ಬುಧವಾರ, ಜೂನ್ 3, 2020
27 °C
ಈಜಿಪುರ ವಸತಿ ಸಮುಚ್ಚಯ: ಒಕ್ಕಲೆಬ್ಬಿಸಿ ಕಳೆಯಿತು 4 ವರ್ಷl ನಿವಾಸಿಗಳ ವಸ್ತುಸ್ಥಿತಿ ಅಧ್ಯಯನ ವರದಿ ಬಿಡುಗಡೆ

ಕುಟುಂಬಗಳು ಬೀದಿಪಾಲು–ಊಟಕ್ಕೂ ಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಟುಂಬಗಳು ಬೀದಿಪಾಲು–ಊಟಕ್ಕೂ ಕಷ್ಟ

ಬೆಂಗಳೂರು: ಈಜಿಪುರದಲ್ಲಿ ದುರ್ಬಲ ವರ್ಗದವರ ವಸತಿ ಸಮುಚ್ಚಯದ ಜಾಗದಲ್ಲಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸಿ ನಾಲ್ಕು ವರ್ಷಗಳ ಬಳಿಕವೂ ಅನೇಕ ಕುಟುಂಬಗಳು ಬೀದಿಯಲ್ಲಿವೆ. ಒಪ್ಪೊತ್ತಿನ ಊಟವನ್ನು ಹೊಂದಿಸಿಕೊಳ್ಳಲು ಸಂಕಷ್ಟಪಡುತ್ತಿವೆ.

ಈ ವಸತಿ ಸಮುಚ್ಚಯದ ಜಾಗದಲ್ಲಿ  ವಾಸವಿದ್ದ ಕುಟುಂಬಗಳ ಗುಡಿಸಲುಗಳನ್ನು ಬಲವಂತವಾಗಿ ತೆರವುಗೊಳಿಸಿದ ಬಳಿಕ  ಆ ಕುಟುಂಬಗಳು ಎದುರಿಸಿದ ದುಃಸ್ಥಿತಿಗಳ  ಕುರಿತ ವರದಿಯನ್ನು  ಶನಿವಾರ  ಬಿಡುಗಡೆ ಮಾಡಲಾಯಿತು.

ನವದೆಹಲಿಯ  ಹೌಸಿಂಗ್‌ ಆ್ಯಂಡ್‌ ಲ್ಯಾಂಡ್‌ ರೈಟ್ಸ್‌ ನೆಟ್‌ವರ್ಕ್‌, ಬೆಂಗಳೂರಿನ  ಆರ್ಥಿಕ ದುರ್ಬಲ ವರ್ಗದ ಭೂಕಬಳಿಕೆ ವಿರೋಧಿ ವೇದಿಕೆ ಹಾಗೂ ಫೀಲ್ಡ್ಸ್‌ ಆಫ್‌ ವೀವ್‌ ಸಂಸ್ಥೆಗಳು ಸೇರಿ ಈ ಅಧ್ಯಯನ ನಡೆಸಿವೆ.  102 ಕುಟುಂಬಗಳಿಂದ ಮಾಹಿತಿ ಸಂಗ್ರಹಿಸಿ ಸಿದ್ಧಪಡಿಸಿರುವ ವರದಿಯ ಪ್ರಮುಖ ಅಂಶಗಳು ಇಲ್ಲಿವೆ.

ಊಟಕ್ಕೂ ಸಂಕಷ್ಟ: ಇಲ್ಲಿನ ಕುಟುಂಬಗಳ ಆದಾಯ ಗಣನೀಯವಾಗಿ ಕುಸಿದಿದ್ದು, ಇದರಿಂದ  ಆಹಾರ ಪದಾರ್ಥ ಖರೀದಿಗೆ ಹೊಡೆತ ಬಿದ್ದಿದೆ.  ಅಕ್ಕಿಯನ್ನು ಬಳಸುವ ಪ್ರಮಾಣ ಸರಾಸರಿ 10 ಕೆ.ಜಿ.ಯಿಂದ 5 ಕೆ.ಜಿಗೆ ಕುಸಿದಿದೆ. ಅಪೌಷ್ಠಿಕತೆ ಜಾಸ್ತಿ ಆಗಿದೆ.

ಕೆಲಸ ಕಳೆದುಕೊಂಡರು: ಮನೆ ಕಳೆದುಕೊಂಡ ಬಳಿಕ ಕೆಲವರು ಕೆಲಸವನ್ನೂ ಕಳೆದುಕೊಂಡಿದ್ದಾರೆ. ವ್ಯಕ್ತಿಯ ಸರಾಸರಿ ಮಾಸಿಕ ಆದಾಯ ₹5,130ರಿಂದ ₹4,720ಕ್ಕೆ ಕುಸಿದಿದೆ.  ಕುಟುಂಬ ನಿರ್ವಹಣೆ ವೆಚ್ಚ ಸರಾಸರಿ ₹14,392ರಿಂದ 15,366ಕ್ಕೆ ಹೆಚ್ಚಿದೆ.

ಕೆಲಸಕ್ಕಾಗಿ ಪ್ರಯಾಣ: ಕೆಲಸಕ್ಕಾಗಿ ಹೆಚ್ಚು ದೂರ ಪ್ರಯಾಣ ಮಾಡಬೇಕಿದೆ. ಗುಡಿಸಲು ತೆರವಿನ ಬಳಿಕ ಬೇರೆ ಕಡೆಗೆ ವಲಸೆ ಹೋಗಿದ್ದವು. ಕೆಲಸಕ್ಕೆ ಹೋಗಲು  ದೂರವಾಗುತ್ತದೆ ಎಂಬ ಕಾರಣಕ್ಕೆ ಅವು ಮತ್ತೆ  ಹಿಂದಿನ ಜಾಗಕ್ಕೆ ಮರಳಿವೆ.  

ಶಾಲೆ ತೊರೆದ ವಿದ್ಯಾರ್ಥಿಗಳು: ಕುಟುಂಬಗಳು ನೆಲೆ ಕಳೆದುಕೊಂಡ ಬಳಿಕ 22 ವಿದ್ಯಾರ್ಥಿಗಳು   ವಿದ್ಯಾಭ್ಯಾಸವನ್ನು  ಮೊಟಕುಗೊಳಿಸಿದ್ದಾರೆ. ಕೆಲವರು ಪಠ್ಯ ಹಾಗೂ ಟಿಪ್ಪಣಿ ಪುಸ್ತಕಗಳನ್ನು ಕಳೆದುಕೊಂಡಿದ್ದಾರೆ.  ಅನೇಕ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ.  ಅನೇಕ ಮಕ್ಕಳು ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಕೆಲಸಕ್ಕೆ ಹೋಗುತ್ತಿದ್ದಾರೆ.

ಆರೋಗ್ಯ ಕಡೆಗಣನೆ: ನೆಲೆ ಕಳೆದುಕೊಂಡ ಬಳಿಕ ಕುಟುಂಬಗಳು ಆಸ್ಪತ್ರೆಗೆ ಹೋಗುವ ಪ್ರಮಾಣ ಕಡಿಮೆ ಆಗಿದೆ. ಆದರೆ ಕಾಯಿಲೆ ಪ್ರಮಾಣ ಹೆಚ್ಚಿದೆ.  ಮನೆ ಬಾಡಿಗೆ, ಶಾಲಾ ಶುಲ್ಕ, ಊಟಕ್ಕೆ ಹಣ ಸಾಲದ ಕಾರಣ ಆರೋಗ್ಯ ಕಾಳಜಿಯನ್ನು  ಕಡೆಗಣಿಸುತ್ತಿದ್ದಾರೆ.

***

ಪ್ರಮುಖ ಬೇಡಿಕೆಗಳು

*  ಆಗಿರುವ ಆರ್ಥಿಕ ನಷ್ಟ ತುಂಬಿಕೊಡಲು ಪ್ರತಿ ಕುಟುಂಬಕ್ಕೆ ₹ 4 ಲಕ್ಷ ಪರಿಹಾರ ನೀಡಬೇಕು

*  ಅಂತರರಾಷ್ಟ್ರೀಯ ಗುಣಮಟ್ಟದ ಪುನರ್ವಸತಿ ಒದಗಿಸಬೇಕು

*  ಜೀವನ ಭದ್ರತೆ ಕಲ್ಪಿಸಬೇಕು

*  ಮಾನವ ಹಕ್ಕುಗಳನ್ನು ಖಾತರಿಪಡಿಸುವ ಬದ್ಧತೆಯನ್ನು ಸರ್ಕಾರ  ಪ್ರದರ್ಶಿಸಬೇಕು

*  ನಗರಾಭಿವೃದ್ಧಿಗೆ ಎಲ್ಲರನ್ನೂ ಒಳಗೊಳ್ಳುವ ಮಾದರಿಯನ್ನು ಅನುಸರಿಸಬೇಕು. 

*  ವಸತಿ ಹಕ್ಕನ್ನು ಖಾತರಿಪಡಿಸುವ ಕಾನೂನು ರೂಪಿಸಬೇಕು

*  ಈಜಿಪುರದಲ್ಲೇ ಪುನರ್ವಸತಿ ಕಲ್ಪಿಸಬೇಕು.

* ಪುನರ್ವಸತಿ ಕಲ್ಪಿಸುವ ಸಲುವಾಗಿ ಮೇವರಿಕ್‌ ಹೋಲ್ಡಿಂಗ್ಸ್‌ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಬಿಬಿಎಂಪಿ ರದ್ದುಪಡಿಸಬೇಕು.

*  ಬಲವಂತದ ಒಕ್ಕಲೆಬ್ಬಿಸುವಿಕೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು

ನೆಲೆ ಕಳೆದುಕೊಂಡವರ ಬವಣೆಗಳು

ಬೀದಿಬದಿಯಲ್ಲೆ ವಾಸವಿದ್ದೇವೆ. ಇಲ್ಲಿ ವಿಪರೀತ ಇಲಿಕಾಟ. ನನ್ನ ತುಟಿಯನ್ನೂ ಇಲಿ ಕಚ್ಚಿದೆ. ನಿದ್ರೆಯಲ್ಲಿರುವಾಗ ಇಲಿ ಕಚ್ಚಿದರೆ ಗೊತ್ತಾಗದು.  ಬೆಳಿಗ್ಗೆ ಗಾಯ ನೋಡಿದಾಗಲೇ ಇದು ತಿಳಿಯುತ್ತದೆ.

ಜೋಸೆಫ್‌  ಜೆರಾಲ್ಡ್‌

***

ನನ್ನ ತಾಯಿ ಶಾಲೆಯಲ್ಲಿ ಆಯಾ ಆಗಿದ್ದಳು. ಆಕೆಗೆ ಕ್ಷಯರೋಗ ಬಂತು.  ಅದನ್ನು ತಿಳಿದು ಶಾಲೆಯವರು ಕೆಲಸ ಬಿಡಿಸಿದರು.  ನೆಲೆಕಳೆದುಕೊಂಡ ಬಳಿಕ ತಾಯಿಯನ್ನೂ ಕಳೆದುಕೊಂಡೆ.

ಜ್ಯೋತಿ

***

ನಿದ್ರೆ ಮಾಡುವಾಗ ಇಲಿ ಕಚ್ಚಿದ್ದರಿಂದ ರೋಗ ಬಂದು ಗಂಡ ಅಸುನೀಗಿದರು. ಮಗಳು ಪಿಯುಸಿಯಲ್ಲೇ  ಕಲಿಕೆ ನಿಲ್ಲಿಸಿ, ಕುಟುಂಬ ನಿರ್ವಹಣೆಗಾಗಿ ಮನೆ ಕೆಲಸಕ್ಕೆ ಹೋಗುತ್ತಿದ್ದಾಳೆ.

ನಾಗರತ್ನಾ

***

ನಾವು  ಗುಡಿಸಲು ಕಟ್ಟಿಕೊಂಡು ಬೀದಿಬದಿಯಲ್ಲೇ ನೆಲೆಸಿದ್ದೇವೆ.  ಇಲ್ಲಿನ  ಕುಟುಂಬಗಳು ದಮ್ಮು, ಕೆಮ್ಮು, ಜ್ವರ ಸಮಸ್ಯೆ ತಪ್ಪಿದ್ದಲ್ಲ. ಯಾವುದಾದರೂ ಆಸ್ಪತ್ರೆ ಇಲ್ಲಿ  ಆರೋಗ್ಯ ಶಿಬಿರ  ನಡೆಸಲಿ

ಶಾಂತಿ ಮೇರಿ

***

ಮನೆ ಹೋದ ಬಳಿಕ ಗಂಡನಿಗೆ ಏಯ್ಡ್ಸ್‌ ಇದ್ದುದು ಬೆಳಕಿಗೆ ಬಂತು. 3 ತಿಂಗಳ ಹಿಂದೆ ಗಂಡನನ್ನು ಕಳೆದು ಕೊಂಡೆ. ಹೊಟ್ಟೆಪಾಡಿಗಾಗಿ ಈಗ ಮನೆಕೆಲಸಕ್ಕೆ ಹೋಗುತ್ತಿದ್ದೇನೆ.

ಅಮ್ಮು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.