ಶನಿವಾರ, ಡಿಸೆಂಬರ್ 7, 2019
24 °C
ಜನಪದ ಹಾಡಿಗೆ ಮರುಜೀವದ ಯತ್ನ

ಗ್ರಾಮೀಣ ಪ್ರತಿಭಾ ಕಾರಂಜಿಯಿಂದ ಅಂತರರಾಷ್ಟ್ರೀಯ ಮಟ್ಟಕ್ಕೇರಿದ ಗಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣ ಪ್ರತಿಭಾ ಕಾರಂಜಿಯಿಂದ ಅಂತರರಾಷ್ಟ್ರೀಯ ಮಟ್ಟಕ್ಕೇರಿದ ಗಾಯಕ

ದೇವನಹಳ್ಳಿ: ಡೋಲು, ಕೀಬೋರ್ಡ್, ಸುಗಮ ಸಂಗೀತ, ರಂಗಗೀತೆ ಗಾಯನವೆಂಬುದು  ಅಷ್ಟು ಸುಲಭವಲ್ಲ. ಪರಿಶ್ರಮ, ಶ್ರದ್ಧೆಯಿಂದ ಕೆಲವು ಪ್ರತಿಭೆ ಹೊರಬರುತ್ತವೆ. ಮತ್ತೆ ಕೆಲವು ವಂಶಪಾರಂಪರ್ಯವಾಗಿ ಬಂದರೂ ನಿರಂತರ ಕಠಿಣ ಆಸಕ್ತಿ ಬೇಕು. ಇಂಥ ವಿಶಿಷ್ಟರ ಸಾಲಿನಲ್ಲಿ ಯುವಗಾಯಕ ಪ್ರತಿಭೆ ಅರುಣ್ ಕುಮಾರ್ ನಿಲ್ಲುತ್ತಾರೆ.

ತಾಲ್ಲೂಕಿನ ವೆಂಕಟಗಿರಿ ಕೋಟೆ ಗ್ರಾಮದ ಬಯಲು ಯಕ್ಷಗಾನ ಕಲಾವಿದ ಗಾರೆ ಮುನಿವೆಂಕಟಪ್ಪರ ಮಗ, ಚಿಕ್ಕ ಮುನಿಯಪ್ಪ ಮತ್ತು ನಾಗರತ್ನಮ್ಮರ ಮೂರನೇ ಮಗ ವೆ.ಚಿ.ಅರುಣ್ ಕುಮಾರ್. ಸ್ವಗ್ರಾಮದಲ್ಲಿ ಪ್ರಾಥಮಿಕ ಶಾಲೆ ವಿದ್ಯಾಭ್ಯಾಸದ ನಂತರ ಕಿತ್ತು ತಿನ್ನುತ್ತಿರುವ ಬಡತನವಿತ್ತು. ಪೋಷಕರು ತುಮಕೂರು ಸಿದ್ಧಗಂಗಾ ಅಶ್ರಮಕ್ಕೆ ವಿದ್ಯಾಭ್ಯಾಸಕ್ಕೆ ಕರೆತಂದರು.

ಅಲ್ಲಿ ಅರುಣ್‌ ಆಗಾಗ ಜನಪದ ಮತ್ತು ಸಿನಿಮಾ ಹಾಡು ಹಾಡುತ್ತಿದ್ದರು. ಅರಳುವ ಪ್ರತಿಭೆಯನ್ನು ಗಮನಿಸಿದ ಸಂಸ್ಕೃತ ಶಿಕ್ಷಕ ಈಶಪ್ಪ ಮಾಯಕಾರ್, ಸಂಗೀತಾ ಶಿಕ್ಷಕ ಎಲ್.ಶಿವಕುಮಾರ್ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲು  ಅವಕಾಶ ಮಾಡಿಕೊಟ್ಟರು. ಆ ಬಳಿಕ ಅವರು ಈವರೆವಿಗೂ ಸ್ವರ್ಧಾತ್ಮಕ ಸಂಗೀತ ಗಾಯನ ಸ್ವರ್ಧೆಯಲ್ಲಿ ಪ್ರಶಸ್ತಿ ಇಲ್ಲದೆ ಹಿಂದಿರುಗಿಲ್ಲ ಎಂಬುದನ್ನು ಅವರ ಬಳಿ ಇರುವ ಪ್ರಶಸ್ತಿ ಮತ್ತು ಪದಕಗಳು ಪುಷ್ಟೀಕರಿಸುತ್ತವೆ.

(ಗಾಯನ ನಿರತ ಅರುಣ್ ಕುಮಾರ್)

ಹತ್ತಾರು ಪ್ರಶಸ್ತಿಗಳನ್ನು ಪಡೆದ ನಂತರ ಶ್ರೀ ಶಿವಕುಮಾರ ಸ್ವಾಮಿ  ಕರೆಸಿ ಪ್ರಶಸ್ತಿ ಪತ್ರ ನೋಡಿ ‘ನಿನಗೆ ಉತ್ತಮ ಭವಿಷ್ಯವಿದೆ ಚೆನ್ನಾಗಿ  ಹಾಡು’ ಎಂದು ಹರಸಿದರು. ಅದು ಮರೆಯಲಾಗದ ಪ್ರೇರಣೆ ಎಂದು ಈ ಯುವ ಪ್ರತಿಭೆ ಸ್ಮರಿಸಿಕೊಳ್ಳತ್ತಾರೆ.

ವಾದ್ಯ ಪರಿಕರ ವಾದನಗಿಂತ ಗಾಯನದಲ್ಲೇ ತನ್ಮಯತೆ ಮೆರೆಯುವ ಇವರು  ಸುಗಮ ಸಂಗೀತ, ಎಲ್ಲಾ ಮಾದರಿಯ ಜನಪದ ಗೀತೆ, ಪೌರಾಣಿಕ ಕತೆಗಳ ರಂಗ ಗೀತೆ, ರಾಷ್ಟ್ರ ಭಕ್ತಿಗೀತೆ, ಸಂಸ್ಕೃತ ಕಂಠಪಾಠ ಸೇರಿದಂತೆ ಅನೇಕ ಸ್ವರ್ಧೆಗಳಲ್ಲಿ ಪ್ರಶಸ್ತಿ ಪಡೆದವರು. ದಸರಾ ಹಬ್ಬ  ರಾಷ್ಟ್ರನಾಯಕರ ಜಯಂತಿ, ಗಣೇಶ ಉತ್ಸವ, ಜಾತ್ರೆ ಶುಭ ಸಮಾರಂಭಗಳಲ್ಲಿ ಅವರ ಗಾಯನ  ಜನರನ್ನು ಸೆಳೆಯುತ್ತಿದೆ.

ತುಮಕೂರು ಜಿಲ್ಲಾ ಯುವ ಸಬಲೀಕರಣ ಇಲಾಖೆ ಅವರಿಗೆ ಹೆಚ್ಚು ಪ್ರೋತ್ಸಾಹ ನೀಡಿದೆ. ಕಳೆದ ವರ್ಷ ಬಿ.ಎಸ್ಸಿ ಪದವಿ ಕಲಿಕೆ ಮುಗಿದಿದೆ. ಅವರು ಈಗ ಬೆಂಗಳೂರಿಗೆ ಬಂದು ಗಾಯನದಲ್ಲಿ ಹೆಚ್ಚು ಸ್ರಕ್ರಿಯನಾಗುವ ನಿಟ್ಟಿನಲ್ಲಿ ಹಲವಾರು ತಂಡಗಳಲ್ಲಿ ಗಾಯಕರಾಗಿ ವೇದಿಕೆ ಏರುತ್ತಿದ್ದಾರೆ.

ಬೆಂಗಳೂರಿನ ಭೂಮಿತಾಯಿ ಕಲಾ ಬಳಗ ಮತ್ತು ಇಂಡಿಯನ್ ಫೋಕ್ ಬ್ಯಾಂಡ್ ಬಳಗಕ್ಕೆ ಕಾಯಂ ಗಾಯಕರಾಗಿದ್ದಾರೆ. ಯಾವುದೇ ಸಂಗೀತ ಅಭ್ಯಾಸವಿಲ್ಲದೆ ವಿವಿಧ ಗಾಯನ ಪ್ರಕಾರದಲ್ಲಿ ಒಟ್ಟು 87 ಪ್ರಶಸ್ತಿ ಬಾಚಿ ಕೊಂಡಿದ್ದಾರೆ. ‘ಸತತ ಪರಿಶ್ರಮ ಕಠಿಣ ಅಭ್ಯಾಸ ಇದಕ್ಕೆ ಮುಖ್ಯ ಕಾರಣ ಎಂದು ಅವರೇ ಹೇಳುತ್ತಾರೆ.

2008 ಜೂನ್ 14ರಂದು ರಾಷ್ಟ್ರ ಮಟ್ಟದಲ್ಲಿ ಗಾಯನದಲ್ಲಿ ಆಯ್ಕೆಗೊಂಡ ಐದು ಮಂದಿ ಗಾಯಕರಲ್ಲಿ ರಾಜ್ಯದಿಂದ ಜಪಾನ್‌ಗೆ ತೆರಳಿದ ಏಕೈಕ ಗಾಯಕ ಎಂಬ ಹೆಗ್ಗಳಿಕೆ ಇವರದು.

‘ಅಭ್ಯಾಸವಿಲ್ಲದೆ ತೋಚಿದ್ದು ಹಾಡುತ್ತಿದ್ದೆ. ನಡೆದಾಡುವ ದೇವರ ಆಶೀರ್ವಾದ, ಶಿಕ್ಷಕರ ಮತ್ತು ಅನೇಕ ಕಲಾ ಗಾಯಕರ  ಅನುಭವಿಗಳ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನನಗೆ ವರದಾನವಾಗಿದೆ.  ಮರೆಯಾಗುತ್ತಿರುವ  ಮೂಲ ಜನಪದ ಹಾಡುಗಳನ್ನು ಮತ್ತೆ ನೆನಪಿಸುವಂತೆ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

‘ವಾದ್ಯ ವಾದಕರು ನನಗೆ ಸಲಹೆ ನೀಡಿದ್ದಾರೆ. ಜೀವನ ನಿರ್ವಹಣೆಗೆ ಗಾಯನ ವೃತ್ತಿಯನ್ನೇ ಅವಲಂಬಿಸಿದ್ದೇನೆ’ ಎಂದು ಬಡತನದ ನೋವಿನ ನಡುವೆ ಸಂತಸ ವ್ಯಕ್ತಪಡಿಸುತ್ತಾರೆ ವೆ.ಚಿ. ಆರುಣ್ ಕುಮಾರ್ (ಅವರ ಮೊಬೈಲ್ ಸಂಖ್ಯೆ  86606 44539)

**

ಹತ್ತಾರು ಪ್ರಶಸ್ತಿ

ಯುವಜನ ಮೇಳ ಮತ್ತು ಕ್ರೀಡೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸ್ವರ್ಧೆ, ರೇಡಿಯೋ 90.8. ಎಫ್ ಎಂ ಗೀತ ವೈಭವ, ದಸರಾ ವೈಭವ, ಸ್ವರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ 16 ಪ್ರಶಸ್ತಿ ಅರುಣ್‌ಗೆ ಲಭಿಸಿವೆ. ವಿಭಾಗ ಮಟ್ಟದಲ್ಲಿ 23, ಜಿಲ್ಲಾ ಮಟ್ಟದಲ್ಲಿ 48 ಹೀಗೆ ಒಟ್ಟು 87 ಪ್ರಶಸ್ತಿಯ ಸರದಾರ ಅವರು.

ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಲೆಕ್ಕ ಹಾಕಿದರೆ 160 ಕ್ಕೆ ಹೆಚ್ಚು ಪ್ರಶಸ್ತಿ ಸಂದಿದೆ.

**

ಕೂಲಿ ಮಾಡುವ ತಂದೆ ತಾಯಿಗೆ ಸಂಗೀತದ ಅರಿವಿಲ್ಲ. ಸಂಗೀತ ಗಾಯಕ ದಿಗ್ಗಜರಂತೆ ಗುರುತಿಸಿಕೊಳ್ಳಬೇಕೆಂಬ ಆಸೆ ಇದೆ

-ಅರುಣ್ ಕುಮಾರ್, ಯುವ ಗಾಯಕ

*

-ವಡ್ಡನಹಳ್ಳಿ ಬೋಜ್ಯಾನಾಯ್ಕ

ಪ್ರತಿಕ್ರಿಯಿಸಿ (+)