ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸೆಂಬರ್‌ಗೆ ಚರ್ಚ್‌ಸ್ಟ್ರೀಟ್‌ ಸಿದ್ಧ’

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಟೆಂಡರ್‌ ಶ್ಯೂರ್‌ ಯೋಜನೆಯಡಿ ₹8 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಚರ್ಚ್‌ಸ್ಟ್ರೀಟ್‌ ಅಭಿವೃದ್ಧಿ ಕಾಮಗಾರಿ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ’ ಎಂದು ಮೇಯರ್‌ ಆರ್. ಸಂಪತ್‌ ರಾಜ್‌ ತಿಳಿಸಿದರು.

ಮಳೆನೀರು ಚರಂಡಿ, ಕುಡಿಯುವ ನೀರಿನ ಕೊಳವೆ ಮಾರ್ಗ, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ), ಬೆಸ್ಕಾಂ ವಿದ್ಯುತ್‌ ಸಂಪರ್ಕ ಜಾಲ ಅಳವಡಿಸಲು ನಿರ್ಮಿಸಿರುವ ಯುಟಿಲಿಟಿ ಡಕ್ಟ್‌ ಕಾಮಗಾರಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಗ್ರಾನೈಟ್‌ ಅಳವಡಿಕೆ ಕೆಲಸವನ್ನು ಗುರುವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಬ್ರಿಗೇಡ್‌ ರಸ್ತೆಯಿಂದ ಸೇಂಟ್‌ ಮಾರ್ಕ್ಸ್‌ವರೆಗಿನ 750 ಮೀಟರ್‌ ಉದ್ದದ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಬ್ರಿಗೇಡ್‌ ರಸ್ತೆಯಿಂದ ವಾಸುದೇವ ಅಡಿಗಾಸ್‌ ಹೋಟೆಲ್‌ವರೆಗಿನ 440 ಮೀಟರ್‌ ಕಾಮಗಾರಿ ನವೆಂಬರ್‌ 15ಕ್ಕೆ ಪೂರ್ಣಗೊಳ್ಳಲಿದೆ. ಉಳಿದ 310 ಮೀಟರ್‌ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯಕ್ಕೆ ಪೂರ್ಣಗೊಳಿಸುತ್ತೇವೆ’ ಎಂದರು.

‘ಫೆಬ್ರುವರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಆಗಸ್ಟ್‌ನಲ್ಲಿ ಅದು ಪೂರ್ಣಗೊಳ್ಳಬೇಕಿತ್ತು. ಆದರೆ, ಒಳಚರಂಡಿ ಮಾರ್ಗ ಅಳವಡಿಕೆಗೆ ಸಮಯ ಹಿಡಿಯಿತು ಹಾಗೂ ಸತತವಾಗಿ ಮಳೆಯಿಂದ ಕಾಮಗಾರಿ ನಿಗದಿತ ಅವಧಿಗಿಂತ 6 ತಿಂಗಳು ವಿಳಂಬವಾಯಿತು’ ಎಂದು ಹೇಳಿದರು.

‘ಪಾದಚಾರಿ ಮಾರ್ಗ ಮತ್ತು ರಸ್ತೆ ಎರಡಕ್ಕೂ ಗ್ರಾನೈಟ್‌ ಅಳವಡಿಸಲಾಗುತ್ತಿದೆ. ಬಿಳಿ, ಕಪ್ಪು ಮತ್ತು ಚೆರ್ರಿ ಕೆಂಪು ಬಣ್ಣದ ಗ್ರಾನೈಟ್‌ ಕರ್ಬ್‌ ಸ್ಟೋನ್‌ಗಳನ್ನು ಜೋಡಿಸಿ ರಸ್ತೆಯ ವಿನ್ಯಾಸ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

30 ವರ್ಷ ಬಾಳಿಕೆ: ‘ಈ ರಸ್ತೆ ಸುಮಾರು 30ರಿಂದ 40 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಏಳು ವರ್ಷದವರೆಗೆ ಯಾವುದೇ ನಿರ್ವಹಣೆಯೂ ಬೇಕಾಗಿಲ್ಲ. ಇದೊಂದು ಮಾದರಿ ರಸ್ತೆಯಾಗಲಿದೆ’ ಎಂದು ತಿಳಿಸಿದರು.

ಇಂಗು ಗುಂಡಿಗಳಲ್ಲಿ ಇನ್ನಷ್ಟು ಸುರಕ್ಷತೆ: ‘ಇಲ್ಲಿ ಮಳೆ ನೀರು ಸಂಗ್ರಹಕ್ಕಾಗಿ 32 ಅಡಿ ಆಳದ ಇಂಗು ಗುಂಡಿ ನಿರ್ಮಿಸಲಾಗಿದೆ. ಈ ಗುಂಡಿ ಮುಚ್ಚಳವನ್ನು ಯಾರಾದರೂ ತೆರೆದಿಟ್ಟರೆ ಅಪಾಯ ಸಂಭವಿಸಲಿದೆ. ಹಾಗಾಗಿ ಇದರೊಳಗೆ ಮತ್ತೊಂದು ಗ್ರಿಲ್‌ ಅಳವಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕೆ ಉತ್ತರಿಸಿದ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ. ನಾಗರಾಜ್‌, ‘₹2,000 ಮೊತ್ತದ ದಪ್ಪನೆಯ ಎಂ.ಎಸ್‌. ಪ್ಲೇಟ್‌ಗಳನ್ನು ಅದರೊಳಗೆ ಅಳವಡಿಸುತ್ತೇವೆ’ ಎಂದರು.

***
‘ಶೇ 50ರಷ್ಟು ರಸ್ತೆ ಗುಂಡಿ ಮುಚ್ಚಿದ್ದೇವೆ’
‘ಗುಂಡಿ ಮುಚ್ಚಲು ಮುಖ್ಯಮಂತ್ರಿ ನೀಡಿದ್ದ 15 ದಿನಗಳ ಗಡುವು ಮುಗಿಯುತ್ತಿದೆ. ಮೂರು ದಿನಗಳು ಮಳೆ ಇಲ್ಲದಿದ್ದರಿಂದ ಅನುಕೂಲವಾಗಿದೆ. ಸುಮಾರು 18 ಸಾವಿರ ಗುಂಡಿಗಳಿದ್ದವು. ಅವುಗಳಲ್ಲಿ ಶೇ 50ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ’ ಎಂದು ಮೇಯರ್‌ ತಿಳಿಸಿದರು.

***
‘ಕಪ್ಪು ಪಟ್ಟಿಗೆ ಇನ್ನಷ್ಟು ಗುತ್ತಿಗೆದಾರರು’
‘ನಿಗದಿತ ಅವಧಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದ ಹಾಗೂ ಸರಿಯಾಗಿ ಕಾಮಗಾರಿ ನಿರ್ವಹಿಸದ 40 ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು  ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ. ಯಾವ ರಸ್ತೆಯನ್ನು ಯಾರಿಗೆ ಗುತ್ತಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ’ ಎಂದು ಮೇಯರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT