ಸಾವಿರ ವರ್ಷಗಳ ಹಿಂದೆಯೇ ವೈಜ್ಞಾನಿಕ ವಾಸ್ತುಶಿಲ್ಪ

ಮಂಗಳವಾರ, ಜೂನ್ 25, 2019
26 °C

ಸಾವಿರ ವರ್ಷಗಳ ಹಿಂದೆಯೇ ವೈಜ್ಞಾನಿಕ ವಾಸ್ತುಶಿಲ್ಪ

Published:
Updated:

ಮೈಸೂರು: ಭಾರತದಲ್ಲಿ 1 ಸಾವಿರ ವರ್ಷಗಳ ಹಿಂದೆಯೇ ವೈಜ್ಞಾನಿಕ ವಾಸ್ತುಶಿಲ್ಪ ಅಭಿವೃದ್ಧಿಗೊಂಡಿತ್ತು ಎಂದು ಸಂಶೋಧಕ ಡಾ.ಅ.ಸುಂದರ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗವು ಸೋಮವಾರ ಹಮ್ಮಿಕೊಂಡಿದ್ದ ‘ದೇಗುಲ ವಾಸ್ತುಶಿಲ್ಪ ಹಾಗೂ ಮೂರ್ತಿ ವಿನ್ಯಾಸ’ ಕುರಿತ 3 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ವಾಸ್ತುಶಿಲ್ಪವನ್ನು ಮಾತ್ರ ವೈಜ್ಞಾನಿಕ ಎಂದು ಹೇಳಲು ಸಾಧ್ಯವಿಲ್ಲ. ಭಾರತದಲ್ಲಿ 1 ಸಾವಿರ ವರ್ಷಗಳ ಹಿಂದೆಯೇ ವಾಸ್ತುಶಿಲ್ಪ ಉತೃಷ್ಠತೆ ಸಾಧಿಸಿತ್ತು. ಅಂದಿನ ದೇವಸ್ಥಾನಗಳ ರಚನೆಯನ್ನು ಗಮನಿಸಿದರೆ ವೈಜ್ಞಾನಿಕ ಸಲಕರಣೆಗಳು, ಗಣಿತ, ವಿಜ್ಞಾನವನ್ನು ಬಳಸಿಕೊಂಡು ಅತ್ಯಂತ ನಿಖರವಾದ ಕಟ್ಟಡಗಳ ನಿರ್ಮಾಣವಾಗಿರುವುದನ್ನು ಇಂದಿಗೂ ಕಾಣಬಹುದು ಎಂದು ಅವರು ತಿಳಿಸಿದರು.

ಇಂದಿಗೂ ಅನೇಕ ದೇವಸ್ಥಾನಗಳು ಸಾವಿರಾರು ವರ್ಷಗಳ ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಂಡು ನಿಂತಿವೆ. ಇದಕ್ಕೆ ಮುಖ್ಯ ಕಾರಣ, ಆ ಕಟ್ಟಡಗಳ ನಿರ್ಮಾಣಕ್ಕೆ ಆಯ್ಕೆಯಾಗುತ್ತಿದ್ದ ಜಾಗ ಹಾಗೂ ಬಳಕೆಯಾಗುತ್ತಿದ್ದ ಕಚ್ಚಾವಸ್ತುಗಳು. ಅಲ್ಲದೇ, ಅಂದಿನ ಕಾಲದ ಭೌತವಿಜ್ಞಾನ ನಿಯಮಾವಳಿಗಳ ಅಳವಡಿಕೆ. ಅನೇಕ ತೀವ್ರ ಪ್ರಮಾಣದ ಭೂಕಂಪಗಳನ್ನು ತಡೆದುಕೊಂಡು ಈ ಕಟ್ಟಡಗಳು ಇಂದಿಗೂ ಉಳಿದುಕೊಂಡಿವೆ ಎಂದು ವರ್ಣಿಸಿದರು.

ಛಾಯಾಗ್ರಹಣ ತಂತ್ರಜ್ಞಾನವೇ ಇಲ್ಲದ ಅಂದಿನ ಕಾಲದಲ್ಲಿ ಏಕರೂಪದಲ್ಲಿ ವ್ಯಕ್ತಿಗಳನ್ನು ಚಿತ್ರಿಸಿರುವುದು ಹಾಗೂ ಮೂರ್ತಿಗಳನ್ನು ಕೆತ್ತಿರುವುದು ಅಚ್ಚರಿ ಮೂಡಿಸುತ್ತದೆ. ಉದಾಹರಣೆಗೆ ಬುದ್ಧನ ಮೂರ್ತಿ. ಬುದ್ಧನ ಅನೇಕ ಚಿತ್ರಗಳು, ಕೆತ್ತನೆಗಳು ವಿಶ್ವದ ಅನೇಕ ಭಾಗಗಳಲ್ಲಿ ಕಾಣಬಹುದು. ಇವೆಲ್ಲವೂ ಒಂದೇ ರೂಪದಲ್ಲೇ ಇವೆ. ಅಂದಿನ ಕಾಲದ ಸಂವಹನ ಮಾಧ್ಯಮಗಳನ್ನು ಬಳಸಿಕೊಂಡು ಮಾಹಿತಿ ರವಾನೆ ಮಾಡುತ್ತಿದ್ದ ವಿಧಾನಗಳು ಹೆಚ್ಚು ನಿಖರವಾಗಿರುತ್ತಿದ್ದವು; ದಾಖಲೆ ವಿಧಾನಗಳೂ ಉತ್ತಮವಾಗಿ ಇರುತ್ತಿದ್ದವು ಎಂದು ಅವರು ವಿಶ್ಲೇಷಿಸಿದರು.

ಭಾರತದಲ್ಲಿ ಕಲ್ಲನ್ನು ಬಳಸಿಕೊಂಡು ದೇವಸ್ಥಾನಗಳನ್ನು ಆರಂಭದ ದಿನಗಳಲ್ಲಿ ನಿರ್ಮಿಸುತ್ತಿರಲಿಲ್ಲ. ಆದರೆ, ಜೈನ ದೇಗುಲಗಳನ್ನು ಅನಾದಿ ಕಾಲದಿಂದಲೂ ಕಲ್ಲಿನಲ್ಲೇ ನಿರ್ಮಿಸಲಾಗುತ್ತಿತ್ತು. ಹಿಂದೂ ದೇವಾಲಯಗಳನ್ನು ನಂತರದ ದಿನಗಳಲ್ಲಿ ಕಲ್ಲಿನಲ್ಲೇ ನಿರ್ಮಿಸಲಾಯಿತು. ಕಲ್ಲಿನಿಂದ ನಿರ್ಮಿಸಿರುವ ಕಟ್ಟಡಗಳು ಉಳಿದುಕೊಂಡಿವೆ. ಮಣ್ಣಿನ ಇಟ್ಟಿಗೆಗಳ ದೇಗುಲಗಳು ಕಡಿಮೆ ಸಂಖ್ಯೆಯಲ್ಲಿವೆ ಎಂದರು.

ವಾಸ್ತು ವೇದಿಕ್ ಸಂಶೋಧನಾ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಕೆ.ದಕ್ಷಿಣಾಮೂರ್ತಿ ಸ್ಥಪಾತಿ ಮುಖ್ಯ ಅತಿಥಿಯಾಗಿದ್ದರು. ಎಸ್‌ಡಿಎಂ ಧರ್ಮೋತ್ಥಾನ ಟ್ರಸ್ಟ್‌ ನಿರ್ದೇಶಕ ಎ.ಎಚ್‌.ಹರಿರಾಮ ಶೆಟ್ಟಿ, ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ನಾಗರಾಜಮೂರ್ತಿ, ಹೈದರಾಬಾದಿನ ಕೇಂದ್ರೀಯ ವಿ.ವಿ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಸ್‌.ನಾಗರಾಜು ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry