ಮಡೆ ಮಡೆಸ್ನಾನಕ್ಕೆ ಅವಕಾಶ ನೀಡದಿದ್ದರೆ ತಟಸ್ಥ ನಿಲುವು

ಭಾನುವಾರ, ಮೇ 26, 2019
31 °C
ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆ ಎಚ್ಚರಿಕೆ

ಮಡೆ ಮಡೆಸ್ನಾನಕ್ಕೆ ಅವಕಾಶ ನೀಡದಿದ್ದರೆ ತಟಸ್ಥ ನಿಲುವು

Published:
Updated:
ಮಡೆ ಮಡೆಸ್ನಾನಕ್ಕೆ ಅವಕಾಶ ನೀಡದಿದ್ದರೆ ತಟಸ್ಥ ನಿಲುವು

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಡೆ ಮಡೆಸ್ನಾನ ನಡೆಸಲು ಅವಕಾಶ ನೀಡದೇ ಇದ್ದಲ್ಲಿ, ವಾರ್ಷಿಕ ಚಂಪಾಷಷ್ಠಿಯ ಕಾರ್ಯಕ್ರಮಗಳಲ್ಲಿ ಸ್ಥಳೀಯ ಮಲೆಕುಡಿಯ ಜನಾಂಗ ತಟಸ್ಥ ನಿಲುವು ತಾಳುವುದು ಅನಿವಾರ್ಯ ಆಗಲಿದೆ ಎಂದು ಆದಿವಾಸಿ ಬುಡಕಟ್ಟು ಹಿತರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಕೆ.ಭಾಸ್ಕರ್‌ ಬೆಂಡೋಡಿ ಹೇಳಿದ್ದಾರೆ.

ಈ ಬಗ್ಗೆ ರಾಜ್ಯದ ಮುಜರಾಯಿ ಸಚಿವರಿಗೆ ಪತ್ರ ಬರೆದಿರುವ ಅವರು, ದೇವಸ್ಥಾನದ ಧಾರ್ಮಿಕ ಸಂಪ್ರದಾಯವಾದ ಮಡೆ ಮಡೆಸ್ನಾನ ವಿಚಾರವನ್ನು ಮೌಢ್ಯ ಪ್ರತಿಬಂಧಕ ಕಾಯ್ದೆಯಿಂದ ಕೈಬಿಡುವಂತೆ ಆಗ್ರಹಿಸಿದ್ದಾರೆ.

‘ಕುಕ್ಕೆಯಲ್ಲಿ ಮಡೆಸ್ನಾನಕ್ಕೆ ಅವಕಾಶ ನೀಡಿದೆ ಇದ್ದರೆ, ವಾರ್ಷಿಕ ಚಂಪಾ ಷಷ್ಠಿಯ ಪೂರ್ವ ತಯಾರಿ, ಬ್ರಹ್ಮರಥೋತ್ಸವ, ಪಂಚ ಪರ್ವ ಉತ್ಸವಾದಿಗಳ ಕುರಿತು ಸ್ಥಳೀಯ ಮಲೆಕುಡಿಯ ಜನಾಂಗ ತಟಸ್ಥ ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ. ಇದರಿಂದ ಸರ್ಕಾರ ಸಂದಿಗ್ಧ ಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಅತಿಸೂಕ್ಷ್ಮ ವಿಚಾರವಾಗಿರುವ ಮಡೆ ಮಡೆಸ್ನಾನಕ್ಕಿರುವ ಎಲ್ಲ ಅಡ್ಡಿ ನಿವಾರಿಸಲು ಮುಜರಾಯಿ ಸಚಿವರು ಕ್ರಮ ಕೈಗೊಳ್ಳಬೇಕು. ಮಲೆಕುಡಿಯ ಜನಾಂಗದ ಕೋರಿಕೆಯನ್ನು ಪರಿಗಣಿಸಿ, ಈ ವರ್ಷ ನಡೆಯುವ ವಾರ್ಷಿಕ ಚಂಪಾ ಷಷ್ಠಿಯ ದಿನ ಮಡೆ ಮಡೆಸ್ನಾನ ಮುಂದುವರಿಸಲು ದೇವಾಲಯದ ಆಡಳಿತ ಮಂಡಳಿ, ಮುಜರಾಯಿ ಇಲಾಖೆಗೆ ತಕ್ಷಣ ಆದೇಶ ನೀಡಬೇಕು. ಮಡೆ ಮಡೆಸ್ನಾನದ ಕುರಿತು ಇರುವ ತಡೆಯಾಜ್ಞೆ ಹಿಂದಕ್ಕೆ ಪಡೆಯಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry