ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಣಗುಡುತ್ತಿದೆ ಮುಕ್ತ ವಿ.ವಿ ಭವ್ಯ ಕಟ್ಟಡ!

Last Updated 18 ಜೂನ್ 2017, 7:31 IST
ಅಕ್ಷರ ಗಾತ್ರ

 ಬಳ್ಳಾರಿ: ಇದುವರೆಗೂ ಬಾಡಿಗೆ ಕಟ್ಟಡ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲ ಯದ ಪ್ರಾದೇಶಿಕ ಕೇಂದ್ರವು ನಲ್ಲಚೆರು ವಿನ ಸ್ವಂತದ್ದಾದ ನೂತನ ಭವ್ಯ ಕಟ್ಟಡಕ್ಕೆ ಸದ್ದಿಲ್ಲದೆ ಸ್ಥಳಾಂತರಗೊಂಡಿದೆ. ಆದರೆ ವಿಶ್ವವಿದ್ಯಾಲಯವು ಎದುರಿಸುತ್ತಿರುವ ಮಾನ್ಯತೆಯ ಸಮಸ್ಯೆಯಿಂದಾಗಿ, ದಾಖ ಲಾತಿ ಪ್ರಕ್ರಿಯೆ ನಡೆಯದೇ ಭಣಗುಡುತ್ತಿದೆ.

ಈ ಪ್ರದೇಶದಲ್ಲಿ ಕಾರ್ಯನಿರ್ವಹಿ ಸುತ್ತಿರುವ ಸರ್ಕಾರಿ ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲೇ  ಪ್ರಾದೇಶಿಕ ಕೇಂದ್ರವನ್ನು ನಿರ್ಮಿಸಲಾಗಿದೆ. ಪೂರ್ವಾಭಿಮುಖ ವಾಗಿರುವ ಕಟ್ಟಡದ ಬೃಹದ್‌ ಆಕೃತಿಯು ಭವ್ಯವಾಗಿದೆ. ಮನಮೋಹಕವಾಗಿದೆ. ಆದರೆ ಶೈಕ್ಷಣಿಕ ಚಟುವಟಿಕೆಗಳು ಇಲ್ಲದೆ ಕಳೆಗೆಟ್ಟಿದೆ.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ, ವಿದ್ಯಾರ್ಥಿಗಳಿಗೆ ವಿತರಿಸಲೆಂದು ವಿಶ್ವವಿದ್ಯಾಲಯ ಪೂರೈಸಿರುವ ಅಭ್ಯಾಸ ಪುಸ್ತಕಗಳು ಹೊಸ ಕಟ್ಟಡದಲ್ಲೂ ಧೂಳು ಹಿಡಿದಿವೆ.

ಕಟ್ಟಡದ ನೆಲಮಹಡಿಯಲ್ಲಿ ಗ್ರಂಥಾಲಯ, ಕೇಂದ್ರದ ನಿರ್ದೇಶಕರ ಕೊಠಡಿ, ಆಡಳಿತ ಕಚೇರಿ ಮತ್ತು ತರಗತಿ ಕೊಠಡಿಗಳಿವೆ. ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಪರೀಕ್ಷಾ ಕೊಠಡಿಗಳಿವೆ. ನಾಲ್ಕು ಅತಿಥಿ ಗೃಹಗಳು ಮತ್ತು ಸಭಾಂಗಣವನ್ನೂ ನಿರ್ಮಿಸಲಾಗಿದೆ.

ಏಳು ವರ್ಷದ ಹಿಂದೆ ನಗರದ ವೀರಶೈವ ಕಾಲೇಜಿನ ಕಟ್ಟಡವೊಂದನ್ನು ಮಾಸಿಕ ₹10,000ಕ್ಕೆ ಬಾಡಿಗೆಗೆ ಪಡೆದು ಕೇಂದ್ರವನ್ನು ಆರಂಭಿಸಲಾಯಿತು. ಇದು ವರೆಗೆ ಎರಡೂ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಬಿ.ಎ, ಬಿ.ಕಾಂ, ಎಂ.ಎ. ಎಂಕಾಂ ಪದವಿಗಳನ್ನು ದೂರಶಿಕ್ಷಣದ ಮೂಲಕ ಪಡೆದಿದ್ದಾರೆ.

‘2015ರಿಂದ ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಮಾತ್ರ ದಾಖಲಾತಿ ನಡೆದಿದೆ. ಕಚೇರಿ ಯನ್ನು ಸ್ವಂತ ಕಟ್ಟಡಕ್ಕೆ ಆರು ತಿಂಗಳ ಹಿಂದೆ ಸ್ಥಳಾಂತರಿಸಲಾಗಿದೆ’ ಎಂದು ಕೇಂದ್ರದ ನಿರ್ದೇಶಕ ಎಚ್‌.ಮಲ್ಲಿ ಕಾರ್ಜುನ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.

ನಾಲ್ವರೇ ಸಿಬ್ಬಂದಿ: ಬೃಹತ್‌ ಕಟ್ಟಡದಲ್ಲಿ ಈಗ ಕೇವಲ ನಾಲ್ವರು ಸಿಬ್ಬಂದಿ ಮಾತ್ರ ಇದ್ದಾರೆ. ನಿರ್ದೇಶಕರು, ಒಬ್ಬ ನಾಲ್ಕನೇ ದರ್ಜೆ ನೌಕರ, ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಕಾರ್ಯಭಾರವೇನೂ ಇರದಿದ್ದರೂ ನಿರ್ದೇಶಕರು ದಿನವಿಡೀ ಇಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಒಂದೇ ಅಧ್ಯಯನ ಕೇಂದ್ರ: ‘ಜಿಲ್ಲೆಯಲ್ಲಿ ಸದ್ಯಕ್ಕೆ ವಿಶ್ವವಿದ್ಯಾಲಯದ ಒಂದು ಅಧ್ಯ ಯನ ಕೇಂದ್ರ ಮಾತ್ರ ವೀರಶೈವ ಕಾಲೇಜಿ ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಡಗಲಿ ಮತ್ತು ಕೊಪ್ಪಳದಲ್ಲಿ ಇದ್ದ ಕೇಂದ್ರಗಳನ್ನು ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಮುಚ್ಚಲಾಗಿದೆ. ಕೇಂದ್ರ ನಡೆಸಲು ಕನಿಷ್ಠ 50 ವಿದ್ಯಾರ್ಥಿಗಳು ದಾಖಲಾಗಿರಬೇಕು’ ಎಂದು ಮಾಹಿತಿ ನೀಡಿದರು.

* * 

ಮಾನ್ಯತೆ ಸಮಸ್ಯೆಯಿಂದಾಗಿ ಮುಕ್ತ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸ್ಥಗಿತಗೊಂಡಿದೆ. ಹೊಸ ಕಟ್ಟಡದಲ್ಲಿ ಸದ್ಯಕ್ಕೆ ಏನೂ ಕೆಲಸವಿಲ್ಲ
ಎಚ್‌.ಮಲ್ಲಿಕಾರ್ಜುನ
ಪ್ರಾದೇಶಿಕ  ಕೇಂದ್ರದ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT