ಪಾರಂಪರಿಕ ಕಟ್ಟಡಗಳಿಂದ ಹೆಚ್ಚಿತು ನಗರದ ಅಂದ

ಮಂಗಳವಾರ, ಜೂನ್ 25, 2019
28 °C

ಪಾರಂಪರಿಕ ಕಟ್ಟಡಗಳಿಂದ ಹೆಚ್ಚಿತು ನಗರದ ಅಂದ

Published:
Updated:
ಪಾರಂಪರಿಕ ಕಟ್ಟಡಗಳಿಂದ ಹೆಚ್ಚಿತು ನಗರದ ಅಂದ

ಶಿವಮೊಗ್ಗ: ನಗರದಲ್ಲಿರುವ ಹಲವು ಪಾರಂಪರಿಕ ಕಟ್ಟಡಗಳು ಶಿವಮೊಗ್ಗ ನಗರಕ್ಕೆ ಕಳಶಪ್ರಾಯವಾಗಿವೆ. ನಿಯಮದಂತೆ 100 ವರ್ಷ ಮೇಲ್ಪಟ್ಟ ಕಟ್ಟಡಗಳನ್ನು ಪಾರಂಪರಿಕ ಕಟ್ಟಡ ಎಂದು ಪುರಾತತ್ವ ಇಲಾಖೆಯ ಘೋಷಿಸುತ್ತದೆ. ಕೋಟೆ ಪೊಲೀಸ್ ಠಾಣೆ, ಮಹಾನಗರ ಪಾಲಿಕೆ, ಕನ್ನಡ ಮತ್ತು ಆಂಗ್ಲ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆ, ಎನ್‌ಸಿಸಿ ಕಟ್ಟಡ, ಮೀನುಗಾರಿಕೆ ಇಲಾಖೆ ಕಟ್ಟಡ, ಕರ್ನಾಟಕ ಸಂಘ, ಜಯನಗರ ಪೊಲೀಸ್ ಠಾಣೆ, ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ ಹಳೆ ಕಟ್ಟಡ ಸದ್ಯ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿವೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಈ ಕಟ್ಟಡಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗಬೇಕಾಗಿದೆ. ನಗರದಲ್ಲಿರುವ ಪಾರಂಪರಿಕ ಕಟ್ಟಡಗಳು ಜಿಲ್ಲಾಡಳಿದ ಅಧೀನದಲ್ಲಿದ್ದು, ಅವುಗಳನ್ನು ಸಂರಕ್ಷಿಸಲು ಪುರಾತತ್ವ ಇಲಾಖೆಗೆ ಹಸ್ತಾಂತರಿಸಬೇಕಿದೆ.

ದುರಸ್ತಿಯಾದ ಕಟ್ಟಡಗಳು: ಕೆಲವು ಪಾರಂಪರಿಕ ಕಟ್ಟಡಗಳು ಶಿಥಿಲಗೊಂಡಿವೆ. ಕೆಲವು ದುರಸ್ತಿಗೊಂಡಿದ್ದು, ಮೂಲ ಸ್ವರೂಪದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಕಂಡಿವೆ. ಪಾಲಿಕೆ ಸದಸ್ಯರ ಕಚೇರಿಗಳು, ಸಹ್ಯಾದ್ರಿ ಕಾಲೇಜು, ಜಿಲ್ಲಾ ಪಂಚಾಯ್ತಿ ಕಟ್ಟಡಗಳು ಅಲ್ಪ ಪ್ರಮಾಣದ ದುರಸ್ತಿ ಕಂಡಿರುವ ಕಟ್ಟಡಗಳು.

ಬಂಗಾರಪ್ಪ ಅವರ ಕಾಲದಲ್ಲಿಯೇ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ 8 ಮಹಡಿ ಕಟ್ಟಡ ನಿರ್ಮಿಸಿ, ಎಲ್ಲಾ ಇಲಾಖೆಯ ಕಚೇರಿಗಳನ್ನು ಒಂದೆಡೆ ಕಾರ್ಯನಿರ್ವಹಿಸುವ ಯೋಜನೆ ರೂಪಿಸಲಾಗಿತ್ತು. ಆದರೆ, ಅವೈಜ್ಞಾನಿಕವಾಗಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲಾಯಿತು ಎಂದು ಹಿರಿಯರಾದ ಕಲ್ಲೇಶಪ್ಪ ದೂರುತ್ತಾರೆ.

ಕೋರ್ಪಲಯ್ಯನ ಛತ್ರ, ತಾಲ್ಲೂಕು ಕಚೇರಿಗಳು ಹಾಗೆಯೇ ಉಳಿದಿವೆ. ಜಯನಗರ ಠಾಣೆಯು ಬ್ರಿಟಿಷರ ಕಾಲದ ನ್ಯಾಯಾಲಯ ಸಂಕೀರ್ಣವಾಗಿತ್ತು. ಹಳೆ ಶೈಲಿಯಲ್ಲಿರುವ ಠಾಣೆಯು, ಈಗಲೂ ಗಟ್ಟಿಯಾಗಿದೆ. ಕೋಟೆ ಠಾಣೆ, ಮೇನ್‌ ಮಿಡ್ಲ್‌ ಶಾಲೆಯ ಕಟ್ಟಡವೂ ಬ್ರಿಟಿಷರ ಕಾಲದ ಶೈಲಿಯನ್ನು ಹೊಂದಿದ್ದು, ಹಳೆ ಕಾಲದ ನೆನಪು ತರಿಸುತ್ತವೆ.

ಈಚೆಗೆ ಜಯನಗರ ಪೊಲೀಸ್‌ ಠಾಣೆಯ ಕಟ್ಟಡ ಕೆಡವಿ ನೂತನ ಕಟ್ಟಡ ನಿರ್ಮಿಸಲು ಯೋಜನೆ ರೂಪುಗೊಂಡಿತ್ತು. ಆದರೆ, ಇತಿಹಾಸ ಸಂಶೋಧಕರು, ತಜ್ಞರು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಪರಿಣಾಮ ಆ ಕಾರ್ಯ ಸದ್ಯಕ್ಕೆ ನಿಂತಿದೆ.

ಹಳೆ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಂಡರೆ ಶಿಥಿಲಗೊಂಡಾಗ ಅಲ್ಲಿ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತದೆ. ಕಚೇರಿ ಬೇರೆಡೆ ಸ್ಥಳಾಂತರಿಸಿದರೆ ಆ ಕಚೇರಿಗೆ

ಸ್ವಂತ ಕಟ್ಟಡ ಹೊಂದಲು ಸ್ಥಳದ ಸಮಸ್ಯೆ ಎದುರಾಗಲಿದ್ದು, ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ಹಾಗಾಗಿ, ಹಳೆ ಕಟ್ಟಡಗಳನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಕೆಲವರ ವಾದ.

‘ಪಾರಂಪರಿಕ ಕಟ್ಟಡಗಳನ್ನು ಉಳಿಸಿದರೆ ಸಾಲದು, ಅವುಗಳನ್ನು ಸುಸ್ಥಿತಿಯಲ್ಲಿ ಬಳಸುವಂತಾಗಬೇಕು. ಹಳೆ ಕಟ್ಟಡಗಳು ನಗರದ ಮಧ್ಯ ಭಾಗದಲ್ಲಿದ್ದು, ಅಲ್ಲಿ ಕಾರ್ಯನಿರ್ವಹಿಸುವ ಕಚೇರಿಗಳು ದೂರದ ಸ್ಥಳಕ್ಕೆ ಸ್ಥಳಾಂತರವಾದರೆ ಜನರಿಗೆ ತೊಂದರೆಯಾಗುತ್ತದೆ’ ಎನ್ನುತ್ತಾರೆ ಸ್ಥಳೀಯರಾದ ಸುರೇಶ್‌ ಬಾಬು.

‘ನೂತನ ಕಟ್ಟಡಗಳ ಮಧ್ಯೆ ಪಾರಂಪರಿಕ ಕಟ್ಟಡಗಳು ಇದ್ದರೆ ಅವುಗಳ ವಾಸ್ತುಶಿಲ್ಪ ಯುವ ಪೀಳಿಗೆಗೆ ತಿಳಿಯುತ್ತದೆ. ಅವುಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ’ ಎನ್ನುತ್ತಾರೆ ನೌಕರ ಸಂತೋಷ್‌.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry