ಶನಿವಾರ, ಡಿಸೆಂಬರ್ 7, 2019
16 °C

ತಾಯ್ತನಕ್ಕೆ ಬಣ್ಣ ತುಂಬಿ...

Published:
Updated:
ತಾಯ್ತನಕ್ಕೆ ಬಣ್ಣ ತುಂಬಿ...

* ಬೆಲ್ಲಿ ಪೇಂಟಿಂಗ್ ಮಾಡಿಸಿಕೊಂಡು ಟ್ರೆಂಡ್‌ ಸೃಷ್ಟಿ ಮಾಡಿದ್ದಿರಿ...

ಮೊದಲಿನಿಂದಲೂ ನನಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಿಕೊಂಡು ಬಂದಿದ್ದೇನೆ. ಜನ ಏನಾದರೂ ಅಂದಾರು ಎಂದು ತಲೆಕೆಡಿಸಿಕೊಳ್ಳಬಾರದು.  ನಾನಂತೂ ಅಮ್ಮನಾಗುತ್ತಿರುವ ಈ ಗಳಿಗೆಯನ್ನು ತುಂಬಾ ಸಂಭ್ರಮಿಸುತ್ತಿದ್ದೇನೆ.

ಇದೊಂದು ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ಮುಚ್ಚುಮರೆ ಏನು? ಮಾನಸಿಕವಾಗಿ ನಾವು ಸಿದ್ಧರಿರಬೇಕು. ಯಾರೇನೇ ಅಂದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಆತ್ಮವಿಶ್ವಾಸ ನಮಗಿರಬೇಕು.

* ಬೆಲ್ಲಿ ಪೇಂಟಿಂಗ್ ಉದ್ದೇಶ..

ಒಬ್ಬ ಕಲಾವಿದೆಯಾಗಿ, ಬಸಿರಿನ ಬಗ್ಗೆ ಅರಿವು ಮೂಡಿಸುವುದು ನನ್ನ ಜವಾಬ್ದಾರಿ. ಹೊಟ್ಟೆ ತೋರಿಸಿದರೆ ದೃಷ್ಟಿಯಾಗುತ್ತದೆ ಎನ್ನುವುದು, ಕೆಲ ಮಡಿವಂತಿಕೆಯ ಪೂರ್ವಾಗ್ರಹ ಇದೆ. ಇದರ ವಿರುದ್ಧ ಜಾಗೃತಿ ಮೂಡಿಸುವುದು ನನ್ನ ಉದ್ದೇಶ.

ಗರ್ಭಿಣಿಯಾದ ಮೇಲೆ ಹೇಗೆ ಕಾಣಿಸುತ್ತೀನಿ, ದಪ್ಪಾ ಆಗಿದ್ದೀನಾ ಎಂಬ ಅಳುಕು ಇದ್ದೇ ಇರುತ್ತದೆ. ನಮ್ಮ ದೇಹದ ಆಕಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮಗುವಾದ ಮೇಲೆ ದೇಹ ದಂಡಿಸಿ ಬೇಕಾದ ಆಕಾರಕ್ಕೆ ಬರಬಹುದು.

* ಬಣ್ಣ ಹಚ್ಚಿಸಿಕೊಂಡ ಅನುಭವ..

ಯಾವ ಚಿತ್ರ ಹಾಕಿಸಿಕೊಳ್ಳಬೇಕು ಎಂಬ ಬಗ್ಗೆ ನನಗೆ ಹತ್ತಾರು ಚಿತ್ತಾರಗಳ ಯೋಚನೆ ಇದ್ದರೂ, ಯಾವ ಚಿತ್ರ ಹಾಕಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರ ಆಯ್ಕೆಗೆ ಬಿಟ್ಟೆ. ಅವರು ಪುಟ್ಟ ಬುದ್ಧನಂತೆ ಕಾಣುವ ಏಂಜೆಲ್ ಮಗುವಿನ ಚಿತ್ರವನ್ನು ಬರೆದರು. ಹೊಟ್ಟೆ ಮೇಲೆ ಬಣ್ಣ ಹಚ್ಚಿಸಿಕೊಳ್ಳಲು ಒಟ್ಟಾರೆ ಐದಾರು ಗಂಟೆ ಹಿಡಿಯಿತು. ಸ್ಕಿನ್ ಫ್ರೆಂಡ್ಲಿ ಬಣ್ಣ ಬಳಸಿದ್ದಾರೆ. ಆರು ಗಂಟೆ ಒಂದೇ ಸ್ಥಳದಲ್ಲಿ ಕೂರುವುದಕ್ಕೆ ಸಾಕಾಗಿಹೋಯ್ತು. ಆದರೆ ಬಣ್ಣ ಹಚ್ಚಿಸಿಕೊಂಡ ಮೇಲೆ ಖುಷಿ ಆಯ್ತು.

* ಮುಂದಿನ ನಿಮ್ಮ ಸಿನಿ ಪಯಣ..

ಹೆಣ್ಣುಮಕ್ಕಳು ಮದುವೆಯಾದ ಮೇಲೆ ತಮ್ಮ ವೈಯಕ್ತಿಕ ಆಸಕ್ತಿ, ಉದ್ಯೋಗದ ಬಗ್ಗೆ ಯೋಚನೆ ಮಾಡುವುದಿಲ್ಲ. ಅದರಲ್ಲೂ ದೃಶ್ಯ ಮಾಧ್ಯಮ ಸಾಧ್ಯನೇ ಇಲ್ಲ ಎಂದುಕೊಳ್ಳುತ್ತಾರೆ. ಆದರೆ ನಾನು ಮದುವೆಯಾದ ಮೇಲೇ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು. ಈಗ ತಾಯಿಯಾಗುತ್ತಿದ್ದೇನೆ.  ಅಮ್ಮನಾದರೆ ಮುಂದೆ ಪೋಷಕನಟಿ ಪಾತ್ರ ಸಿಗುತ್ತದೆ ಎಂಬ ಅಂಜಿಕೆಯೂ ನನಗೆ ಇಲ್ಲ. ಶ್ರದ್ಧಾಭಕ್ತಿಯಿಂದ ಕೆಲಸ ಮಾಡಿದರೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ.

* ನಿಮ್ಮ ನಡೆಗೆ ನಿಮ್ಮ ಕುಟುಂಬದವರ ಪ್ರತಿಕ್ರಿಯೆ...

ನಮ್ಮ ಮನೆಯಲ್ಲೂ ಪ್ರೋತ್ಸಾಹ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಪತಿ ಅಮಿತ್ ಶ್ರೀವಾತ್ಸವ ಅವರಿಗೆ ನಾನು ಕೃತಜ್ಞತೆ ಹೇಳಬೇಕು. ನನ್ನ ನಂ1. ಅಭಿಮಾನಿ ಅಮಿತ್. ನನ್ನನ್ನು ಕಂಡರೆ ತುಂಬಾ ಇಷ್ಟಪಡುತ್ತಾರೆ. ಈ ವಿಚಾರದಲ್ಲಿ ನಾನು ಅದೃಷ್ಟವಂತೆ. ನನ್ನೆಲ್ಲಾ ಆಸೆಗಳಿಗೆ ಪ್ರೋತ್ಸಾಹ ನೀಡುತ್ತಾರೆ.

ತಾಯ್ತನವನ್ನು ಮುಚ್ಚಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ಹೊರಗೆ ಬಾ ಇದರ ಬಗ್ಗೆ ಮಾತನಾಡು, ತಾಯ್ತನ ಸಂಭ್ರಮಿಸು ಎನ್ನುತ್ತಾರೆ ಅವರು. ಬೆಲ್ಲಿ ಪೇಂಟಿಂಗ್ ಮಾಡಿಸಿಕೊಳ್ಳುವ ಬಗ್ಗೆ ಮೊದಲು ಯೋಚಿಸಿದ್ದೇ ಅಮಿತ್. ಇಂಥ ಸಂಗಾತಿ ಜೊತೆಗಿದ್ದರೆ ಏನಾದರೂ ಸಾಧಿಸಬಹುದು ಅಲ್ವಾ. ನನ್ನ ಆತ್ಮವಿಶ್ವಾಸದ ಜೊತೆ ಪತಿ ಕೂಡ ಬೆಂಬಲವಾಗಿರುವುದು ಮುಖ್ಯ.

***

ನಾನು ರಸ್ತೆಗಳ ಮೇಲೆ, ಕ್ಯಾನ್ವಾಸ್‌ ಮೇಲೆ ಬಣ್ಣ ಹಚ್ಚಿದ್ದೇನೆ. ಬೆಲ್ಲಿ ಪೇಂಟಿಂಗ್ ಮಾಡಿದ್ದು ಇದೇ ಮೊದಲು. ಶ್ವೇತಾ ಅವರಂತೆ ನನಗೂ ಇದು ಹೊಸ ಅನುಭವ. ಬಣ್ಣ ಹಚ್ಚುವುದೆಂದರೆ ಅದೊಂದು ಅಧ್ಯಾತ್ಮ ಅನುಭೂತಿ. ಶ್ವೇತಾ ದಿಟ್ಟ ಮಹಿಳೆ. ಬಣ್ಣ ಹಚ್ಚುವಾಗ ಎಷ್ಟೊತ್ತಾದರೂ ಪರವಾಗಿಲ್ಲ ಅಂತ ಗಟ್ಟಿಯಾಗಿ ಕೂತಿದ್ದರು. ಅವರ ಹೊಟ್ಟೆಯ ಮೇಲೆ ಬಣ್ಣ ಹಚ್ಚಿದ್ದು ಖುಷಿಯ ಸಂಗತಿ

–ಬಾದಲ್ ನಂಜುಂಡಸ್ವಾಮಿ,

ಕಲಾವಿದ

**

ಶ್ವೇತಾ ತುಂಬಾ ಕ್ರಿಯೇಟಿವ್. ಏನಾದರೂ ಸಾಧಿಸುತ್ತೇನೆ ಎಂಬ ಶಕ್ತಿ, ಶ್ರದ್ಧೆ ಅವಳಿಗಿದೆ. ಪ್ರಚಾರಕ್ಕಾಗಿ ಇದನ್ನು ಮಾಡುತ್ತಿಲ್ಲ. ಅಪ್ಪ–ಅಮ್ಮನಾಗುವ ಪ್ರಕ್ರಿಯೆಯನ್ನು ನಾವು ಸಂಭ್ರಮಿಸುತ್ತಿದ್ದೇವೆ. ಇದೊಂದು ಅದ್ಭುತ ನೆನಪು. ಹಲವು ವರ್ಷಗಳಾದ ಮೇಲೆ ಈ ಫೋಟೊಗಳನ್ನು ನೋಡುವುದಕ್ಕೆ ಎಷ್ಟು ಖುಷಿಯಾಗುತ್ತದೆ. ಮುಂದೆ ನನ್ನ ಮಗಳಿಗೂ ಇದನ್ನು ತೋರಿಸಿದರೆ ಇನ್ನೂ ಖುಷಿ

–ಅಮಿತ್ ಶ್ರೀವಾತ್ಸವ,

ನಟಿ ಶ್ವೇತಾ ಅವರ ಪತಿ

ಪ್ರತಿಕ್ರಿಯಿಸಿ (+)