ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿಗಳಿಗೆ ಅಗೆದ ರಸ್ತೆ ದುರಸ್ತಿ ಇಲ್ಲ..!

Last Updated 10 ಅಕ್ಟೋಬರ್ 2017, 5:06 IST
ಅಕ್ಷರ ಗಾತ್ರ

ಇಳಕಲ್‌: ನಗರದ ಬಹುತೇಕ ರಸ್ತೆ ಗಳನ್ನು ಒಳಚರಂಡಿ ಕಾಮಗಾರಿಗಾಗಿ ಅಗೆಯಲಾಗಿದ್ದು, ಪುನಃ ರಸ್ತೆಗಳನ್ನು ಯಥಾಸ್ಥಿತಿಗೆ ತರುವ ಕೆಲಸ ಆಗಿಲ್ಲ. ಪರಿಣಾಮವಾಗಿ ಮಳೆ ಶುರುವಾದ ನಂತರ ರಸ್ತೆಗಳು ಕುಸಿದಿದ್ದು, ಕೆಸರಿನ ಗದ್ದೆಯಂತಾಗಿವೆ.

ನಗರದಲ್ಲಿ 5 ವರ್ಷಗಳಿಂದ ಆಮೆ ಗತಿಯಲ್ಲಿ ಸಾಗಿರುವ ಎಡಿಬಿ ನೆರವಿನ ₹ 47ಕೋಟಿ ವೆಚ್ಚದ ಒಳಚರಂಡಿಯ ಕಾಮಗಾರಿ ಮುಗಿಯುವ ಲಕ್ಷಣಗಳಿಲ್ಲ. ಈ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಯೋಜನಾ ವೆಚ್ಚದ ಶೇ.20 ರಷ್ಟು ಮೊತ್ತದಲ್ಲಿ ಗುತ್ತಿಗೆದಾರನೇ ಯಥಾಸ್ಥಿತಿ ತರಬೇಕಿತ್ತು. ಆದರೆ ಷರತ್ತು ಪಾಲನೆಯಾಗಿಲ್ಲ. ಪರಿಣಾಮವಾಗಿ ನಗರದ ರಸ್ತೆಗಳು ನಡೆದಾಡಲು ಸಾಧ್ಯವಾಗಷ್ಟು ಹದೆಗೆಟ್ಟಿವೆ.

ನಗರದ ಗಾಂಧಿ ಚೌಕ್ ಸುತ್ತಮುತ್ತ, ಮುಖ್ಯ ಬಜಾರ್‌ ರಸ್ತೆ ಹಾಗೂ ಪೊಲೀಸ್‌ ಮೈದಾನ ತಲುಪುವ ರಸ್ತೆಗಳಲ್ಲಿ ನಿತ್ಯವೂ ಅನೇಕ ವಾಹನ ಸಿಲುಕುತ್ತಿವೆ. ಅಗೆದಿರುವ ಯಾವೊಂದು ರಸ್ತೆಯನ್ನೂ ಗುತ್ತಿಗೆದಾರರು ದುರಸ್ತಿ ಮಾಡಿಲ್ಲ. ಇದೇ ಇವತ್ತಿನ ರಸ್ತೆಗಳ ದುಃಸ್ಥಿತಿಗೆ ಕಾರಣ ಎಂದು ಜನಜಾಗೃತಿ ವೇದಿಕೆ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್‌ ಆರೋಪಿಸಿದ್ದಾರೆ.

‘ಒಳಚರಂಡಿ ಹಾಗೂ ಕುಡಿ ಯುವ ನೀರಿನ ಯೋಜನೆಯ ಕಾಮ ಗಾರಿಗಳಿಗಾಗಿ ಒಟ್ಟು ₹ 67 ಕೋಟಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ಶೇ.20ರಷ್ಟು ಅಂದರೆ ಸುಮಾರು ₹ 13.40 ಕೋಟಿ ಮೊತ್ತವನ್ನು ಅಗೆದ ರಸ್ತೆಗಳನ್ನು ಮುಂಚಿನ ಸ್ಥಿತಿಗೆ ತರಲು ಖರ್ಚು ಮಾಡಬೇಕಿತ್ತು. ಆದರೆ ಗುತ್ತಿಗೆದಾರರು ಈ ಕೆಲಸ ಮಾಡಿಲ್ಲ.

ಕಾಮಗಾರಿಯ ಮೇಲ್ವಿಚಾರಣೆ ಮಾಡುವ ಕರ್ನಾಟಕ ಪಟ್ಟಣ ಮೂಲಸೌಲಭ್ಯ ಅಭಿವೃದ್ಧಿ ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಹಾಗೂ ನಗರಸಭೆ ಅಧಿಕಾರಿಗಳು ಗುತ್ತಿಗೆದಾರನ ಮೂಲಕ ಅಗೆದ ರಸ್ತೆಗಳನ್ನು ದುರಸ್ತಿ ಮಾಡಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಜನಜಾಗೃತಿ ವೇದಿಕೆ ಆರೋಪಿಸಿದೆ.

ಒಳಚರಂಡಿಗಾಗಿ ಅಗೆದ ಕೆಲವು ರಸ್ತೆಗಳನ್ನು ನಗರೋತ್ಥಾನ ಯೋಜನೆಯಡಿ ಡಾಂಬರೀಕರಣ ಮಾಡಲಾಗಿತ್ತು. ಆದರೆ ಒಳಚರಂಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿದ ಪರಿಣಾಮ ಮತ್ತೆ, ಮತ್ತೆ ಡಾಂಬರ್‌ ರಸ್ತೆಗಳನ್ನು ಅಗೆಯಲಾಗುತ್ತಿದೆ.

ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳ ವಿವುಧ ಹಾಗೂ ವಿಸ್ತೀರ್ಣವನ್ನು ಲೆಕ್ಕ ಹಾಕಿ ರಸ್ತೆಗಳನ್ನು ಮೊದಲಿನ ಸ್ಥಿತಿಗೆ ತರಲು ತಗಲುವ ವೆಚ್ಚವನ್ನು ಗುತ್ತಿಗೆದಾರನಿಂದ ವಸೂಲಿ ಮಾಡಬೇಕು. ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಶಾಸಕರನ್ನು, ನಗರಸಭೆ ಪ್ರತಿನಿಧಿಗಳನ್ನು ಹಾಗೂ ಪೌರಾಯುಕ್ತರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT