ಸೋಮವಾರ, ಜೂನ್ 1, 2020
27 °C

ಥರಾವರಿ ದೇಸಿ ತಳಿಗಳ ಗೋಶಾಲೆ

ಪ.ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಥರಾವರಿ ದೇಸಿ ತಳಿಗಳ ಗೋಶಾಲೆ

ವೆಂಕಟರಮಣಸ್ವಾಮಿ ದೇವಾಲಯಕ್ಕೆ ಹರಕೆಯಾಗಿ ತಂದೊಪ್ಪಿಸಿದ ಬೆರಳೆಣಿಕೆ ಹಸುಗಳಿಗೆ ಒಳ್ಳೆಯ ಸೌಕರ್ಯ ಇರಲಿಲ್ಲ. ಅವುಗಳಿಗೆ ಇರಲೊಂದು ಗೋಶಾಲೆ ಬೇಕಾಗಿತ್ತು. ಕೆಲವೇ ಹಸು, ಕರುಗಳಿಗಾಗಿ ನಿರ್ಮಿಸಿದ ಅದೇ ಗೋಶಾಲೆ ಇಂದು ಬಹುದೊಡ್ಡದಾಗಿ ಬೆಳೆದಿದೆ.

ದಾನಿಗಳು ತಂದುಕೊಟ್ಟ ಹಾಗೆಯೇ ತಬ್ಬಲಿಯಾಗಿ ಬೀದಿ ಬೀದಿ ಅಲೆಯುತ್ತಿದ್ದ ನೂರಾರು ಜಾನುವಾರುಗಳಿಗೂ ಅದು ನೆಮ್ಮದಿಯ ನೆಲೆಯಾಗಿದೆ. ಅಲ್ಲಿ ಎಂಟು ದೇಸಿ ತಳಿಗಳ ನೂರಾರು ಹಸುಗಳಿವೆ, ಕರುಗಳಿವೆ, ಎತ್ತುಗಳಿವೆ. ಇವುಗಳಿಗೆ ಹಸಿರು ಮೇವು, ಬೂಸಾದಂತಹ ಉತ್ತಮ ಆಹಾರ ಒದಗಿಸಿ ಸುಖೀ ಬದುಕನ್ನು ಕಲ್ಪಿಸಿ ಮಾದರಿ ಗೋಶಾಲೆಯನ್ನು ರೂಪಿಸಿದ್ದಾರೆ ವೆಂಕಟರಮಣ ಗೋಶಾಲಾ ಟ್ರಸ್ಟ್‌ನ ಸದಸ್ಯರು.

ಈ ಗೋಶಾಲೆಯಿರುವುದು ಕಾರ್ಕಳ ಪಟ್ಟಣ ವ್ಯಾಪ್ತಿಯ ತೆಳ್ಳಾರು ರಸ್ತೆಯ ಶೇಷಾದ್ರಿನಗರದಲ್ಲಿ. ಅನಿವಾಸಿ ಭಾರತೀಯ ಲಾಲ್‌ಚಂದ್ ರತನ್‌ಚಂದ್ ಗಾಜ್ರಿಯಾ ಈ ಗೋಶಾಲೆ ನಿರ್ಮಾಣದ ಬೆನ್ನೆಲುಬು. ಸುಸಜ್ಜಿತ ವ್ಯವಸ್ಥೆಗಾಗಿ ಆಗಿರುವ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಗೋಶಾಲೆ ನಿರ್ಮಾಣಕ್ಕಾಗಿಯೇ ಅವರು ಕೋಟಿ ರೂಪಾಯಿಗಿಂತಲೂ ಅಧಿಕ ಹಣ ವಿನಿಯೋಗಿಸಿದ್ದಾರಂತೆ.

ಆರೋಗ್ಯಕರವಾದ ಗಾಳಿ, ಬೆಳಕಿನ ಅನುಕೂಲವಿರುವ ವಿಶಾಲ ಗೋಶಾಲೆಯ ಪರಿಸರ ಕೂಡ ಹಸಿರಿನಿಂದ ಆವೃತವಾಗಿದೆ. ವಿಧವಿಧದ ಹೂಗಿಡಗಳು, ಹಣ್ಣುಗಳ ಮರಗಳು ಹಸಿರ ಹಂದರ ನಿರ್ಮಿಸಿವೆ. ಗೋಶಾಲೆಗಾಗಿ ಎಂಟೂವರೆ ಎಕರೆ ಜಾಗ ಖರೀದಿ ಮಾಡಿ ಮೂರೂವರೆ ಎಕರೆಗಳಲ್ಲಿ ಕೇವಲ ಮೇವು ಬೆಳೆಸಲಾಗುತ್ತಿದೆ. ಏನಿಲ್ಲವೆಂದರೂ ನಿರ್ವಹಣೆಗೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿ ಬೇಕಾಗುತ್ತದೆ ಎನ್ನುತ್ತಾರೆ ಗೋಶಾಲೆಯ ವ್ಯವಸ್ಥಾಪಕರು.

ಟ್ರಸ್ಟ್‌ನ ಹೊಣೆ ಹೊತ್ತಿರುವ ವೆಂಕಟೇಶ ಪುರಾಣಿಕ, ಗಣಪತಿ ಹೆಗ್ಡೆ, ನರಸಿಂಹ ಪುರಾಣಿಕ ಮತ್ತು ಸುರೇಶ ಕಿಣಿ ಅವರ ಪ್ರಯತ್ನದಿಂದ ಇದೆಲ್ಲ ಸಾಧ್ಯವಾಗಿದೆ. ಹಗಲಿರುಳೂ ವ್ಯವಸ್ಥೆಯನ್ನು ನೋಡಿಕೊಳ್ಳುವ ವಿಠಲ ಭಟ್ಟರ ಶ್ರದ್ಧೆ ಗೋಶಾಲೆಯನ್ನು ಅನುಕರಣೀಯವಾಗಿ ರೂಪಿಸಿದೆ.

2012ರಲ್ಲಿ ಆರಂಭವಾದ ಗೋಶಾಲೆಯಲ್ಲಿ 114 ಹಸು, ಎತ್ತು, ಕರುಗಳಿವೆ. ಕಾಂಕ್ರೇಜ್, ಗಿರ್, ಸಾಹಿವಾಲ್, ಕಿಲಾರಿ, ಥಾರ್‌ಪಾರ್ಕರ್, ಮಲೆನಾಡು ಗಿಡ್ಡ ತಳಿಗಳಿಗೇ ಅಗ್ರಸ್ಥಾನ. ಜೆರ್ಸಿ, ಹಾಲ್‌ಸ್ಟೀನ್‌ನಂತಹ ಮಿಶ್ರ ತಳಿಗೆ ಸೇರಿದ ಹಸುಗಳೂ ಒಂದೆರಡಿವೆ. ಜೆರ್ಸಿ ಹಸು ಮತ್ತು ಕಾಂಕ್ರೇಜ್ ಎತ್ತಿನ ಮಿಲನದಿಂದ ವಿಶಿಷ್ಟ ತಳಿಯಾಗಿ ಜನಿಸಿದ ಹಸುವನ್ನೂ ವಿಠಲ ಭಟ್ಟರು ತೋರಿಸುತ್ತಾರೆ.

ನಿರ್ವಹಣೆ ಮಾಡಲು ಜನ ಸಿಗುವುದೇ ದೊಡ್ಡ ಸಮಸ್ಯೆ. ಹೀಗಾಗಿ ಹೊಸದಾಗಿ ಹಸುಗಳನ್ನು ಸ್ವೀಕರಿಸುವುದೇ ಕಷ್ಟ ಎನ್ನುತ್ತಾರೆ ಭಟ್ಟರು. ಈಗ ಕೆಲಸಕ್ಕೆ ಬಿಹಾರದ ಜನಗಳಿದ್ದಾರೆ, ಎಷ್ಟು ದಿನ ನಿಲ್ಲುತ್ತಾರೋ ಗೊತ್ತಿಲ್ಲ ಎಂಬ ಅಳಲು ಅವರದು. ಇಷ್ಟು ಹಸುಗಳಿಗೆ ಬೇಕಾದಷ್ಟು ಹಸಿರು ಮೇವು ಸನಿಹದಲ್ಲೇ ಇದೆ. ವರ್ಷದ ಎಲ್ಲ ದಿನಗಳಲ್ಲೂ ಲಭಿಸುತ್ತದೆ. ಆದರೆ ಅದನ್ನು ಕತ್ತರಿಸಿ ತರಲು ಇಬ್ಬರಿಗೆ ಇಡೀ ದಿನ ಕೆಲಸವಾಗುತ್ತದೆ.

ಗೋಶಾಲೆಯ ಸೆಗಣಿ ಬಾಚಿ, ನೀರು ಹರಿಸಿ ತೊಳೆಯಲು ನಾಲ್ವರಿಗೆ ಬಿಡುವಿಲ್ಲದ ದುಡಿಮೆ. ಆದರೂ ಶುಚಿಯಾದ ಹಸುಗಳ ಮೈ, ಕಾಲುಗಳಡಿಗೆ ಹಾಕಿದ ಮ್ಯಾಟ್ ಎಲ್ಲವೂ ಅಚ್ಚುಕಟ್ಟಿನ ಉಸ್ತುವಾರಿಗೆ ದ್ಯೋತಕ.

ಹಸುಗಳಿಗೆ ಇಲ್ಲಿ ರಾಜೋಪಚಾರವೇ ಇದೆ. ಹಸಿರುಮೇವನ್ನು ಸಣ್ಣದಾಗಿ ಕತ್ತರಿಸಿ ಹಾಕುತ್ತಾರೆ. ಜೋಳದ ಗಿಡಗಳನ್ನು ಬೆಳೆಸಿ ತಿನ್ನಲು ಕೊಡುತ್ತಾರೆ. ಒಣಮೇವೂ ಇದೆ. ಜೋಳ, ಹೆಸರು, ಎಣ್ಣೆ ತೆಗೆದ ತೌಡು, ಉಪ್ಪು, ಬೆಲ್ಲ, ಶೇಂಗಾ ಹಿಂಡಿ, ಎಳ್ಳಿಂಡಿ, ಅಡುಗೆ ಸೋಡಾ, ಮಿನರಲ್ ಮಿಶ್ರಣ ಇದೆಲ್ಲದರಿಂದ ಇಲ್ಲಿಯೇ ಪಶುಆಹಾರ ಸಿದ್ಧಗೊಳಿಸಿ ಸೂಕ್ತ ಪ್ರಮಾಣದಲ್ಲಿ ಬಡಿಸುತ್ತಾರೆ. ಪಶುವೈದ್ಯರು ಆಗಾಗ ಬಂದು ಹಸುಗಳ ತಪಾಸಣೆ ಮಾಡುತ್ತಾರೆ.

ಸಾಮಾನ್ಯವಾಗಿ ಕೆಚ್ಚಲು ಬಾವು ಹೊರತು ಬೇರೆ ಯಾವ ಸಮಸ್ಯೆಯೂ ಬಾಧಿಸುವುದಿಲ್ಲ. ಕಾಲು, ಬಾಯಿಜ್ವರಕ್ಕೆ ಮೊದಲೇ ಲಸಿಕೆ ಹಾಕುತ್ತಾರೆ. ಆಯುರ್ವೇದ ಹಾಗೂ ಹೋಮಿಯೋಪಥಿ ಹೊರತು ಅಲೋಪಥಿ ಔಷಧ ಬಳಕೆ ಇಲ್ಲಿ ವರ್ಜ್ಯ.

ದಿನವೊಂದಕ್ಕೆ ಇನ್ನೂರು ಲೀಟರ್ ಹಾಲು ಮಾರಾಟಕ್ಕೆ ಸಿಗುತ್ತದೆ. ದೇಸಿ ತಳಿಯ ಹಾಲನ್ನು ಹುಡುಕಿಕೊಂಡು ಗ್ರಾಹಕರು ಅಲ್ಲಿಗೇ ಬರುತ್ತಾರೆ. ರೈತರಿಗೆ ಬೇಕಾದ ಹಸಿ  ಸೆಗಣಿಯೂ ದೊರೆಯುತ್ತದೆ. ಗೋಬರ್ ಅನಿಲ ಸ್ಥಾವರವಿದ್ದು ಮೇವು ಬೆಳೆಯಲು ಅದರ ಬಗ್ಗಡ ನೆರವಾಗುತ್ತದೆ. ಸೆಗಣಿ, ಗಂಜಲಗಳಿಂದ ಸಸ್ಯ ಕೃಷಿಗೆ ಬೇಕಾದ ಜೀವಾಮೃತ ತಯಾರಿಸುತ್ತಾರೆ. ಅದರ ಚರಟದೊಂದಿಗೆ ಬೆಲ್ಲ ಬೆರೆಸಿ ಮುದ್ದೆ ಮಾಡಿ ಒಣಗಿಸಿದ ಘನ ಜೀವಾಮೃತ ಎಂಬ ಉಂಡೆಗಳು ಇಲ್ಲಿ ಸಿಗುತ್ತವೆ. ಹೂಗಿಡಗಳಿಗೆ ಇದು ಶ್ರೇಷ್ಠ ಗೊಬ್ಬರವೆಂದು ಗೊತ್ತಿರುವವರು ಇಲ್ಲಿಂದ ಕೊಂಡುಹೋಗುತ್ತಾರೆ.

ಗೋಮೂತ್ರ ಮತ್ತು ಬೇವಿನೆಲೆಗಳ ಮಿಶ್ರಣದಿಂದ ಸಿದ್ಧವಾಗುವ ಕೀಟನಾಶಕವೂ ದೊರೆಯುತ್ತಿದ್ದು ಗೆದ್ದಲು ಸೇರಿದಂತೆ ಹಲವು ಕೀಟಗಳನ್ನು ನಾಶ ಮಾಡಲು ಉಪಯುಕ್ತ. ಒಂದು ಲೀಟರ್ ಮಿಶ್ರಣವನ್ನು ನೂರು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಕೀಟನಾಶ ಸಲೀಸು ಎನ್ನುತ್ತಾರೆ ವಿಠಲ ಭಟ್ಟರು.

ಗವ್ಯ ಉತ್ಪನ್ನಗಳ ಮಾರಾಟದಿಂದ ತಿಂಗಳಿಗೆ ಮೂರೂವರೆ ಲಕ್ಷ ಆದಾಯವಿದ್ದರೂ ಗೋಶಾಲೆಯ ಖರ್ಚು ನಿಭಾಯಿಸಲು ಸಾಲುವುದಿಲ್ಲ. ಇದಕ್ಕಾಗಿ ಸಂದರ್ಶಕರನ್ನು ಆಕರ್ಷಿಸಲು ಸುತ್ತಲೂ ವನೌಷಧಿ ಗಿಡಗಳ ಉದ್ಯಾನ, ಮಕ್ಕಳ ಆಟದ ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ. ರಜಾ ದಿನಗಳಲ್ಲಿ ಅಪರಿಮಿತ ಜನ ಬರುತ್ತಾರೆ. ಬಂದವರು ಇಚ್ಛಿಸಿದರೆ ಅಲ್ಲಿರುವ ಹುಂಡಿಗೆ ಹಣ ಹಾಕಿ ಗೋ ಸಂರಕ್ಷಣೆಯಲ್ಲಿ ಭಾಗಿಯಾಗಬಹುದು. ಗೋಪೂಜೆಗೆ ಕೊಡುಗೆ ನೀಡಬಹುದು.

2013–14ರ ಸಾಲಿನಲ್ಲಿ ಕರ್ನಾಟಕ ಸರಕಾರದ ಗೋತಳಿ ಸಂರಕ್ಷಣೆಯ ಯೋಜನೆಯ ಮೂಲಕ ಈ ಗೋಶಾಲೆಗೆ ಹತ್ತು ಲಕ್ಷ ರೂಪಾಯಿ ಅನುದಾನ ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆಗಾಗಿ ಲಭಿಸಿದೆ. ಬೇಕಾದವರಿಗೆ ದೇಸಿ ತಳಿಯ ಹೆಣ್ಣು ಕರುಗಳು ಮತ್ತು ಕೃಷಿ ಬಳಕೆಗಾಗಿ ಗಂಡುಕರುಗಳನ್ನು ಒದಗಿಸಲಾಗುತ್ತದೆ.

ಗೋಶಾಲೆಯ ಹೊರಭಾಗದಲ್ಲಿ ಗಮನ ಸೆಳೆಯುವ ಹಲವು ಘೋಷವಾಕ್ಯಗಳಿವೆ. ‘ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೊಡುವ ಹಣದಲ್ಲಿ ಒಂದು ಭಾಗವನ್ನಾದರೂ ಗೋರಕ್ಷಣೆಗೆ ಕೊಡಿ’ ಎಂಬ ವಾಕ್ಯ ಇಲ್ಲಿಗೆ ಬರುವವರ ಗಮನ ಸೆಳೆಯುತ್ತದೆ. ಸಂಪರ್ಕಕ್ಕೆ: 9964023293.
ಚಿತ್ರಗಳು: ಲೇಖಕರವು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು