ 48ನೇ ದಿನ ಕೊಯ್ಲು ಆರಂಭ. 60–70ರಲ್ಲಿ ಖಾಲಿ, ಸಿನೋಜ್ ವಿವರಿಸುತ್ತಾರೆ. ಕಳೆದ ಸೀಸನಿನ ಏರುಕಾಲದಲ್ಲಿ ‘ದಿನಕ್ಕೊಂದು ಟನ್ ಪೂರೈಕೆ’ ಸಿನೋಜ್ ಪ್ಲಾನ್ ಆಗಿತ್ತು. ಅದು ಹಾಗೆಯೇ ಈಡೇರಿತು ಕೂಡ.ಈಗ ನಿಖರಕೃಷಿ ಅನುಸರಿಸುವಾಗ ಕಾರ್ಮಿಕ ಅವಲಂಬನೆ, ಶ್ರಮ ಕಮ್ಮಿ. ಕಳೆಯ ಚಿಂತೆ ಇಲ್ಲ. ನೀರಾವರಿಗೆ ಮೋಟಾರ್ ಆನ್-ಆಫ್ ಮಾಡುವುದಷ್ಟೇ ಕೆಲಸ. ಗೊಬ್ಬರ, ಸೂಕ್ಷ್ಮಪೋಷಕಾಂಶಗಳೂ ರಸಾವರಿಯಾಗಿ ‘ಅಂತರ್ಗಾಮಿ’ಯಾಗಿ ಗಿಡಗಳ ಬೇರುವಲಯಕ್ಕೆ ಸೇರುತ್ತದೆ. ಕಳೆದ ಸೀಸನಿನಲ್ಲಿ ಮೂರು ಮಂದಿಯ ಅರ್ಧ ಸಾವಿರ ಟನ್ ಉತ್ಪಾದನೆಯಲ್ಲಿ ಸಿನೋಜ್ ಕೊಡುಗೆ 120 ಟನ್. ಇದರ ಗ್ರಾಹಕ ದರ ಕಿಲೋಗೆ 40 ರೂಪಾಯಿ.ಆದರೆ ಬಂಡವಾಳ ಹೆಚ್ಚು ಬೇಕು. ಪ್ಲಾಸ್ಟಿಕ್ ಮುಚ್ಚಿಗೆ, ಹನಿ ನೀರಾವರಿಗೆ ಹೆಚ್ಚಿನ ಖರ್ಚು. ಈ ಕೃಷಿಕರು ಅದೇ ಜಾಗದಲ್ಲಿ ಬೇರೆ ಬೆಳೆ ಬೆಳೆದು ಬಂಡವಾಳ ಹಿಂಪಡೆಯುತ್ತಾರೆ.ಆದಾಯದ 40ರಿಂದ 50 ಶೇಕಡಾ ಖರ್ಚು ಸಾಕಾಗುತ್ತದೆ. ಸಾಂಪ್ರದಾಯಿಕ ಕೃಷಿಯ ಬೆಳೆಗೆ ಹೋಲಿಸಿದರೆ ನಿಖರ ಕೃಷಿಯ ಪೊಟ್ಟುವೆಳ್ಳರಿ ನೋಡಿದೊಡನೆಯೇ ಗುರುತಿಸುವಷ್ಟು ವ್ಯತ್ಯಾಸ ಹೊಂದಿದೆ.ಪರಿಮಳ, ಆಕಾರ, ಗಾತ್ರ ಎಲ್ಲದರಲ್ಲೂ ಮೇಲುಗೈ ಪಡೆದಿರುತ್ತದೆ, ರಂಜಿತ್ ವಿಶ್ಲೇಷಿಸುತ್ತಾರೆ, ಗೊಬ್ಬರದ ಜತೆಗೆ ಬೇಕಾದ ಸೂಕ್ಷ್ಮಪೋಷಕಾಂಶ ಒದಗಿಸುವುದು ಮತ್ತು ಇನಿತೂ ನೀರ ಕೊರತೆಯಾಗದಂತೆ ಒಂದೇ ರೀತಿಯ ತೇವಾಂಶ ಪೂರೈಕೆ ಈ ಫಲಿತಾಂಶಕ್ಕೆ ಕಾರಣ.ನಮ್ಮ ಕೃಷಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳು ಸ್ನ್ಯಾಪ್ ಮೆಲನ್ ಬೆಳೆಗೆ ಅಷ್ಟು ಗಮನ ಕೊಟ್ಟಂತಿಲ್ಲ. ಕನಿಷ್ಠ ತಾಳಿಕೆಯ ಆಘಾತದಿಂದ ಪಾರು ಮಾಡಲು ಈ ಹಣ್ಣಿನಿಂದ ಆರು ತಿಂಗಳು ತಾಳಿಕೆಯಿರುವ ಬಾಟ್ಲಿ ಪೇಯ, ಹಾಲು ಅಥವಾ ನೀರಿನ ಜತೆ ಮಿಶ್ರ ಮಾಡಿ ಕುಡಿಯಬಲ್ಲ ಹುಡಿ, ಮತ್ತಿತರ ಮೌಲ್ಯವರ್ಧಿತ ಉತ್ಪನ್ನ ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry