ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಹೂದಿ ನಾಡಲ್ಲಿ ಪ್ರಧಾನಿ

Last Updated 4 ಜುಲೈ 2017, 19:37 IST
ಅಕ್ಷರ ಗಾತ್ರ

ಟೆಲ್‌ ಅವಿವ್‌ : ಭಾರತ ಸ್ವಾತಂತ್ರ್ಯ ಗಳಿಸಿ 70 ವರ್ಷದ ನಂತರ ಇಸ್ರೇಲ್‌ಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ  ಹೆಗ್ಗಳಿಕೆಯೊಂದಿಗೆ ಮಂಗಳವಾರ  ಇಲ್ಲಿಗೆ ಬಂದಿಳಿದ ನರೇಂದ್ರ ಮೋದಿ ಅವರಿಗೆ ಯೆಹೂದಿ ರಾಷ್ಟ್ರ ಭವ್ಯ ಸ್ವಾಗತ ನೀಡಿದೆ.

ಎಲ್ಲ ಶಿಷ್ಟಾಚಾರಗಳನ್ನು ಬದಿಗಿರಿಸಿ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಖುದ್ದಾಗಿ ಮೋದಿ  ಅವರನ್ನು ಸ್ವಾಗತಿಸಲು ಬೆನ್‌ ಗುರಿಯನ್‌ ವಿಮಾನ ನಿಲ್ದಾಣದಲ್ಲಿ ಕಾದಿದ್ದರು. ಅವರ ಸಂಪುಟದ ಎಲ್ಲ ಸದಸ್ಯರು ಹಾಗೂ ವಿವಿಧ ಧರ್ಮಗಳ ಪ್ರತಿನಿಧಿಗಳು ಅಲ್ಲಿ ಹಾಜರಿದ್ದರು. 

ಅಮೆರಿಕ ಅಧ್ಯಕ್ಷ  ಮತ್ತು ಕ್ರೈಸ್ತರ ಪರಮೋಚ್ಚ ಗುರು ಪೋಪ್‌ ಅವರನ್ನು  ಮಾತ್ರ ಇಸ್ರೇಲ್‌ ಪ್ರಧಾನಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುವ ಪರಿಪಾಠವಿದೆ.   ಮೊದಲ ಬಾರಿಗೆ ನೆತನ್ಯಾಹು ಅವರು ಆ ಸಂಪ್ರದಾಯ ಮುರಿದು ಅಚ್ಚರಿ ಮೂಡಿಸಿದರು. ಸಾಂಪ್ರದಾಯಿಕ ಮಿತ್ರರಾಷ್ಟ್ರ  ಪ್ಯಾಲೆಸ್ಟೀನ್‌ ಬದಲು  ಇಸ್ರೇಲ್‌ಗೆ ತೆರಳುವ ಮೂಲಕ ಮೋದಿ  ಭಾರತ–ಇಸ್ರೇಲ್‌ ನಡುವಣ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ. 

ಮೋದಿ ಅವರನ್ನು ತಬ್ಬಿ ಸ್ವಾಗತಿಸಿದ  ನೆತನ್ಯಾಹು ಅವರು ‘ಆಪ್ ಕಾ ಸ್ವಾಗತ್‌ ಹೈ ಮೇರೆ ದೋಸ್ತ್‌’ (ಸ್ವಾಗತ ಮಿತ್ರ) ಎಂದು ಹಿಂದಿಯಲ್ಲಿ ಹೇಳಿ ಬೆರಗು ಮೂಡಿಸಿದರು. ‘ನಾವು ಭಾರತವನ್ನು ಪ್ರೀತಿಸುತ್ತೇವೆ’ ಎಂದು ಹಿಂದಿಯಲ್ಲಿಯೇ ಹೇಳಿ ನಸುನಕ್ಕರು. ಲಿಖಿತ ಭಾಷಣ ಓದಿದ ಉಭಯ ನಾಯಕರು ಪರಸ್ಪರ ‘ಸ್ನೇಹಿತ’ ಎಂದು ಸಂಭೋದಿಸಿಕೊಂಡರು. 

ಇದಕ್ಕೆ ಪ್ರತಿಯಾಗಿ ಮೋದಿ ಕೂಡ ಇಸ್ರೇಲ್‌ ಅಧಿಕೃತ ಭಾಷೆ  ಹಿಬ್ರೂದಲ್ಲಿ ‘ಶಾಲೋಮ್‌ (ಹಲೋ)’ ಎಂದು ಶುಭಾಶಯ ಕೋರಿದರು.  ‘ಇಲ್ಲಿಗೆ ಬರಲು ಸಂತಸವೆನಿಸುತ್ತದೆ’  ಎಂದರು.   ಕೆನೆಬಣ್ಣದ ‘ಬಂದ್ ಗಲಾ’ ಸೂಟು ಧರಿಸಿದ್ದ ಮೋದಿ ಜೇಬಿನಲ್ಲಿ ಅದಕ್ಕೆ ಒಪ್ಪುವ ಕಡುನೀಲಿ ಕರವಸ್ತ್ರ ಇಟ್ಟುಕೊಂಡಿದ್ದರು. ಇಸ್ರೇಲ್‌ನಿಂದ ಅತ್ಯಾಧುನಿಕ ತಂತ್ರಜ್ಞಾನ, ಸೇನಾ ಸಹಕಾರ ಮತ್ತು ತಂತ್ರಜ್ಞಾನ ಹಾಗೂ ಬಂಡವಾಳ ಸೆಳೆಯುವುದು ಈ ಭೇಟಿಯ ಉದ್ದೇಶ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT