ಪವಾಡಗಳ ‘ನೀರು ಬಾಬಾ ದರ್ಗಾ’

6

ಪವಾಡಗಳ ‘ನೀರು ಬಾಬಾ ದರ್ಗಾ’

Published:
Updated:
ಪವಾಡಗಳ ‘ನೀರು ಬಾಬಾ ದರ್ಗಾ’

ವಿಜಯಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರದ  ಇಂದಿರಾನಗರದಲ್ಲಿರುವ ಹಜ್ರತ್ ಹಾಜಿ ಮಾಮ್ ಅಉಲಿಯ ಸರ್ವ ಧಾರ್ಮಿಕ ಪವಿತ್ರವಾದ ದರ್ಗಾದಲ್ಲಿ ಪವಾಡಗಳು ನಡೆಯುತ್ತಿವೆ ಎಂಬ ನಂಬಿಕೆ ಜನರಲ್ಲಿದೆ.

ಎಲ್ಲಾ ಧರ್ಮೀಯರು ಆಸ್ಪತ್ರೆಗಿಂತಲೂ ಪವಿತ್ರವಾಗಿಯೆ ನೋಡುವಂತಹ ‘ನೀರು ಬಾಬಾ ದರ್ಗಾ’ ಎಂದೇ ಖ್ಯಾತಿಯನ್ನು ಗಳಿಸಿಕೊಂಡಿರುವ ಇಲ್ಲಿ ಅನೇಕ ಪವಾಡಗಳನ್ನು ಜನರು ಕಂಡಿದ್ದಾರೆ. ಅನೇಕ ಕಾಯಿಲೆಗಳಿಂದ ವಿಮುಕ್ತಿ ಪಡೆದುಕೊಂಡಿದ್ದಾರೆ.

ಈ ಧಾರ್ಮಿಕ ಕ್ಷೇತ್ರ ಎರಡನೇ ಮುರುಗಮಲ್ಲಾ ಎಂಬ ಖ್ಯಾತಿ ಪಡೆದಿದೆ. ಮುಸ್ಲಿಂ ಧಾರ್ಮಿಕ ಧರ್ಮಗುರು ಹಾಜೀಮಾ ಮೌಲಿ ಎಂಬುವವರು ಇಲ್ಲೇ ವಾಸವಾಗಿದ್ದರು, ಎರಡು ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದಾರೆ. ಅವರು ಧ್ಯಾನದಲ್ಲಿ ತೊಡಗಿಕೊಂಡಿದ್ದ ಸಮಯದಲ್ಲೇ ದೇಹ ತ್ಯಜಿಸಿದ್ದಾರೆ ಎನ್ನುವ ನಂಬಿಕೆ ಇಲ್ಲಿನ ಜನರದ್ದು. ಅವರು ಕುಡಿದು ಬಿಟ್ಟಿದ್ದ ಬಾಟಲಿಯಲ್ಲಿನ ನೀರು ಎರಡು ವರ್ಷಗಳಾದರೂ ಕೆಟ್ಟಿಲ್ಲ ಎಂದು ಸ್ಥಳೀಯರು ವಿವರಿಸುತ್ತಾರೆ.

ಆಸ್ಪತ್ರೆಗಳಲ್ಲಿ ವೈದ್ಯರಿಂದ ಗುಣಪಡಿಸಲಿಕ್ಕೆ ಸಾಧ್ಯವಾಗದಂತಹ ರೋಗಗಳು ಇಲ್ಲಿನ ನೀರು ಕುಡಿದಾಗ ವಾಸಿಯಾಗಿವೆ ಎಂದು ಇಲ್ಲಿಗೆ ಬಂದು ಒಳಿತು ಕಂಡಿರುವ ಬೆಂಗಳೂರು ಮೂಲದ ಚಂದ್ರಕುಮಾರ್ ತಿಳಿಸಿದ್ದಾರೆ.

ಎಚ್.ಐ.ವಿ,  ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡಗಳಲ್ಲಿ ಕಲ್ಲುಗಳಿರುವವರು,  ದೇಶದ ಮುಂಬೈ, ದೆಹಲಿ, ಪಂಜಾಬ್, ಹರಿಯಾಣ, ಕೋಲ್ಕತ, ಜಮ್ಮು, ನಾಸಿಕ್, ಉತ್ತರಾಖಂಡ, ಸೇರಿದಂತೆ ನಾನಾ ಭಾಗಗಳಿಂದ ಇಲ್ಲಿಗೆ ಆಗಮಿಸುತ್ತಾರೆ.  ಅಷ್ಟೇ ಅಲ್ಲದೆ, ಬಹುತೇಕ ಮುಸ್ಲಿಂ ಸಮುದಾಯವರು ಪವಿತ್ರ ಮೆಕ್ಕಾ ಮದೀನಾಗೆ ಪ್ರಯಾಣ ಹೋಗಿ ಬರುತ್ತಾರೆ.

‘ಮೆಕ್ಕಾ ಮದೀನಾದಲ್ಲಿನ ಧರ್ಮ ಗುರುಗಳೂ ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿ ಹೋಗಿದ್ದಾರೆ. ಕಳೆದ ವರ್ಷ ಚಾರ್ದಾಮ್ ನ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಬದ್ರಿನಾಥ್ ನಿಂದ  ದೇವ್ ಅಜ್ಜ ಮಹಾರಾಜ್ ಸ್ವಾಮಿ ಅವರು  ಬಂದು ಒಂದು ವಾರದ ಕಾಲ ಇಲ್ಲೇ  ನೆಲೆಸಿ ಹೋಗಿದ್ದಾರೆ’ ಎಂದು ದರ್ಗಾದ ಮುಖ್ಯಸ್ಥ  ತಿಳಿಸಿದ್ದಾರೆ.

ಸಾಮರಸ್ಯದ ಕೇಂದ್ರ:  35 ವರ್ಷಗಳಿಂದ ಇಲ್ಲಿನ ಉರುಸ್, ಶ್ರೀರಾಮನವಮಿ, ದೀಪಾವಳಿ, ಮಹಾಶಿವರಾತ್ರಿ, ಗೌರಿಗಣೇಶ ಹಬ್ಬ, ಸಂಕ್ರಾಂತಿಯಂತಹ ಅನೇಕ ಹಿಂದೂಗಳು ಆಚರಿಸುವ ಹಬ್ಬಗಳನ್ನು ಇಲ್ಲಿ ಆಚರಣೆ ಮಾಡಲಾಗುತ್ತದೆ. ಎಲ್ಲಾ ಸಮುದಾಯದವರು ಭಾಗವಹಿಸುತ್ತಾರೆ. ಇದೊಂದು ಸರ್ವಧರ್ಮ ಸಾಮರಸ್ಯದ ಕೇಂದ್ರವಾಗಿ ಬೆಳೆಯುತ್ತಿದೆ.

ವ್ಯವಸ್ಥೆ: ‘ನಾನು ಮೂರು ವರ್ಷಗಳಿಂದ ಬರುತ್ತಿದ್ದೇನೆ. ದೂರದಿಂದ ಬರುವಂತಹ ರೋಗಿಗಳಿಗೆ ಉಳಿದುಕೊಳ್ಳಲು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಚಿತ್ರದುರ್ಗದಿಂದ ಬಂದಿದ್ದ ರಾಘವೇಂದ್ರ ಹೇಳಿದರು.

ಸೇವೆ: ಪಂಜಾಬ್‌ನ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿ ಬಲವಿಂದರ್ ಸಿಂಗ್ ಒಬ್ಬರು ಈ ಧಾರ್ಮಿಕ ಕೇಂದ್ರದ ಪರಮಭಕ್ತ.ಅವರು ಇಲ್ಲಿಗೆ ಭೇಟಿ ನೀಡಿದ ನಂತರ ತಮ್ಮ ವೃತ್ತಿ ಬಿಟ್ಟು ಇಲ್ಲಿಗೆ ಬಂದು ಸೇವೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಸುನ್ನು ಉಸ್ತಾದ್  ತಿಳಿಸುತ್ತಾರೆ.

* * 

ಸಾವಿರಾರು ಜನರು ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿಕೊಂಡು ಹೋಗುತ್ತಾರೆ. ಅವರು ನಂಬಿಕೆಯಿಂದಲೇ ಒಳಿತು ಕಾಣುತ್ತಿದ್ದಾರೆ. ಅವರಿಂದ ದೇಣಿಗೆ ಸ್ವೀಕಾರ ಮಾಡುವುದಿಲ್ಲ.

ಸುನ್ನು ಉಸ್ತಾದ್, ಮುಖ್ಯಸ್ಥ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry