ಸೋಮವಾರ, ಡಿಸೆಂಬರ್ 9, 2019
23 °C

ರಾಜಕೀಯ ಲಾಭಕ್ಕಾಗಿ ಕೋಮು ಪ್ರಚೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಲಾಭಕ್ಕಾಗಿ ಕೋಮು ಪ್ರಚೋದನೆ

ಉಡುಪಿ: ‘ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ಕೋಮು ಗಲಭೆಗಳಿಗೆ ಪ್ರಚೋದನೆ ನೀಡುತ್ತಿರುವುದು ರಾಜಕೀಯ ಲಾಭಕ್ಕಾಗಿಯೇ ಹೊರತು ಹಿಂದೂಗಳಿಗಾಗಿ ಅಲ್ಲ’ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಜೋಕಟ್ಟೆ ಹೇಳಿದರು.

ಕರಾವಳಿ ಜಿಲ್ಲೆಗಳಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಬಂಧಿಸುವಂತೆ ಆಗ್ರಹಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕ ನಗರದಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ತಮ್ಮ ರಾಜಕೀಯ ಕಾರ್ಯಸೂಚಿಯನ್ನು ಜಾರಿ ಮಾಡುವ ಉದ್ದೇಶದಿಂದ ಅವರು ಎಲ್ಲ ಧರ್ಮದವರನ್ನೂ ಗುರಿಯಾಗಿಸಿಕೊಂಡಿದ್ದಾರೆ. ಹಿಂದೂಗಳ ಬಗ್ಗೆ ಅವರಿಗೆ ಕಾಳಜಿ ಇದ್ದಿದ್ದರೆ ಉಡುಪಿಯಲ್ಲಿ ಗೋ ರಕ್ಷಕರಿಂದ ಕೊಲೆಯಾದ ಪ್ರವೀಣ್ ಪೂಜಾರಿ, ಮಂಗಳೂರಿನ ಮಾಹಿತಿ ಹಕ್ಕು ಹೋರಾಟಗಾರ ವಿನಾಯಕ ಬಾಳಿಗ ಅವರ ಕೊಲೆಯಾದಾಗ ಏಕೆ ಅವರ ಮನೆಗೆ ಭೇಟಿ ನೀಡಲಿಲ್ಲ. ಬೆಂಕಿ ಹಚ್ಚುವ ಮಾತನಾಡಲಿಲ್ಲ ಎಂದು  ಪ್ರಶ್ನಿಸಿದರು. ಹಿಂದುತ್ವದ ಕಾರ್ಯಸೂಚಿಯ ವಿರುದ್ಧ ಇರುವವರನ್ನು ಕೊಲ್ಲಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

‘ಶೋಭಾ ಕರಂದ್ಲಾಜೆ ಅವರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತೇನೆ ಎಂದು ಈ ವರೆಗೆ ಹೇಳಿಲ್ಲ. ಆದರೆ 23 ಮಂದಿ ಹಿಂದೂಗಳನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಸಹೋದರಿಯಿಂದಲೇ ಕೊಲೆಯಾದ ಕಾರ್ತಿಕ್ ರಾಜ್‌, ಹಲ್ಲೆಗೊಳಗಾಗಿ ಇನ್ನೂ ಬದುಕಿರುವ ಅಶೋಕ್ ಪೂಜಾರಿ ಎಂಬುವರ ಹೆಸರೂ ಅದರಲ್ಲಿದೆ’ ಎಂದರು.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾಧ್ಯಕ್ಷ ಜಿ. ರಾಜಶೇಖರ್ ಅವರು ಮಾತನಾಡಿ, ‘ಮುಸ್ಲಿಮರ ಮೇಲೆ ನಡೆಯುತ್ತಿರುವ ಈ ದಾಳಿಗಳ ಹಿಂದೆ ಬಿಜೆಪಿ, ಸಂಘ ಪರಿವಾರ, ಸರ್ಕಾರದ ದೊಡ್ಡ ವಿಭಾಗ ಹಾಗೂ ಮಾಧ್ಯಮ ಶಾಮೀಲಾಗಿದೆ’ ಎಂದು ಗಂಭೀರ ಆರೋಪ ಮಾಡಿದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮಲ್ಪೆ, ರಾಜ್ಯ ಸಂಚಾಲಕ ಅಬ್ದುಲ್ ಜಲೀಲ್ ಇದ್ದರು.

* * 

ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಳುಹಿಸಿರುವ ಕೊಲೆಯಾಗಿರುವ ಹಿಂದೂಗಳ ಪಟ್ಟಿಯಲ್ಲಿ  ಬದುಕಿರುವ ವ್ಯಕ್ತಿಯ ಹೆಸರು ಸಹ ಇದೆ. ಶೋಭಾ ಕರಂದ್ಲಾಜೆ ಅವರಿಗೆ ಕಾಮನ್‌ ಸೆನ್ಸ್‌ ಸಹ ಇಲ್ಲ.

ಅಶ್ರಫ್ ಜೋಕಟ್ಟೆ, ಪಿಎಫ್‌ಐ ಮುಖಂಡ

ಪ್ರತಿಕ್ರಿಯಿಸಿ (+)