ಶನಿವಾರ, ಸೆಪ್ಟೆಂಬರ್ 25, 2021
23 °C

ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ರಾಕೆಟ್‌ ಸಿದ್ಧ

ಪಿಟಿಐ Updated:

ಅಕ್ಷರ ಗಾತ್ರ : | |

ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ರಾಕೆಟ್‌ ಸಿದ್ಧ

ನವದೆಹಲಿ: ಜಿಎಸ್‌ಎಲ್‌ವಿ ಮಾರ್ಕ್ 3 ಎಂಬ ಹೆಸರಿನ 640 ಟನ್ ತೂಕದ ಉಡಾವಣಾ ವಾಹನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಇಸ್ರೊ ಈವರೆಗೆ ಅಭಿವೃದ್ಧಿ ಪಡಿಸಿದ ಅತ್ಯಂತ ತೂಕದ ರಾಕೆಟ್‌ ಎನಿಸಿದೆ.‘ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್ ಇರುವ ಮಾರ್ಕ್‌ 3, ಭೂಸಮನ್ವಯ ಕಕ್ಷೆಗೆ 4 ಟನ್‌ ತೂಕದ ಉಪಗ್ರಹಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್‌ನ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿ ನಡೆದಿದೆ. ಆದರೆ ಮಾರ್ಕ್‌ 3ನಲ್ಲಿ ಅಳವಡಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕಿದೆ’ ಎಂದು ಇಸ್ರೊ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.200 ಆನೆಗಳ ತೂಕದ ಇಸ್ರೊ ರಾಕೆಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ) ಮಾರ್ಕ್ 3, 200 ಏಷ್ಯಾ ಆನೆಗಳಷ್ಟು (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್‌) ತೂಕವಿದೆ.ಇಸ್ರೊದ, ಮಾನವಸಹಿತ ಬಾಹ್ಯಾಕಾಶ ಯಾನದ ಕನಸನ್ನು ನನಸು ಮಾಡುವಲ್ಲಿ ಈ ರಾಕೆಟ್ ಮಹತ್ವದ ಪಾತ್ರ ವಹಿಸಲಿದೆ. ಸುಮಾರು ₹ 25,000 ಕೋಟಿ ವೆಚ್ಚವಾಗುವ ಇಸ್ರೊದ ಸಾಹಸಕ್ಕೆ ಕೇಂದ್ರ ಸರ್ಕಾರ ಇನ್ನಷ್ಟೇ ಒಪ್ಪಿಗೆ ಸೂಚಿಸಬೇಕಿದೆ.ಪ್ರಯೋಜನಗಳು

* ರಾಕೆಟ್‌ ಭಾರಿ ವೆಚ್ಚದ್ದಾಗಿದ್ದರೂ, ಭಾರಿ ತೂಕದ ಸಂಪರ್ಕ ಉಪಗ್ರಹಗಳನ್ನು ಇಸ್ರೊ ಉಡಾವಣೆ ಮಾಡಬಹುದು

* ಈಗ ಭಾರತದ ಭಾರಿ ತೂಕದ ಉಪಗ್ರಹಗಳನ್ನು ಏರಿಯಾನ್ ರಾಕೆಟ್ ಮೂಲಕ ಉಡಾವಣೆ ಮಾಡಲಾಗುತ್ತಿದೆ. ಈ ಶುಲ್ಕ ಉಳಿಯುತ್ತದೆ

* ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ನೆರವಾಗಲಿದೆ. ಆ ಮೂಲಕ ರಷ್ಯಾ, ಅಮೆರಿಕ ಮತ್ತು ಚೀನಾಗಳ ಸಾಲಿಗೆ ಭಾರತ ಸೇರಲಿದೆ15 ವರ್ಷಗಳ ಶ್ರಮ

ಈ ರಾಕೆಟ್‌ನಲ್ಲಿ ಬಳಕೆಯಾಗಲಿರುವ ಕ್ರಯೋಜೆನಿಕ್ ಎಂಜಿನ್‌ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಯಾದದ್ದು. ಭಾರಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಲು ಈ ಎಂಜಿನ್ ಸಹಕಾರಿ. 1990ರ ದಶಕದಲ್ಲಿ ರಷ್ಯಾ ಈ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ಒಪ್ಪಿತ್ತು. ಆದರೆ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಭಾರತ ಸಹಿ ಮಾಡದ್ದನ್ನು, ನೆಪವಾಗಿಸಿಕೊಂಡು ಇಸ್ರೊಗೆ ಈ ತಂತ್ರಜ್ಞಾನ ದೊರೆಯುವುದನ್ನು ಅಮೆರಿಕ ತಪ್ಪಿಸಿತ್ತು.

ಇಂಧನ/ನೋದಕಗಳ ಮಿಶ್ರಣಗಳ ಸಂಕೀರ್ಣ ಸೂತ್ರ ಇರುವ, ಈ ತಂತ್ರಜ್ಞಾನದ ಸಂಶೋಧನೆಯನ್ನು ಇಸ್ರೊ ಎಂಜಿನಿಯರ್‌ಗಳು 2001ರಲ್ಲಿ ಆರಂಭಿಸಿದ್ದರು. 2010ರಲ್ಲಿ ಈ ಎಂಜಿನ್ ಬಳಸಿ ನಡೆಸಿದ್ದ ಉಡಾವಣೆ ವಿಫಲವಾಗಿತ್ತು. ಆನಂತರ ಈ ಎಂಜಿನ್‌ ಅನ್ನು ಇಸ್ರೊ ಮತ್ತಷ್ಟು ಅಭಿವೃದ್ಧಿಪಡಿಸಿದೆ. 2014ರಲ್ಲಿ ಈ ಎಂಜಿನ್‌ ಇದ್ದ ರಾಕೆಟ್ ಮೂಲಕ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.

*

ಇದು ಭಾರತೀಯರನ್ನು, ಭಾರತದ್ದೇ ನೆಲದಿಂದ, ಭಾರತದ್ದೇ ರಾಕೆಟ್‌ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸುವ ಯತ್ನದ ಮೊದಲ ಹೆಜ್ಜೆ.

- ಎ.ಎಸ್.ಕಿರಣ್ ಕುಮಾರ್,

ಇಸ್ರೊ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.