ರೈತರ ಸಾಲ ಮನ್ನಾಕ್ಕೆ ಒತ್ತಾಯ

7

ರೈತರ ಸಾಲ ಮನ್ನಾಕ್ಕೆ ಒತ್ತಾಯ

Published:
Updated:
ರೈತರ ಸಾಲ ಮನ್ನಾಕ್ಕೆ ಒತ್ತಾಯ

ಕೋಲಾರ: ರೈತರ ಸಮಸ್ಯೆಗಳಿಗೆ ಸ್ಪಂದಿಸದ ತಾಲ್ಲೂಕು ಮಟ್ಟದ ಅಧಿಕಾರಿಗಳ ಕ್ರಮ ಖಂಡಿಸಿ ರಾಜ್ಯ ರೈತ ಸೇನೆಯ ಕಾರ್ಯಕರ್ತರು ನಗರದ ತಾಲ್ಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸೇನೆಯ ಜಿಲ್ಲಾ ಯುವ ಘಟಕದ  ಅಧ್ಯಕ್ಷ ಕೆ.ವೈ. ಗಣೇಶ್‌ಗೌಡ ಮಾತನಾಡಿ, ‘ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಬರಪರಿಸ್ಥಿತಿ ಎದುರಾಗಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ ಜನ ಜೀವನ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.

‘ಕೃಷಿ ಬೆಳೆಗಳಿಗಾಗಿ ಬ್ಯಾಂಕಿನಲ್ಲಿ ರೈತರು ಮಾಡಿರುವ ಸಾಲ ತೀರಿಸಲಾಗುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳಿಗೆ ಸಮಸ್ಯೆ ಅರಿವಿದ್ದರೂ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದರು.

‘ರೈತರಿಗೆ ನೀರಿನ ಸೌಕರ್ಯವಿದಿದ್ದರೆ ಬ್ಯಾಂಕಿನಲ್ಲಿ ಸಾಲ ಮಾಡುವಷ್ಟು ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ತಹಶೀಲ್ದಾರ್ ಅವರು ಲೀಡ್ ಬ್ಯಾಂಕ್‌ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ರೈತರಿಗೆ ಹಿಂಸೆ ನೀಡುವುದನ್ನು ತಡೆಯಲು ಸುತ್ತೋಲೆ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

‘ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಇಲಾಖಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ ದಾಖಲೆಗಳು ಸರಿಯಿಲ್ಲ ಎಂಬ ನೆಪ ಹೇಳುತ್ತಾರೆ. ಪರಿಹಾರ ನೀಡುವಲ್ಲೂ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳಿಗೆ ಪರಿಹಾರ ಕಲ್ಪಿಸಲು ಕಂದಾಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಿ.ವಿ. ಪ್ರಭಾಕರಗೌಡ ಮನವಿ ಮಾಡಿದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಘಟಕದ ಅಧ್ಯಕ್ಷ ಬೈಚೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಚ್. ಮಂಜುನಾಥ್, ಮುಜುಬ್ ಪಾಷ, ಸಂಚಾಲಕ ನಾಗೇಶ್, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಕೋಲಾರ ನಾರಾಯಣಸ್ವಾಮಿ, ಬಂಗಾರಪೇಟೆ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ತ್ಯಾಗರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೈಕ್‌ ರ‍್ಯಾಲಿ

ಕೆಜಿಎಫ್‌: ರೈತರ ಕೃಷಿ ಸಾಲವನ್ನು ಆಹಾರ ಭದ್ರತೆಗೆ ಒದಗಿಸಲಾದ ಹಣವೆಂದು ಪರಿಗಣಿಸಿ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿದರು.

ರಾಬರ್ಟಸನ್‌ ಪೇಟೆಯಲ್ಲಿ ಬೇತಮಂಗಲದಿಂದ ಕೆಜಿಎಫ್‌ಗೆ ನಡೆದ ರೈತರ ಬೈಕ್‌ ಜಾಥಾ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹರಿಕುಮಾರ್‌, ರೈತರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗಿದೆ. ಚುನಾಯಿತ ಪ್ರತಿನಿಧಿಗಳು ರೈತರ ಸಮಸ್ಯೆ ಪರಿಹಾರಕ್ಕೆ ಕನಿಷ್ಠ ಆಸಕ್ತಿಯನ್ನೂ ತೋರುತ್ತಿಲ್ಲ. ಜಿಲ್ಲಾಡಳಿತ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಮೌನ ವಹಿಸುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಲಂಚವಿಲ್ಲದಿದ್ದರೆ ಕೆಲಸವೇ ಆಗುತ್ತಿಲ್ಲ. ಬಡವರು ಕೊಟ್ಟ ದೂರು ಹಣ ಮತ್ತು ಪ್ರಭಾವಕ್ಕೆ ಮಾರಾಟವಾಗುತ್ತಿದೆ. ಎಲ್ಲಾ ರೀತಿಯ ಭ್ರಷ್ಟಾಚಾರಕ್ಕೆ ಪೊಲೀಸ್‌ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.

ಬಂಗಾರಪೇಟೆಯ ತಹಶೀಲ್ದಾರ್  ಕಚೇರಿ ಮತ್ತು ಕೋಲಾರದ ಸಹಾಯಕ ಕಮೀಷನರ್ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ತಹಶೀಲ್ದಾರ್ ಕಚೇರಿಗಳಲ್ಲಿ ಪ್ರತಿ ಕೆಲಸಕ್ಕೂ ಲಂಚ ನೀಡಬೇಕಾಗಿದೆ. ಹಳೆಯ ಕಡತಗಳ ದಾಸ್ತಾನು ವಿಭಾಗದಲ್ಲಿ ಅಕ್ರಮ ತಿದ್ದುಪಡಿಗಳು ಮಾಡಿ ರೈತರು ಕೋರ್ಟಿಗೆ ಅಲೆಯುವಂತೆ ಮಾಡಲಾಗುತ್ತಿದೆ. ಕೆರೆಗಳ ಒತ್ತುವರಿಯನ್ನು ತೆರವು ಮಾಡುವ ಗೋಜಿಗೂ ಹೋಗಿಲ್ಲ. ಎಸಿ ಕಚೇರಿಯಂತೂ ಲೂಟಿ ಕಚೇರಿಗಳಾಗಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ರೈತರು ನಗರಸಭೆ ಆಯುಕ್ತ ಶ್ರೀಕಾಂತ್‌ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಮರಗಲ್ ಶ್ರೀನಿವಾಸ್‌, ನಳನಿ, ಉಮಾಗೌಡ, ದೊಡ್ಡಕಾರಿ ಸುಬ್ರಮಣಿ, ಮುನಿರತ್ನಂರೆಡ್ಡಿ, ಗಣೇಶ್, ಕುಮಾರ್, ಕವರಗಾನಹಳ್ಳಿ ಜಗದೀಶ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry