ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿರೇಕ ನಮ್ಮ ಯುಗಧರ್ಮವೇ?

ಸಂಗತ
Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸಮಾಜದ  ಎಲ್ಲ ರಂಗಗಳಲ್ಲೂ ಒಂದು ಬಗೆಯ ಅತಿರೇಕ ಮನೆಮಾಡಿದೆ. ನಮ್ಮ ದಿನನಿತ್ಯದ ಚಟುವಟಿಕೆಗಳಿಂದ ತೊಡಗಿ ನಾವು ಬದುಕುತ್ತಿರುವ ಒಟ್ಟಾರೆ ಸಾಮಾಜಿಕ ಸಂದರ್ಭದ ಎಲ್ಲ ಕ್ಷೇತ್ರಗಳಲ್ಲೂ ಒಂದು ರೀತಿಯ ಸಮೂಹಸನ್ನಿ ಮತ್ತು ತೀವ್ರಗಾಮಿತ್ವ ಎದ್ದು ಕಾಣಿಸುತ್ತಿದೆ. ಎಲ್ಲ ಅತಿರೇಕಗಳನ್ನೂ ತಹಬಂದಿಗೆ ತರುವ ಶಕ್ತಿ ಪ್ರಕೃತಿಗಿದೆ ಎನ್ನುತ್ತಾರೆ. ಆದರೆ ದಿನೇದಿನೇ ಈ ಯುದ್ಧೋನ್ಮಾದದ ಮನೋಭಾವ ಹೆಚ್ಚುತ್ತಿದೆಯೇ ಹೊರತು ಸಹಜತೆಗೆ ಬರುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ. ಇದು ಹೀಗೆಯೇ ಇದ್ದರೆ ಯಾವ ರೀತಿ ಕೊನೆಗೊಂಡೀತು? ಈ ಅತಿರೇಕವೇ ನಮ್ಮ ಕಾಲದ ಪ್ರಮುಖ ಲಕ್ಷಣವೇ?
ಜನರ ನಡುವೆ ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಎಲ್ಲ ಕಾಲದಲ್ಲೂ ಇದ್ದದ್ದೇ.  ಆದರೆ ಅದನ್ನು ಅಭಿವ್ಯಕ್ತಿಸುವುದಕ್ಕೆ ಅದರದ್ದೇ ಆದ ವಿಧಾನಗಳಿವೆ. ಆರೋಗ್ಯಕರ ಟೀಕೆ, ಚರ್ಚೆ ಯಾವಾಗಲೂ ಅಪೇಕ್ಷಣೀಯವೇ. ಆದರೆ ಇಂತಹದೊಂದು ವಾತಾವರಣದಿಂದ ನಾವು ಬಹುದೂರ ಸಾಗಿಬಿಟ್ಟಿದ್ದೇವೆ ಎನಿಸುವುದಿಲ್ಲವೇ?

ಯಾರಿಗೂ ಇನ್ನೊಬ್ಬನ ಅನಿಸಿಕೆ-ಅಭಿಪ್ರಾಯ ಕೇಳುವ ವ್ಯವಧಾನ ಇಲ್ಲ. ಎಲ್ಲರೂ, ತಾವು ಹಾಕಿಕೊಂಡಿರುವ ಚೌಕಟ್ಟಿನೊಳಗೆ ಬಂದಿಗಳಾಗಿದ್ದಾರೆ. ಅಲ್ಲಿಂದ ತಾತ್ಕಾಲಿಕವಾಗಿಯಾದರೂ ಒಂದು ಹೆಜ್ಜೆ ಈಚೆ ಬಂದು ತಮ್ಮ ಕನ್ನಡಕವನ್ನು ತೆಗೆದು ನೋಡುವ ಮನೋಭಾವವನ್ನು ಜನ ಕಳೆದುಕೊಂಡುಬಿಟ್ಟಿದ್ದಾರೆ ಎನಿಸುತ್ತದೆ.

ಪ್ರತೀ ವಾದಕ್ಕೂ ಪ್ರತಿವಾದವನ್ನು ಹೂಡುವ, ಪ್ರತೀ ಟೀಕೆಗೂ ಉತ್ತರಿಸಲೇಬೇಕೆಂಬ ಹಟದಿಂದಾಗಿ ಸಮಾಜದಲ್ಲೊಂದು ಯುದ್ಧೋನ್ಮಾದ ಸೃಷ್ಟಿಯಾಗಿಬಿಟ್ಟಿದೆ. ತಾವು ಹೇಳುತ್ತಿರುವುದೇ ಪರಮಸತ್ಯ, ಉಳಿದವರು ಮಾತನಾಡುತ್ತಿರುವುದು ಬರೀ ಬೊಗಳೆ ಎಂಬ ಮನೋಭಾವದಿಂದಾಗಿ ಇನ್ನೊಬ್ಬರು ಹೇಳುವುದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದೇ ಹೋಗಿದೆ.

ರಾಜಕೀಯ ಪಕ್ಷಗಳು ತಮ್ಮ ಎದುರಾಳಿಗಳನ್ನು ಬರೀ ಸೋಲಿಸುವ ಉದ್ದೇಶ ಹೊಂದಿಲ್ಲ; ಮುಗಿಸಿಯೇ ಬಿಡುವ ಬಗ್ಗೆ ಮಾತಾಡುತ್ತಿವೆ. ಪ್ರತಿಯೊಂದು ಪಕ್ಷವೂ ಇನ್ನೊಂದು ಪಕ್ಷವನ್ನು ರಾಜ್ಯದಿಂದಲೋ ದೇಶದಿಂದಲೋ ಮುಕ್ತವಾಗಿಸಬೇಕೆಂದು ಕರೆ ನೀಡುತ್ತಿದೆ. ಆರೋಗ್ಯಕರ ರಾಜಕೀಯ ಚರ್ಚೆಗಳು ನಿಂತುಹೋಗಿ ವರ್ಷಗಳೇ ಕಳೆದಿವೆ. ಈಗೇನಿದ್ದರೂ ಬೆಂಕಿ ಉಗುಳುವ, ವಿಷ ಕಾರುವ ಹುಮ್ಮಸ್ಸೇ. ಹಗರಣಗಳನ್ನು ಹೊರಗೆಳೆಯುವುದರ ಹಿಂದೆ ಪ್ರಜಾಪ್ರಭುತ್ವದ ಒಳಿತಿಗಿಂತಲೂ ಇನ್ನೊಂದು ಪಕ್ಷವನ್ನು ನಿರ್ನಾಮಗೊಳಿಸುವ ಉದ್ದೇಶವೇ ಹೆಚ್ಚು ಮುಖ್ಯವಾದಂತೆ ಇದೆ.  ಈ ಜಿದ್ದಿನ ನಡುವೆ ನಕಲಿ ಯಾವುದು, ಅಸಲಿ ಯಾವುದು ಎಂದು ಜನಸಾಮಾನ್ಯರು ಗೊಂದಲಕ್ಕೆ ಬಿದ್ದಿದ್ದಾರೆ ಅಷ್ಟೇ.

ಯುದ್ಧಭೂಮಿಗೂ ತನ್ನದೇ ಆದ ನೀತಿನಿಯಮಗಳಿರುತ್ತವೆ. ಸೋಲಿಸುವುದೇ ಬೇರೆ, ಮುಗಿಸುವುದೇ ಬೇರೆ. ಎದುರಾಳಿಯನ್ನು ಸೋಲಿಸುವುದರಿಂದ ಕೊಲ್ಲುವುದರತ್ತ ನಮ್ಮ ಮನೋಭಾವ ಬದಲಾದದ್ದು ಯಾವಾಗ? 

ಈ ಮುಗಿಸಿಬಿಡುವ ಚಿಂತನೆಯೇ ಸಮಾಜವನ್ನು ಆಳುತ್ತಿದೆ. ಜಾತಿ, ಧರ್ಮ, ಪಕ್ಷ, ಪಂಥ, ಪಂಗಡ, ಜನಾಂಗ, ಪ್ರದೇಶಗಳ ಹಿನ್ನೆಲೆಯಲ್ಲಿ ಯೋಚಿಸುವವರೆಲ್ಲ ತಮ್ಮ ಎದುರಿನ ವ್ಯಕ್ತಿಯನ್ನು ಇಲ್ಲವಾಗಿಸುವ ಬಗ್ಗೆಯೇ ಯೋಚಿಸುತ್ತಿದ್ದಾರೆ. ಮೂಲಭೂತವಾದ ಈ ಅತಿಯನ್ನು ತಲುಪುವುದಕ್ಕೆ ಇಂತಹ ಮನೋಭಾವಗಳೇ ಕಾರಣ. ಕೇವಲ ಜಾತಿ-ಧರ್ಮಗಳೇ ಅಸ್ಮಿತೆಯಾಗಿಲ್ಲದ ಸಮಾಜವೊಂದರ ನಿರ್ಮಾಣ ಎಂದಾದರೂ ಸಾಧ್ಯವಿದೆಯೇ ಗೊತ್ತಿಲ್ಲ, ಆದರೆ ಈ ಜಾತಿ-ಧರ್ಮ-ಪಂಥಗಳು ಒಂದನ್ನೊಂದು ದ್ವೇಷಿಸದೆ ಬದುಕುವ ಸಮಾಜವನ್ನಾದರೂ ನಾವು ಕಾಣಲಾರೆವೇ?

ಈಗಿನ ಪರಿಸ್ಥಿತಿಯನ್ನು ನೋಡಿದರೆ ಇಂತಹದೊಂದು ಆಶಾವಾದಕ್ಕೆ ಎಡೆಯೇ ಇಲ್ಲವೇನೋ ಅನಿಸುತ್ತಿದೆ. ಜಾತಿ ಸಂಘಟನೆಗಳು ದಿನೇದಿನೇ ಬಲವಾಗುತ್ತಿವೆ. ಜನರ ನಡುವೆ ಜಾತಿ-ಧರ್ಮಗಳ ಅಸ್ಮಿತೆಯನ್ನು ಇನ್ನಷ್ಟು ಜಾಗೃತಗೊಳಿಸುವ ಅಥವಾ ಕೆರಳಿಸುವ ಪ್ರಯತ್ನಗಳೇ ಹೆಚ್ಚುಹೆಚ್ಚು ನಡೆಯುತ್ತಿವೆ. ಜಾತಿ-ಧರ್ಮಗಳ ಆಧಾರದ ಸಮಾವೇಶಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇವುಗಳನ್ನು ಹೆಚ್ಚು ವಿಜೃಂಭಣೆಯಿಂದ ನಡೆಸುವ ಬಗ್ಗೆ ಸಂಘಟನೆಗಳು ಸ್ಪರ್ಧೆಗೆ ಬಿದ್ದಿವೆ. ಸಮಾಜದಲ್ಲಿ ಸಾಕ್ಷರತೆ, ವಿದ್ಯೆ ಬೆಳೆದಂತೆ ಇವೆಲ್ಲ ಕಡಿಮೆಯಾಗಬಹುದು ಎಂಬ ಆಸೆ ನಮ್ಮ ಹಿರಿಯರಿಗೆ, ದಾರ್ಶನಿಕರಿಗೆ ಇತ್ತು. ದುರದೃಷ್ಟವಶಾತ್ ಜನ ಸುಶಿಕ್ಷಿತರಾದಷ್ಟೂ ಈ ಸಂಕುಚಿತತೆ ಮತ್ತು ಮೂಲಭೂತ ವಾದ ಹೆಚ್ಚು ಗಟ್ಟಿಯಾಗುತ್ತಲೇ ಹೋಗುತ್ತಿದೆ. ಜಾತಿಗಳು ನಿರ್ನಾಮವಾಗಲಿ ಎಂದು ಹೋರಾಡುವವರ ಧ್ವನಿಯಲ್ಲೂ ಸಮಾನತೆಯ ಬೇಡಿಕೆಗಿಂತಲೂ ರೋಷವೇ ದಟ್ಟವಾಗಿ ಕಾಣಿಸು ತ್ತದೆ. ಸಂಘಟಿತರಾಗುವುದು ಈ ಕಾಲದ ಅನಿವಾರ್ಯವೇನೋ ಹೌದು, ಆದರೆ ಸಂಘಟಿತರಾಗಬೇಕಿರುವುದು ಯಾವುದಕ್ಕಾಗಿ?

ವಿದ್ಯಾರ್ಥಿ ಸಂಘಟನೆಗಳು ಜಾತಿ-ಉಪಜಾತಿಗಳ ಹೆಸರಲ್ಲಿ ಒಡೆದುಹೋಗಿವೆ ಇಲ್ಲವೇ ಯಾವುದೋ ರಾಜಕೀಯ ಪಕ್ಷದ ಮುಖವಾಣಿಗಳಾಗಿವೆ. ಅವು ಚಳವಳಿಗಳ ಭಾಗವಾಗಿ ಉಳಿದಿಲ್ಲ. ಮತ್ತೆ ಯಾವುದೋ ಒಂದು ಅತಿಯ ನಡುವೆ ಹೊಯ್ದಾಡುತ್ತಿವೆ. ಅಲ್ಲಿಯೂ ಒಂದು ಇನ್ನೊಂದನ್ನು ಮುಗಿಸುವ ಮನೋವೃತ್ತಿ ಪ್ರಬಲವಾಗಿದೆಯೇ ಹೊರತು ವಿದ್ಯಾರ್ಥಿ ಸಮುದಾಯದ ಒಟ್ಟಾರೆ ಒಳಿತಿನ ಆಶಯ ಕಾಣಿಸುತ್ತಿಲ್ಲ.

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಇದೇ ಅತಿಗಳೇ ಅಲ್ಲವೇ ನಮ್ಮ ಸುತ್ತಲಿನ ಬದುಕನ್ನು ತುಂಬಿರುವ ವಿಷ? ಬೇರೆ ಕ್ಷೇತ್ರಗಳೇಕೆ, ನಮ್ಮ ನಿತ್ಯದ ಬದುಕಿನ ಇಂಚಿಂಚನ್ನೂ ಆವರಿಸಿಕೊಂಡಿರುವ ಮಾಧ್ಯಮ, ಸಿನಿಮಾ, ಜಾಹೀರಾತುಗಳೆಲ್ಲ ಈ ಅತಿಗಳ ಪ್ರತಿಫಲನಗಳೇ ಅಲ್ಲವೇ? ಒಂದು ಚಾನೆಲ್‌ಗಿಂತ ಇನ್ನೊಂದು ಚಾನೆಲ್, ಒಂದು ಪತ್ರಿಕೆಗಿಂತ ಇನ್ನೊಂದು ಪತ್ರಿಕೆ ಹೆಚ್ಚು ಮಂದಿಯನ್ನು ಸೆಳೆಯಬೇಕೆಂಬ ಸ್ಪರ್ಧೆ, ಒಂದನ್ನೊಂದು ಮೀರಿಸುವ ಶೀರ್ಷಿಕೆಗಳು... ಇವು ಏನನ್ನು ಸೂಚಿಸುತ್ತವೆ?

ಸಾಮಾಜಿಕ ಮಾಧ್ಯಮಗಳಂತೂ ಈ ಒಟ್ಟಾರೆ ವಿಷಮತೆಯ ನಿಲುವುಗನ್ನಡಿಗಳಾಗಿವೆ. ಯಾವ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್‌ಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ರಹದಾರಿಗಳಾಗಿದ್ದವೋ, ಅವೇ ಮಾಧ್ಯಮಗಳು ಇಂದು ಎಲ್ಲ ಬಗೆಯ ಅತಿರೇಕಗಳ ಮೂಸೆಗಳಾಗಿವೆ. ಪರ್ಯಾಯ ಮಾಧ್ಯಮಗಳಾಗಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವ ಎಲ್ಲ ಸಾಧ್ಯತೆಯೂ ಸಾಮಾಜಿಕ ಜಾಲತಾಣಗಳಿಗಿದೆ. ಆದರೆ ಆ ಉದ್ದೇಶವನ್ನೇ ಬುಡಮೇಲು ಮಾಡುವ ಹಾಗೆ ಪರಸ್ಪರ ದ್ವೇಷಕಾರುವ, ಕಿಡಿಹೊತ್ತಿಸುವ ವೇದಿಕೆಗಳಾಗಿ ಇವು ಬಳಕೆಯಾಗುತ್ತಿರುವುದು ಆತಂಕಕಾರಿ.

ಫೇಸ್‌ಬುಕ್‌ನ ರಾಜಕೀಯ-ಸೈದ್ಧಾಂತಿಕ ಚರ್ಚೆಗಳು ಆರೋಗ್ಯಕರ ಸಂವಾದಗಳಾಗಿ ಉಳಿದಿಲ್ಲ. ಅಲ್ಲಿ ಏನಿದ್ದರೂ ಪ್ರತಿವಾದಿ ಯನ್ನು ವೈಯಕ್ತಿಕವಾಗಿ ಹೀಗಳೆಯುವ, ನಿಂದಿಸುವ, ಲೇವಡಿ ಮಾಡುವ ಚಟುವಟಿಕೆಗಳೇ ನಿರಂತರವಾಗಿವೆ. ಕಮೆಂಟುಗಳಲ್ಲೆಲ್ಲ ತಮಗೆ ಅಪಥ್ಯವಾದ ಮಾತನ್ನಾಡಿದವನನ್ನು ಕೊಚ್ಚಿಹಾಕುವ, ಗುಂಡಿಟ್ಟುಕೊಲ್ಲುವ ಈರ್ಷ್ಯೆ ಹೊಗೆಯಾಡುತ್ತಿದೆ. ಈ ವಿಷಯದಲ್ಲಿ ಸಿದ್ಧಾಂತ, ಪಕ್ಷಗಳ ಭೇದವಿಲ್ಲ; ಎಲ್ಲರೂ ಒಂದೇ ಬಗೆಯ ಸಮೂಹ ಸನ್ನಿಯಲ್ಲಿ ಬೇಯುತ್ತಿದ್ದಾರೆ. ಬಿಸಿರಕ್ತದ ತರುಣರಷ್ಟೇ ಇಂತಹದರಲ್ಲಿ ತೊಡಗಿದ್ದರೆ ಅದೊಂದು ವಯೋಸಹಜ ಲಕ್ಷಣ ವೆಂದು ಸುಮ್ಮನಾಗಬಹುದಿತ್ತು. ಆದರೆ ಅವರನ್ನು ಸಹನೆಯಿಂದ ಮಾತನಾಡಿಸಿ ಸಾವಧಾನವಾಗಿ ಉತ್ತರಿಸಬೇಕಾದ ವಯಸ್ಸಿನವರೂ ಬೀದಿರೌಡಿಗಳಂತೆ ಕಾಳಗಕ್ಕೆ ನಿಲ್ಲುವ ಪ್ರವೃತ್ತಿ ಬೆಳೆಸಿಕೊಂಡರೆ ಏನು ಮಾಡೋಣ?

ಯಾಕೆ ನಮ್ಮ ಸುತ್ತ ಇಂತಹದೊಂದು ವಿಲಕ್ಷಣ ಸಮಾಜ ನಿರ್ಮಾಣವಾಗುತ್ತಿದೆ? ನಾವು ಎಡವಿದ್ದೆಲ್ಲಿ? ಶಿಕ್ಷಣದಲ್ಲೇ ಅಥವಾ ಒಟ್ಟಾರೆ ಸಾಮಾಜೀಕರಣದ ಪ್ರಕ್ರಿಯೆಯಲ್ಲೇ? ಇದು ಕೇವಲ ನಮ್ಮ ರಾಜ್ಯ, ದೇಶದ ಸಮಸ್ಯೆ ಅಲ್ಲ. ಇಡೀ ಪ್ರಪಂಚ ಎದುರಿಸುತ್ತಿರುವ ಅಪಾಯ. ಅಮೆರಿಕದಲ್ಲಿ ನಡೆಯುತ್ತಿರುವ ಭಾರತೀಯರ ಮೇಲಿನ ದಾಳಿಯೂ ಇದರದ್ದೇ ಒಂದು ಭಾಗ. ಅತಿರೇಕವೇ ನಮ್ಮ ಯುಗಧರ್ಮವಾಗಿಹೋಯಿತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT