ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗದಳ್ಳಿಯಲ್ಲಿ ವಾಂತಿಭೇದಿಗೆ ಗ್ರಾಮಸ್ಥರ ತತ್ತರ

Last Updated 20 ಅಕ್ಟೋಬರ್ 2017, 5:44 IST
ಅಕ್ಷರ ಗಾತ್ರ

ಬಸವಕಲ್ಯಾಣ: ಕಲುಷಿತ ನೀರು ಸೇವನೆಯಿಂದ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಬುಧವಾರ ವಾಂತಿಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡ ಗ್ರಾಮದ ಸುಮಾರು 22 ಜನರನ್ನು ಸಮೀಪದ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

‘ಇದುವರೆಗೆ ಒಟ್ಟು 22 ಜನರು ಚಿಕಿತ್ಸೆ ಪಡೆದಿದ್ದಾರೆ. ಮೊದಲ ದಿನ ಗ್ರಾಮದ ಶಾಲೆಯಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ನಂತರ ಮತ್ತೆ ಕೆಲವರನ್ನು ರಾಜೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹುಮನಾಬಾದ್, ಬಸವಕಲ್ಯಾಣದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಮುಡಬಿ ತಿಳಿಸಿದ್ದಾರೆ.

‘ಜೋರಾದ ಮಳೆ ಸುರಿದಿದ್ದರಿಂದ ಗ್ರಾಮದ ಕೆಲ ಸ್ಥಳಗಳಲ್ಲಿ ನೀರು ಸಂಗ್ರಹಗೊಂಡಿದೆ. ಚರಂಡಿಗಳಲ್ಲಿನ ಕಲುಷಿತ ನೀರು ಗ್ರಾಮಕ್ಕೆ ಪೂರೈಕೆಯಾಗುವ ಕುಡಿಯವ ಪೈಪ್‌ಲೈನ್‌ದಲ್ಲಿ ಸೇರ್ಪಡೆಯಾಗಿ ಕಲುಷಿತಗೊಂಡಿದೆ. ಆ ನೀರನ್ನೇ ಕುಡಿದಿದ್ದರಿಂದ ವಾಂತಿಭೇದಿ ಕಾಣಿಸಿಕೊಂಡಿದೆ. ಆದ್ದರಿಂದ ಶುದ್ಧ ಮತ್ತು ಕುದಿಸಿ ಆರಿಸಿದ ನೀರು ಕುಡಿಯುವಂತೆ ಮನವಿ ಮಾಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದೂ ಅವರು ಹೇಳಿದ್ದಾರೆ.

ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್, ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರೆಡ್ಡಿ, ಜಿಲ್ಲಾ ವೈದ್ಯಾಧಿಕಾರಿ ಡಾ.ಎಂ.ಎಂ.ಜಬ್ಬಾರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ವಿಭಾಗ, ತಾಲ್ಲೂಕು ವೈದ್ಯರ ತಂಡ ಎರಡು ದಿನಗಳಿಂದ ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ.

‘ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಯ ಹತ್ತಿರದಿಂದ ಹಳ್ಳ ಹರಿಯುತ್ತದೆ. ಅದರಲ್ಲಿನ ಮಳೆಯ ನೀರು ಪೈಪ್‌ಲೈನ್‌ನಲ್ಲಿ ಸೇರ್ಪಡೆ ಆಗುತ್ತಿದೆ. ಇನ್ನು ಮುಂದೆ ಹೀಗಾದಂತೆ ವ್ಯವಸ್ಥೆ ಕೈಗೊಳ್ಳಬೇಕು. ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಮನೆ ಬಳಕೆಯ ಮತ್ತು ಮಳೆ ನೀರು ಸರಾಗವಾಗಿ ಮುಂದೆ ಹೋಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ಗ್ರಾಮದ ಶಿವಕುಮಾರ ಆಗ್ರಹಿಸಿದ್ದಾರೆ.

ದೀಪಾವಳಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದ ಗ್ರಾಮಸ್ಥರಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದರಿಂದ ಹಬ್ಬ ಆಚರಿಸುವುದನ್ನು ಬಿಟ್ಟು ಅನೇಕರು ಆಸ್ಪತ್ರೆಯಲ್ಲಿಯೇ ಸಮಯ ಕಳೆಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT