ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡಕ್ಕಿ ಭಟ್ಟಿಗಳಿಗೆ ‘ಸ್ಮಾರ್ಟ್‌’ ಭಯ

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಲ್ಲಿ ಕಮಟು ಹೊಗೆ ಮೂಗಿಗೆ ಬಡಿಯುವುದಿಲ್ಲ... ರಾಶಿ ರಾಶಿ ಟೈರ್‌ಗಳೂ ಕಾಣಿಸುವುದಿಲ್ಲ... ಹೊಗೆಯ ಕಿಟ್ಟ ಮೆತ್ತಿಕೊಂಡಿದ್ದ ಗೋಡೆಗಳು ಸ್ವಚ್ಛವಾಗಿವೆ. ಆದರೆ, ಹಬೆಯ ನಡುವೆ ಮಂಡಕ್ಕಿ ತಯಾರಿಸುವ ಮನಸ್ಸುಗಳಲ್ಲಿ ಆತಂಕ ಆವರಿಸಿದೆ. ಊರ ಜನರ ಉಸಿರು ಕಟ್ಟಿಸುತ್ತಿದ್ದ ದಾವಣಗೆರೆಯ ಮಂಡಕ್ಕಿ ಭಟ್ಟಿಗಳ ಸದ್ಯದ ಚಿತ್ರಣವಿದು.

ರಾಜ್ಯದ ಮೂಲೆ ಮೂಲೆಗಳಿಗೂ ಮಂಡಕ್ಕಿ ಪೂರೈಸುತ್ತಿದ್ದ ಭಟ್ಟಿಗಳಿಗೆ ದಶಕಗಳ ಕಾಲ ಅಂಟಿದ್ದ ಕಪ್ಪು ಕಲೆ ಮಾಸುತ್ತಿದೆ. ಸಂಘಟಿತರಾಗಿರುವ ಕಾರ್ಮಿಕರು ಟೈರ್‌ಗಳನ್ನು ಸುಟ್ಟು ವಾತಾವರಣ ಹಾಳುಗೆಡುವುದಿಲ್ಲ ಎಂದು ಸಂಕಲ್ಪ ಮಾಡಿದ್ದಾರೆ. ತಮ್ಮನ್ನು ಸುಧಾರಣೆಗೆ ಒಡ್ಡಿಕೊಳ್ಳುತ್ತಿದ್ದಾರೆ. ಆದರೆ, ಸಾವಿರಕ್ಕೂ ಮಿಕ್ಕಿ ಇರುವ ಮಂಡಕ್ಕಿ ಭಟ್ಟಿಗಳ ಹತ್ತು ಸಾವಿರ ಕುಟುಂಬಗಳ ದುಗುಡ ಮುಂದುವರಿದಿದೆ.

1970–80ರ ದಶಕ ಶೇಂಗಾ ಎಣ್ಣೆ ಗಿರಣಿೆಗಳ ಪರ್ವಕಾಲ. ದಾವಣಗೆರೆ ನಗರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಗಳಲ್ಲಿದ್ದ ಎಣ್ಣೆ ಗಿರಣಿಗಳಲ್ಲಿ ಅಗ್ಗದ ಬೆಲೆಗೆ ಶೇಂಗಾ ಸಿಪ್ಪೆ ಸಿಗುತ್ತಿತ್ತು. ಇದನ್ನು ಉರುವಲಾಗಿ ಬಳಸಿ ಭತ್ತ ಹುರಿದು ಮಂಡಕ್ಕಿ ತಯಾರಿಸುವ ಕಸುಬು ದಾವಣಗೆರೆಯಲ್ಲಿ ಹೆಚ್ಚಿತು.

ಹತ್ತಿ ಗಿರಣಿಗಳ ಕಾರ್ಮಿಕರು ಮಂಡಕ್ಕಿ ಭಟ್ಟಿಗಳತ್ತ ಹೊರಳಿದರು. ಮನೆಯ ಹಿತ್ತಲ ಮೂಲೆಯಲ್ಲಿ ಮಣ್ಣಿನಿಂದ ಭಟ್ಟಿ ಕಟ್ಟಿ ಭತ್ತ ಹುರಿಯಲಾರಂಭಿಸಿದರು. ರಾಜ್ಯದಿಂದಾಚೆಗೂ ದಾವಣಗೆರೆಯ ಮಂಡಕ್ಕಿ ರುಚಿ ಹರಡಿದರು. ಹೀಗೆ ಊರ ತುಂಬಾ ಚದುರಿಹೋಗಿದ್ದ ಭಟ್ಟಿಗಳಿಗಾಗಿ 1984ರಲ್ಲಿ ಜಗಳೂರು ರಸ್ತೆಯಲ್ಲಿ 75 ಎಕರೆ ಭೂಮಿ ನೀಡಲಾಯಿತು. ಅಂದಿನಿಂದ ಮಂಡಕ್ಕಿ ಭಟ್ಟಿ ಉದ್ಯಮ ವಿಸ್ತಾರವಾಗಿ ಬೆಳೆದಿದೆ. ಭಟ್ಟಿ ಮಾಲೀಕರಿಗೆ ಹೆಚ್ಚು ಲಾಭ ಸಿಗದಿದ್ದರೂ ಹತ್ತು ಸಾವಿರ ಕುಟುಂಬಗಳಿಗೆ ಬದುಕಿನಾಶ್ರಯ ಕೊಟ್ಟಿದೆ. ಏಳು–ಬೀಳುಗಳ ನಡುವೆಯೇ ಏದುಸಿರು ಬಿಡುತ್ತಾ ಉದ್ಯಮ ಸಾಗಿದೆ.

ದಾವಣಗೆರೆಯಲ್ಲಿ ಮಂಡಕ್ಕಿ ಭಟ್ಟಿ ಉದ್ಯಮ ಬೆಳೆಯಲು ಕಾರಣವಾಗಿದ್ದ ಎಣ್ಣೆಗಾಣಗಳು ಒಂದೊಂದಾಗಿ ಮುಚ್ಚಿದವು. ಇದರಿಂದ ಭಟ್ಟಿಗಳಿಗೆ ಬೇಕಾದ ಶೇಂಗಾ ಸಿಪ್ಪೆ ಸಿಗದಾಯಿತು. ಸಿಪ್ಪೆಗೆ ಪರ್ಯಾಯವಾಗಿ ಟೈರ್‌ ಬಳಕೆ ಆರಂಭವಾಯಿತು. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಅಸ್ತಮಾ ಪೀಡಿತರೂ ಹೆಚ್ಚಿದರು. ಮಾಲಿನ್ಯದಿಂದ ಕಾರ್ಮಿಕರೂ ಹಲವು ರೋಗಗಳಿಗೆ ತುತ್ತಾದರು. ಹೀಗಾಗಿ ಮಂಡಕ್ಕಿ ಭಟ್ಟಿಯ ಆಧುನೀಕರಣ ಹಾಗೂ ಸ್ಥಳಾಂತರದ ಕೂಗು ಹೆಚ್ಚಿತು. ಭಟ್ಟಿ ಆಧುನೀಕರಣವಾಗಬೇಕೆಂಬ ದಶಕದ ಬೇಡಿಕೆಗೆ ಸ್ಮಾರ್ಟ್‌ ಸಿಟಿ ಯೋಜನೆ ಬಲ ತುಂಬಿದೆ. ಆದರೆ, ಇದು ತಮ್ಮ ಕೆಲಸಕ್ಕೆ ಕುತ್ತು ತಂದರೆ ಎಂಬ ಭಯ ಕಾರ್ಮಿಕರನ್ನು ಕಾಡಲಾರಂಭಿಸಿದೆ. ಭಟ್ಟಿ ಸ್ಥಳಾಂತರಕ್ಕೆ ಪರ– ವಿರೋಧದ ನಿಲುವುಗಳು ಕಾರ್ಮಿಕ ವಲಯದಲ್ಲೇ ಕೇಳಿಬಂದಿವೆ.

'ಮಂಡಕ್ಕಿ ಭಟ್ಟಿಗಳ ಲೆಕ್ಕಾಚಾರ ಸೂಕ್ಷ್ಮವಾದದ್ದು. 75 ಕೆ.ಜಿ. ತೂಕದ ಒಂದು ಚೀಲ ಭತ್ತದಿಂದ ಮಂಡಕ್ಕಿ ತಯಾರಿಸಲು ಕನಿಷ್ಠ ಆರು ಕಾರ್ಮಿಕರು ಬೇಕು. ಆದರೆ, ಆಧುನಿಕ ಯಂತ್ರಗಳಲ್ಲಿ ಮಂಡಕ್ಕಿ ತಯಾರಿಸಲು ಕನಿಷ್ಠ 25 ಚೀಲ ಭತ್ತ ಬೇಕು. ಇಷ್ಟು ಭತ್ತದಿಂದ ಮಂಡಕ್ಕಿ ತಯಾರಿಸಲು ಕೇವಲ ಇಬ್ಬರು ಕಾರ್ಮಿಕರು ಸಾಕು. ದೊಡ್ಡ ಪ್ರಮಾಣದ ಯಂತ್ರಗಳನ್ನು ಅಳವಡಿಸಿದರೆ ಬಹುತೇಕ ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ದಾವಣಗೆರೆ ಮಂಡಕ್ಕಿ ಮತ್ತು ಅವಲಕ್ಕಿ ತಯಾರಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಸಾದಿಕ್‌.

‘ಭತ್ತ ಹುರಿಯುವ, ಬೇಯಿಸುವ ಹದ ಕುಶಲ ಕಾರ್ಮಿಕರಿಗಷ್ಟೇ ಗೊತ್ತು. ಯಂತ್ರದಿಂದ ತಯಾರಿಸಿ ನೀಡುತ್ತೇವೆ ಎಂದು ಹೇಳುವ ತಂತ್ರಜ್ಞರಿಗೆ ಮಂಡಕ್ಕಿ ತಯಾರಿಸುವ ಕಲೆ ಗೊತ್ತಿಲ್ಲ. ಇಂಥ ಯಂತ್ರಗಳಲ್ಲಿ ತಯಾರಿಸಲು ಮುಂದಾದರೆ ಮಂಡಕ್ಕಿ ಉತ್ಪಾದನೆ ಪ್ರಮಾಣ ಕುಸಿಯುವ ಸಾಧ್ಯತೆಯೇ ಹೆಚ್ಚು. ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಆಧುನಿಕ ಮಂಡಕ್ಕಿ ಭಟ್ಟಿಗಳಿವೆ. ಅವುಗಳಲ್ಲಿ ಒಂದು ಚೀಲ ಭತ್ತದಿಂದ ಕೇವಲ 6 ಚೀಲದಿಂದ 7 ಚೀಲ ಮಂಡಕ್ಕಿ ತಯಾರಿಸಲಾಗುತ್ತದೆ. ಈ ಯಂತ್ರಗಳಿಂದ ತಯಾರಿಸುವ ಮಂಡಕ್ಕಿಯ ರುಚಿಯಲ್ಲೂ ವ್ಯತ್ಯಾಸವಿರುತ್ತದೆ’ ಎನ್ನುತ್ತಾರೆ ಸಂಘದ ಅಧ್ಯಕ್ಷ ಎ.ಬಿ.ಅಬ್ದುಲ್‌ ರಹೀಂ.

‘ಇಲ್ಲಿ ಇರುವ ಮಂಡಕ್ಕಿ ಭಟ್ಟಿ ಮಾಲೀಕರು ಬಡವರು. ಐದಾರು ಮಂದಿ ಸೇರಿ 50 ಚೀಲ ಭತ್ತ ಖರೀದಿಸಿ ತರುತ್ತಾರೆ. ಅದರಿಂದ ಮಂಡಕ್ಕಿ ತಯಾರಿಸಿ, ಮಾರಿ ಬಂದ ಹಣದಲ್ಲಿ ಸಂಸಾರ ಸಾಗಿಸಬೇಕು. ಕಾರ್ಮಿಕರಿಗೆ ಕೂಲಿಯನ್ನೂ ಕೊಡಬೇಕು. ಮತ್ತೆ ಭತ್ತ ಖರೀದಿಸಲು ಬಂಡವಾಳವನ್ನೂ ಉಳಿಸಿಕೊಳ್ಳಬೇಕು. ಯಂತ್ರಗಳ ಬಕಾಸುರ ಹೊಟ್ಟೆ ಹಿಡಿಸುವಷ್ಟು ಭತ್ತ ತಂದು ಸುರಿಯುವ ಆರ್ಥಿಕ ಸಾಮರ್ಥ್ಯ ಈ ವ್ಯಾಪಾರಿಗಳಿಗಿಲ್ಲ. ಹೀಗಾಗಿ ಈಗಿರುವ ಯಂತ್ರಗಳನ್ನೇ ಸುಧಾರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು’ ಎಂಬುದು ರಹೀಂ ಅವರ ಅಭಿಮತ.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿ ಆಧುನೀಕರಣಕ್ಕೆ ₹ 372.90 ಕೋಟಿ ಮಂಜೂರಾಗಿದೆ. ಮಂಡಕ್ಕಿ ಭಟ್ಟಿ ಆಧುನೀಕರಣಕ್ಕೆ ಯೋಜನೆ ರೂಪಿಸಲು ಟೆಂಡರ್‌ ಕೂಡ ಕರೆಯಲಾಗಿದೆ. ಮೂಲ ಸೌಲಭ್ಯ ಕಲ್ಪಿಸುವುದೂ ಸೇರಿದಂತೆ ಆಧುನಿಕ ಯಂತ್ರಗಳನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ನಮಗೆ ದೊಡ್ಡ ಯಂತ್ರಗಳು ಬೇಡ. ಈಗ ಇರುವಷ್ಟೇ ಸಾಮರ್ಥ್ಯದ ಆಧುನಿಕ ಘಟಕಗಳನ್ನು ವಿನ್ಯಾಸ ಮಾಡಿಕೊಡಿ’ ಎಂದು ಒತ್ತಾಯಿಸುತ್ತಾರೆ ಅವರು.

‘ಋತುಮಾನಕ್ಕೆ ತಕ್ಕಂತೆ ಮಂಡಕ್ಕಿಯ ಬೇಡಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಇದನ್ನು ಅವಲೋಕಿಸಿ ಮಂಡಕ್ಕಿ ತಯಾರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದರೆ ಸಾಮೂಹಿಕವಾಗಿ ತಯಾರಿಕೆ ನಿಲ್ಲಿಸಲು ಸಂಘದ ಸಭೆಯಲ್ಲಿ ನಿರ್ಣಯಿಸಲಾಗುತ್ತದೆ. ಪೈಪೋಟಿಗೆ ಬಿದ್ದು ವ್ಯಾಪಾರ ಮಾಡಿ ನಷ್ಟ ಅನುಭವಿಸಬಾರದು ಎಂದು ತಯಾರಕರಿಗೆ ತಿಳಿಹೇಳಲಾಗುತ್ತದೆ.

ಹೀಗಾಗಿ ಮಂಡಕ್ಕಿ ತಯಾರಕರಿಗೆ, ವ್ಯಾಪಾರಸ್ಥರಿಗೆ ಆಗುತ್ತಿದ್ದ ನಷ್ಟ ನಿಂತಿದೆ. ಆದರೆ, ದೊಡ್ಡ ಯಂತ್ರಗಳುಳ್ಳ ಘಟಕಗಳು ಸ್ಥಾಪನೆಗೊಂಡರೆ ಮಂಡಕ್ಕಿ ಉತ್ಪಾದನೆ ನಮ್ಮ ನಿಯಂತ್ರಣ ತಪ್ಪುತ್ತದೆ. ಮಾರುಕಟ್ಟೆಯಲ್ಲಿ ಏರುಪೇರಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಇದು ಇಡೀ ಉದ್ಯಮವನ್ನು ವಿನಾಶದ ಹಾದಿಗೆ ಕೊಂಡೊಯ್ಯಬಲ್ಲದು’ ಎಂದು ವಿಶ್ಲೇಷಿಸುತ್ತಾರೆ ರಹೀಂ.

ಮಂಡಕ್ಕಿ ತಿಂದು ನೀರು ಕುಡಿದಿದ್ದೇವೆ !
ಮಂಡಕ್ಕಿ ವ್ಯಾಪಾರವೇ ವಿಚಿತ್ರ. ಮಾರುಕಟ್ಟೆಯಲ್ಲಿ ಒಮ್ಮೊಮ್ಮೆ ಮಂಡಕ್ಕಿಗೆ ಇದ್ದಕ್ಕಿದ್ದಂತೆ ಬೇಡಿಕೆ ಕುಸಿದು ಬಿಡುತ್ತದೆ. ಆಗ ಮಂಡಕ್ಕಿ ತಿಂದು ನೀರು ಕುಡಿದು ಮಲಗಿದ್ದಿದೆ. ಜನರ ರುಚಿ ತಣಿಸುವ ಚುರುಮುರಿ ನಮ್ಮ ಹೊಟ್ಟೆಯನ್ನು ಹೀಗೂ ತುಂಬಿಸಿದೆ ಎಂದು ಆಸೀಫ್‌ ನಕ್ಕರು.

‘ಮಂಡಕ್ಕಿಗೆ ಮೊದಲಿನಷ್ಟು ಬೇಡಿಕೆ ಇಲ್ಲವೆಂದೇ ಹೇಳಬಹುದು. ಬಹುರಾಷ್ಟ್ರೀಯ ಕಂಪೆನಿಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಆಹಾರ ಉತ್ಪನ್ನಗಳ ಪೈಪೋಟಿ ಎದುರಿಸುವಲ್ಲಿ ಮಂಡಕ್ಕಿ ಏದುಸಿರು ಬಿಡುತ್ತಿದೆ. ಬಣ್ಣ, ಬಣ್ಣದ ಆಕರ್ಷಕ ಪೊಟ್ಟಣಗಳಲ್ಲಿ ಮಾರುವ ಚಿಪ್ಸ್‌, ಬಿಸ್ಕತ್ತು, ಕೇಕ್‌, ಚಾಕಲೇಟ್‌ಗಳತ್ತ ಯುವಜನಾಂಗ ಆಕರ್ಷಿತವಾಗುತ್ತಿದೆ.

ಮಂಡಕ್ಕಿಯಂಥ ಸಾಂಪ್ರದಾಯಿಕ ಆಹಾರದ ಬಗೆಗಿನ ಒಲವು ನಿಧಾನವಾಗಿ ಕಡಿಮೆಯಾಗುತ್ತಿದೆ. ಎಣ್ಣೆಯಲ್ಲಿ ಕರಿದ, ರಾಸಾಯನಿಕ ಬಣ್ಣ, ಕೃತಕ ರುಚಿಕಾರಕಗಳನ್ನು ಬೆರೆಸಿದ ತಿಂಡಿಗಳು ತಿನ್ನುವವರ ಆರೋಗ್ಯಕ್ಕೂ ಮಾರಕ. ಹೀಗಾಗಿ ಸಹಜ ರುಚಿ ಹೊಂದಿರುವ ಮಂಡಕ್ಕಿ ಸೇವನೆಯನ್ನು ಪ್ರೋತ್ಸಾಹಿಸಬೇಕು. ಹೀಗಾಗಿ ಮಂಡಕ್ಕಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಜತೆಗೆ ದೇಸಿ ಆಹಾರ ವೈವಿಧ್ಯವನ್ನೂ ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡುತ್ತಾರೆ ಸಾದಿಕ್.

‘ದಾವಣಗೆರೆಯಲ್ಲಿ ಬಹಳ ಕೊಳಕಾಗಿ ಮಂಡಕ್ಕಿ ತಯಾರಿಸಲಾಗುತ್ತದೆ ಎಂದು ವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರ ಮಾಡಲಾಯಿತು. ಮಂಡಕ್ಕಿ ಭಟ್ಟಿಯ ಸಮಸ್ಯೆಯನ್ನು ಅವರು ಸಂಪೂರ್ಣವಾಗಿ ಬಿಡಿಸಿಡಲಿಲ್ಲ. ಸರ್ಕಾರ ಸೌಲಭ್ಯ ಕಲ್ಪಿಸಿಲ್ಲ. ಹಂದಿಗಳ ಕಾಟ ತಡೆಗಟ್ಟಿಲ್ಲ. ಇರುವ ಸೌಲಭ್ಯದಲ್ಲೇ ಮಂಡಕ್ಕಿ ಉತ್ಪಾದನೆಯನ್ನು ಆದಷ್ಟು ಸ್ವಚ್ಛವಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ.

ಭಟ್ಟಿ ಕಾರ್ಮಿಕರಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಅವರಿಗೆ ಜಾಗೃತಿ ಮೂಡಿಸಿ ಸ್ವಚ್ಛತೆ ಕಾಪಾಡುತ್ತಿದ್ದೇವೆ. ಈ ಅಂಶಗಳನ್ನೆಲ್ಲಾ ಮಾಧ್ಯಮದವರು ತೋರಿಸಲಿಲ್ಲ. ಮಂಡಕ್ಕಿ ತಯಾರಿಕೆ ಬಗ್ಗೆ ಜನರಲ್ಲಿ ಭಯ ಹುಟ್ಟಿಸುವಂತೆ ಸುದ್ದಿ ಪ್ರಸಾರ ಮಾಡಿದರು. ಇದರಿಂದ ಸುಮಾರು ಒಂದು ವರ್ಷ ಮಂಡಕ್ಕಿ ವ್ಯಾಪಾರಕ್ಕೆ ಭಾರಿ ಹಿನ್ನಡೆಯಾಯಿತು. ಭಟ್ಟಿ ಮಾಲೀಕರು, ಕಾರ್ಮಿಕರು ಭಾರಿ ನಷ್ಟ ಅನುಭವಿಸಬೇಕಾಯಿತು’ ಎಂದು ವಿವರಿಸುತ್ತಾರೆ ಸಂಘದ ಅಧ್ಯಕ್ಷ ರಹೀಂ.

ಮಂಡಕ್ಕಿ ಭಟ್ಟಿ ಸುತ್ತ ಬೆಳೆದ ಊರು
1984ರಲ್ಲಿ ಮಂಡಕ್ಕಿ ಭಟ್ಟಿಗಾಗಿ ನೀಡಿದ ಜಾಗ ಊರ ಹೊರಗಿತ್ತು. ಜಾಲಿ ಪೊದೆಗಳಿಂದ ಆವೃತ್ತವಾಗಿದ್ದ ಈ ಜಾಗಕ್ಕೆ ಹೋಗಲೂ ಜನ ಹೆದರುತ್ತಿದ್ದರು. ಅಂತಹ ಸ್ಥಳದಲ್ಲಿ ಕಷ್ಟಪಟ್ಟು ಜೀವನ ಕಟ್ಟಿಕೊಂಡೆವು. ಊರು ಈ ಪ್ರದೇಶವನ್ನೂ ಮೀರಿ ಬೆಳೆಯಿತು. ಊರ ನಡುವೆ ಮಂಡಕ್ಕಿ ಭಟ್ಟಿ ನಡೆಸುತ್ತಿದ್ದಾರೆ ಎಂಬ ಕೋಪ ಜನರಲ್ಲಿ ಮೂಡಿದೆ. ಇದು ಸರ್ಕಾರವೇ ಕೊಟ್ಟ ಜಾಗ. ನಮಗೆ ಇಲ್ಲಿಯೇ ಮಂಡಕ್ಕಿ ತಯಾರಿಸಬೇಕು ಎಂಬ ಹಠ ಇಲ್ಲ. ಸುಸಜ್ಜಿತ ಜಾಗ ನೀಡಿ, ಸೌಲಭ್ಯ ಒದಗಿಸಿ, ಭಟ್ಟಿ ಕಟ್ಟಿಕೊಡಲಿ. ನಾವು ಸ್ಥಳಾಂತರವಾಗಲು ಸಿದ್ಧರಿದ್ದೇವೆ ಎಂಬುದು ಒಂದಷ್ಟು ಕಾರ್ಮಿಕರ ಮಾತು.

ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿರುವಂತೆ ಮಂಡಕ್ಕಿ, ಮೆಣಸಿನಕಾಯಿಗೂ ಹೆಸರು ವಾಸಿ. ಮಂಡಕ್ಕಿ ಭಟ್ಟಿಗಳಲ್ಲಿ ಸಿದ್ಧವಾಗುವ ಮಲ್ಲಿಗೆಯಂತ ಮಂಡಕ್ಕಿಗೆ ಹದವಾದ ಮಸಾಲೆ ಬೆರೆಸಿ ತಯಾರಿಸುವ ಗಿರ್‌ಮಿಟ್‌ ತಿನ್ನದವರು ದಾವಣಗೆರೆಯಲ್ಲಿ ಸಿಗಲಾರರು.

ದಾವಣಗೆರೆಯ ಮಂಡಕ್ಕಿಯ ಕರ್ನಾಟಕದ ಬೇರೆಡೆ ಸಿಗುವ ಮಂಡಕ್ಕಿಗಿಂತ ಭಿನ್ನ. ಅಷ್ಟು ಗಟ್ಟಿಯಾಗಿರದ ಮಂಡಕ್ಕಿಯನ್ನು ಬಾಯಿಗೆ ಹಾಕಿಕೊಂಡ ಅರೆ ಕ್ಷಣದಲ್ಲಿ ಕರಗಿ ತಿಂದವರ ಮನಸ್ಸನ್ನು ಅರಳಿಸುತ್ತದೆ. ಹಳೆಯ ದಾವಣಗೆರೆಯ ಹೊಟ್ಟೆ ನಂಜಪ್ಪನ ಅಂಗಡಿ, ರಾಮ್‌ ಅಂಡ್‌ ಕೋ ಸರ್ಕಲ್‌ನ ಸುಬ್ಬಣ್ಣನ ಮಂಡಕ್ಕಿ ಉಸಲಿ ಹೋಟೆಲ್‌, ಜಯದೇವ ವೃತ್ತದ ದುರ್ಗಾ ಮಸಾಲ ಮಂಡಕ್ಕಿ... ಇಂಥ ಹತ್ತಕ್ಕೂ ಹೆಚ್ಚು ಮಂಡಕ್ಕಿ ಅಂಗಡಿಗಳು ಸಂಜೆಯಾಗುತ್ತಿದ್ದಂತೆ ದಾವಣಗೆರೆ ನಗರದ ಮಂದಿಯ ನಾಲಿಗೆ ನಲಿದಾಡುವಂತೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT