5

ಆಮಿಶ್‌: ಆಮಿಶಗಳಿಂದ ದೂರ!

Published:
Updated:
ಆಮಿಶ್‌: ಆಮಿಶಗಳಿಂದ ದೂರ!

–ಕರುಣಾ ಬಿ.ಎಸ್‌.

**

ನಯಾಗರಾ ಜಲಪಾತವನ್ನು ನೋಡಲು ಹೋದಾಗ, ಅಲ್ಲಿ ಬಂದ ಪ್ರವಾಸಿಗರ ಗುಂಪೊಂದು ಎಲ್ಲರಿಗಿಂತಲೂ ಭಿನ್ನವಾದ ಉಡುಗೆ–ತೊಡುಗೆಗಳೊಂದಿಗೆ ನನ್ನ ಗಮನ ಸೆಳೆದಿತ್ತು. ಅವರ ವಸ್ತ್ರ ಶತಮಾನಗಳ ಹಿಂದಿನ ಇಂಗ್ಲೆಂಡಿನ ಬ್ರಿಟಿಷರನ್ನು ನೆನಪಿಸುವಂತಿತ್ತು. ನಂತರ ಅವರು ‘ಆಮಿಶ್’ ಎಂಬ ಗುಂಪಿಗೆ ಸೇರಿದವರು; ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ ಎನ್ನುವುದು ತಿಳಿಯಿತು. 


ಆಗೊಮ್ಮೆ ಈಗೊಮ್ಮೆ ಆಮಿಶ್‌ ಜನರನ್ನು ನೋಡುತ್ತಿದ್ದೆ. ಹಿಂದೊಮ್ಮೆ ಆಮಿಶ್‌ ಶಾಲೆಯೊಂದರಲ್ಲಿ ಸುಮಾರು ಹನ್ನೊಂದು ಮಕ್ಕಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಹಾಗಿದ್ದರೂ ‘ಹಂತಕನಿಗೆ ಭಗವಂತ ಒಳ್ಳೆಯದನ್ನೇ ಮಾಡಲೆಂದು ಆ ಸಹೃದಯರು ಪ್ರಾರ್ಥಿಸಿದ್ದರು’ ಎಂದೂ ಓದಿದ್ದೆ. ಅವರ ಬಗ್ಗೆ ನನ್ನ ಕುತೂಹಲ ಇಮ್ಮಡಿಸಿತ್ತು. ಕೊನೆಗೂ ಆಮಿಶ್‌ ಪ್ರವಾಸಕ್ಕಾಗಿ ವಾರಾಂತ್ಯದಲ್ಲೊಮ್ಮೆ ಪೆನ್ಸಿಲ್ವೇನಿಯಾ ರಾಜ್ಯದ ‘ಲ್ಯಾಂಕಸ್ಟರ್‌’ ಕೌಂಟಿಯತ್ತ (ಕೌಂಟಿ-ನಮ್ಮ ಜಿಲ್ಲೆಯಂತೆ) ನಮ್ಮ ಕಾರು ಸಾಗಿತು. ಆಮಿಶ್‌ ಜನಜೀವನದ ಬಗ್ಗೆ ಹತ್ತಿರದ ಪರಿಚಯ ನೀಡುವ ‘ಆಮಿಶ್‌ ವಿಲೇಜ್‌’ (ಗೈಡೆಡ್‌ ಟೂರ್‌) ತಲುಪಿದೆವು.

 

ಅಲ್ಲಿ 18ನೇ ಶತಮಾನದ ಮನೆ, ವಸ್ತು ಸಂಗ್ರಹಾಲಯ ಹಾಗೂ ಆಮಿಶ್‌ ಜನಜೀವನದ ಪರಿಚಯ ಮಾಡಿಕೊಡುವ ‘ಗೈಡೆಡ್‌ ಟೂರ್‌’ಗೆ ಟಿಕೇಟ್ ಖರೀದಿಸಿದೆವು. ಹಳೆಯ ಧರ್ಮಗ್ರಂಥಗಳ ಸಂಗ್ರಹವುಳ್ಳ ಚರ್ಚ್‌ ಮಾದರಿಯಂತಿದ್ದ ಪ್ರಾರ್ಥನಾ ಸ್ಥಳದಿಂದ ನಮ್ಮ ಪಯಣ ಶುರುವಾಯಿತು. 

 

‘ಆಮಿಶ್‌ ಜನರು ತಮ್ಮ ಉಡುಪಿನಿಂದಷ್ಟೇ ಅಲ್ಲ – ಆಧುನಿಕ ತಂತ್ರಜ್ಞಾನ, ಮೊಬೈಲ್ ಫೋನಿನ ಬಳಕೆ, ವಾಹನಗಳ ಉಪಯೋಗ... ಹೀಗೆ ಆಧುನಿಕ ಜೀವನಕ್ರಮದಿಂದ ದೂರವಾದ ಪರಿಸರಸ್ನೇಹಿ ಜೀವನಶೈಲಿಯಿಂದಲೂ ವಿಶಿಷ್ಟರು. 18ನೇ ಶತಮಾನದಲ್ಲಿ ಯುರೋಪಿನ ಸಾಂಪ್ರದಾಯಿಕ ಕ್ರಿಶ್ಚಿಯನ್‌ ಅನುಯಾಯಿಯಗಳ ಗುಂಪು ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಬಂದು ನೆಲೆಸಿತು. ಅವರು ಮುಂದೆ ಆಮಿಶ್‌ ಎಂಬ ಹೆಸರಿನೊಡನೆ ಗುರುತಿಸಿಕೊಂಡರು. ಇವರು ಇಂಗ್ಲಿಷಿನೊಡನೆ ಪೆನ್ಸಿಲ್ವೇನಿಯಾ, ಡಚ್‌ ಹಾಗೂ ಪೆನ್ಸಿಲ್ವೇನಿಯಾ–ಜರ್ಮನ್‌ ಭಾಷೆಯನ್ನೂ ಮಾತನಾಡುತ್ತಾರೆ. ಪ್ರತಿ ಭಾನುವಾರ ಪ್ರಾರ್ಥನೆಗಾಗಿ ಇಂತಹ ಸ್ಥಳದಲ್ಲಿ ಸೇರುತ್ತಾರೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸುಮಾರು 500 ಜನರು ಸೇರುವುದೂ ಉಂಟು’ ಎಂದು ಮಾಹಿತಿ ನೀಡುತ್ತಾ ಗೈಡ್‌ ಮುಂದೆ ಸಾಗಿದರು. 

 

ನಾವು ಆಮಿಶ್‌ ಮಾದರಿ ಮನೆಯನ್ನು ಹೊಕ್ಕೆವು. ಕೇವಲ 12 ವೋಲ್ಟ್‌ಗಳ ಮಿತ ವಿದ್ಯುಚ್ಛಕ್ತಿ ಬಳಕೆಯಿಂದ ಅಡುಗೆ ಮನೆಯ ಒಲೆಯ ಉರಿ ಹಾಗೂ ಓವೆನ್‌, ಪ್ರೊಪೇನ್‌ ಬಳಕೆಯಿಂದ ಫ್ರಿಡ್ಜ್‌ ಹಾಗೂ ಮನೆಯ ದೀಪ, ಹೀಗೆ ಪರಿಸರಸ್ನೇಹಿ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಅವರ ಕೊಠಡಿಗಳು ಒಂದು ಒಟ್ಟು ಕುಟುಂಬದ ವ್ಯವಸ್ಥೆಯನ್ನು ಎತ್ತಿತೋರಿಸುವಂತಿವೆ. ನಮ್ಮ ಭಾರತೀಯರಂತೆ ಇವರು ಸಂಘಜೀವಿಗಳು. 

 

ಕೇವಲ 8ನೇ ತರಗತಿಯವರೆಗೆ ಮಾತ್ರವೇ ಆಮಿಶ್‌ ಜನರ ವಿದ್ಯಾಭ್ಯಾಸ. ನಂತರ ಕುಟುಂಬ ಪಾಲನೆ ಹಾಗೂ ಉದ್ಯೋಗದತ್ತ ಚಿತ್ತ. ಮಕ್ಕಳು, ಮದುವೆಯಾದ ಮೇಲೆ ತಮ್ಮ ತಂದೆ–ತಾಯಿಯರೊಡನೆ ಇರುತ್ತಾರೆ. ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಮನೆಯ ಗಾತ್ರವೂ ಹಿರಿದಾಗುತ್ತದೆ. 

 

ಕೃಷಿ, ಹೈನುಗಾರಿಕೆ, ಗೃಹ ಕೈಗಾರಿಕೆ, ಕರಕುಶಲ ಕಲೆಗಳು – ಇವೆಲ್ಲ ಇವರ ಉದ್ಯೋಗಗಳು. ಹೀಗಾಗಿ ಮನೆಯ ಮುಂದೆ ತೋಟ, ಸಮೀಪವೇ ಹೊಲ, ಮನೆಯಲ್ಲಿ ಆಕಳು, ಕುದುರೆ, ಕತ್ತೆ, ಹಂದಿ, ಮ್ಯೂಲ್‌ ಇವುಗಳ ಸಾಕಾಣಿಕೆ ಸಾಮಾನ್ಯ. ನನಗೆ ಅಚ್ಚರಿಯೆನ್ನಿಸಿದ್ದು ಕೃಷಿ ಹಾಗೂ ಪೀಠೋಪಕರಣಗಳ ತಯಾರಿಕೆಗೆ ಇವರು ಕಂಡುಹಿಡಿದಿರುವ ಯಂತ್ರಗಳು. ನಮ್ಮಲ್ಲಿಯೂ ಇಂತಹ ಅವಿಷ್ಕಾರಗಳು ಯಾಕೆ ಸಾಧ್ಯವಿಲ್ಲ ಎನಿಸದಿರಲಿಲ್ಲ. 

 


(ಆಮಿಶ್ ಜನಜೀವನ ಪರಿಚಯಿಸುವ ‘ಆಮಿಶ್ ವಿಲೇಜ್’)

 

 

ನಮ್ಮ ಬಸ್‌ನ ಗೈಡ್‌ನಿಂದ ಎಲ್ಲರಿಗೂ ಬಸ್‌ ಹತ್ತುವ ಸೂಚನೆಯು ಬಂದಿತು. ‘ಯಾವುದೇ ಕಾರಣಕ್ಕೂ ನಿಮಗೆ ದಾರಿಯಲ್ಲಿ ಕಾಣಬರುವ ಆಮಿಶ್‌ ಜನರ ಫೋಟೊ ತೆಗೆಯಬೇಡಿ. ಅವರನ್ನು ‘ಜೂ’ನಲ್ಲಿನ ಪ್ರಾಣಿಗಳಂತೆ ದಿಟ್ಟಿಸಿ ನೋಡುತ್ತಾ ನಿಲ್ಲಬೇಡಿ’ ಎಂದು ಗೈಡ್‌ ಎಚ್ಚರಿಸಿದರು. 

 

ನಮ್ಮ ಬಸ್ಸು ಅಕ್ಕಪಕ್ಕ ತಂಬಾಕಿನ ತೋಟಗಳಿದ್ದ, ವಿಭಿನ್ನ ಮಾದರಿಯ ಮನೆಗಳಿದ್ದ ಚಿಕ್ಕ ರಸ್ತೆಗಳಲ್ಲಿ ಸಾಗಿತು. ‘ಅದೋ ಅಲ್ಲಿ ಹೋಗುತ್ತಿರೋ ಕಪ್ಪನೆಯ ಕುದುರೆ ಗಾಡಿಗೆ ‘ಬಗ್ಗಿ’ ಎನ್ನುತ್ತಾರೆ. ಇಂದು ಭಾನುವಾರವಾದ್ದರಿಂದ ಹೀಗೆ ಹುಡುಗ–ಹುಡುಗಿ, ಕುಟುಂಬದವರು ಹೊರಗೆ ಹೋಗುವುದು ಸಹಜ’ ಎಂಬ ವಿವರಣೆ ಸಿಕ್ಕಿತು. ನಾನು ಖುಷಿಯಿಂದ ಚಿಕ್ಕ ಮಗುವಿನಂತೆ ಅವರಿಗೆ ಟಾಟಾ ಮಾಡಲು ಮರೆಯಲಿಲ್ಲ! ಅಪಘಾತಗಳನ್ನು ತಡೆಯಲು ಕುದುರೆಗಾಡಿಗೆ ಎಡ–ಬಲ ಬದಿಯಲ್ಲಿ ಇಂಡಿಕೇಟರ್‌ ಹಾಗೂ ಮುಂದೆ ಮುಖ್ಯ ದೀಪಗಳನ್ನು ಅಳವಡಿಸಿರುತ್ತಾರೆ. 

 

ಅಂದಹಾಗೆ, ಆಮಿಶ್‌ ಜನರು ಮದುವೆಯಾಗಿದ್ದಾರೆಯೇ ಇಲ್ಲವೇ ಎಂದು ಸುಲಭವಾಗಿ ಗುರುತಿಸಬಹುದು. ಸದಾ ಕೆಲವೇ ದಟ್ಟ ಬಣ್ಣಗಳ ಉಡುಪು ತೊಡುವ ಇವರಲ್ಲಿ ಪುರುಷರು ಮದುವೆಯಾದ ಬಳಿಕ ಮೀಸೆಯನ್ನು ಬೋಳಿಸಿ ಗಡ್ಡವನ್ನು ಬೆಳೆಸುತ್ತಾರೆ. ಮದುವೆಯಾದ ಮಹಿಳೆಯರು ತಮ್ಮ ಉಡುಪಿನ ಮೇಲೆ ಕಪ್ಪುಹೊದಿಕೆಯನ್ನು ಧರಿಸುತ್ತಾರೆ. ಮಹಿಳೆಯರು ಎಂದಿಗೂ ಕೂದಲನ್ನು ಕತ್ತರಿಸುವುದಿಲ್ಲ. ಯಾವಾಗಲೂ ಕೂದಲನ್ನು ಹಿಂದೆ ಬಾಚಿ ಗಂಟು ಕಟ್ಟಿರುತ್ತಾರೆ. 

 

ಚೆಂಡಿನಾಟವನ್ನು ಆಡುತ್ತಿದ್ದ 40–50 ಜನರ ಗುಂಪೊಂದನ್ನು ಕಂಡೆವು. ಹೀಗೆ ಭಾನುವಾರದ ಮಧ್ಯಾಹ್ನದ ಸಮಯದಲ್ಲಿ ಚೆಂಡಿನಾಟವನ್ನು ಆಡುವುದು ಜನರ ಜೊತೆ ಬೆರೆಯುವ ಮುಖ್ಯ ಉದ್ದೇಶ,  ವಿವಾಹಯೋಗ್ಯ ವಯಸ್ಸಿನ ಹುಡುಗ–ಹುಡುಗಿಯರು ಪರಿಚಯ ಮಾಡಿಕೊಳ್ಳಲೂ ಇದು ಉತ್ತಮ ಮಾರ್ಗ ಎಂದು ತಿಳಿಯಿತು.

 

ಬಸ್ಸು ಮುಂದೆ ಸುಮಾರು ಒಂದು ಶತಮಾನದಷ್ಟು ಹಳೆಯದಾದ ಕಲ್ಲಿನ ಸೇತುವೆಯನ್ನು ಹಾದುಹೋಯಿತು. ಅದು ‘ಲವರ್ಸ್‌ ಸ್ಪಾಟ್‌’ ಎಂದು ನಗುತ್ತಾ ಹೇಳಿದ ಗೈಡ್‌, ಮರವೊಂದರ ಕೆಳಗೆ ಬಸ್ಸನ್ನು ನಿಲ್ಲಿಸಿದರು. ಅದಕ್ಕೆ ಸರಿಯಾಗಿ ಯುವಜೋಡಿಯೊಂದು ಕುದುರೆಗಾಡಿಯಲ್ಲಿ ಏಕಾಂತದ ಭೇಟಿಗಾಗಿ ಬರುತ್ತಿತ್ತು. ಕೆಳಗೆ ಇಳಿದು ಅಲ್ಲಿದ್ದ ಮನೆಯ ಸಾಲುಗಳತ್ತ ನನ್ನ ದೃಷ್ಟಿ ನೆಟ್ಟಿತು.

 

ಆಮಿಶ್‌ ಜನರು ತಮ್ಮನ್ನು ಹೊರತುಪಡಿಸಿ ಉಳಿದವರನ್ನು ‘ಇಂಗ್ಲಿಷ್‌’ ಜನರೆಂದೇ ಭಾವಿಸುತ್ತಾರೆ. ಸುಮಾರು 22ನೇ ವಯಸ್ಸಿಗೆಲ್ಲ ಮದುವೆಯಾಗಿ ಮಕ್ಕಳನ್ನು ಪಡೆಯುವ ಈ ವರ್ಗ ನಮ್ಮ ಭಾರತೀಯರಂತೆ ಸುಭದ್ರ ಕುಟುಂಬ ವ್ಯವಸ್ಥೆಯನ್ನು ಹೊಂದಿರುತ್ತದೆ. ನಮ್ಮಂತೆಯೇ ಅನೇಕ ಕಟ್ಟುಪಾಡುಗಳನ್ನೂ ಹೊಂದಿದೆ. ಸಾಮಾನ್ಯವಾಗಿ ವಿಚ್ಛೇದನಗಳು ಕಡಿಮೆ. ಇಂದಿನ ಆಧುನಿಕ ಜೀವನದ ಆಕರ್ಷಣೆಗಳನ್ನು ಬಯಸುವ ಯುವಕರು ಹೊರಗಿನ ಅನುಭವಗಳನ್ನು ಪಡೆದು ಮತ್ತೆ ಆಮಿಶ್‌ ವರ್ಗಕ್ಕೆ ಹಿಂದಿರುಗುವ ಅವಕಾಶವೂ ಉಂಟು. 

 


(‘ಆಮಿಶ್ ವಿಲೇಜ್’ನಲ್ಲಿ ಸಂಗ್ರಹಿಸಲಾದ ಆಮಿಶ್ ಜನರ ಉಡುಪು)

 

ಸಾಮಾಜಿಕ ಕಳಕಳಿ ಹಾಗೂ ಅತ್ಯುತ್ತಮ ಮೌಲ್ಯಗಳು, ಪರಿಸರ ಸ್ನೇಹಿ ಜೀವನ – ಹೀಗೆ ಈ ಜನಾಂಗದ ಜೀವನಕ್ರಮದಲ್ಲಿ ಹಲವು ಗುಣಾತ್ಮಕ ಅಂಶಗಳಿವೆ. ಕೊಳ್ಳುಬಾಕ ಸಂಸ್ಕೃತಿಯ ಅಟ್ಟಹಾಸದಲ್ಲಿ ದುಂದುತನ ನಮ್ಮ ಜೀವನದ ಭಾಗವಾಗಿರುವ ಇಂದಿನ ಸಂದರ್ಭದಲ್ಲಿ ಸರಳ ಜೀವನದ ಸಾಧ್ಯತೆಗಳ ಮಾದರಿಯಾಗಿ ಆಮಿಶ್‌ ಜನರು ಕಾಣುತ್ತಾರೆ.

 

ಈ ಪ್ರವಾಸದಿಂದ ಆಮಿಶ್‌ ಜನರ ಬದುಕಿನ ಬಗ್ಗೆ ಒಂದು ಚಿತ್ರಣ ಮನಸಿನಲ್ಲಿ ಮೂಡಿತು. ಅವರ ಬಗೆಗಿನ ಕುತೂಹಲ ಇಮ್ಮಡಿಸಿದ್ದೂ ನಿಜ. ಮತ್ತೊಮ್ಮೆ ಆಮಿಶ್‌ ಕುಟುಂಬದೊಡನೆ ಸಮಯ ಕಳೆದು ಅವರ ಸಂಸ್ಕೃತಿಯನ್ನು ಹತ್ತಿರದಿಂದ ಪರಿಚಯ ಮಾಡಿಕೊಳ್ಳುವ ಆಶಾವಾದದೊಂದಿಗೆ ನಮ್ಮೂರಿನತ್ತ ಹೊರಟೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry