ಕುಟುಂಬದ ನಾಯಕರಿಂದ ಕಾಂಗ್ರೆಸ್‌ ಬೆಳೆಯದು: ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅಭಿಮತ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಕುಟುಂಬದ ನಾಯಕರಿಂದ ಕಾಂಗ್ರೆಸ್‌ ಬೆಳೆಯದು: ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅಭಿಮತ

Published:
Updated:
ಕುಟುಂಬದ ನಾಯಕರಿಂದ ಕಾಂಗ್ರೆಸ್‌ ಬೆಳೆಯದು: ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅಭಿಮತ

ವಾಷಿಂಗ್ಟನ್ : ‘ದಕ್ಷತೆ ಮತ್ತು ಸಾಮರ್ಥ್ಯದ ಆಧಾರದಲ್ಲಿ ನಾಯಕರನ್ನು ಆಯ್ಕೆ ಮಾಡದಿದ್ದಲ್ಲಿ ಮತ್ತು ತನ್ನ ಮಧ್ಯಮ ಮಾರ್ಗಕ್ಕೆ ಮರಳದಿದ್ದಲ್ಲಿ ಕಾಂಗ್ರೆಸ್‌ಗೆ ಜನರ ಬೆಂಬಲ ಹೆಚ್ಚುವುದು ಕಷ್ಟ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟರು.

‘ಹಲವು ದಶಕಗಳ ಕಾಲ ದೇಶವನ್ನು ಆಳಿದ್ದ ಕಾಂಗ್ರೆಸ್‌ ಈಗ ಅಪ್ರಸ್ತುತವೆನಿಸುತ್ತಿದೆ. ಭಾರತದ ವಾಸ್ತವ ಸ್ಥಿತಿ ಮತ್ತು ಭಾರತೀಯರ ಆಕಾಂಕ್ಷೆಗಳಿಗೂ ಹಾಗೂ ಕಾಂಗ್ರೆಸ್‌ನ ಈಗಿನ ವಿಚಾರಗಳಿಗೂ ಹೊಂದಾಣಿಕೆಯಾಗುತ್ತಿಲ್ಲ. ಕಾಂಗ್ರೆಸ್‌ ನಾಯಕತ್ವ ಮತ್ತು ನಿಲುವುಗಳ ಸಮಸ್ಯೆ ಎದುರಿಸುತ್ತಿದೆ’ ಎಂದು ಅವರು ಹೇಳಿದರು.

‘ಕಾಂಗ್ರೆಸ್ ಪಕ್ಷದೊಳಗಷ್ಟೇ ನಾಯಕರನ್ನು ಬೆಳೆಸುತ್ತಿದೆ. ಆ ನಾಯಕರನ್ನು ಭಾರತೀಯರು ಸ್ವೀಕರಿಸುತ್ತಿಲ್ಲ. ಭಾರತೀಯರು ತಮ್ಮ ನಾಯಕರನ್ನು ಅತ್ಯಂತ ಕಠಿಣವಾಗಿ ಪರೀಕ್ಷಿಸುತ್ತಾರೆ. ತಮ್ಮ ಜತೆ ಕುಟುಂಬದ ಹೆಸರು ಹೊಂದಿರುವ ನಾಯಕರನ್ನು ಒಪ್ಪಿಕೊಳ್ಳುವಂತಹ ಮನಸ್ಥಿತಿಯಲ್ಲಿ ಭಾರತೀಯರು ಈಗ ಇಲ್ಲ. ಹೀಗಾಗಿ ಕಾಂಗ್ರೆಸ್ ದಕ್ಷ ಮತ್ತು ಸಮರ್ಥ ನಾಯಕರನ್ನು ಬೆಳೆಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ತಿಂಗಳಷ್ಟೇ ಬರ್ಕ್‌ಲೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ, ವಂಶ ಪಾರಂಪರ್ಯ ರಾಜಕಾರಣ ಭಾರತದಲ್ಲಿ ವ್ಯಾಪಕವಾಗಿದೆ. ಉದ್ಯಮ, ಸಿನಿಮಾ ಕ್ಷೇತ್ರಗಳಲ್ಲಿಯೂ ವಂಶಪಾರಂಪರ್ಯ ಮುಂದುವರಿಯುತ್ತಿದೆ ಎಂದು ಹೇಳಿದ್ದರು.

‘ಹಲವು ದಶಕಗಳ ಕಾಲ ದೇಶವನ್ನು ಆಳಿದ್ದ ಕಾಂಗ್ರೆಸ್‌ ಬಲಪಂಥೀಯವೂ ಅಲ್ಲದ ಎಡ ಪಂಥೀಯವೂ ಅಲ್ಲದ ಮಧ್ಯಮ ಮಾರ್ಗವನ್ನು ಅನುಸರಿಸುತ್ತಿತ್ತು. ಅದರ ಆಡಳಿತವೂ ಮಧ್ಯಮ ನಿಲುವಿನದ್ದೇ ಆಗಿತ್ತು. ಆದರೆ ಈಚೆಗೆ ಅದು ಎಡ ಸಿದ್ಧಾಂತಗಳತ್ತ ವಾಲುತ್ತಿದೆ. 2004ರಲ್ಲಿ ಯುಪಿಎ ಸರ್ಕಾರ ರಾಷ್ಟ್ರೀಯ ಸಲಹಾ ಸಮಿತಿಯನ್ನು ರಚಿಸಿದ ನಂತರ ಇಂತಹ ಬದಲಾವಣೆ ಆಗಿದೆ. ಅವರಿಗೆ ನೀಡುತ್ತಿರುವ ಸಲಹೆಗಳ ಹಿಂದೆ ಎಡ ಸಿದ್ಧಾಂತಗಳ ಕಾರ್ಯಸೂಚಿಗಳಿವೆ. ಅವನ್ನು ಅನುಸರಿಸಿ ಕಾಂಗ್ರೆಸ್ ನಗೆಪಾಟಲಿಗೆ ಈಡಾಗುತ್ತಿದೆ. ಈಗಿನ ಎಲ್ಲಾ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ವ್ಯಕ್ತಪಡಿಸುತ್ತಿರುವ ನಿಲುವುಗಳಲ್ಲಿ ಯಾವುವೂ ಮಧ್ಯಮ ಮಾರ್ಗದ್ದಲ್ಲ’ ಎಂದು ಅವರು ವಿಶ್ಲೇಷಿಸಿದರು.

ವಿಶ್ವ ಆರ್ಥಿಕ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಜೇಟ್ಲಿ ಸೋಮವಾರ ವಾಷಿಂಗ್ಟನ್‌ಗೆ ಬರಲಿದ್ದಾರೆ.

‘ಅಮೆರಿಕದಲ್ಲೇ ಹೆಚ್ಚು ಸಂಘರ್ಷ’

‘ಭಾರತದಲ್ಲಿ ಕೋಮು ಮತ್ತು ಸಾಮಾಜಿಕ ಸಂಘರ್ಷಗಳ ಪ್ರಮಾಣ ಈ ಹಿಂದೆ ಹೆಚ್ಚಾಗಿತ್ತು. ಭಾರತೀಯರು ಅಂತಹ ಮನಸ್ಥಿತಿಯಿಂದ ಹೊರಗೆ ಬರುತ್ತಿದ್ದಾರೆ’ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

‘ಭಾರತದಲ್ಲಿ ಕೋಮು ಮತ್ತು ಸಾಮಾಜಿಕ ಸಂಘರ್ಷಗಳು ದಿನೇ ದಿನೇ ಹೆಚ್ಚುತ್ತಿವೆಯಲ್ಲ’ ಎಂಬ ಪ್ರಶ್ನೆಗೆ ಜೇಟ್ಲಿ ಈ ರೀತಿ ಉತ್ತರಿಸಿದ್ದಾರೆ.

‘ಭಾರತದಲ್ಲಿ ಎಲ್ಲೋ ಒಮ್ಮೊಮ್ಮೆ ಅಂತಹ ಸಂಘರ್ಷಗಳು ನಡೆಯುತ್ತವೆ. ಅಮೆರಿಕದಲ್ಲೂ ಅಂತಹ ಸಂಘರ್ಷಗಳು ನಡೆಯುತ್ತವೆಯಲ್ಲವೆ. ಹಾಗೆ ನೋಡಿದರೆ ಭಾರತಕ್ಕಿಂತ ಅಮೆರಿಕದಲ್ಲೇ ಅಂತಹ ಸಂಘರ್ಷಗಳು ಹೆಚ್ಚು’ ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ.

‘ಲೆಕ್ಕದ ಪುಸ್ತಕ ಎರಡೆರಡಿದ್ದರೆ ಅಭಿವೃದ್ಧಿ ಅಸಾಧ್ಯ’

‘ಮೋದಿ ಸರ್ಕಾರದ ಸ್ವಚ್ಛ ಭಾರತ ಅಭಿಯಾನ, ಸರಕು ಮತ್ತು ಸೇವಾ ತೆರಿಗೆ ಮತ್ತು ನೋಟು ರದ್ದತಿ  ನಿರ್ಧಾರಗಳು ನಿರೀಕ್ಷಿತ ಪರಿಣಾಮಗಳನ್ನೇ ಉಂಟುಮಾಡಿವೆ. ಅದರಲ್ಲೂ ನೋಟು ರದ್ದತಿಯಿಂದ ಭಯೋತ್ಪಾದನಾ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.

‘ಈ ಎಲ್ಲಾ ಯೋಜನೆ ಮತ್ತು ಅಭಿಯಾನಗಳಿಂದ ದೀರ್ಘಾವಧಿಯಲ್ಲಿ ಲಾಭವಾಗುತ್ತದೆ ಮತ್ತು ಅದಕ್ಕಾಗಿ ಎಲ್ಲರೂ ಕಾಯಬೇಕು ಎಂಬುದನ್ನು ನೀವೆಲ್ಲರೂ ಒಪ್ಪುತ್ತೀರಿ. ಆದರೆ ಈ ಯೋಜನೆ ಮತ್ತು ಅಭಿಯಾನಗಳಿಂದ ತಕ್ಷಣದ ಅನುಕೂಲ–ಲಾಭಗಳೂ ಆಗಿವೆ. ಹೀಗಾಗಿಯೇ ಈ ನಿರ್ಧಾರಗಳಿಗೆ ದೇಶ ಮತ್ತು ರಾಜ್ಯಗಳ ಮಟ್ಟದಿಂದಲೂ ಬೆಂಬಲ ಇದೆ’ ಎಂದು ಅವರು ವಿವರಿಸಿದರು.

‘ನೋಟು ರದ್ದತಿಗೂ ಮುನ್ನ ಭಾರತದ ಆರ್ಥಿಕತೆಯನ್ನು ನಗದು ಆಳುತ್ತಿತ್ತು. ಅದರಲ್ಲಿ ತೆರಿಗೆ ಪಾವತಿಸದ ನಗದಿನದ್ದೇ ಸಿಂಹಪಾಲು. ಉದ್ಯಮಿಗಳು ಮತ್ತು ಉದ್ದಿಮೆಗಳು ಎರಡೆರಡು ಲೆಕ್ಕದ ಪುಸ್ತಕಗಳನ್ನು ನಿರ್ವಹಿಸುತ್ತಿದ್ದವು. ಮುಂದಿನ ಒಂದೆರಡು ದಶಕಗಳಲ್ಲಿ ನಾವು ಮುಂದುವರಿದ ಆರ್ಥಿಕತೆಗಳ (ದೇಶಗಳ) ಗುಂಪನ್ನು ಸೇರಬೇಕಿದೆ. ಈ ರೀತಿ ಎರಡೆರಡು ಲೆಕ್ಕದ ಪುಸ್ತಕಗಳನ್ನು ನಿರ್ವಹಿಸಿದರೆ ‘ಅಭಿವೃದ್ಧಿಶೀಲ ರಾಷ್ಟ್ರ’ವೊಂದು ‘ಅಭಿವೃದ್ಧಿ ಹೊಂದಿದ ರಾಷ್ಟ್ರ’ವಾಗಲು ಸಾಧ್ಯವೇ? ನಗದು ಹೆಚ್ಚು ಇದ್ದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿರುತ್ತದೆ. ಆರ್ಥಿಕತೆಯಲ್ಲಿನ ನಗದು ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ದೇಶದ ಜನರನ್ನು ತೆರಿಗೆ ವ್ಯಾಪ್ತಿಗೆ ತರಲು ಇಡೀ ವ್ಯವಸ್ಥೆಯನ್ನು ನಡುಗಿಸುವ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಿತ್ತು’ ಎಂದು ಅವರು ನೋಟು ರದ್ದತಿ ನಿರ್ಧಾರವನ್ನು ಸಮರ್ಥಿಸಿಕೊಂಡರು.

‘ನೋಟು ರದ್ದತಿಯ ಕೆಲವೇ ತಿಂಗಳಲ್ಲಿ ಭಾರತದಲ್ಲಿ ತೆರಿಗೆ ಪಾವತಿದಾರರ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಡಿಜಿಟಲ್ ಹಣದ ವಹಿವಾಟು ₹ 70 ಕೋಟಿಯಿಂದ ₹ 130 ಕೋಟಿಗೆ ಏರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಉಗ್ರರ ನುಸುಳುವಿಕೆ ಪ್ರಮಾಣ ಗಣನೀಯವಾಗಿ ಕುಗ್ಗಿದೆ. ಈ ಮೊದಲು ಉಗ್ರ ಸಂಘಟನೆಗಳಿಂದ ಹಣ ಪಡೆದು ಕಲ್ಲು ತೂರುತ್ತಿದ್ದ ಐದರಿಂದ ಹತ್ತು ಸಾವಿರ ಯುವಕರನ್ನು ನೋಡಬಹುದಿತ್ತು. ಕಳೆದ ಎಂಟು–ಹತ್ತು ತಿಂಗಳಲ್ಲಿ ಕಲ್ಲು ತೂರಾಟದಂತಹ ಘಟನೆಗಳೇಕೆ ನಡೆಯುತ್ತಿಲ್ಲ? ಇವೆಲ್ಲಾ ನೋಟು ರದ್ದತಿ ನಿರ್ಧಾರದ ತಕ್ಷಣದ ಪರಿಣಾಮಗಳಲ್ಲವೇ’ ಎಂದು ಜೇಟ್ಲಿ ಪ್ರಶ್ನಿಸಿದರು.

‘ಜಿಎಸ್‌ಟಿಯಿಂದಾಗಿ ರಾಷ್ಟ್ರೀಯ ತೆರಿಗೆ ವ್ಯವಸ್ಥೆಯೊಂದು ರೂಪುಗೊಂಡಿದೆ. ರಾಜ್ಯಗಳ ಗಡಿಗಳಲ್ಲಿ ಇದ್ದ ತಪಾಸಣಾ ಠಾಣೆಗಳು ಅಸ್ತಿತ್ವ ಕಳೆದುಕೊಂಡಿವೆ. ಆದರೆ ಜಿಎಸ್‌ಟಿಯನ್ನು ಇನ್ನೂ ಸುಧಾರಿಸಲು ಅವಕಾಶವಿದೆ. ಜಿಎಸ್‌ಟಿಯಲ್ಲಿರುವ ತೊಡಕುಗಳನ್ನು ನಿವಾರಿಸಲು ಜಿಎಸ್‌ಟಿ ಮಂಡಳಿ ಕ್ರಮ ತೆಗೆದುಕೊಳ್ಳುತ್ತಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿ ಇದ್ದ ಹುಳುಕುಗಳನ್ನು ಜಿಎಸ್‌ಟಿ ಪರಿಣಾಮಕಾರಿಯಾಗಿ ಮುಚ್ಚಲಿದೆ’ ಎಂದು ಅವರು ಹೇಳಿದ್ದಾರೆ.

* ಸ್ವಚ್ಛ ಭಾರತ ಅಭಿಯಾನ ಸ್ವಚ್ಛತೆಗೆ ಕಾರಣವಾಗಿದೆ. ಸರ್ಕಾರದ ಯೋಜನೆಯಾಗಿದ್ದ ಇದು ಇಂದು ಸಾಮಾಜಿಕ ಚಳವಳಿಯ ರೂಪ ಪಡೆದಿದೆ

–ಅರುಣ್ ಜೇಟ್ಲಿ, ಹಣಕಾಸು ಸಚಿವ 

ಮುಖ್ಯಾಂಶಗಳು

* ‘ಕಾಂಗ್ರೆಸ್ ಪಕ್ಷದೊಳಗಷ್ಟೇ ನಾಯಕರನ್ನು ಬೆಳೆಸುತ್ತಿದೆ. ಜನ ಅದನ್ನು ಒಪ್ಪುತ್ತಿಲ್ಲ’

* ‘ಕಾಂಗ್ರೆಸ್‌ನದ್ದು ಮೊದಲು ಮಧ್ಯಮ ನಿಲುವಾಗಿತ್ತು. ಈಗ ಅದು ಎಡ ಸಿದ್ಧಾಂತಗಳತ್ತ ವಾಲುತ್ತಿದೆ’

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry