ಶನಿವಾರ, ಡಿಸೆಂಬರ್ 14, 2019
25 °C

ಇದೆಂಥಾ ಮಸಾಲಾ!

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

ಇದೆಂಥಾ ಮಸಾಲಾ!

ಹೆಣ್ಣು ಮಕ್ಕಳನ್ನು ದ್ರಾಕ್ಷಿ, ಸೇಬು, ಕಿತ್ತಳೆ ಹಣ್ಣು, ಮಿರ್ಚಿ ಮೆಣಸಿನಕಾಯಿ ಹೀಗೆ ಬೇಕೆಂದ ಹಣ್ಣು–ತರಕಾರಿಯಿಂದ ಕರೆದು, ಹೋಲಿಸಿ ಆಯ್ತು. ಇದೆಲ್ಲಾ ರವಿಚಂದ್ರನ್ ಅವರ ಸಿನಿಮಾ ಹಾಡಿನಲ್ಲಿ ಅಥವಾ ಕವಿತೆಯಲ್ಲಿ ಬಂದು ಹೋಗಿದ್ದರೆ ಜನ ಸುಮ್ಮನಿರುತ್ತಿದ್ದರೇನೋ, ಆದರೆ ಗೂಗಲ್‌ನಲ್ಲಿ ‘ಸೌತ್‌ ಇಂಡಿಯಾ ಮಸಾಲಾ’ (south india masala) ಎಂದು ಹುಡುಕಿದರೆ ದಕ್ಷಿಣ ಭಾರತದ ಸಿನಿಮಾ ನಟಿಯರು, ಅರೆ ನಗ್ನರಾದ ಮಹಿಳೆಯರ ಚಿತ್ರ ಕಾಣಿಸುತ್ತಿದೆ. ಈ ಹುಡುಕಾಟದ ಬಗ್ಗೆ ಟ್ವಿಟರ್‌ನಲ್ಲಿ ಹಲವರು ‘ಯಾಕೆ ಹೀಗೆ’ ಎಂದು ಪ್ರಶ್ನಿಸಿದ್ದಾರೆ. ‘ನಾರ್ತ್ ಇಂಡಿಯಾ ಮಸಾಲಾ’ ಎಂದು (north india masala)ಹುಡುಕಿದರೆ ಹೀಗೆ ಬರುವುದಿಲ್ಲ. ಬದಲಾಗಿ ಕೋಳಿ ರೆಸಿಪಿ, ಸಾಂಬಾರು ಪದಾರ್ಥಗಳ ರೆಸಿಪಿ ಚಿತ್ರಗಳು ಬರುತ್ತಿವೆ.

ಗೂಗಲ್‌ನಂಥ ಸರ್ಚ್‌ ಎಂಜಿನ್‌ಗಳ ಪಾತ್ರ ಇದರಲ್ಲಿ ಏನೂ ಇಲ್ಲದಿದ್ದರೂ ಗೂಗಲ್ ಇಂಥ ವಿಚಾರಗಳ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿರಬೇಕು ಎನ್ನುವುದು ಜನರ ಅಭಿಪ್ರಾಯ. ಹಲವು ಮಹಿಳೆಯರಂತೂ ಈ ಬಗ್ಗೆ ಗೂಗಲ್ ಸಂಸ್ಥೆಯೇ ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ. ಹಾಗೇ ನಮ್ಮ ಸಮಾಜದಲ್ಲಿ ಇಂದು ಹೆಚ್ಚುತ್ತಿರುವ ಕಲ್ಚರಲ್ ಸ್ಟೀರಿಯೊಟೈಪ್ (ಸಾಂಸ್ಕೃತಿಕ ಏಕತಾನತೆ) ಹಾಗೂ ಸೆಕ್ಸಿಸಂ ಸರ್ಚ್‌ ಎಂಜಿನ್‌ಗಳಲ್ಲಿ ಪ್ರತಿಬಿಂಬಿಸುತ್ತಿದೆ ಎನ್ನುತ್ತಿದ್ದಾರೆ. ಹೀಗೆ ಸಿಕ್ಕಸಿಕ್ಕ ಮಹಿಳೆಯರ ಫೋಟೊ ‘ಸೌತ್‌ ಇಂಡಿಯಾ ಮಸಾಲಾ’ ಹುಡುಕಾಟದಲ್ಲಿ ಬರುವುದರಿಂದ ಅವರ ಸ್ನೇಹಿತರಿಗೆ, ಕುಟುಂಬದವರಿಗೆ ಮುಜುಗರವಾಗುತ್ತಿದೆ. ದಕ್ಷಿಣ ಭಾರತದ ಹೆಣ್ಣು ಮಕ್ಕಳನ್ನು ಈ ಹುಡುಕಾಟದ ಅಡಿಯಲ್ಲಿ ಗೂಗಲ್ ಯಾಕೆ ಸೇರಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ಕೋಪಗೊಂಡಿದ್ದಾರೆ.

‘ನಾರ್ತ್ ಇಂಡಿಯಾ ಮಸಾಲಾ’

‘ಸೌತ್‌ ಇಂಡಿಯಾ ಮಸಾಲಾ’ ಹುಡುಕಾಟದಲ್ಲಿ ಅರೆನಗ್ನ ಹೆಣ್ಣು ಮಕ್ಕಳ ಫೋಟೊ ಬರುತ್ತಿದೆ, ಆದರೆ ‘ನಾರ್ತ್ ಇಂಡಿಯಾ ಮಸಾಲಾ’ ಎಂದು ಹಡುಕಿದರೆ ಹೆಣ್ಣು ಮಕ್ಕಳ ಫೋಟೊ ಬರುವುದಿಲ್ಲ. ಇದು ಏಕೆ ಎಂದು ಟ್ವೀಟರ್‌ನಲ್ಲಿ ಪ್ರಶ್ನಿದ್ದಾರೆ ವೆನೇಸಾ ಕಾರ್ಮೆಲ್ (@venesaCarmel), ಹಾಗೂ ಸತ್ಯವ್ರತ ಬೊಂದ್ರೆ (@sathyavrataBondre). ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್‌ ಕೂಡ ವೆನೇಸಾ ಕಾರ್ಮೆಲ್ ಅವರ ಟ್ವೀಟ್‌ ಹಂಚಿಕೊಂಡು ‘ಗೂಗಲ್ ಉತ್ತರಿಸಿ’ ಎಂದಿದ್ದಾರೆ.

ನಾರ್ತ್ ಇಂಡಿಯಾ ಮಸಾಲಾ ಎಂದು ಹುಡುಕಿದಾಗ ಚಿಕನ್ ಮಸಾಲಾ, ಚಾಟ್ ಮಸಾಲಾ ಫೋಟೊಗಳು ಉತ್ತರವಾಗಿ ಬರುತ್ತಿವೆ, ಆದರೆ ಮಹಿಳೆಯರ ಫೋಟೊ ಬರುವುದಿಲ್ಲ. ಒಂದು ವೇಳೆ ಗೂಗಲ್ ಸರ್ಚ್‌ ಎಂಜಿನ್ ಜನರು ನೀಡುವ ಟ್ಯಾಗ್‌ಗಳನ್ನೇ ಮೆಟಾ ಡೇಟಾದಲ್ಲಿ ತೆಗೆದುಕೊಳ್ಳುವುದಾದರೆ ಯಾರೊಬ್ಬರು ನಾರ್ತ್ ‘ಇಂಡಿಯಾ ಮಸಾಲಾ’ ಎಂದು ಯಾವ ಮಹಿಳೆಯ ಫೋಟೊವನ್ನು ಅಪ್‌ಲೋಡ್‌ ಮಾಡಿಲ್ಲವೇ? ಇಲ್ಲಿ ಗೂಗಲ್ ಫಿಲ್ಟರ್ ಕೆಲಸ ಮಾಡಿದೆ ಅಲ್ಲವೇ? ಈ ತಾರತಮ್ಯ ಏಕೆ? ಎಂದು ಸಾಮಾಜಿಕ ಜಾಲ ಜಾಣಗಳಲ್ಲಿ ಜನರು ಪ್ರಶ್ನಿಸಿದ್ದಾರೆ.

ಗೂಗಲ್‌ನಲ್ಲಿ ಏಕೆ ಹೀಗೆ ಬರುತ್ತಿದೆ

ಜನರು ಅಂತರ್ಜಾಲಕ್ಕೆ ಫೋಟೊ ಅಪ್‌ಲೋಡ್‌ ಮಾಡುವಾಗ ಮಸಾಲಾ, ಸೌತ್‌ ಇಂಡಿಯಾ ಈ ಹೆಸರುಗಳಲ್ಲಿ ಫೋಟೊ ಹೆಸರನ್ನು ಟ್ಯಾಗ್ ಮಾಡಿರುತ್ತಾರೆ. ಗೂಗಲ್ ಮೆಟಾ ಡೇಟಾ ಕೂಡ ಇದೇ ಹೆಸರನ್ನು ಉಳಿಸಿಕೊಂಡಿರುತ್ತದೆ. ಹಾಗಾಗಿ ಮಸಾಲಾ ಅಥವ ಸೌತ್ ಇಂಡಿಯಾ ಮಸಾಲಾ ಎಂದು ಗೂಗಲ್‌ನಲ್ಲಿ ಹುಡುಕಿದರೆ ಮಹಿಳೆಯರ ಚಿತ್ರಗಳು ಬರುತ್ತಿವೆ.

‘ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಎಲ್ಲವೂ ಸರಿಯಾಗಿ ಬರುವುದಿಲ್ಲ, ಇದೆಲ್ಲವೂ ಅಪ್‌ಲೋಡ್‌ ಮಾಡುವವರು ಯಾವ ಹೆಸರಿನಲ್ಲಿ ಫೋಟೊವನ್ನು ಅಪ್‌ಲೋಡ್‌ ಮಾಡುತ್ತಾರೆ ಎನ್ನುವ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ’ ಎಂಬುದು ಗೂಗಲ್ ವಕ್ತಾರರ ವಿವರಣೆ.

ಇಂಥ ಸನ್ನಿವೇಶ ಬರಬಾರದಿತ್ತು. ಈ ಬಗ್ಗೆ ತಂತ್ರಜ್ಞರ ತಂಡ ಕೆಲಸ ಮಾಡುತ್ತಿದೆ. ನಮ್ಮ ಹುಡುಕಾಟದ ಕ್ರಮದಲ್ಲಿ ಬದಲಾವಣೆ ತರುತ್ತೇವೆ ಎಂದು ಗೂಗಲ್ ಭರವಸೆ ನೀಡಿದೆ.

Ask.com, Bing, Yahoo!, youtube ಹಾಗೂ ಇತರೆ ಡಾಟಾ, ವಿಡಿಯೊ, ಫೋಟೊ ಸರ್ಚ್‌ ಎಂಜಿನ್‌ಗಳು ಗೂಗಲ್‌ಗಿಂತ ಭಿನ್ನವಾಗಿಲ್ಲ. ಅವುಗಳಲ್ಲೂ ‘ಮಸಾಲಾ’, ‘ಐಟಂ’, ‘ಮಿರ್ಜಿ’, ‘ಸ್ಪೈಸಿ’,‘ಹಾಟ್’ ಎಂದು ಹುಡುಕಿದರ ಮಹಿಳೆಯರ ಫೋಟೊ ಮತ್ತು ವಿಡಿಯೊಗಳು ಬರುತ್ತಿವೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ‘ಭಾರತೀಯ ಸಂಸ್ಕೃತಿ’, ‘ಸೀರೆ’, ‘ಭಾರತೀಯ ಮಹಿಳೆ’, ಎಂದು ಹುಡುಕಿದರೆ ಹಸಿಬಿಸಿ ದೃಶ್ಯಗಳು, ಫೋಟೊಗಳು ಉತ್ತರವಾಗಿ ಬರುತ್ತಿವೆ. ‘ಸೀರೆ’ (saree) ಎನ್ನುವ ಪದವೇ ಅಂತರ ಜಾಲದಲ್ಲಿ ‘ಸೆಕ್ಸಿ’ ಎನ್ನುವ ಪದ ಬಳಕೆ ಎನ್ನುವಂತಾಗಿದೆ.

ಪ್ರತಿಕ್ರಿಯಿಸಿ (+)