ಆಧಾರ್ ಕೇಂದ್ರಗಳಲ್ಲಿ ಹಣ ವಸೂಲಿ

ಮೈಸೂರು: ಕೇಂದ್ರೀಯ ಪಠ್ಯಕ್ರಮ ಹಾಗೂ ಇತರೆ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯ ಮಕ್ಕಳಿಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡಿರುವುದರಿಂದ ಪೋಷಕರು ಆಧಾರ್ ನೋಂದಣಿ ಕೇಂದ್ರಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ನಗರದಲ್ಲಿ ಸರ್ಕಾರದಿಂದ ನಡೆಯುತ್ತಿರುವುದು ಕೇವಲ 4 ಕೇಂದ್ರಗಳು ಮಾತ್ರ. ಇನ್ನುಳಿದವೆಲ್ಲ ಖಾಸಗಿಯವು. ಇಲ್ಲಿ ಗ್ರಾಹಕರಿಂದ ಎಗ್ಗಿಲ್ಲದೆ ಹಣ ವಸೂಲಾತಿ ನಡೆಯುತ್ತಿದೆ.
ಎಷ್ಟು ದರ?: ಕೇಂದ್ರ ಸರ್ಕಾರದ ನಿಯಮದಂತೆ ಹೊಸ ಆಧಾರ್ ನೋಂದಣಿ ಉಚಿತವಾಗಿ ಮಾಡಬೇಕಿದೆ. ತಿದ್ದುಪಡಿಗೆ ₹ 25 ದರ ನಿಗದಿಪಡಿಸಲಾಗಿದೆ. ಆದರೆ, ಖಾಸಗಿ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಮನಬಂದಂತೆ ಹಣ ವಸೂಲಾತಿ ನಡೆಯುತ್ತಿದೆ. ಕೆಲವೆಡೆ ಹೊಸ ನೋಂದಣಿಗೆ ₹ 100ರಿಂದ ₹ 200ರ ವರೆಗೆ, ತಿದ್ದುಪಡಿಗೆ ₹ 150ರಿಂದ ₹ 250ರವರೆಗೂ ಹಣ ವಸೂಲು ಮಾಡಲಾಗುತ್ತಿದೆ.
ಏಕೆ ಹೆಚ್ಚಿನ ದರ?: ಹಣ ವಸೂಲಾತಿ ಕುರಿತು ಪ್ರಶ್ನಿಸಿದರೆ ಖಾಸಗಿ ನೋಂದಣಿ ಕೇಂದ್ರಗಳ ಮಾಲೀಕರು ಹೇಳುವುದೇ ಬೇರೆ. ಗುತ್ತಿಗೆ ಪಡೆದಿರುವ ಕಂಪೆನಿಗಳು ಪ್ರತಿ ತಿಂಗಳು ಹಣ ನೀಡಬೇಕು. ಆದರೆ, ಅವರು ಆರು ತಿಂಗಳಿಗೊಮ್ಮೆ ಹಣ ನೀಡುತ್ತಾರೆ. ಅಲ್ಲಿಯವರೆಗೂ ಕಚೇರಿ ನಿರ್ವಹಣೆಗೆ ಹಣ ಬೇಕಾಗುತ್ತದೆ. ಹೀಗಾಗಿ, ಹಣ ವಸೂಲು ಮಾಡಲಾಗುತ್ತಿದೆ ಎಂದು ಸಬೂಬು ಹೇಳುತ್ತಾರೆ.
ಬಹಳಷ್ಟು ಕೇಂದ್ರಗಳು ಸ್ಥಗಿತ: ಈ ಹಿಂದೆ ಕೇಂದ್ರ ಸರ್ಕಾರ ರಾಜ್ಯದಲ್ಲಿ ಆಧಾರ್ ನೋಂದಣಿಗೆ ‘ಕಾಮನ್ ಸರ್ವೀಸ್ ಸೆಂಟರ್’ಗೆ (ಸಿಎಸ್‌ಸಿ) ಗುತ್ತಿಗೆ ನೀಡಿತ್ತು. ಇವರು ಖಾಸಗಿ ನೋಂದಣಿ ಕೇಂದ್ರಗಳಿಗೆ ಉಪಗುತ್ತಿಗೆ ನೀಡಿದ್ದರು. ಆದರೆ, ಈಗ ಇವರಿಗೆ ನೀಡಲಾಗಿದ್ದ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. ನಗರದಲ್ಲಿ ಇವರಿಗೆ ಸೇರಿದ ಶೇ 50ಕ್ಕೂ ಹೆಚ್ಚು ನೋಂದಣಿ ಕೇಂದ್ರಗಳಿದ್ದವು. ಇವೆಲ್ಲವೂ ಈಗ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿವೆ. ಆದರೆ, ಆಧಾರ್ ವೆಬ್‌ಸೈಟ್‌ನಲ್ಲಿ ಇವು ಅಸ್ತಿತ್ವದಲ್ಲಿವೆ ಎಂಬ ಮಾಹಿತಿ ಇದೆ.
ಈಗ ಗುತ್ತಿಗೆ ಪಡೆದಿರುವ ಆವಾಜ್ ಹಾಗೂ ಶ್ರೀ ಕಂಪೆನಿಗಳಿಂದ ಉಪಗುತ್ತಿಗೆ ಪಡೆದಿರುವ ನೋಂದಣಿ ಕೇಂದ್ರಗಳು ಕಡಿಮೆ ಇವೆ. ಸರ್ಕಾರದಿಂದ ಕೇವಲ 4 ನೋಂದಣಿ ಕೇಂದ್ರಗಳಷ್ಟೇ ನಡೆಯುತ್ತಿವೆ. ಇದರಿಂದ ನೋಂದಣಿ ಮಾಡಿಸಲು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಪರದಾಟ: ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಮಕ್ಕಳಿಗೆ ಆಧಾರ್ ನೋಂದಣಿ ಮಾಡಿಸಲು ಪೋಷಕರು ಪರದಾಡುತ್ತಿರುವ ದೃಶ್ಯ ಸಾಮಾನ್ಯ ಎನಿಸಿದೆ.
ಪ್ರತಿ ತಾಲ್ಲೂಕಿನಲ್ಲೂ ಒಂದು ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಸರ್ಕಾರದಿಂದ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ನೋಂದಣಿ ನಡೆಯುವ ಗ್ರಾಮ ಪಂಚಾಯಿತಿಗಳು ಬದಲಾಗುತ್ತಲೇ ಇದ್ದು, ನೋಂದಣಿ ಎಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಇಲ್ಲದೇ ಪೋಷಕರು ಪರಿತಪಿಸುತ್ತಿದ್ದಾರೆ.
**
ಖಾಸಗಿ ಆಧಾರ್ ನೋಂದಣಿ ಕೇಂದ್ರಗಳಲ್ಲಿ ಹೆಚ್ಚಿನ ಹಣ ವಸೂಲು ನಡೆಯುತ್ತಿದೆ ಎಂಬ ದೂರುಗಳು ಬಂದಿವೆ. ಶೀಘ್ರ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು
-ಲಕ್ಷ್ಮಿ, ಜಿಲ್ಲಾ ಆಧಾರ್ ನೋಂದಣಿ ಸಂಯೋಜಕಿ
ಬರಹ ಇಷ್ಟವಾಯಿತೆ?
0
0
0
0
0