‘ಭಿನ್ನಾಭಿಪ್ರಾಯ ಬಿಡಿ, ಒಟ್ಟಾಗಿ ಬನ್ನಿ’

ಶುಕ್ರವಾರ, ಮೇ 24, 2019
23 °C

‘ಭಿನ್ನಾಭಿಪ್ರಾಯ ಬಿಡಿ, ಒಟ್ಟಾಗಿ ಬನ್ನಿ’

Published:
Updated:
‘ಭಿನ್ನಾಭಿಪ್ರಾಯ ಬಿಡಿ, ಒಟ್ಟಾಗಿ ಬನ್ನಿ’

ಚಿತ್ರದುರ್ಗ: ‘ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ನಿಮ್ಮ ನಡುವಿರುವ ಭಿನ್ನಾಭಿಪ್ರಾಯ ಮರೆತು ಒಮ್ಮತದ ಅಭಿಪ್ರಾಯದೊಂದಿಗೆ ಬಂದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಇಲ್ಲಿನ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾನುವಾರ ಶಿವಮೂರ್ತಿ ಮುರುಘಾ ಶರಣರ ಪ್ರಧಾನ ಸಂಪಾದಕತ್ವದ ‘ವಚನ ಮಾರ್ಗ’ – ಬೃಹತ್ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಾತೆ ಮಹಾದೇವಿ, ವಿರಕ್ತ ಮಠದ ಶ್ರೀಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳು, ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮವಾಗಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ವೀರಶೈವ ಮಹಾಸಭಾದ ಶಾಮನೂರು ಶಿವಶಂಕರಪ್ಪ, ಸಚಿವ ಈಶ್ವರ ಖಂಡ್ರೆ ಮತ್ತಿತರರು ‘ವೀರಶೈವ – ಲಿಂಗಾಯತ’ ಸ್ವತಂತ್ರ ಧರ್ಮ ಆಗಬೇಕು ಎನ್ನುತ್ತಿದ್ದಾರೆ. ಈ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು, ಒಮ್ಮತದೊಂದಿಗೆ ನಿರ್ಧಾರ ಕೈಗೊಂಡರೆ, ಸರ್ಕಾರದ ಮುಖ್ಯಸ್ಥನಾಗಿ, ಆ ಅಭಿಪ್ರಾಯವನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ನನ್ನನ್ನು ವಿವಾದಕ್ಕೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ, ನಿಮ್ಮ ಒಮ್ಮತದ ಅಭಿಪ್ರಾಯಕ್ಕೆ ನನ್ನದೇನು ತಕರಾರಿಲ್ಲ. ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತದೆ’ ಎಂದರು.

‘ನಾನು ಬಸವಣ್ಣನ ವಿಚಾರಗಳನ್ನು ಗೌರವಿಸುತ್ತೇನೆ. ಅವರ ತತ್ವ, ಸಿದ್ಧಾಂತಗಳಿಗೆ ನನ್ನ ಸಹಮತ ಇದೆ. ನಾನು ಬಸವ ಜಯಂತಿ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಸಾಲ ಮನ್ನಾ: ಹಣ ಕೇಳಿದರೆ ಬಿಡುಗಡೆ’

'ಸಾಲ ಮನ್ನಾಕ್ಕಾಗಿ ಬ್ಯಾಂಕಿನವರು ಹಣ ಕೇಳಿದರೆ ತಕ್ಷಣ ಬಿಡುಗಡೆ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪೆಕ್ಸ್ ಬ್ಯಾಂಕ್ ಆಗಲಿ ಅಥವಾ ಯಾವ ಬ್ಯಾಂಕ್‌ಗಳೂ ಹಣ ಕೇಳಿಲ್ಲ. ಹಣ ಕೇಳಿದರೆ, ಅಗತ್ಯವಿದ್ದರೆ ಬಿಡುಗಡೆ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಕಾಂಗ್ರೆಸ್‌ನವರೇ ಮುಂದಿನ ವರ್ಷ ದಸರಾ ಉದ್ಘಾಟಿಸುತ್ತಾರೆ. ನನ್ನ ನಾಯಕತ್ವದಲ್ಲೇ ಮುಂಬರುವ ವಿಧಾನಸಭಾ ಚುನಾವಣೆ ನಡೆಯುತ್ತದೆ. ಶಾಸಕಾಂಗ ಪಕ್ಷ ನಾಯಕನನ್ನು ಆಯ್ಕೆ ಮಾಡುತ್ತದೆ. ಈ ವಿಷಯದಲ್ಲಿ ಮಾಧ್ಯಮಗಳು ಗೊಂದಲ ಸೃಷ್ಠಿಸುತ್ತಿವೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಕಾಲ ಯೋಜನೆ ಮುಚ್ಚುವುದಿಲ್ಲ. ಜನರಿಗೆ ಸಮಸ್ಯೆಗಳು ಪರಿಹಾರವಾಗಬೇಕು. ವೇಗವಾಗಿ ಕೆಲಸ ಆಗಬೇಕು. ಅದನ್ನು ಸರಿಪಡಿಸುತ್ತಿದ್ದೇವೆ’ ಎಂದರು.

‘ಕೇಂದ್ರದ ಮನ್ ಕಿ ಬಾತ್‌ಗೆ ಪರ್ಯಾಯವಾಗಿ ನಾವು ಕಾಮ್‌ ಕಿ ಬಾತ್‌ ಮಾಡುತ್ತಿದ್ದೇವೆ. ಅವರದ್ದು ಬರೀ ಮಾತು. ಜನರ ಸಮಸ್ಯೆ ಬಗೆಹರಿಸುವಂಥದ್ದಲ್ಲ. ನಮ್ಮದು ಜನರ ಸಮಸ್ಯೆಗೆ ಪರಿಹಾರ ನೀಡುವ ಕೆಲಸ. ಅದಕ್ಕೆ ನಮ್ಮದು ಕಾಮ್‌ ಕಿ ಬಾತ್‌. ಆದರೆ, ಇದು ಬಿಜೆಪಿ ಕಾಪಿಯಲ್ಲ’ ಎಂದು ಪ್ರತಿಕ್ರಿಯಿಸಿದರು.

'ದೇಶದಲ್ಲಿ ಬೆಂಕಿ ಹಚ್ಚುವುದು ಆರೆಸ್ಸೆಸ್ಸ್‌ನವರಿಗೆ ರಕ್ತಗತವಾಗಿದೆ. ನಮ್ಮದು ಸಾಮರಸ್ಯ ಸೃಷ್ಟಿ ಮಾಡುವಂತಹ ಕೆಲಸ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry