7

ಹಣ್ಣಿನ ರುಚಿಯ ಐಸ್‌ ಕ್ರೀಂ

Published:
Updated:
ಹಣ್ಣಿನ ರುಚಿಯ ಐಸ್‌ ಕ್ರೀಂ

ಐಸ್‌ ಕ್ರೀಂ ಅಂಗಡಿ ಒಳಗೆ ಕಾಲಿಟ್ಟೊಡನೆಯೇ ಗೋಡೆಯ ತುಂಬಾ ಅಂಟಿಸಿರುವ ಹಣ್ಣುಗಳ ಫೋಟೊಗಳ ಮೇಲೆಯೇ ಕಣ್ಣು ಹೊರಳಿತು. ಮುಂದೆ ಹೋಗಿ ಐಸ್‌ ಕ್ರೀಂ ಕೇಳಿದಾಗ ಅದೇ ಫೋಟೊಗಳನ್ನೇ ತೋರಿಸಿ ‘ಯಾವ ಹಣ್ಣಿನ ಸ್ವಾದದ ಐಸ್‌ ಕ್ರೀಂ ಬೇಕು’ ಎಂದು ಕೇಳಿದರು.

’ಸೀತಾಫಲ’ ಎಂದು ಹೇಳಿದ್ದಾಯ್ತು. ಒಂದು ಕಪ್‌ ನಲ್ಲಿ ಚಾಕೊಚಿಪ್ಸ್‌ ನಿಂದ ಅಲಂಕರಿಸಿದ ಐಸ್‌ ಕ್ರೀಂ ಕೈಗಿಟ್ಟರು. ಬಾಯಿಗಿಟ್ಟಾಗಲೇ ಸೀತಾಫಲ ಹಣ್ಣಿನ ರುಚಿಯೇ ನಾಲಿಗೆಯನ್ನು ಆವರಿಸಿಕೊಳ್ಳುತ್ತದೆ. ಹಾಲು ಹಾಗೂ ಹಣ್ಣಿನ ಘಮವನ್ನು ಅನುಭವಿಸುತ್ತಾ ತಿನ್ನುತ್ತಿರುವಾಗ ಐಸ್‌ ಕ್ರೀಂ ಮುಗಿದಿದ್ದೇ ಗೊತ್ತಾಗಲಿಲ್ಲ.

ಅಂಗಡಿಯವರೇ ‘ಎಳನೀರು ಐಸ್‌ ಕ್ರೀಂ ರುಚಿ ನೋಡಿ’ ಎಂದು ಹೇಳಿದರು. ಈ ಐಸ್‌ ಕ್ರೀ ತಯಾರಿಸಲು ಕೃತಕ ಪದಾರ್ಥಗಳನ್ನು ಬಳಸಿಲ್ಲ. ನೈಸರ್ಗಿಕವಾಗಿ ಬೆಳೆದ ಎಳನೀರು, ಎಳನೀರಿನ ಗಂಜಿ, ಹಾಲಿನ ಕೆನೆ ಹಾಗೂ ಸ್ವಲ್ಪ ಪ್ರಮಾಣದ ಸಕ್ಕರೆಯಿಂದ ಮಾಡಿದ ಐಸ್‌ ಕ್ರೀಂ ಇದು. ತಿನ್ನುವಾಗ ವಿಶೇಷ ಸ್ವಾದ ನೀಡಿತು.

ಬಹುತೇಕ ಐಸ್‌ ಕ್ರೀಂ ಪ್ರಿಯರೆಲ್ಲರೂ ‘ಥ್ಯಾಂಕೋಸ್‌ ನ್ಯಾಚುರಲ್‌ ಐಸ್‌ ಕ್ರೀಂ’ ಹೆಸರು ಕೇಳಿರಬಹುದು. ಹಣ್ಣುಗಳ ನೈಸರ್ಗಿಕ ರುಚಿಯ ಐಸ್‌ ಕ್ರೀಂ ರುಚಿ ಸವಿಯಬೇಕು ಎಂದು ಬಯಸುವವರಿಗೆ ಈ ಐಸ್‌ ಕ್ರೀಂ ಅಂಗಡಿ ನೆಚ್ಚಿನ ಆಯ್ಕೆ.

ಎಳನೀರು ಐಸ್‌ ಕ್ರೀಂ, ಮಿರ್ಚಿ (ಹಸಿರು ಮೆಣಸಿನಕಾಯಿ) ಐಸ್‌ ಕ್ರೀಂ, ಶುಂಠಿ ಐಸ್‌ ಕ್ರೀಂ, ನಿಂಬೆಹಣ್ಣಿನ ಐಸ್‌ ಕ್ರೀಂ ಇಲ್ಲಿ ಜನಪ್ರಿಯ. ಮಿರ್ಚಿ ಐಸ್‌ ಕ್ರೀಂ ಒಂದು ಚಮಚ ಬಾಯಿಗೆ ಇಟ್ಟೊಡನೇ ಸಿಹಿ ಅನ್ನಿಸುತ್ತದೆ. ಇನ್ನೇನು ಬಾಯಿಯಲ್ಲಿ ಕರಗಿತು ಅಂದಾಗ ನಾಲಿಗೆಯಿಡೀ ಖಾರಖಾರ.  ಯಮ್ಮಿ ಯಮ್ಮಿ ಯಾಗಿರುವ ಈ ಐಸ್‌ ಕ್ರೀಂ ಅನ್ನು ಮೊದಲ ಬಾರಿಗೆ ತಿನ್ನುವವರಿಗೆ ಸಖತ್‌ ಮಜಾ ಸಿಗುತ್ತದೆ. ಶುಂಠಿ ಐಸ್‌ ಕ್ರೀಂ ಕೂಡಾ ಹಾಗೆಯೇ. ಹಾಲು, ಹಣ್ಣುಗಳ ಮಿಶ್ರಣದ ಜೊತೆಗೆ ಶುಂಠಿ ಸ್ವಾದದ ಐಸ್‌ ಕ್ರಿಂ ತಿನ್ನುವುದು ಮಜಾ ಎನಿಸುತ್ತೆ.

ಈ ಐಸ್‌ ಕ್ರೀಂ ಪಾರ್ಲರ್ ಮಾಲೀಕರು ಕೆ.ರಾಘವೇಂದ್ರ ಥಾಣೆ. ದೇಶದ 80 ನಗರಗಳಲ್ಲಿ ‘ಥ್ಯಾಂಕೋಸ್‌ ನ್ಯಾಚುರಲ್‌ ಐಸ್‌ ಕ್ರೀಂ’ ಶಾಖೆಗಳಿವೆ. ನಗರದಲ್ಲಿ ಗಾಂಧಿ ಬಜಾರ್‌, ಬಾಣಸವಾಡಿ, ಮತ್ತಿಕೆರೆ, ಎಚ್‌ ಎಸ್ ಆರ್‌ ಲೇಔಟ್‌, ರಾಜಾಜಿನಗರ, ಹನುಮಂತನಗರ, ಬನಶಂಕರಿ ಎರಡನೇ ಹಂತ ಸೇರಿ ಒಟ್ಟು 12 ಶಾಖೆಗಳಿವೆ. ಮತ್ತಿಕೆರೆಯಲ್ಲಿ ತಮ್ಮದೇ ಆದ ಆಧುನಿಕ ಸೆಂಟ್ರಲೈಸ್ಡ್‌ ಕಿಚನ್‌ ಹೊಂದಿರುವ ಥ್ಯಾಂಕೋಸ್‌ ಗುಣಮಟ್ಟ ಮತ್ತು ಶುಚಿರುಚಿಗೂ ಪ್ರಾಮುಖ್ಯತೆ ನೀಡುತ್ತದೆ.

ಇಲ್ಲಿ ರೆಗ್ಯುಲರ್‌ ಐಸ್‌ ಕ್ರೀಂ, ಕ್ಲಾಸಿಕ್‌ ಐಸ್‌ ಕ್ರೀಂ, ಪ್ರೀಮಿಯಂ, ಶುಗರ್‌ ಫ್ರೀ ಐಸ್‌ ಕ್ರೀಂ ಹೀಗೆ ನಾಲ್ಕು ವಿಭಾಗಗಳಲ್ಲಿ ಐಸ್‌ ಕ್ರೀಂ ಲಭ್ಯ. ರೆಗ್ಯುಲರ್‌ ಐಸ್‌ ಕ್ರೀಂನಲ್ಲಿ ಹಲಸಿನಹಣ್ಣು, ಪಪ್ಪಾಯ, ಸೀತಾಫಲ, ಅನಾನಸು, ಅಂಜೂರ, ಜೇನು, ಪೇರಳೆ, ಮೂಸಂಬಿ- ಹೀಗೆ ಸುಮಾರು 24 ನೈಸರ್ಗಿಕ ಹಣ್ಣುಗಳ ಐಸ್‌ ಕ್ರೀಂ ಇವೆ. ಕ್ಲಾಸಿಕ್‌ ನಲ್ಲಿ ಕಾಫಿ, ಶುಂಠಿ, ಪೇಡಾ, ಗ್ರೀನ್‌ ಮಿರ್ಚಿ, ಪಾನ್‌, ಗ್ರೀನ್‌ ಟೀ ಹೀಗೆ ವಿಭಿನ್ನ ರುಚಿಯ 52ಕ್ಕೂ ಹೆಚ್ಚು ರುಚಿಯ ಐಸ್‌ ಕ್ರೀಂಗಳನ್ನು ಸವಿಯಬಹುದು.

‘ಇಲ್ಲಿರುವ ಎಲ್ಲಾ ಐಸ್‌ ಕ್ರೀಂಗಳನ್ನು ಹಾಲು ಹಾಗೂ ಹಣ್ಣುಗಳನ್ನೇ ಬಳಸಿ ಮಾಡಲಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆ ಬಳಸುತ್ತೇವೆ. ಐಸ್‌ ಕ್ರೀಂ ಹೆಚ್ಚು ಸಿಹಿಯಾದಷ್ಟು ಹಣ್ಣಿನ ಸ್ವಾದ ಗೊತ್ತಾಗುವುದಿಲ್ಲ. ಐಸ್‌ ಕ್ರೀಂ ತಿನ್ನುವಾಗ ಹಾಲು ಹಾಗೂ ಹಣ್ಣುಗಳನ್ನೇ ತಿನ್ನುತ್ತಿದ್ದೇವೆ ಎಂದು ಗ್ರಾಹಕರಿಗೆ ಅನಿಸಬೇಕು ಎಂಬುದು ನಮ್ಮ ಉದ್ದೇಶ’ ಎಂದು ಹೇಳುತ್ತಾರೆ ನಗರದ ಫ್ರಾಂಚೈಸಿ ಅಭಿಷೇಕ್‌ ಮಿಶ್ರಾ.

ಮಧುಮೇಹದವರಿಗಾಗಿ ಶುಗರ್‌ ಫ್ರೀ ಐಸ್‌ ಕ್ರೀಂ ಲಭ್ಯ. ‘ಶುಗರ್‌ ಫ್ರೀ ಐಸ್‌ ಕ್ರೀಂಗೆ ಹಾಲು ಹಣ್ಣು ಹಾಗೂ ಶುಗರ್‌ ಫ್ರೀ ಸಕ್ಕರೆ ಬಳಸುತ್ತೇವೆ. ಮಧುಮೇಹಿಗಳಿಗೆ ಯಾವ ಹಣ್ಣುಗಳು ಸೂಕ್ತವೋ ಅದನ್ನೇ ಬಳಸುತ್ತೇವೆ. ಇದನ್ನು ಮೆನುವಿನಲ್ಲೇ ಹೇಳಿರುತ್ತೇವೆ. ಹೀಗಾಗಿ ಅವರಿಗೆ ಆಯ್ಕೆಯೂ ಸುಲಭವಾಗುತ್ತದೆ’ ಎನ್ನುತ್ತಾರೆ ಅವರು.

ಐಸ್‌ ಕ್ರೀಂಗೆ ಬಳಸುವ ಹಣ್ಣುಗಳನ್ನು ಆ ಹಣ್ಣುಗಳಿಗೆ ಹೆಸರುವಾಸಿಯಾದ ನಗರಗಳಿಂದಲೇ ತರಿಸುತ್ತಾರಂತೆ.

‘ಸ್ಟ್ರಾಬೆರಿಯನ್ನು ಮಹಾಬಲೇಶ್ವರ, ಎಳನೀರನ್ನು ಮೈಸೂರಿನಿಂದ ತರಿಸುತ್ತೇವೆ. ಬೇರೆ ಕಡೆಗಳಲ್ಲಿ ಐಸ್‌ ಕ್ರೀಂಗಳಿಗೆ ಮೊಟ್ಟೆ ಬಳಸುತ್ತಾರೆ. ಆದರೆ ನಾವು ಬರೀ ಹಣ್ಣು, ಹಾಲನ್ನಷ್ಟೇ ಬಳಸುತ್ತೇವೆ. ಕೃತಕ ಬಣ್ಣಗಳನ್ನೂ ಬಳಸುವುದಿಲ್ಲ’ ಎಂದು ಹೇಳುತ್ತಾರೆ ಅಭಿಷೇಕ್‌ ಮಿಶ್ರಾ. ಹೋಂ ಡೆಲಿವೆರಿ ಸೌಲಭ್ಯವೂ ಇದೆ. 

ರಸಾಸ್ವಾದ

ವಿಳಾಸ: ಥ್ಯಾಂಕೋಸ್‌ ನ್ಯಾಚುರಲ್‌ ಐಸ್‌ ಕ್ರಿಂ, ಡಿವಿಜಿ ರಸ್ತೆ, ಬಸವನಗುಡಿ

ಸಮಯ: ಬೆಳಿಗ್ಗೆ 11ರಿಂದ ರಾತ್ರಿ 11, ಮಾಹಿತಿಗೆ: 8722200011

ಇಬ್ಬರಿಗೆ: ₹120

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry