ಕೋರಂ ಕೊರತೆ: ತಾ.ಪಂ. ವಿಶೇಷ ಸಭೆ ರದ್ದು

6

ಕೋರಂ ಕೊರತೆ: ತಾ.ಪಂ. ವಿಶೇಷ ಸಭೆ ರದ್ದು

Published:
Updated:
ಕೋರಂ ಕೊರತೆ: ತಾ.ಪಂ. ವಿಶೇಷ ಸಭೆ ರದ್ದು

ರಾಮನಗರ: ನಗರದ ಮಿನಿ ವಿಧಾನಸೌಧದಲ್ಲಿನ ಸಭಾಂಗಣದಲ್ಲಿ ಮಂಗಳವಾರ ನಡೆಯಬೇಕಿದ್ದ ತಾಲ್ಲೂಕು ಪಂಚಾಯಿತಿ ವಿಶೇಷ ಸಾಮಾನ್ಯ ಸಭೆ ಕೋರಂ ಕೊರತೆಯಿಂದ ರದ್ದಾಯಿತು. ಮಧ್ಯಾಹ್ನ 2.30ಕ್ಕೆ ನಡೆಯಬೇಕಿದ್ದ ಸಭೆಗೆ ನಾಲ್ಕು ಗಂಟೆಯಾದರೂ ಕಾಂಗ್ರೆಸ್ ಪಕ್ಷದ ಆರು ಸದಸ್ಯರು, ಜೆಡಿಎಸ್‌ನ ಮೂರು ಸದಸ್ಯರು ಬರಲಿಲ್ಲ. ಇದರಿಂದ ವಿಶೇಷ ಸಭೆಯನ್ನು ಸಂಜೆ 4.30ಕ್ಕೆ ರದ್ದುಪಡಿಸಲಾಯಿತು.

‘ಇಂದಿನ ವಿಶೇಷ ಸಭೆಯಲ್ಲಿ ವಿವಿಧ ಇಲಾಖೆಗಳ ಲಿಂಕ್‌ ಡಾಕ್ಯುಮೆಂಟ್‌ಗೆ  ಅನುಮೋದನೆ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಅಭಿವೃದ್ಧಿ ಅನುದಾನ ಒಂದು ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಅನುಮೋದನೆ ಪಡೆಯಬೇಕಿತ್ತು. ಆದರೆ, ಹಲವು ಸದಸ್ಯರು ಗೈರು ಹಾಜರಾಗಿರುವ ಕಾರಣ ಸಭೆಯನ್ನು ರದ್ದುಗೊಳಿಸಲಾಯಿತು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ ತಿಳಿಸಿದರು.

‘ಡಿಸೆಂಬರ್‌ ವೇಳೆಗೆ ಅನುದಾನ  ಬಳಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರದ ನಿಯಮವಿದೆ. ಆದ್ದರಿಂದ ಇಂದು ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಆದರೆ ಇಲ್ಲಿನ ಕೆಲವು ತಾಲ್ಲೂಕು ಪಂಚಾಯಿತಿ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಭೆಗಳನ್ನು ನಡೆಸಲು ಅನುವು ಮಾಡಿಕೊಡುತ್ತಿಲ್ಲ’ ಎಂದು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಭದ್ರಯ್ಯ ಮಾತನಾಡಿ ‘ತಾಲ್ಲೂಕು ಪಂಚಾಯಿತಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿರುವ ಸದಸ್ಯರು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇವರಿಗೆ ತಾಲ್ಲೂಕಿನ ಅಭಿವೃದ್ಧಿ ಮುಖ್ಯವಾಗಿಲ್ಲ, ಪ್ರತಿಯೊಂದು ಸಭೆಯಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಸಭೆ ಇದೆ ಎಂದು ಮುಂಚೆಯೇ ತಿಳಿಸಿದ್ದರೂ ಉದ್ದೇಶಪೂರ್ವಕವಾಗಿಯೇ ಸಭೆಗೆ ಹಾಜರಾಗಿಲ್ಲ’ ಎಂದು ಆರೋಪಿಸಿದರು.

‘ಜೆಡಿಎಸ್‌ನ ಮೂರು ಸದಸ್ಯರು ಸಭೆಗೆ ಬಂದಿಲ್ಲ. ಆದರೆ ಅವರು ದೂರವಾಣಿ ಮೂಲಕ ತಮಗಿರುವ ಸಮಸ್ಯೆಗಳನ್ನು ತಿಳಿಸಿ, ನೀವು ಸಭೆ ನಡೆಸಿ ಎಂದು ಹೇಳಿದ್ದಾರೆ’ ಎಂದರು. ‘ನಾವು ಯಾವುದೇ ಪಕ್ಷದಿಂದ ತಾಲ್ಲೂಕು ಪಂಚಾಯಿತಿಗೆ ಚುನಾಯಿತರಾಗಿರಬಹುದು. ನಮಗೆ ತಾಲ್ಲೂಕಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ದುಡಿಯಬೇಕು. ಆದರೆ ಇಲ್ಲಿನ ಸದಸ್ಯರಲ್ಲಿ ಪಕ್ಷ ಹಾಗೂ ತಮ್ಮ ವೈಯುಕ್ತಿಕ ಹಿತಾಸಕ್ತಿಯೆ ಹೆಚ್ಚಾಗಿ ಕಂಡುಬರುತ್ತಿದೆ’ ಎಂದು ಅವರು ತಿಳಿಸಿದರು.

ಅಧಿಕಾರಿಗಳ ಅಸಮಾಧಾನ: ಬಹುತೇಕ ಇಲಾಖೆಗಳ ಅಧಿಕಾರಿಗಳು ಮಧ್ಯಾಹ್ನ 2.30ಕ್ಕೆ ಹಾಜರಾಗಿದ್ದರು. ಸಂಜೆ 4.30 ಗಂಟೆಯಾದರೂ ಸಭೆ ನಡೆಯದೆ ರದ್ದಾಗಿದ್ದರಿಂದ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಸಭೆಗೆ ವಿಳಂಬವಾಗಿ ಬಂದರೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾವು ಕಚೇರಿಯಲ್ಲಿನ ಕೆಲಸಗಳನ್ನೆಲ್ಲಾ ಬಿಟ್ಟು ಸಭೆಗೆ ಬಂದರೆ ಇಲ್ಲಿ ಸಭೆ ನಡೆಸದೆ ನಮ್ಮ ಸಮಯವನ್ನು ಹಾಳು ಮಾಡುತ್ತಾರೆ’ ಎಂದರು.

ಹಲವು ಅಧಿಕಾರಿಗಳು ಮೊಬೈಲ್‌ಗಳಲ್ಲಿ ಮುಳುಗಿ ಹೋಗಿದ್ದರು. ಇನ್ನು ಕೆಲವರು ಇತರೆ ಇಲಾಖೆಗಳ ಅಧಿಕಾರಿಗಳೊಡನೆ ಸಂಭಾಷಣೆಯಲ್ಲಿ ನಿರತರಾಗಿದ್ದರು. ಮೂರು ಗಂಟೆಗೆ ಸಭೆಗೆ ಬಂದ ಅಧ್ಯಕ್ಷರು ಸದಸ್ಯರು ಬರುತ್ತಾರೆಂಬ ನಿರೀಕ್ಷೆಯಲ್ಲಿ ‘ಇನ್ನೊಂದು ಹತ್ತು ನಿಮಿಷ ನೋಡೋಣ’ ಎನ್ನುತ್ತಲೇ ಎರಡು ಗಂಟೆ ಕಾದರು. ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರ ತಮ್ಮ ಮಗುವನ್ನು ಸದಸ್ಯರು ಕುಳಿತುಕೊಳ್ಳುವ ಆಸನದಲ್ಲಿಯೇ ಕೂರಿಸಿದ್ದು ಚರ್ಚೆಗೆ ಗ್ರಾಸವಾಯಿತು.

ವರಿಷ್ಠರು ಹೇಳಿದರೆ ರಾಜೀನಾಮೆ

‘ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾದಿಯನ್ನು ಹಂಚಿಕೆ ಮಾಡಿರುವುದು ಸದಸ್ಯರ ಗಮನಕ್ಕೆ ಬಂದಿಲ್ಲ. ಜೆಡಿಎಸ್ ವರಿಷ್ಠರಾದ ಕುಮಾರಸ್ವಾಮಿ, ಶಾಸಕ ಬಾಲಕೃಷ್ಣ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌ ಹೇಳಿದರು.

‘ರಾಮನಗರ ತಾಲ್ಲೂಕು ಪಂಚಾಯಿತಿಗೆ ಮಾಗಡಿ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿಗಳು ಸೇರಿಕೊಳ್ಳುತ್ತವೆ. ಕುಮಾರಸ್ವಾಮಿ, ಬಾಲಕೃಷ್ಣ ಅವರಲ್ಲಿ ಭಿನ್ನಾಭಿಪ್ರಾಯವಿರಬಹುದು. ಆದರೆ ಇವರು ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು. ‘ರಾಜೀನಾಮೆ ನೀಡಿ ಎಂದು ಯಾರೂ ಹೇಳಿಲ್ಲ. ಇದೆಲ್ಲಾ ಉಹಾಪೋಹ. ನಮ್ಮಲ್ಲಿ ಯಾವುದೇ ರೀತಿಯ ಒಡಂಬಡಿಕೆಯಾಗಿಲ್ಲ. ಪಕ್ಷದ ವರಿಷ್ಠರು ಹೇಳಿದರೆ ರಾಜೀನಾಮೆ ಕೊಡುತ್ತೇನೆ’ ಎಂದು ಅಧ್ಯಕ್ಷ ಡಿ.ಎಂ. ಮಹದೇವಯ್ಯ ಸ್ಪಷ್ಟಪಡಿಸಿದರು.

* * 

ಇಲ್ಲಿನ ಕೆಲವು ತಾಲ್ಲೂಕು ಪಂಚಾಯಿತಿ ಸದಸ್ಯರು ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ಸಭೆಗಳನ್ನು ನಡೆಸಲು ಅನುವು ಮಾಡಿಕೊಡುತ್ತಿಲ್ಲ

ಡಿ.ಎಂ. ಮಹದೇವಯ್ಯ

ತಾ.ಪಂ. ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry