ಶುಕ್ರವಾರ, ಸೆಪ್ಟೆಂಬರ್ 20, 2019
25 °C

ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ಆಗ್ರಹ

Published:
Updated:

ಕಾರವಾರ: ‘ಕೇಂದ್ರ ಸರ್ಕಾರವು ರಾಷ್ಟ್ರೀಯ ಮೀನುಗಾರಿಕಾ ನೀತಿಯನ್ನು ಜಾರಿಗೆ ತರಬೇಕು’ ಎಂದು ಕಾಂಗ್ರೆಸ್‌ ಮೀನುಗಾರ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಯು.ಆರ್‌.ಸಭಾಪತಿ ಇಲ್ಲಿ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರಾವಳಿ ರಾಜ್ಯಗಳು ತಮ್ಮದೇ ಮೀನುಗಾರಿಕಾ ನೀತಿಯನ್ನು ಹೊಂದಿವೆ. ಹೀಗಾಗಿ ಕೇರಳ, ಕರ್ನಾಟಕ ಹಾಗೂ ಗೋವಾ ರಾಜ್ಯದ ಮೀನುಗಾರರ ನಡುವೆ ಆಗಾಗ ಜಗಳ ನಡೆಯುತ್ತಿರುತ್ತವೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮೀನುಗಾರರ ಸಮಾವೇಶ ನ.21ಕ್ಕೆ: ‘ನವೆಂಬರ್ 21ರಂದು ಅಂತರರಾಷ್ಟ್ರೀಯ ಮೀನುಗಾರರ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ದಿನ ಕುಮಟಾದ ಮಣಕಿಯಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಮೀನುಗಾರರ ಸಮಾವೇಶವನ್ನು ಆಯೋಜಿಸಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಈ ಸಮಾವೇಶದಲ್ಲಿ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 1 ಲಕ್ಷಕ್ಕೂ ಅಧಿಕ ಮೀನುಗಾರರನ್ನು ಸೇರಿಸುವ ಗುರಿ ಹೊಂದಿದ್ದೇವೆ. ಮೀನುಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಪರಿಹಾರಕ್ಕಾಗಿ ವಿವಿಧ ಬೇಡಿಕೆಗಳನ್ನು ಮಂಡಿಸಲಿದ್ದೇವೆ’ ಎಂದು ಹೇಳಿದರು.

ಪ್ರತ್ಯೇಕ ಸಚಿವಾಲಯಕ್ಕೆ ಒತ್ತಾಯ: ‘ಎಲ್ಲ ರಾಜ್ಯಗಳಲ್ಲಿ ಮೀನುಗಾರಿಕಾ ಖಾತೆ ಇದೆ. ಆದರೆ ಕೇಂದ್ರದಲ್ಲಿ ಮೀನುಗಾರಿಕಾ ಖಾತೆಯು ಕೃಷಿ ಸಚಿವಾಲಯದ ಜತೆ ವಿಲೀನಗೊಂಡಿದೆ. ಇದರಿಂದ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ. ಹೀಗಾಗಿ ಪ್ರತ್ಯೇಕ ಸಚಿವಾಲಯಕ್ಕಾಗಿ ಸಮಾವೇಶದಲ್ಲಿ ಆಗ್ರಹಿಸಲಾಗುವುದು’ ಎಂದು ಹೇಳಿದರು.

ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಮೀನುಗಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ರಾಜ್ಯ ಸರ್ಕಾರವು ಕಳುಹಿಸಿದ ಈ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಇದನ್ನು ಪುನರ್‌ ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರದಿಂದ ಇನ್ನೊಮ್ಮೆ ಪ್ರಸ್ತಾವ ಹೋಗಲಿದೆ’ ಎಂದರು.

ಡೀಸೆಲ್‌ ದರ ಇಳಿಕೆ ಆಗ್ರಹ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದರೂ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಇಳಿಕೆ ಮಾಡದೇ ಕೇಂದ್ರ ಸರ್ಕಾರ ದ್ರೋಹ ಎಸಗಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟ ನಡೆಸಲಾಗುವುದು.

ಮೀನುಗಾರಿಕಾ ದೋಣಿಗಳಿಗೆ ನೀಡುವ ಡೀಸೆಲ್‌ಗೆ ತೆರಿಗೆ ವಿಧಿಸಬಾರದು. ಕೃಷಿಕರ ಸಾಲ ಮನ್ನಾ ಮಾಡಿದಂತೆ ಮೀನುಗಾರರ ಸಾಲವನ್ನು ಕೂಡ ಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು. ಸಮಿತಿ ಉಪಾಧ್ಯಕ್ಷ ರಾಮ ಎಂ.ಮೊಗೇರ, ಪದಾಧಿಕಾರಿಗಳಾದ ವಿಷ್ಣು ಹರಿಕಂತ್ರ, ರಾಜು ಎನ್‌. ಉಗ್ರಾಣಕರ, ಚಂದ್ರಕಾಂತ ಖಾರ್ವಿ, ಮೋಹಿನಿ, ದಿನಕರ್‌, ಅನಿತಾ ಹಾಜರಿದ್ದರು.

Post Comments (+)