5

ಡಾನ್ಸು, ಫೈಟು, ಡೈಲಾಗ್‌ ಎಲ್ಲವೂ ‘ಭರ್ಜರಿ’!

Published:
Updated:
ಡಾನ್ಸು, ಫೈಟು, ಡೈಲಾಗ್‌ ಎಲ್ಲವೂ ‘ಭರ್ಜರಿ’!

ಹೊರಗೆ ಭರ್ಜರಿ ಮಳೆ ಸುರಿಯುತ್ತಿತ್ತು. ಒಳಗಡೆಯೂ ಮಳೆಯೇ... ಸಂಭಾಷಣೆಯ ಸುರಿಮಳೆ!

‘ಕೆಲವರು ಹೊಡದ್ರೆ ಮಾಸ್‌ ಆಗಿರತ್ತೆ, ಇನ್ನು ಕೆಲವರು ಹೊಡದ್ರೆ ಕ್ಲಾಸ್‌ ಆಗಿರತ್ತೆ, ಮತ್ತೆ ಕೆಲವರು ಹೊಡದ್ರೆ ಕಾಮಿಡಿಯಾಗಿರತ್ತೆ... ನಾನ್‌ ಹೊಡದ್ರೆ.... ಯಾವಾಗ್ಲೂ ಭರ್ಜರಿ ಆಗಿರತ್ತೆ’

ಒಂದೇ ಉಸಿರಿನಲ್ಲಿ ಇಷ್ಟು ಹೇಳಿದ ಧ್ರುವ ಸರ್ಜಾ, ಉಸಿರಾಟ ಸರಾಗ ಮಾಡಿಕೊಳ್ಳಲೆಂಬಂತೆ ಸ್ವಲ್ಪ ಹೊತ್ತು ಸುಮ್ಮನೆ ನಿಂತರು. ಮತ್ತೆ ತಮ್ಮ ಸಿನಿಮಾ ‘ಭರ್ಜರಿ’ಯ ಬಗ್ಗೆ ಅಷ್ಟೇ ಉತ್ಸಾಹದಿಂದ ಮಾತಿಗೆ ನಿಂತರು.

‘ಬಹದ್ದೂರ್‌’ ನಿರ್ದೇಶಕ ಚೇತನ್‌ ನಿರ್ದೇಶಿಸಿರುವ ‘ಭರ್ಜರಿ’ ಶುರುವಾಗಿ ಎರಡು ವರ್ಷಗಳೇ ಕಳೆದಿವೆ. ಹಲವು ಅಡೆತಡೆಗಳನ್ನು ಎದುರಿಸಿ ಕೊನೆಗೂ ಚಿತ್ರ ಪೂರ್ತಿಗೊಂಡು ಇದೇ ವಾರ (ಸೆ.15) ತೆರೆಗೆ ಬರಲು ಸಜ್ಜಾಗಿದೆ. ಈ ಖುಷಿಯನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಸಮಾರಂಭ ಆಯೋಜಿಸಿತ್ತು.

‘ಅದ್ಧೂರಿ ಚಿತ್ರದಲ್ಲಿ ಜನರು ಯಾವ್ಯಾವ ಅಂಶಗಳನ್ನು ಅತಿಯಾಗಿ ಮೆಚ್ಚಿಕೊಂಡಿದ್ದಾರೆಯೋ ಅವುಗಳನ್ನೆಲ್ಲ ಇಟ್ಟುಕೊಂಡು ಅದಕ್ಕೂ ಮೀರಿದ ಹಲವು ಸಂಗತಿಗಳನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದರು ದ್ರುವ ಸರ್ಜಾ. ಈ ಚಿತ್ರಕ್ಕಾಗಿ ಅವರು ಎರಡು ವರ್ಷಗಳ ಕಾಲ ಉಳಿದ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳದೇ ಕಾದಿದ್ದಾರೆ. ಈ ಚಿತ್ರದಲ್ಲಿ ಬದುಕಿನ ಗುರಿಯ ಬಗ್ಗೆ ಅನಿಶ್ಚಿತತೆ ಇರುವ ಹುಡುಗನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಎರಡು ವರ್ಷ ಒಂದು ಸಿನಿಮಾಗೆ ಸುದೀರ್ಘ ಅವಧಿ ಎನ್ನುವುದೇನೋ ನಿಜ. ಆದರೆ ಈ ಎರಡು ವರ್ಷಗಳಲ್ಲಿ ಒಂದು ಸಲವೂ ‘ಭರ್ಜರಿ’ ಸಿನಿಮಾವನ್ನು ಜನರು ಮರೆತಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಹಾಗೆಯೇ ಜನರ ನಿರೀಕ್ಷೆಗೂ ಗರಿಗೆದರಿದೆ. ಹಿಂದೊಮ್ಮೆ ಯೂ ಟ್ಯೂಬ್‌ಗೆ ಬಿಟ್ಟಿದ್ದ ಟೈಟಲ್‌ ಟ್ರ್ಯಾಕ್‌ ಆರು ದಿನಗಳಲ್ಲಿ ಇಪ್ಪತ್ತು ಲಕ್ಷ ಲೈಕ್ಸ್‌ ಗಳಿಸಿತ್ತು. ಇದೇ ಚಿತ್ರದ ಕುರಿತು ಜನರಿಗೆ ಇರುವ ನಿರೀಕ್ಷೆಗೆ ಸಾಕ್ಷಿ’ ಎಂದರು ನಿರ್ದೇಶಕ ಚೇತನ್‌.

ನಾಯಕಿ ಗೌರಿ ಪಾತ್ರದಲ್ಲಿ ರಚಿತಾ ರಾಮ್‌ ನಟಿಸಿದ್ದಾರೆ. ‘ಈ ಸಿನಿಮಾ ಕಥೆ ನಿಂತಿರುವುದು ಡಿಂಪಲ್‌ ಮೇಲೆ. ನನ್ನ ಕೆನ್ನೆಯ ಗುಳಿಯನ್ನು ಈ ಚಿತ್ರದಲ್ಲಿ ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ’ ಎಂದು ಖುಷಿಯಿಂದ ಹೇಳಿಕೊಂಡರು. ಹರಿಪ್ರಿಯಾ ಹಾಸಿನಿ ಎಂಬ ಉತ್ತರ ಕರ್ನಾಟಕದ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರದು ಈ ಚಿತ್ರದ ಕಥೆಗೆ ಮಹತ್ವದ ತಿರುವು ನೀಡುವ ಹುಡುಗಿಯ ಪಾತ್ರವಂತೆ. ಯೋಗರಾಜ್‌ ಭಟ್‌ ಅವರ ಶಿಫಾರಸ್ಸಿನ ಮೇಲೆ ಅವರು ಈ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇನ್ನೋರ್ವ ನಟಿ ವೈಶಾಲಿ ದೀಪಕ್‌ ಕೂಡ ಇಂಥದ್ದೇ ಇನ್ನೊಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

‘ಸಿನಿಮಾ ಮೂಲಕ ನಾನು ಗಳಿಸಿದ ಹಣವನ್ನು ಸಿನಿಮಾಕ್ಕಾಗಿಯೇ ವಿನಿಯೋಗಿಸುತ್ತೇನೆ’ ಎಂದು ಭಾಷೆ ಕೊಟ್ಟರು ನಿರ್ಮಾಪಕ ಕನಕಪುರ ಶ್ರೀನಿವಾಸ್‌. ತೆಲುಗು ಸಿನಿಮಾಗಳ ಅಭಿಮಾನಿಯಾದ ಅವರು ‘ಭರ್ಜರಿ’ ಸಿನಿಮಾವನ್ನೂ ಅದೇ ಮಾದರಿಯಲ್ಲಿ ಮಾಡಿದ್ದಾರಂತೆ.

ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ. ಶ್ರೀನಿವಾಸಮೂರ್ತಿ, ಜಹಾಂಗೀರ್‌, ಸಾಧುಕೋಕಿಲ, ರಂಗಾಯಣ ರಘು, ತಾರಾ ಸೇರಿದಂತೆ ಘಟಾನುಘಟಿ ನಟರು ತಾರಾಗಣದಲ್ಲಿದ್ದಾರೆ. 300 ಚಿತ್ರಮಂದಿರಗಳಲ್ಲಿ ತೆರೆಗೆ ತರಲು ತಂಡ ಸಜ್ಜುಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry