ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥ ರೂಪದಲ್ಲಿ ಉಕ್ಕಿದ ಕಾವೇರಿ

ನಿಗದಿತ ಸಮಯಕ್ಕೂ ಒಂದು ನಿಮಿಷ ಮೊದಲೇ ತೀರ್ಥೋದ್ಭವ
Last Updated 17 ಅಕ್ಟೋಬರ್ 2017, 19:28 IST
ಅಕ್ಷರ ಗಾತ್ರ

ತಲಕಾವೇರಿ (ಮಡಿಕೇರಿ ತಾಲ್ಲೂಕು): ಮಳೆಗೆ ಇಳೆ ತಂಪಾಗಿ ಇಡೀ ಬ್ರಹ್ಮಗಿರಿ ಶ್ರೇಣಿ ಹಸಿರು ಉಡುಗೆಯನ್ನು ತೊಟ್ಟಂತೆ ನಳನಳಿಸುತ್ತಿತ್ತು. ಸೂರ್ಯ ನೆತ್ತಿಯ ಮೇಲಿದ್ದರೂ ಬೆಟ್ಟದ ಮೇಲಿನ ಮಂಜು ಮಾತ್ರ ಮರೆಗೆ ಸರಿದಿರಲಿಲ್ಲ. ಮಳೆಯೂ ಸಣ್ಣದಾಗಿ ಹನಿಯಲು ಆರಂಭಿಸಿತು. ಒಂದೆಡೆ ಮಳೆಯ ಆಹ್ಲಾದಕರ ಅನುಭವ; ಮತ್ತೊಂದೆಡೆ ಭಕ್ತರ ಕಲರವ.

ಜೀವನದಿ ಕಾವೇರಿ ಮಂಗಳವಾರ ನಿಗದಿತ ಸಮಯಕ್ಕೂ ಒಂದು ನಿಮಿಷ ಮೊದಲು ಮಧ್ಯಾಹ್ನ 12.32ಕ್ಕೆ ಸರಿಯಾಗಿ ತೀರ್ಥರೂಪಿಣಿಯಾಗಿ ಭಕ್ತರಿಗೆ ಕಾಣಿಸಿಕೊಂಡಳು. ನದಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಅಪರೂಪದ ಸನ್ನಿವೇಶಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ವರ್ಷಕ್ಕೊಮ್ಮೆ ಪವಿತ್ರ ಬ್ರಹ್ಮ ಕುಂಡಿಕೆಯಲ್ಲಿ ಉಕ್ಕುವ ಕಾವೇರಿಯನ್ನು ಹತ್ತಿರದಿಂದ ಕಣ್ತುಂಬಿಕೊಂಡ ಸಾವಿರಾರು ಮಂದಿ ಪುನೀತರಾದರು.

ಬ್ರಹ್ಮ ಕುಂಡಿಕೆಯಲ್ಲಿ ತೀರ್ಥ ಗೋಚರಿಸುತ್ತಿದ್ದಂತೆಯೇ ನೆರೆದಿದ್ದ ಭಕ್ತ ಸಮೂಹವು ‘ಕಾವೇರಿ ಮಾತಾಕೀ ಜೈ...’, ‘ಜೈ ಜೈ ಮಾತಾ ಕಾವೇರಿ ಮಾತಾ...’ ಎನ್ನುವ ಜಯಘೋಷ ಮೊಳಗಿಸಿದರು. ಪುಷ್ಕರಣಿಯಲ್ಲಿ ಮಿಂದು ತೀರ್ಥ ಪ್ರೋಕ್ಷಣೆ ಮಾಡಿಕೊಳ್ಳುವ ಮೂಲಕ ಧನ್ಯತಾಭಾವ ತೋರಿದರು. ಈ ಕ್ಷಣಕ್ಕಾಗಿ ಬೆಳಿಗ್ಗೆ 6ರಿಂದಲೇ ಕ್ಷೇತ್ರದಲ್ಲಿ ಸಾವಿರಾರು ಭಕ್ತರು ಬೀಡುಬಿಟ್ಟಿದ್ದರು.

ತೀರ್ಥ ಕೊಂಡೊಯ್ಯಲು ಆಗಮಿಸಿದ್ದವರು ಬಿಂದಿಗೆ, ನೀರಿನ ಬಾಟಲಿ ಹಾಗೂ ಕ್ಯಾನ್‌ ಹಿಡಿದು ಮುಗಿಬಿದ್ದರು. ‘ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಲಿ; ನಂಬಿರುವ ಭಕ್ತರ ಬಾಳು ಬಂಗಾರ ಮಾಡವ್ವ ತಾಯಿ...’ ಎಂದು ಭಕ್ತರು ಬೇಡಿಕೊಳ್ಳುವ ಮೂಲಕ ತುಲಾ ಸಂಕ್ರಮಣ ಜಾತ್ರೆಯು ಭಾವನಾತ್ಮಕ ಸನ್ನಿವೇಶಕ್ಕೂ ಸಾಕ್ಷಿಯಾಯಿತು.

ಅದಕ್ಕೂ ಮೊದಲು ಪ್ರಧಾನ ಅರ್ಚಕರಾದ ಅನಂತಕೃಷ್ಣಾಚಾರ್‌, ರಾಮಕೃಷ್ಣಾಚಾರ್‌, ನಾರಾಯಣಾಚಾರ್‌ ನೇತೃತ್ವದಲ್ಲಿ 18 ಮಂದಿ ಮಹಾಪೂಜೆ ನೆರವೇರಿಸಿದರು. ಚಿನ್ನದ ಪತಾಕೆ, ಚಿನ್ನದ ಸೂರ್ಯಪಾನ, ಚಂದ್ರಪಾನ, ಬೆಳ್ಳಿ ಪ್ರಭಾವಳಿ ತೊಟ್ಟ ಕಾವೇರಿ ಕಂಗೊಳಿಸುತ್ತಿದ್ದಳು. ಇದೇ ವೇಳೆ ಮಹಾಸಂಕಲ್ಪ ಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿಯೂ ಜರುಗಿದವು.

‘ತೀರ್ಥ ಸ್ವೀಕರಿಸಿದರೆ ಕಾಯಿಲೆಗಳು ದೂರವಾಗಿ ನಾಡಿನಲ್ಲಿ ನೆಮ್ಮದಿ ನೆಲಸಲಿದೆ ಎಂಬುದು ನಂಬಿಕೆ. ಹೀಗಾಗಿಯೇ ತುಲಾ ಸಂಕ್ರಮಣ ಜಾತ್ರೆಗೆ ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ’ ಎಂದು ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಹೇಳಿದರು.

ತಮಿಳುನಾಡಿನಿಂದ ಭಕ್ತರು: ಕಳೆದ ವರ್ಷ ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ತಮಿಳುನಾಡು, ಕೇರಳ ರಾಜ್ಯದ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಆದರೆ, ಈ ಬಾರಿ ಆ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮಿಸಿದರು.

ಲಗ್ನದ ಗೊಂದಲ: ಪ್ರತಿವರ್ಷ ತುಲಾ ಲಗ್ನದಲ್ಲಿ ತೀರ್ಥೋದ್ಭವ ನಡೆಯುತ್ತಿತ್ತು. ಆದರೆ, ವರ್ಷ ಧನುರ್‌ ಲಗ್ನದಲ್ಲಿ ನಡೆಯಲಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಆಹ್ವಾನ ಪತ್ರಿಕೆ ಮುದ್ರಿಸಿದ್ದು ಗೊಂದಲಕ್ಕೆ ಕಾರಣವಾಗಿತ್ತು.

ಪ್ರತಿವರ್ಷವೂ ತುಲಾ ಲಗ್ನದಲ್ಲೇ ಈ ಅಪರೂಪದ ಕ್ಷಣ ಸಂಭವಿಸಲಿದ್ದು, ಲಗ್ನ ಬದಲಾವಣೆ ಮಾಡಿರುವ ಕ್ರಮ ಸರಿಯಲ್ಲ. ನಂಬಿಕೆಗೆ ಅಪಚಾರ ಎಸಗಲಾಗಿದೆ ಎಂದು ಸ್ಥಳೀಯ ಅರ್ಚಕರು ದೂರಿದರು.

ರೈತರಿಂದ ಅನ್ನಸಂತರ್ಪಣೆ

ಕೊಡಗು ಏಕೀಕರಣ ರಂಗವು 23ನೇ ವರ್ಷದ ಅನ್ನದಾನ ಆಯೋಜಿಸಿತ್ತು. ಪ್ರತಿವರ್ಷ ಏಕೀಕರಣ ರಂಗದೊಂದಿಗೆ ಕೈಜೋಡಿಸುತ್ತಿದ್ದ ಮಂಡ್ಯ ಜಿಲ್ಲೆಯ ರೈತರು, ಈ ಬಾರಿ ಪ್ರತ್ಯೇಕವಾಗಿ ಅನ್ನಸಂತರ್ಪಣೆ ನಡೆಸಿದರು. ವಿಧಾನ ಪರಿಷತ್‌ ಸದಸ್ಯರಾದ ಎನ್‌. ಅಪ್ಪಾಜಿಗೌಡ ಹಾಗೂ ಕೆ.ಟಿ. ಶ್ರೀಕಂಠೇಗೌಡ ಅವರ ನೇತೃತ್ವದಲ್ಲಿ ಮಂಡ್ಯ ರೈತರು ಕಾವೇರಿಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT