ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನಲ್ಲಿ ಮಳೆಯಾಗುತ್ತಿದೆ... ಆದರೆ ಬರ ದೂರವಾಯಿತೇ?

ಬರ ಯಾತಕ್ಕೆ ಮಳೆ ಹೋದವೋ...
Last Updated 23 ಜೂನ್ 2017, 19:30 IST
ಅಕ್ಷರ ಗಾತ್ರ

–ಮುತ್ತುರಾಜು ಎಚ್., ಪಿ. ವೀರಭದ್ರ ನಾಯ್ಕ, ಸಿದ್ಧಾರ್ಥ ಜೋಷಿ, ಎ.ಆರ್. ವಾಸವಿ

***

ಅಮೆರಿಕದ ದಕ್ಷಿಣ ಭಾಗ, 1930: ದಕ್ಷಿಣದ ಬಯಲು ಪ್ರದೇಶವು ವಿನಾಶಕಾರಿ ದೂಳಿನ ಬಿರುಗಾಳಿಗೆ ತುತ್ತಾಯಿತು. ಈ ಬಿರುಗಾಳಿಯು ನೂರು ಅಡಿಗೂ ಹೆಚ್ಚು ಎತ್ತರವಿತ್ತು. ಒಂದು ಕಾಲದಲ್ಲಿ ಹಚ್ಚಹಸಿರಿನಿಂದ ಕೂಡಿದ್ದ ಬಯಲು ಪ್ರದೇಶವನ್ನು ಇದು ವ್ಯಾಪಿಸಿತು. ಆದರೆ ನಿರಂತರವಾಗಿ ಕಾಡಿದ ಬರ ಈ ಪ್ರದೇಶವನ್ನು ದೂಳಿನ ಪಾತ್ರೆಯನ್ನಾಗಿಸಿತ್ತು! ಒಣ ಭೂಮಿಗೆ ಸೂಕ್ತವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಲ್ಲಿ ಆದ ವೈಫಲ್ಯ, ಅತಿಯಾದ ಯಾಂತ್ರೀಕೃತ ಉಳುಮೆ, ಕೃಷಿ ಚಟುವಟಿಕೆನಿರಂತರವಾಗಿ ನಡೆಸಿದ್ದು, ಮಣ್ಣಿನ ಸವಕಳಿ, ನೀರಿನ ಅತಿಯಾದ ಬಳಕೆಯ ಪರಿಣಾಮವಾಗಿ ಉಂಟಾದ ಮಾನವಕೃತ ಕೃಷಿ ವಿಕೋಪ ಇದಾಗಿತ್ತು. ಈ ಪ್ರದೇಶದಲ್ಲಿ ನೆಲೆಸಿದ್ದ ಸಾವಿರಾರು ಜನ ಬೇರೆ ಕಡೆಗಳಿಗೆ ವಲಸೆ ಹೋದರು. ಇಂಥದ್ದೊಂದು ವಲಸೆ ಅಮೆರಿಕದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ.

*

ಈಗ ಬಂದಿರುವ ನೈಋತ್ಯ ಮುಂಗಾರು ರಾಜ್ಯದ ಜನರಲ್ಲಿ ಭರವಸೆ ಮೂಡಿಸಿದೆ.  ಆದರೆ  ರಾಜ್ಯವನ್ನು ಕಾಡಿದ ಬರ ಹಾಗೂ ಅದರ ಸ್ವರೂಪಗಳು ಕಲಿಸುವುದು ಏನನ್ನು ಎಂಬುದನ್ನು ನಾವು ಕಡೆಗಣಿಸಬಾರದು. ಅಮೆರಿಕದ ದಕ್ಷಿಣ ಪ್ರದೇಶ 1930ರಲ್ಲಿ ಎದುರಿಸಿದ್ದ ಸ್ಥಿತಿಯನ್ನು ನೆನಪಿಸುವಂತೆಯೇ  ಕರ್ನಾಟಕದ ಹಲವು ಭೂಪ್ರದೇಶಗಳ ಸ್ಥಿತಿ ಈಗ ಇದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಎರಡು-ಮೂರು ವರ್ಷಗಳಿಂದ ಸಾಕಷ್ಟು ಮಳೆ ಆಗಿಲ್ಲ. ಸೆಕೆ ಅಸಹನೀಯ ಮಟ್ಟ ತಲುಪಿದೆ, ಅಂತರ್ಜಲದ ಮಟ್ಟ ಹಲವೆಡೆ ಪಾತಾಳ ಕಂಡಿದೆ, ಕೃಷಿಯಿಂದ ಬರುತ್ತಿದ್ದ ಆದಾಯ ಕುಸಿದಿದೆ, ಬೆಳೆ ರೋಗಗಳು ವಿಸ್ತರಿಸುತ್ತಿವೆ, ಭಾರಿ ಪ್ರಮಾಣದ ಜಮೀನು ಕೃಷಿಗೆ ಅಯೋಗ್ಯವಾಗಿದೆ, ದೂಳಿನ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

2016-17ರಲ್ಲಿ  ರಾಜ್ಯ ಎದುರಿಸಿದ ಬರ ಗಣನೀಯವಾದದ್ದು. 1987ರ ಬರಗಾಲಕ್ಕೆ ಹೋಲಿಸಿದರೆ, ಈ ಬಾರಿಯ ಬರಗಾಲದಲ್ಲಿ ವೈರುಧ್ಯಗಳು ಎದ್ದುಕಾಣುವಂತೆ ಇವೆ. ಈ ಬಾರಿ ಮಳೆಯ ಕೊರತೆ ತೀರಾ ದೊಡ್ಡ ಪ್ರಮಾಣದಲ್ಲಿ ದಾಖಲಾಗಿದೆ. ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಶೇಕಡ 82ರಷ್ಟು ಕಡಿಮೆ ಮಳೆ ಆಗಿದೆ. ಆದರೆ ಇಂಥ ಬರ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಕೃಷಿ ಚಟುವಟಿಕೆ ಸ್ಥಗಿತ, ಹಸಿವಿನ ಸಮಸ್ಯೆ, ವಸ್ತು ಹಾಗೂ  ಜಮೀನಿನ ಮಾರಾಟ, ಗೊತ್ತು-ಗುರಿ ಇಲ್ಲದೆ ಗುಳೆ ಹೋಗುವುದು ಈ ಬಾರಿ ದೊಡ್ಡ ಮಟ್ಟದಲ್ಲಿ ಆಗಿಲ್ಲ. ಇದಕ್ಕೆ ಕಾರಣಗಳು ಹಲವು.

ಕೃಷಿಯೇತರ ಆದಾಯ ಮೂಲ ಹೊಂದಿರುವ ಕುಟುಂಬಗಳಿಗೆ, ಬರದಿಂದ  ಆದ ನಷ್ಟ ತೂಗಿಸಿಕೊಂಡು ಮುನ್ನಡೆಯಲು ಸಾಧ್ಯವಾಗಿದೆ. ನಗರ ಪ್ರದೇಶಗಳಿಗೆ, ವಲಸೆ ಹೋಗಲು ಇರುವ ಅವಕಾಶದ ಕಾರಣ ಒಂದಿಷ್ಟು ಸಂಪಾದನೆ ಸಾಧ್ಯವಾಗಿದೆ. ಆದರೆ ವಯಸ್ಸಾದವರು, ಅಂಗವಿಕಲರು ಮತ್ತು ಮಹಿಳೆಯರು ಮಾತ್ರವೇ ಇರುವ ಕುಟುಂಬಗಳು ತೀರಾ ತೊಂದರೆಗೆ ಸಿಲುಕಿವೆ. ಜಮೀನು ಮತ್ತು ಬಂಡವಾಳ ಹೊಂದಿರುವ ಕುಟುಂಬಗಳು, ಕೊಳವೆಬಾವಿ ಹಾಗೂ ತಂತ್ರಜ್ಞಾನದ (ಟ್ರ್ಯಾಕ್ಟರ್‌, ಕೊಯ್ಲು ಯಂತ್ರ, ಶೇಡ್‌ನಟ್‌ಗಳು) ಮೇಲೆ ಬಂಡವಾಳ ಹೂಡಿರುವ ಕುಟುಂಬಗಳು ಮಳೆ ಕೊರತೆಯ ಏಟಿಗೆ ಗುರಿಯಾಗಿಲ್ಲ. ಕೊಳವೆ ಬಾವಿಯಲ್ಲಿ ಸರಿಯಾಗಿ ನೀರು ಬರುತ್ತಿರುವ ಕಡೆ ಉತ್ತಮ ಬೆಳೆ ಆಗಿದೆ ಮತ್ತು ಈ ರೈತರು ಕಾಲಕಾಲಕ್ಕೆ ಆದಾಯ ಗಳಿಸಿದ್ದಾರೆ.

ನೀರಿನ ಆರ್ಥಿಕತೆ!: ನೀರು ಮಾರುವ ಉದ್ದಿಮೆಯು ಯಾವ ಪ್ರಮಾಣದ ತೀವ್ರತೆಯನ್ನು ಪಡೆದುಕೊಂಡಿದೆ ಎಂಬುದು ಬರ ಪರಿಸ್ಥಿತಿಯನ್ನು ಚಿತ್ರಿಸುವ ಸಂಗತಿಗಳಲ್ಲಿ ಒಂದು. ನೀರು ಮಾರಾಟಗಾರರು ದೊಡ್ಡ ಜಾಲವನ್ನು ನಿರ್ಮಿಸಿಕೊಂಡು, ಆಳವಾದ ಕೊಳವೆ ಬಾವಿಗಳಿಂದ ನೀರು ಎತ್ತಿ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದು ನೀರಿನ ಹೊಸ ಉದ್ಯಮವೊಂದಕ್ಕೆ ಜನ್ಮ ನೀಡಿದೆ. ನೀರು ಎಂಬುದು ಎಲ್ಲರಿಗೂ ಸೇರಿದ್ದು ಎನ್ನುವ ತತ್ವವನ್ನು ಇದು ಅಳಿಸಿಹಾಕಿದೆ. ಕೃಷಿಕರು ತಮ್ಮ ನೆರೆಹೊರೆಯವರಿಂದ ನೀರನ್ನು ಖರೀದಿಸುತ್ತಿದ್ದಾರೆ.  ಹಳ್ಳಿಗಳ ಮಧ್ಯಮ ವರ್ಗಗಳ ಜನ ಒಟ್ಟಾಗಿ ಹಣ ಸಂಗ್ರಹಿಸಿ ಟ್ಯಾಂಕರ್‌ ನೀರು ಖರೀದಿಸುತ್ತಿದ್ದಾರೆ. ಕೆಲವೆಡೆ ಜಾಣ ಹಾಗೂ ದುರಾಸೆಯ ವ್ಯಾಪಾರಿಗಳು ಕೊಳವೆ ಬಾವಿ ಕೊರೆಸಿ ನೀರು ಮಾರಾಟ ಮಾಡುವ ಉದ್ದೇಶಕ್ಕೆಂದೇ ಜಮೀನು ಖರೀದಿಸಿರುವುದೂ ಇದೆ.

ನೀರನ್ನು ಈ ರೀತಿ ಹೊರತೆಗೆದು ಮಾರಾಟ ಮಾಡುವ ಕಾರ್ಯದ ಮೇಲೆ ಆಡಳಿತ ಯಂತ್ರದ ನಿಯಂತ್ರಣ ತೀರಾ ಅಲ್ಪ ಅಥವಾ ಇಲ್ಲವೆಂದೇ ಹೇಳಬಹುದು.

ಗ್ರಾಮೀಣ ಪ್ರದೇಶಗಳು ಈ ರೀತಿ ಹಾಳಾಗುತ್ತಿರುವುದನ್ನು ಪ್ರಶ್ನಿಸಲು ಯಾರೊಬ್ಬರೂ ಇರುವಂತೆ ತೋರುತ್ತಿಲ್ಲ. ನೀರಾವರಿ ಉದ್ದೇಶಕ್ಕೆ ಕೊಳವೆ ಬಾವಿ ಕೊರೆಸಲು 2017ರ ಫೆಬ್ರುವರಿವರೆಗೆ ನಿಷೇಧ ಇತ್ತು. ಹೀಗಿದ್ದರೂ ಅಕ್ರಮ ಕೊಳವೆಬಾವಿ ಕೊರೆಯುವ ಜಾಲವು, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ.
ಜಮೀನಿನ ಬಳಕೆ ಹಾಗೂ ಬೆಳೆ ಬೆಳೆಯುವ ಪದ್ಧತಿಯಲ್ಲಿ ಆಗಿರುವ ಬದಲಾವಣೆಗೂ ಕೊಳವೆ ಬಾವಿಗಳ ಹೆಚ್ಚಳಕ್ಕೂ ಸಂಬಂಧ ಇದೆ. 2007-08ರಿಂದ 2015-16ರ ನಡುವಣ ಅವಧಿಯಲ್ಲಿ ರಾಜ್ಯದಲ್ಲಿ ಧಾನ್ಯಗಳು ಹಾಗೂ ಸಿರಿಧಾನ್ಯಗಳನ್ನು ಬೆಳೆಯುವ ಪ್ರದೇಶದ ಪ್ರಮಾಣದಲ್ಲಿ ಶೇ 18ರಷ್ಟು ಕುಸಿತ ಕಂಡುಬಂದಿದೆ. ಇದೇ ಅವಧಿಯಲ್ಲಿ ತೋಟಗಾರಿಕಾ ಬೆಳೆ ಬೆಳೆಯುವ ಪ್ರದೇಶದ ವಿಸ್ತೀರ್ಣದಲ್ಲಿ ಶೇ 15ರಷ್ಟು ಹೆಚ್ಚಳ ಆಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಗಿಟ್ಟಿಸಿಕೊಳ್ಳುವ, ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರಮಾಣ ಹೆಚ್ಚಾದ ಕಾರಣ ರೈತರ ವರಮಾನ ವೃದ್ಧಿಸುತ್ತದೆ ಎಂದು ಸಂಭ್ರಮಿಸಬಹುದು. ಆದರೆ ಇದರಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಇನ್ನೂ ಪೂರ್ಣ ಅರಿವು ನಮಗೆ ಬಂದಿಲ್ಲ. ಬರ ಪರಿಸ್ಥಿತಿ ಇರುವಾಗಲೂ ನೀರನ್ನು ಎತ್ತಿ, ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವುದು ಬರದ ಪರಿಣಾಮ ಬೇರೆ ಬೇರೆ ರೀತಿ ಆಗಿರುವುದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಬರದ ತೀವ್ರತೆಯನ್ನು ಒಂದು ಸಮುದಾಯವಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿರುವುದಕ್ಕೂ ಇದು ಒಂದು ಕಾರಣ.

ಕೃಷಿಯ ಪಾರಿಸರಿಕ ನೆಲೆಯನ್ನೇ ಹಾಳು ಮಾಡುತ್ತಿರುವ ವೈಚಿತ್ರ್ಯವನ್ನು ಬರ ಪರಿಸ್ಥಿತಿಯು ಹಿಡಿದಿಡುತ್ತದೆ. ಕಾಲಕಾಲಕ್ಕೆ ಎದುರಾಗುವ ಬರ ಎದುರಿಸಲು ತಾನು ಹೊಂದಿರುವ ಸಹಜ ಶಕ್ತಿಯನ್ನು ಮಣ್ಣು ಕಳೆದುಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ.

ಹೈಬ್ರಿಡ್ ಬರ: 1987ರ ನಂತರದ ದಿನಗಳಲ್ಲಿ ವಿಜಯಪುರದ (ಅಂದಿನ ವಿಜಾಪುರದ) ಜನ ತೀವ್ರ ಬರ ಪರಿಸ್ಥಿತಿಯಿಂದ ಹೊರಬರುತ್ತಿದ್ದರು. ಆಗ ಅವರು ‘ಮುಂದಿನ ದಿನಗಳಲ್ಲಿ ಬರ ಎಂಬುದು ಹೈಬ್ರಿಡ್ ಆಗಿರಲಿದೆ’ ಎಂದು ಹೇಳುತ್ತಿದ್ದರು. ಕೃಷಿಯ ಹೈಬ್ರಿಡೀಕರಣದ ಬಗ್ಗೆ ಉಲ್ಲೇಖಿಸಿ ಈ ಮಾತು ಆಡುತ್ತಿದ್ದರು. ಇದರ ಅರ್ಥ ಹೈಬ್ರಿಡ್‌ ಬಿತ್ತನೆ ಬೀಜಗಳು ಹಾಗೂ ಅವುಗಳಿಗೆ ಅಗತ್ಯವಿರುವ ರಾಸಾಯನಿಕಗಳು ಮತ್ತು ಯಂತ್ರೋಪಕರಣಗಳಿಂದ ಬರ ಎದುರಾಗುತ್ತದೆ ಎಂಬ ಅರ್ಥದ ಮಾತುಗಳು ಅವಾಗಿದ್ದವು. ಅವರ ಲೆಕ್ಕಾಚಾರ ನಿಜವಾಗಲು ಬಹಳ ಕಾಲವೇನೂ ಬೇಕಾಗಲಿಲ್ಲ. ಇಂದು ಪರಿಸರದ ಗುಣಮಟ್ಟ ಕುಸಿಯಲು ಹೈಬ್ರಿಡ್ ಬಿತ್ತನೆ ಬೀಜಗಳು ಹಾಗೂ ರಾಸಾಯನಿಕಗಳೂ ಕಾರಣವಾಗಿವೆ.

ಜಾಗತಿಕ ತಾಪಮಾನ ಏರಿಕೆ ಹಾಗೂ ರಾಜ್ಯದಲ್ಲಿ  ಮತ್ತೆ ಮತ್ತೆ  ಹೆಚ್ಚಿನ ಪ್ರದೇಶಗಳಲ್ಲಿ ಬರ ಎದುರಾಗುವ ಸಾಧ್ಯತೆ ಕುರಿತಾದ ಚರ್ಚೆಗಳು ಪದೇಪದೇ ನಡೆಯುತ್ತಿದ್ದರೂ, ಭೂಮಿ ಹಾಗೂ ಕೃಷಿ ಸಂಪನ್ಮೂಲಗಳು ಹಾಳಾಗುತ್ತಿರುವ ಬಗ್ಗೆ ಹೆಚ್ಚಿನ ಕಳವಳ ವ್ಯಕ್ತವಾಗುತ್ತಿಲ್ಲ. ಕೃಷಿ ಇಲಾಖೆ ಕೂಡ ‘ಕೃಷಿ ಅಭಿಯಾನ’ದ ಮೂಲಕ ಉನ್ನತ ತಂತ್ರಜ್ಞಾನವನ್ನು ಪ್ರಚಾರ ಮಾಡುವ ಕೆಲಸದಲ್ಲಿ ನಿರತವಾಗಿದೆ. ಬದಲಾಗುತ್ತಿರುವ ಮಳೆಗಾಲ ಹಾಗೂ ಹವಾಮಾನಕ್ಕೆ ತಕ್ಕಂತೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ರೈತರನ್ನು ಸಜ್ಜುಗೊಳಿಸುವ ವಿಚಾರದಲ್ಲಿ ಇಲಾಖೆ ವಿಫಲವಾಗಿದೆ. ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಾಗುತ್ತಿದೆ, ಬರ ಹೆಚ್ಚಿನ ಪ್ರದೇಶಗಳಿಗೆ ವ್ಯಾಪಿಸಿಕೊಳ್ಳುತ್ತಿದೆ ಎಂಬ ವರದಿಗಳು ಇದ್ದರೂ, ಇದು ರಾಜಕೀಯ ವಲಯದಲ್ಲಿ ಆದ್ಯತಾ ವಿಷಯ ಆಗಿಲ್ಲ. ಈಚೆಗೆ ನಡೆದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವೇಳೆ ಕೂಡ ‘ಬರ’ ಎಂಬುದು ಪ್ರಮುಖ ಚರ್ಚಾ ವಿಷಯ ಆಗಿರಲಿಲ್ಲ. ಪರಿಸ್ಥಿತಿ ತೀವ್ರವಾದಾಗ ಮಾತ್ರ ಎಚ್ಚೆತ್ತುಕೊಳ್ಳುವಂತೆ ಕಾಣುವ ಕೆಲವು ರೈತ ಸಂಘಟನೆಗಳು ಸಾಲ ಮರುಪಾವತಿಗೆ ರೈತರನ್ನು ಒತ್ತಾಯಿಸಬಾರದು ಎಂಬುದಕ್ಕಷ್ಟೇ ತಮ್ಮ ಬೇಡಿಕೆ ಸೀಮಿತಗೊಳಿಸುತ್ತಿವೆ. ಸಣ್ಣ ರೈತರಲ್ಲಿ ಬಹುತೇಕರಿಗೆ ಸಾಲ ಸಿಗುವುದಿಲ್ಲ ಅಥವಾ ಅವರು ಸಾಲ ಪಡೆಯುವುದು ಖಾಸಗಿ ವ್ಯಕ್ತಿಗಳಿಂದ. ಸರ್ಕಾರ ಪ್ರಕಟಿಸುವ ಸಾಲ ಸಂಬಂಧಿ ಯೋಜನೆಗಳಿಂದ ಈ ರೈತರಿಗೆ ಪ್ರಯೋಜನ ಆಗದು ಎಂಬುದನ್ನು ಸಂಘಟನೆಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ.

2016-17ರ ಬರಗಾಲವು ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಕಂಡ ಅತ್ಯಂತ ತೀವ್ರವಾದ ಬರ ಎಂದು ಅಧಿಕೃತ ದಾಖಲೆಗಳು ಹೇಳುತ್ತಿವೆ. ಆದರೆ, ರಾಜ್ಯದಲ್ಲಿ ಬರದ ಬೇಗೆಯನ್ನು ತಗ್ಗಿಸುವ ಪ್ರಯತ್ನಗಳು ನಗಣ್ಯ. ಬರ ಪರಿಹಾರ ಸಮಿತಿಯ ಸದಸ್ಯರು ‘ಪರಿಹಾರ’ ಎಂದರೆ ಕುಡಿಯುವ ನೀರು ಪೂರೈಸುವುದು ಮಾತ್ರ ಎಂದು ಭಾವಿಸುತ್ತಾರೆ ಎಂಬುದನ್ನು ಚಾಮರಾಜನಗರ ಜಿಲ್ಲೆಯ ಬರ ಪರಿಹಾರ ಕಾರ್ಯಪಡೆಯ ಸಭೆಯ ನಡಾವಳಿಗಳು ತೋರಿಸುತ್ತವೆ. ಈ ಸದಸ್ಯರು ಮಾಡಿರುವ ಪ್ರಮುಖ ಶಿಫಾರಸುಗಳು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವುದು, ಹೆಚ್ಚೆಚ್ಚು ಕೊಳವೆಬಾವಿ ಕೊರೆಸುವುದು ಅಥವಾ ಸ್ಥಳೀಯವಲ್ಲದ ನೀರಿನ ಯೋಜನೆಗಳನ್ನು ರೂಪಿಸುವುದು ಮಾತ್ರ. ಆದರೆ, ಜಾನುವಾರುಗಳಿಗೆ ಮೇವು ಒದಗಿಸುವುದು, ಜಲ ಮೂಲಗಳನ್ನು ಸಂರಕ್ಷಿಸುವುದು, ಕೊಳವೆ ಬಾವಿಗಳನ್ನು ಕೊರೆಸುವುದರ ಮೇಲೆ ನಿಯಂತ್ರಣ ಹೇರುವುದು, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ದುರ್ಬಲರ ಆಹಾರದ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಇಂತಹ ಇತರ ಕಾರ್ಯಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ.

ಬರಕ್ಕೆ ಸಂಬಂಧಿಸಿದ ಆರ್ಥಿಕ ನೆರವು ಯೋಜನೆಗಳು ಕೂಡ ಸೂಕ್ತ ಪರಿಹಾರ ನೀಡುವಲ್ಲಿ ಯಶಸ್ಸು ಕಂಡಿಲ್ಲ. ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ (ಪಿಎಂಎಫ್‌ಬಿವೈ) ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ಡಬ್ಲ್ಯೂಬಿಸಿಐಎಸ್‌) ಅಡಿ ರಾಜ್ಯದ ಶೇ 24ರಷ್ಟು ರೈತರು ಮಾತ್ರ ವಿಮೆ ವ್ಯಾಪ್ತಿಗೆ ಬಂದಿದ್ದಾರೆ.

ಹಿಂದಿನ ವರ್ಷದಲ್ಲಿ ಅನುಭವಿಸಿದ ಕೃಷಿ ನಷ್ಟಕ್ಕೆ ಪರಿಹಾರದ ರೂಪದಲ್ಲಿ ಕೃಷಿಕರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲಾಗುತ್ತದೆ. ಅಂದರೆ, 2016ರ ಹಿಂಗಾರಿನಲ್ಲಿ  ಅನುಭವಿಸಿದ ನಷ್ಟಕ್ಕೆ ಇನ್‌ಪುಟ್‌ ಸಬ್ಸಿಡಿ ಹೆಸರಿನಲ್ಲಿ ಕೊಡುವ ಪರಿಹಾರ ಮೊತ್ತವನ್ನು 2017ರ ಮಾರ್ಚ್‌-ಏಪ್ರಿಲ್‌ನಲ್ಲಿ ನೀಡಲಾಗುತ್ತಿದೆ. ಈ ವರ್ಷ ರಾಜ್ಯ ಸರ್ಕಾರವು ಇನ್‌ಪುಟ್‌ ಸಬ್ಸಿಡಿಯನ್ನು ‘ಪರಿಹಾರ’ ಎನ್ನುವ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮೂಲಕ ನೀಡಿತು. ಚಾಮರಾಜನಗರ ಜಿಲ್ಲೆಯಲ್ಲಿ ಈ ವರ್ಷದ ಏಪ್ರಿಲ್‌ 22ರ ವೇಳೆಗೆ ₹17.64 ಕೋಟಿ ಮೊತ್ತವನ್ನು ಮೂರು ಕಂತುಗಳಲ್ಲಿ 44,304 ಜನ ಫಲಾನುಭವಿಗಳಿಗೆ ನೀಡಲಾಗಿದೆ. 2011ರ ಜನಗಣತಿ ಪ್ರಕಾರ ಚಾಮರಾಜನಗರದಲ್ಲಿ ಇರುವ ಕೃಷಿಕರ ಸಂಖ್ಯೆ 1 ಲಕ್ಷಕ್ಕಿಂತಲೂ ಹೆಚ್ಚು. ಇದರ ಅರ್ಥ, ಏಪ್ರಿಲ್‌ ವೇಳೆಗೆ ಪರಿಹಾರ ಮೊತ್ತ ಪಡೆದ ರೈತರ ಪ್ರಮಾಣ ಶೇಕಡ 42ರಷ್ಟಕ್ಕಿಂತ ತುಸು ಹೆಚ್ಚು. ‘ಭೂಮಿ’ ದತ್ತಾಂಶದ ಪ್ರಕಾರ ಜಿಲ್ಲೆಯಲ್ಲಿ 78 ಸಾವಿರ ರೈತರು ಇದ್ದಾರೆ. ಅಂದರೆ, ಈ ದತ್ತಾಂಶದ ಅನ್ವಯ ಶೇಕಡ 56ರಷ್ಟಕ್ಕಿಂತ ತುಸು ಹೆಚ್ಚಿನ ಪ್ರಮಾಣದ ರೈತರು ಮಾತ್ರ ಪರಿಹಾರ ಪಡೆದಿದ್ದಾರೆ - ಅದು ಕೂಡ ಬರಗಾಲದ ಪರಿಣಾಮ ಅನುಭವಿಸಿ ಒಂದು ವರ್ಷದ ನಂತರ.

ಪರಿಹಾರ ನೀಡುವುದು ಬಿತ್ತನೆಯಾದ ಪ್ರದೇಶದಲ್ಲಿ ಉಂಟಾದ ಬೆಳೆ ನಷ್ಟವನ್ನು ಆಧರಿಸಿ. ಅಂದರೆ, ಬಿತ್ತನೆ ಮಾಡುವುದೇ ಬೇಡ ಎಂದು ತೀರ್ಮಾನಿಸಿದವರು (ಇವರಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಹೆಚ್ಚು) ಪರಿಹಾರಕ್ಕೆ ಅರ್ಹರೇ ಅಲ್ಲ. ಆದರೆ, ಬರಗಾಲದ ಕಾರಣ ಇವರೂ ನಷ್ಟ ಅನುಭವಿಸಿರುತ್ತಾರೆ.

ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಮೂಲಕ ಕುಟುಂಬಗಳಿಗೆ ಕನಿಷ್ಠ ಉದ್ಯೋಗ ನೀಡಿ ವಲಸೆ ತಡೆಯಲು ಅವಕಾಶವಿದೆ. ಆದರೆ, ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿಲ್ಲ. 2013-14ರಲ್ಲಿ ರಾಜ್ಯದಲ್ಲಿ ವಾಡಿಕೆಯ ಮಳೆಯಾಗಿತ್ತು. ಆದರೆ ತೀವ್ರ ಬರ ಪರಿಸ್ಥಿತಿ ಎದುರಿಸಿದ 2016-17ನೇ ಸಾಲಿನಲ್ಲಿ ರಾಜ್ಯದ ಹಲವು ಬರಪೀಡಿತ ಜಿಲ್ಲೆಗಳಲ್ಲಿ ಉದ್ಯೋಗ ಕಲ್ಪಿಸಿದ ದಿನಗಳ ಸಂಖ್ಯೆ 2013-14ರಲ್ಲಿ ಕಲ್ಪಿಸಿದ ಉದ್ಯೋಗದ ದಿನಗಳ ಸಂಖ್ಯೆಗಿಂತಲೂ ಕಡಿಮೆ. ಪಂಚಾಯಿತಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲದಿರುವುದು, ಅಧಿಕಾರಶಾಹಿಯ ವ್ಯಾಪ್ತಿ ವಿಸ್ತರಿಸುತ್ತಿರುವುದು ಮತ್ತು ಊರಿನಿಂದ ಹೊರಗಡೆ ಉದ್ಯೋಗ ಕಂಡುಕೊಳ್ಳಬೇಕು ಎಂದು ಜನರಲ್ಲೇ ಮೂಡಿರುವ ಆಸೆಗಳೂ ಇದಕ್ಕೆ ಕಾರಣ. ಕೇಂದ್ರ ಸರ್ಕಾರ ಈಚೆಗೆ ಸಿದ್ಧಪಡಿಸಿರುವ ಟಿಪ್ಪಣಿಯೊಂದರ ಅನ್ವಯ, ಕರ್ನಾಟಕ ಸರ್ಕಾರವು ತನಗೆ ಮಂಜೂರಾದ ₹1,782 ಕೋಟಿಯಲ್ಲಿ ಕೇವಲ ₹500 ಕೋಟಿಯನ್ನು ಖರ್ಚು ಮಾಡಿದೆ.

*

2030ರಲ್ಲಿ ಕರ್ನಾಟಕ: ರಾಜ್ಯದ ಅರೆಶುಷ್ಕ ಪ್ರದೇಶಗಳು ಜನವಸತಿಗೆ ಯೋಗ್ಯವಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಜನ ಸಾಮೂಹಿಕವಾಗಿ ಗುಳೆ ಹೋಗುತ್ತಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಾಣುತ್ತಿದ್ದ ಜೀವವೈವಿಧ್ಯ ನಾಶವಾಗಿದೆ. ಗ್ರಾಮೀಣ ಪ್ರದೇಶಗಳಿಂದ ನೀರು ಪಡೆದು ಕೆಲವು ನಗರಗಳು ಉಳಿದುಕೊಂಡಿವೆ. ಅಣೆಕಟ್ಟುಗಳು, ಕಾಲುವೆಗಳು, ಕೊಳವೆಬಾವಿಗಳು ಮತ್ತು ಕೆರೆಗಳು ಕುಸಿಯುತ್ತಿವೆ. ರಾಜ್ಯದಲ್ಲಿ ಜನವಸತಿ ಇಲ್ಲದೆ ಬಿಕೋ ಎನ್ನುತ್ತಿರುವ ಹಳ್ಳಿಗಳು ನೂರಾರಿವೆ. ಒಂದು ಕಾಲದಲ್ಲಿ ಹಲವು ಬಗೆಯ ಧಾನ್ಯಗಳಿಗೆ ತವರು ಮನೆಯಾಗಿದ್ದ, ರಾಗಿಯಂತಹ ಪೌಷ್ಟಿಕ  ಆಹಾರಕ್ಕೆ ಹೆಸರಾಗಿದ್ದ ಪ್ರದೇಶ ಈಗ ಆಹಾರದ ತೀವ್ರ ಕೊರತೆ ಎದುರಿಸುತ್ತಿದೆ.

**

ಸಿಗದ ಜನಸ್ಪಂದನ

ತಂತ್ರಜ್ಞಾನ ಬಳಸಿ ನೀರಿನ ಹುಡುಕಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ, ಜಲಮೂಲಗಳ ಸಂರಕ್ಷಣೆ ಹಾಗೂ ನೀರಿನ ಸೂಕ್ತ ಬಳಕೆ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ. ನೀರಿನ ಬಳಕೆಗೆ ಸಂಬಂಧಿಸಿದ ನೀತಿಗಳು ಇಲ್ಲ ಎನ್ನಬಹುದು ಅಥವಾ ಇರುವ ನೀತಿಗಳನ್ನು ಶಿಕ್ಷೆಯ ಭಯವೇ ಇಲ್ಲದೆ ಉಲ್ಲಂಘಿಸಲಾಗುತ್ತಿದೆ ಎನ್ನಬಹುದು. ನಮ್ಮ ಕೃಷಿ ನೀತಿಗಳು ಹಾಗೂ ನೀರಿನ ಅಪಬಳಕೆಯು ಸೃಷ್ಟಿಸಿರುವ ಅಪಾಯಗಳು ಮಲೆನಾಡಿನಲ್ಲಿ ಕಾಣಿಸುತ್ತಿವೆ. ಈ ಪ್ರದೇಶ ವಿಶ್ವದಲ್ಲೇ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಆದರೆ, ಇಲ್ಲಿ ಕೂಡ ಕೃಷಿಕರು ಕೊಳವೆ ಬಾವಿಗಳ ಮೊರೆ ಹೋಗುತ್ತಿದ್ದಾರೆ, ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ.

ಕೊಳವೆ ಬಾವಿಗಳ ಮೇಲಿನ ಮೋಹದ ಜೊತೆಯಲ್ಲೇ, ಈಗ ದುಬಾರಿ ವೆಚ್ಚದ ಕುಡಿಯುವ ನೀರಿನ ಬೃಹತ್ ಯೋಜನೆಗಳು ರೂಪುಗೊಳ್ಳುತ್ತಿವೆ. ದೊಡ್ಡ ಕಾಲುವೆಗಳು ಹಾಗೂ ಪೈಪುಗಳ ಮೂಲಕ ಹಳ್ಳಿಗಳಿಗೆ ಕುಡಿಯುವ ನೀರು ತರುವ ಬಹುಗ್ರಾಮ ಯೋಜನೆಗಳು ಹಣಕಾಸಿನ ವೆಚ್ಚದ ದೃಷ್ಟಿಯಿಂದ ಪ್ರಯೋಜನಕಾರಿ ಅಲ್ಲ, ಅವುಗಳನ್ನು ಪೂರ್ತಿಯಾಗಿ ನೆಚ್ಚಿಕೊಳ್ಳಲು ಆಗದು ಎಂಬ ವರದಿಗಳು ಇದ್ದರೂ ರಾಜ್ಯ ಸರ್ಕಾರ ಇಂಥ ಯೋಜನೆಗಳ ಮೊರೆ ಹೋಗಿದೆ. ಇಂಥ ಯೋಜನೆಗಳು ಗುತ್ತಿಗೆದಾರರಿಗೆ ಮತ್ತು ಇಲಾಖೆಯ ಸಿಬ್ಬಂದಿಗೆ ಮಾತ್ರ ಅನುಕೂಲಕರ ಆಗಿರುತ್ತವೆ. ಇವರು ಪರಿಸರ ಹಾಗೂ ಆರ್ಥಿಕ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ, ಚಾಮರಾಜನಗರ ಜಿಲ್ಲೆಗೆ ₹ 497 ಕೋಟಿ ವೆಚ್ಚದಲ್ಲಿ ಬೃಹತ್ ಯೋಜನೆಯೊಂದನ್ನು 2014-15ರಲ್ಲಿ ರೂಪಿಸಲಾಗಿದೆ. ಇದು ಈ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಯೋಜನೆಯಿಂದ ಪರಿಸರದ ಮೇಲೆ ಆಗುವ ಪರಿಣಾಮಗಳು ಈಗಾಗಲೇ ಕಾಣಿಸಿಕೊಂಡಿವೆ. ಪೈಪ್‌ಲೈನ್‌ ಅಳವಡಿಸಲು ನೂರಾರು ಮರಗಳು ಈಗಾಗಲೇ ಧರೆಗೆ ಉರುಳಿವೆ.

ತಮ್ಮ ಎಲ್ಲ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಿಕೊಡಬೇಕು ಎಂಬ ಆಕಾಂಕ್ಷೆಗಳನ್ನು ಜನ ಈಗ ಬೆಳೆಸಿಕೊಳ್ಳುತ್ತಿದ್ದಾರೆ. ಹಳ್ಳಿಗರ ಜೊತೆ ನಡೆಸಿದ ಮಾತುಕತೆಯಲ್ಲಿ ಈ ಅಭಿಪ್ರಾಯಗಳು ವ್ಯಕ್ತವಾದವು. ಬರ ಸಂಬಂಧಿ ಸಮಸ್ಯೆಗಳನ್ನು ಸರ್ಕಾರ ನಿವಾರಿಸಲಿ ಎಂದು ಜನ ಬಯಸುತ್ತಿದ್ದಾರೆ. ಯೋಜನೆಗಳು ತಮ್ಮನ್ನು ತಲುಪುತ್ತಿಲ್ಲ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಹೇಳುತ್ತಿದ್ದಾರೆ. ಹೀಗಿದ್ದರೂ, ಬರದ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಜನರ ಕಡೆಯಿಂದ ವ್ಯಕ್ತವಾಗಿರುವ ಸ್ಪಂದನೆ ಕಡಿಮೆ. ಅಷ್ಟೇ ಅಲ್ಲ, ಜಲ ಹಾಗೂ ಮಣ್ಣಿನ ಸಂರಕ್ಷಣೆಗೆ ಸಂಬಂಧಿಸಿದ ಸರಳ ನಿಯಮಗಳನ್ನೂ ಅವರು ಉಲ್ಲಂಘಿಸುತ್ತಿದ್ದಾರೆ.

**

ಸಂಕುಚಿತ ದೃಷ್ಟಿಕೋನ
ಈಗಿನ ಪರಿಸ್ಥಿತಿಯ ತೀವ್ರತೆ ಏನು, ಬರ ಪರಿಹಾರ ಎಂದರೆ ನೀರಿನ ಕೊರತೆ ನೀಗಿಸುವುದು ಎಂದು ಮಾತ್ರ ಪರಿಗಣಿಸುವುದರಿಂದ ಆಗುವ ಸಮಸ್ಯೆಗಳೇನು ಎಂಬುದನ್ನು ಆಡಳಿತಯಂತ್ರ ಗುರುತಿಸಿರುವಂತೆ ಕಾಣುತ್ತಿಲ್ಲ. ಸೂಕ್ತವಲ್ಲದ ಕೃಷಿ ಪದ್ಧತಿಗಳು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ಕರ್ನಾಟಕದಲ್ಲಿ 500 ಮಿಲಿ ಮೀಟರ್‌ ಮಳೆಯಾಗುವ ಪ್ರದೇಶಗಳೂ ಇವೆ, 2 ಸಾವಿರ ಮಿಲಿ ಮೀಟರ್ ಮಳೆಯಾಗುವ ಪ್ರದೇಶಗಳೂ ಇವೆ ಎಂಬುದನ್ನು ಕೃಷಿ ತಜ್ಞ ಸುರೇಶ ಕಂಜರ್ಪಣೆ ಅವರು ಗುರುತಿಸಿದ್ದಾರೆ. ಆದರೂ, ನಮ್ಮ ಕೃಷಿ ನೀತಿಗಳು ಈ ವ್ಯತ್ಯಾಸವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

**

ಬರವೊಂದೇ... ಪರಿಣಾಮ ವಿಭಿನ್ನ
ಬರ ಪರಿಸ್ಥಿತಿಯು ಎಲ್ಲರ ಮೇಲೆ ಒಂದೇ ಬಗೆಯ ಪರಿಣಾಮ ಉಂಟುಮಾಡಿಲ್ಲ. ಸಂಪನ್ಮೂಲಗಳನ್ನು ಹೊಂದಿರುವವರ ಪಾಲಿಗೆ ಈ ಬರ ಪರಿಸ್ಥಿತಿಯು ತಮ್ಮ ಸ್ಥಾನವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ. ಉದ್ಯೋಗ ಲಭ್ಯತೆ ಕುಸಿದ ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ಕೃಷಿ ಕೂಲಿ ದರ ಕಡಿಮೆಯಾಗಿದೆ. ಇದರಿಂದಾಗಿ ಸಂಪನ್ಮೂಲ ಹೊಂದಿರುವವರಿಗೆ ಕೃಷಿ ಚಟುವಟಿಕೆಗಳ ಮೇಲೆ ಮಾಡಬೇಕಿರುವ ವೆಚ್ಚದ ಮೊತ್ತವೂ ಕಡಿಮೆಯಾದಂತಾಗಿದೆ. ಆದರೆ ಇಂಥ ಪರಿಸ್ಥಿತಿ ಎದುರಿಸಲು ಕೂಲಿ ಕಾರ್ಮಿಕರ ವರ್ಗವು ತನ್ನನ್ನು ತಾನು ಇನ್ನಷ್ಟು ಶೋಷಣೆಗೆ ಗುರಿಮಾಡಿಕೊಂಡಿದೆ. ಒಣಭೂಮಿ ಹೆಚ್ಚಿರುವ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು ಒಟ್ಟಾಗಿ ಕೆಲಸ ಮಾಡುವುದು, ಸಿಗುವ ಕೂಲಿಯನ್ನು ತಮ್ಮಲ್ಲಿ ಹಂಚಿಕೊಳ್ಳುವುದು ಅಪರೂಪವೇನೂ ಅಲ್ಲ. ಸಂಪನ್ಮೂಲ ಹೊಂದಿರುವವರ ನಡುವೆ ಕೃಷಿಯು ವಾಣಿಜ್ಯೀಕರಣ ಆಗುತ್ತಿರುವುದು,  ಮಾರುಕಟ್ಟೆ ಹಾಗೂ ಹಣಕಾಸು ಸಂಸ್ಥೆಗಳ ಪ್ರಭಾವಕ್ಕೆ ಹೆಚ್ಚೆಚ್ಚು ಒಳಗಾಗುತ್ತಿರುವುದು ಹಾಗೂ ಸಂಪನ್ಮೂಲ ಇಲ್ಲದವರು ಕೃಷಿಯನ್ನು ಕೈಬಿಡುತ್ತಿರುವುದರ ಪರಿಣಾಮವಾಗಿ ವಿರೋಧಾಭಾಸದ ದೃಶ್ಯಗಳನ್ನು ನಾವು ಕಾಣುತ್ತಿದ್ದೇವೆ. ಹೊಸ ತಂತ್ರಜ್ಞಾನ ಹಾಗೂ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡವರು ಸೊಂಪಾಗಿ ಬೆಳೆ ಬೆಳೆಯುತ್ತಿದ್ದಾರೆ. ಇಂಥ ಸಾಧ್ಯತೆಗಳನ್ನು ಹೊಂದದವರ ಜಮೀನು ಒಣಗಿದೆ, ಪಾಳುಬಿದ್ದಿದೆ.

**

ಕೃಷಿಯ ಹೊಸ ಅರ್ಥ
ಕೊಳವೆ ಬಾವಿ ಆಧರಿಸಿದ ಕೃಷಿ ಪದ್ಧತಿಯು ಎಷ್ಟು ಪ್ರಾಮುಖ್ಯ ಪಡೆದಿದೆ ಎಂದರೆ, ಕೃಷಿ ಚಟುವಟಿಕೆಗಳ ಅರ್ಥವೇ ಬದಲಾಗಿಬಿಟ್ಟಿದೆ. ‘ಕೊಳವೆ ಬಾವಿಗಳಿಂದ ನೀರು ಪಡೆಯುವುದು’ ಎಂಬುದಕ್ಕೆ ಸಮಾನವಾದ ಅರ್ಥವನ್ನು ಕೃಷಿ ಚಟುವಟಿಕೆಗಳು ಪಡೆದಿವೆ. ಜಮೀನಿನಲ್ಲಿ ಕೊಳವೆ ಬಾವಿ ಇದ್ದರೆ ಮಾತ್ರ ಕೃಷಿ ಕೆಲಸ ಮಾಡಬಹುದು ಎಂಬ ತೀರ್ಮಾನಕ್ಕೆ ಸಣ್ಣ ಹಿಡುವಳಿದಾರರು, ಆದಿವಾಸಿಗಳು ಬಂದಿದ್ದಾರೆ. ಒಣಭೂಮಿ ಬೇಸಾಯ ಈಗ ಆಕರ್ಷಕವಾಗಿ ಉಳಿದಿಲ್ಲ. ಪ್ರದೇಶಕ್ಕೆ ಅನುಗುಣವಾದ ಕೃಷಿ ಪದ್ಧತಿಗಳಿಗಿಂತ, ಬೇರೊಬ್ಬರನ್ನು ಅನುಕರಿಸುವ ಕೃಷಿ ಪದ್ಧತಿಗಳೇ ಹೆಚ್ಚಾಗುತ್ತಿವೆ.

ಮಳೆ ಹೆಚ್ಚು ಬೀಳದ ಪ್ರದೇಶಗಳ ರೈತರು ಕೂಡ, ಪರಿಸರದ ಮೇಲೆ ಆಗುವ ಪರಿಣಾಮ ನಿರ್ಲಕ್ಷಿಸಿ ಟೊಮ್ಯಾಟೊ ಬೆಳೆಯುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಆರ್ಥಿಕವಾಗಿ ತೊಂದರೆಗೆ ಸಿಲುಕುತ್ತಿದ್ದಾರೆ. ಕೆಲವು ಬಾರಿ ಮಾತ್ರ ಉತ್ತಮ ಬೆಲೆ ಪಡೆಯುವ ಟೊಮ್ಯಾಟೊ, ಮತ್ತೆ ಮತ್ತೆ ಬೆಲೆ ಕುಸಿತ ಅನುಭವಿಸುತ್ತಿದೆ. ಬರಗಾಲದಲ್ಲೂ ಇದನ್ನು ಬೆಳೆಯುವ ಪ್ರಮಾಣ ಬೇಡಿಕೆಗಿಂತ ಹೆಚ್ಚೇ ಇದೆ ಎನ್ನಬಹುದು. ಇದು, ಕೃಷಿ ಜಮೀನಿನ ಬಳಕೆ ನೀತಿ ಕೂಡ ಸೂಕ್ತವಾಗಿ ಇಲ್ಲದಿರುವುದನ್ನು ತೋರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT