ಶನಿವಾರ, ಡಿಸೆಂಬರ್ 7, 2019
16 °C

ಇರುವೆ ನೀತಿ

Published:
Updated:
ಇರುವೆ ನೀತಿ

ಇದು ಚಿಕ್ಕೂರು. ಅಲ್ಲಿ ರಾಮಪ್ಪನೆಂಬ ರೈತನಿದ್ದ. ನೀತಿವಂತನಾಗಿ ಊರಿನಲ್ಲಿ ತನ್ನದೇ ಆದ ಘನತೆಯನ್ನು ಉಳಿಸಿಕೊಂಡಿದ್ದ.

ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಿ ತಾನೇ ಮಾರುಕಟ್ಟೆ ಕಂಡುಕೊಂಡಿದ್ದ. ಹೀಗಾಗಿ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟುಕೊಂಡಿದ್ದ.

ರಾಮಪ್ಪ ನ್ಯಾಯಪರವಾಗಿದ್ದ ಕಾರಣ ಅವನ ಮಾತಿಗೆ ವಿಶೇಷ ಬೆಲೆ ಇತ್ತು. ಊರಿನಲ್ಲಿ ಜಗಳ ತಗಾದೆಗಳಾದರೆ ರಾಮಪ್ಪ ಬಗೆಹರಿಸುತ್ತಿದ್ದ. ಹೆಂಡತಿ ರತ್ನವ್ವ ಕೂಡಾ ಗಂಡನ ಆದರ್ಶಗಳಿಗೆ ಹೆಗಲು ಕೊಟ್ಟಿದ್ದಳು.

ಕೆಲ ದಿನಗಳಲ್ಲಿ ರಾಮಪ್ಪನಿಗೆ ಅವಳಿ ಜವಳಿ ಮಕ್ಕಳಾದರು. ಮೊದಲನೇಯವನು ಸೋಮ, ಎರಡನೇಯವನು ಭೀಮ.

ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಿದ. ಹಳ್ಳಿಯಲ್ಲಿ ಬೆಳೆದ ಕಾರಣ ಅಪ್ಪನ ಕೆಲಸಕ್ಕೆ ನೆರವಾಗುತ್ತಾ ತಮ್ಮ ಶಿಕ್ಷಣವನ್ನು ಪೂರೈಸಿದರು. ದೊರೆತ ಶಿಕ್ಷಣದಿಂದ ಅಪ್ಪನ ಕೃಷಿ ಕೆಲಸಗಳಿಂದ ದೂರವಾದರು. ಮುಂದೆ ಪಟ್ಟಣ ವ್ಯಾಮೋಹಕ್ಕೆ ಒಳಗಾಗಿ ಇಬ್ಬರಿಗೂ ಒಳ್ಳೆಯ ಕೆಲಸ ದೊರಕಿತು.

ಈ ವಿಷಯವನ್ನು ಅಪ್ಪನಿಗೆ ತಿಳಿಸಲು ಬಂದರು. ರಾಮಪ್ಪ ಮೇಟಿ ವಿದ್ಯೆಯ ಮಹತ್ವವನ್ನು ತಿಳಿಸಿ ನೌಕರಿ ಆಸೆಯನ್ನು ಬಿಡಲು ವಿನಂತಿಸಿದ. ಅಪ್ಪನ ಮಾತು ಮಕ್ಕಳಿಗೆ ಅರಗಲೇ ಇಲ್ಲ.

ಸರಿ ಮಕ್ಕಳೇ ಈಗ ನೀವು ಸ್ವತಂತ್ರರು ನಿಮ್ಮ ಆಸೆಗೆ ನಾನು ಅಡ್ಡಿಯಾಗುವುದಿಲ್ಲ ಎಂದು ಹೇಳಿದ ರಾಮಪ್ಪ. ಮಕ್ಕಳು ಪಟ್ಟಣ ಸೇರಿ ಸರ್ಕಾರಿ ನೌಕರಿಗೆ ಶರಣಾದರು. ಕೆಲ ದಿನಗಳಲ್ಲಿ ಮದುವೆ ಮಾಡಿಕೊಂಡರು.

ಇತ್ತ ರಾಮಪ್ಪ ಕೃಷಿ ಮಾಡುತ್ತಾ ಕಾಲ ಕಳೆಯತೊಡಗಿದ. ಮದುವೆಯಾದ ನಂತರ ಸೋಮ ಮತ್ತು ಭೀಮರ ಸಂಬಳ ಮನೆತನ ನಡೆಸಲು ಸಾಲದಾಯಿತು.

ಲಂಚಕ್ಕೆ ಕೈ ಚಾಚಿ ಅಪ್ಪನ ಮರ್ಯಾದೆಯನ್ನು ಕಳೆಯತೊಡಗಿದರು. ಒಮ್ಮೆ ತಮ್ಮ ಊರಿನವನಿಂದ ಬಂದ ವ್ಯಕ್ತಿಯಿಂದ ಲಂಚ ತಗೆದುಕೊಂಡ ಸುದ್ದಿ ತಿಳಿದು ರಾಮಪ್ಪ ಬೇಸರ ಪಟ್ಟುಕೊಂಡ. ಮಕ್ಕಳು ವಿಲಾಸಿ ಜೀವನಕ್ಕೆ ಘನತೆ ಗೌರವಗಳನ್ನು ಕಳೆದುಕೊಂಡರು ಎಂದು ಬೇಸರಪಟ್ಟುಕೊಂಡ.

ಸಂಬಳ ಸಾಲದೆ ವಿಪರೀತ ಸಾಲ ಸೋಲಗಳನ್ನು ಮಾಡಿ ದಿವಾಳಿಯಾಗತೊಡಗಿದರು.ಇನ್ನು ರಾಮಪ್ಪ ಸುಮ್ಮನಿರದೇ ಮಕ್ಕಳನ್ನು ಊರಿಗೆ ಕರೆಸಿಕೊಂಡು ಬುದ್ಧಿ ಹೇಳಲು ತಿರ್ಮಾನಿಸಿದ. ಅದರಂತೆ ಊರಿಗೆ ಬಂದ ಇಬ್ಬರನ್ನು ತನ್ನ ತೋಟದ ಮನೆಗೆ ಕರೆಸಿಕೊಂಡು ಹಿತ್ತಲಿನ ಬಳಿ ಇರುವ ಇರುವೆ ಗೂಡಿನ ಬಳಿ ಸಾಲಾಗಿ ಹೋಗುವ ಇರುವೆಗಳನ್ನು ತೋರಿಸಿ ನೋಡಿ ಮಕ್ಕಳೇ ಈ ಇರುವೆಗಳು ಸಾಲ(ಶಿಸ್ತಿನ ಜೀವನ) ಬಿಡುವುದಿಲ್ಲ.

ಹಾಗೆಯೇ ಮಳೆಗಾಲಕ್ಕೆ ತಮ್ಮ ಮುಂದಿನ ಬದುಕಿಗೆ ಆಹಾರವನ್ನು ಸಂಗ್ರಹಿಸುತ್ತವೆ. ಜೀವನದಲ್ಲಿ ವಿಲಾಸಿ ಜೀವನ ನಡೆಸಿದರೆ ಇದ್ದ ಸಂಪತ್ತು ಕರಗುತ್ತಾ ಸಾಗುವುದು. ಇಳಿಗಾಲಕ್ಕೆ ನಿಮ್ಮ ಕಷ್ಟಗಳಿಗೆ ಕೂಡಿಟ್ಟ ಹಣ ನಿಮ್ಮ ನೆರವಿಗೆ ಬರುವುದು.

ಇರುವೆಯ ಹಾಗೇ ಜೀವನ ಕ್ರಮವನ್ನು ಶಿಸ್ತುಬದ್ಧವಾಗಿ ನಡೆಸಿಕೊಂಡು ಹೋಗಬೇಕು ಎಂದಾಗ ತಮ್ಮ ತಪ್ಪಿನ ಅರಿವಾಗಿ ಅಪ್ಪನ ಗದ್ದೆ ಕೆಲಸಕ್ಕೆ ಮರಳಿ ಬದುಕನ್ನು ಸಾಗಿಸುತ್ತಾ ಮನ್ನಡೆಯುತ್ತಾರೆ.(5ನೇ ತರಗತಿ ಮಕ್ಕಳಿಗೆ ಇರುವೆ ಎಂಬ ಪದ ನೀಡಿ ಕಥೆ ಬರೆಯಲು ಹೇಳಿದಾಗ ಹುಟ್ಟಿಕೊಂಡ ಕಥೆ )

ಪ್ರತಿಕ್ರಿಯಿಸಿ (+)