ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ರಾಮ ಮಂದಿರ ನಿರ್ಮಾಣದ ಜಪ

ಉತ್ತರ ಪ್ರದೇಶ: ಬಿಜೆಪಿ ಪ್ರಣಾಳಿಕೆ ‘ಲೋಕ ಕಲ್ಯಾಣ ಸಂಕಲ್ಪ ಪತ್ರ’ ಬಿಡುಗಡೆ
Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ
ಲಖನೌ: ಉತ್ತರ ಪ್ರದೇಶದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಸಂವಿಧಾನದ ನಿಯಮಗಳ ಪ್ರಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುತ್ತದೆ ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
 
 ರಾಮಮಂದಿರ ವಿಚಾರ ಹೊರತು ಪಡಿಸಿ ರೈತರಿಗೆ, ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಲವು ಕೊಡುಗೆಗಳನ್ನು ಅದು ಘೋಷಿಸಿದೆ.
 
ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಸಾಲ ಮನ್ನಾ, ಶೂನ್ಯ ಬಡ್ಡಿಯಲ್ಲಿ ಕೃಷಿ ಸಾಲ,  ದಿನದ 24 ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ, ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಘೋಷಣೆಗಳನ್ನು ಮಾಡಿದೆ. 
 
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ‘ಲೋಕ ಕಲ್ಯಾಣ ಸಂಕಲ್ಪ ಪತ್ರ’ ಹೆಸರಿನ ಚುನಾವಣಾ ಪ್ರಣಾಳಿಕೆಯನ್ನು ಶನಿವಾರ ಬಿಡುಗಡೆ ಮಾಡಿದರು. ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ  ಮಹಿಳೆಯರ ಅಭಿಪ್ರಾಯ ಪಡೆದು ಸುಪ್ರೀಂಕೋರ್ಟ್‌ನಲ್ಲಿ ಮಂಡಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. 
 
ಕೋಮು ಗಲಭೆಗಳು ನಡೆದಾಗ ಜನರು ಸಾಮೂಹಿಕವಾಗಿ ವಲಸೆ ಹೋಗುವುದನ್ನು ತಡೆಯಲು ವಿಶೇಷ ತಂಡ ರಚನೆ ಹಾಗೂ ಗಲಭೆಗಳಿಗೆ ಜಿಲ್ಲಾಧಿಕಾರಿ ಅವರನ್ನು ಹೊಣೆಗಾರರನ್ನಾಗಿ ಮಾಡುವ ಭರವಸೆಯನ್ನು ನೀಡಲಾಗಿದೆ.
 
ರಾಜ್ಯದಲ್ಲಿರುವ ಅನಧಿಕೃತ ಕಸಾಯಿ ಖಾನೆಗಳನ್ನು ಮುಚ್ಚುವ ಘೋಷಣೆಯನ್ನು ಬಿಜೆಪಿ ಮಾಡಿದೆ. 
 
ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರಿನಲ್ಲಿ ₹500 ಕೋಟಿ ಮೊತ್ತದ ನಿಧಿ ಸ್ಥಾಪಿಸುವ ಪ್ರಸ್ತಾವವೂ ಪ್ರಣಾಳಿಕೆಯಲ್ಲಿದೆ.
 
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್‌ ಷಾ, ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪಕ್ಷವು ಬದ್ಧ. ಸಂವಿಧಾನದ ನಿಯಮಗಳ ಅಡಿಯಲ್ಲೇ ಮಂದಿರ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
 
‘15 ವರ್ಷಗಳಿಂದ ರಾಜ್ಯವನ್ನು ಆಳಿದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಏನೂ ಕೆಲಸ ಮಾಡಿಲ್ಲ. ಆದ್ದರಿಂದ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
 
‘ಉತ್ತರಪ್ರದೇಶವನ್ನು ಹೊರತುಪಡಿಸಿ ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ತಾನ ರಾಜ್ಯಗಳು ಅಭಿವೃದ್ಧಿ ಹೊಂದಿವೆ. ಪಕ್ಷ ಅಧಿಕಾರಕ್ಕೆ ಬಂದರೆ ಮೋದಿ ನೇತೃತ್ವದಲ್ಲಿ ಉತ್ತರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಲಾಗುತ್ತದೆ’ ಎಂದರು.
 
ಕೇಂದ್ರ ಸರ್ಕಾರ ₹ 1ಲಕ್ಷ ಕೋಟಿ ಅನುದಾನ ನೀಡಿದ್ದರೂ ಅಖಿಲೇಶ್ ಯಾದವ್ ಸರ್ಕಾರ ಯಾವುದೇ ಅಭಿವೃದ್ಧಿ  ಕಾರ್ಯ ಅನುಷ್ಠಾನಕ್ಕೆ ತರಲಿಲ್ಲ ಎಂದು ಟೀಕಿಸಿದರು.
 
ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಜನರನ್ನು ವಂಚಿಸಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
 
**
ಇತರೆ ಭರವಸೆಗಳು
* ಅಹಿಲ್ಯಾ ಬಾಯಿ ಶಿಕ್ಷಣ ಯೋಜನೆಯ ಅಡಿಯಲ್ಲಿ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ.
 
*  ಬಾಲಕರಿಗೆ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲು ಪ್ರತ್ಯೇಕ ಯೋಜನೆ.
 
*  ಒಂದು ವರ್ಷಕ್ಕೆ ವಿದ್ಯಾರ್ಥಿಗಳಿಗೆ 1ಜಿಬಿ ಡೇಟಾ ಉಚಿತ.
 
*  ವಿಶ್ವವಿದ್ಯಾಲಯಗಳಲ್ಲಿ ಉಚಿತ ವೈಫೈ ಸೌಲಭ್ಯ.
 
*  ಶಾಲಾ ಕಾಲೇಜು ವಿದ್ಯಾರ್ಥಿನಿಯರ ರಕ್ಷಣೆಗೆ ‘ರೋಮಿಯೊ ತಡೆ ಪಡೆ’ ರಚನೆ. ಮೂರು ಮಹಿಳಾ ತುಕಡಿ ಸ್ಥಾಪನೆ.
 
*  ಭ್ರಷ್ಟಾಚಾರ ತಪ್ಪಿಸುವುದಕ್ಕಾಗಿ ಸಂದರ್ಶನ ಇಲ್ಲದೇ, ಪ್ರತಿಭೆಯ ಆಧಾರದಲ್ಲಿ ಸಿ ಮತ್ತು ಡಿ ದರ್ಜೆ ನೌಕರರ ನೇಮಕ. 
 
*  ‘ಡಯಲ್ 100’ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ 15 ನಿಮಿಷಗಳಲ್ಲಿ ಪೊಲೀಸ್ ನೆರವು ಸಿಗುವಂತೆ ಮಾಡುವುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT