ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಸೇರಿ ನೂರಾರು ಕಾರ್ಯಕರ್ತರ ಬಂಧನ, ಬಿಡುಗಡೆ

Last Updated 9 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದಲ್ಲಿ ಸಂಘಪರಿವಾರದ ಕಾರ್ಯಕರ್ತರ ಹತ್ಯೆಗೆ ಅಲ್ಲಿನ ಕಮ್ಯೂನಿಸ್ಟ್ ಸರ್ಕಾರ ಕಾರಣ ಎಂದು ಆರೋಪಿಸಿ ನಡೆಯುತ್ತಿರುವ ‘ಜನರಕ್ಷಾ ಯಾತ್ರೆ’ ಬೆಂಬಲಿಸಿ ಇಲ್ಲಿನ ಸಿಪಿಐ(ಎಂ) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ, ಶಾಸಕರಾದ ಆರ್. ಅಶೋಕ್, ಸಿ.ಟಿ. ರವಿ, ಬಿ.ಎನ್. ವಿಜಯಕುಮಾರ ನೇತೃತ್ವದಲ್ಲಿ ಬಿಜೆಪಿ  ಕಾರ್ಯಕರ್ತರು ಲಾಲ್ ಬಾಗ್‌ನಿಂದ ಪಾದಯಾತ್ರೆ ಆರಂಭಿಸಿದರು. ಬಸವನಗುಡಿಯ ಸಿಪಿಐ(ಎಂ) ಕಚೇರಿ ‘ಜ್ಯೋತಿಬಸು ಭವನ’ಕ್ಕೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಆಶ್ರಮ ವೃತ್ತದಲ್ಲೇ ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ‘ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಬೆಂಬಲದೊಂದಿಗೆ ಆರ್‌.ಎಸ್‌.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕಗ್ಗೊಲೆ ನಡೆಯುತ್ತಿದೆ. ಸತ್ಯ ಸಂಗತಿಯನ್ನು ಮುಚ್ಚಿಹಾಕುವ ಪ್ರಯತ್ನವನ್ನು ಅಲ್ಲಿನ ಸರ್ಕಾರ ಮಾಡುತ್ತಿದ್ದು, ತಾಕತ್ತಿದ್ದರೆ ಈ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಿ’ ಎಂದು ಸವಾಲು ಹಾಕಿದರು.

‘ಪಿಣರಾಯಿ ವಿಜಯನ್ ಮತ್ತು ಸಿದ್ದರಾಮಯ್ಯ ನಡುವೆ ವ್ಯತ್ಯಾಸ ಇಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೊಲೆ ಸುಲಿಗೆಯಿಂದ ಎದುರಾಳಿ ಪಕ್ಷಗಳನ್ನು ಮುಗಿಸಲು ಸಾಧ್ಯವಿಲ್ಲ’ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ರಕ್ತಪಾತ ಸಿದ್ಧಾಂತ ಹೊಂದಿರುವ ಕಾರಣದಿಂದಲೇ ಕಮ್ಯೂನಿಸ್ಟ್ ಪಕ್ಷವನ್ನು ಪ್ರಪಂಚದಲ್ಲಿ ಹುಡುಕುವಂತಾಗಿದೆ. ದೇಶಕ್ಕೆ ಬುದ್ದಿವಾದ ಹೇಳುವ ಪ್ರಕಾಶ್ ಕಾರಟ್ ಕೇರಳದಲ್ಲಿ ನಡೆಯುತ್ತಿರುವ ಹತ್ಯೆಗಳ ಬಗ್ಗೆ ಮೌನ ವಹಿಸಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಕೇರಳದಲ್ಲಿ ಅಧಿಕಾರ ಇಲ್ಲ ಎಂಬ ಕಾರಣಕ್ಕೆ ಅಲ್ಲಿನ ಬಿಜೆಪಿ ಕಾರ್ಯಕರ್ತರ ಛಲ ಕುಗ್ಗುವುದಿಲ್ಲ. ದೇಶದಾದ್ಯಂತ ಬಿಜೆಪಿ ಕಾರ್ಯಕರ್ತರ ಬೆಂಬಲ ಅವರಿಗೆ ಇದೆ. ಪಿಣರಾಯಿ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಕಾಲಿಡಲು ಬಿಜೆಪಿ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT