ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ರಸ್ತೆಗೆ ನುಗ್ಗಿದ ನೀರು: ಜನರಿಗೆ ತೊಂದರೆ

Last Updated 9 ಅಕ್ಟೋಬರ್ 2017, 8:54 IST
ಅಕ್ಷರ ಗಾತ್ರ

ಸಿಂಧನೂರು: ನಗರದ ವಾರ್ಡ್ ಸಂಖ್ಯೆ 17ರ ಪಕ್ಕದಲ್ಲಿರುವ 40ನೇ ಉಪಕಾಲುವೆಯಲ್ಲಿ ತ್ಯಾಜ್ಯ ವಸ್ತುಗಳು ತುಂಬಿದ ಹಿನ್ನೆಲೆಯಲ್ಲಿ ಮೋರಿಯಲ್ಲಿ ಹರಿದು ಹೋಗುವ ನೀರು ಸ್ಥಗಿತಗೊಂಡು ಕಾಲುವೆಯ ನೀರು ಮನೆ ಮತ್ತು ಗಂಗಾವತಿ ಮುಖ್ಯ ರಸ್ತೆಗೆ ನುಗ್ಗಿ ಜನ ಮತ್ತು ವಾಹನ ಸಂಚಾರವು ಅಸ್ತವ್ಯಸ್ತ ಗೊಂಡಿದೆ.

ಶನಿವಾರ ರಾತ್ರಿ ಕಾಲುವೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮೋರಿ ಸ್ಥಗಿತಗೊಂಡಿರುವುದರಿಂದ ಮೇಲ್ಭಾಗದ ಕಾಲುವೆ ಒಡೆದಿದೆ. ಇದರಿಂದ ಪಕ್ಕದ ಬಡಾವಣೆಗೆ ನೀರು ನುಗ್ಗಿದೆ. 17ನೇ ವಾರ್ಡಿನ ಹಲವಾರು ಮನೆಗಳಿಗೂ ನೀರು ಹರಿದಿರುವುದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಗಂಗಾವತಿ ಮುಖ್ಯಹೆದ್ದಾರಿಗೆ ಕಾಲುವೆ ನೀರು ಹರಿದು ಬಂದು ಎರಡು ಅಡಿಯಷ್ಟು ಪ್ರಮಾಣ ನೀರು ತುಂಬಿಕೊಂಡಿದೆ. ಕೆಲಹೊತ್ತು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ತಗ್ಗು ಪ್ರದೇಶಗಳು ನೀರಿನಿಂದ ತುಂಬಿಕೊಂಡಿದ್ದವು. ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯುತ್ತಿರುವುದನ್ನು ನೋಡಲು ವೆಂಕಟೇಶ್ವರ ಕಾಲೋನಿಯ ಜನ ರಸ್ತೆಗೆ ಧಾವಿಸಿದ್ದರು.

ಕಾಲುವೆ ನೀರು ವಾರ್ಡ್‌ಗೆ ನುಗ್ಗಿ ಆತಂಕ ಸೃಷ್ಟಿಸಿದ್ದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ ಎಂದು ವಾರ್ಡ್‌ ನಿವಾಸಿ ವಿನಯ್ ಕುಮಾರ ಆಪಾದಿಸಿದರು.

ಈ ಕುರಿತು ನೀರಾವರಿ ಇಲಾಖೆಯ ತುರ್ವಿಹಾಳ ಉಪವಿಭಾಗದ ಪ್ರಭಾರಿ ಸಹಾಯಕ ಕಾರ್ಯಪಾಲಕ ಎಂಜನೀಯರ್ ಹನುಮಂತಪ್ಪ ಅವರನ್ನು 'ಪ್ರಜಾವಾಣಿ' ಸಂಪರ್ಕಿಸಿದಾಗ ‘ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ರೈತರು ತಮ್ಮ-ತಮ್ಮ ಹೊಲಗಳಿಗೆ ಅಡ್ಡಲಾಗಿ ಕಾಲುವೆಯ ತೂಬುಗಳನ್ನು ಯಾರಿಗೂ ಹೇಳದೆ ಮುಚ್ಚಿದ್ದಾರೆ.

ಕಾರಣ ಕಾಲುವೆಯ ನೀರು ರಸ್ತೆ ಮತ್ತು ವಾರ್ಡ್‌ಗಳಿಗೆ ನುಗ್ಗಿದೆ. ಕೂಡಲೇ ಕಾಲುವೆಯಲ್ಲಿನ ತ್ಯಾಜ್ಯ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT