ಗುರುವಾರ , ಫೆಬ್ರವರಿ 25, 2021
19 °C

ನನಗೆ ನಾನೇ ರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನಗೆ ನಾನೇ ರಾಜ

–ಕಲಾವತಿ ಬೈಚಬಾಳ

**

ನನ್ನ ಹೆಸರು ಅನಂದ. ವಯಸ್ಸು 65 ವರ್ಷ ದಾಟಿದೆ ಅಂದ್ಕೊಳಿ. 'ನನ್ನ ಮಗ ಯಾವಾಗ್ಲೂ ಸಂತೋಷವಾಗಿರಲಿ' ಅಂತ ಅಮ್ಮ ನನಗೆ ಆನಂದ ಅಂತ ಹೆಸರಿಟ್ರಂತೆ. ಹುಟ್ಟಿ ಬೆಳೆದಿದ್ದೆಲ್ಲಾ ಇಲ್ಲೆ. ಅಪ್ಪ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ರು. ಒಟ್ಟು 9 ಜನ ಮಕ್ಕಳು ನಾವು. ಆಗಿನ ಪರಿಸ್ಥಿತಿಯಲ್ಲಿ ನಮ್ಮ ತಂದೆಗೆ 350 ರೂಪಾಯಿ ಸಂಬಳ. ಹಣಕ್ಕೆ ಕಷ್ಟ ಇದ್ರೂ ಬದುಕು ಕಟ್ಟಿಕೊಳ್ಳುವಷ್ಟು ಶಿಕ್ಷಣ ಕೊಡಿಸಿದ್ದಾರೆ. 7ನೇ ಕ್ಸಾಸ್‌ವರೆಗೂ ಓದಿದ್ದೀನಿ.

ನಮ್ಮ ತಂದೆಗೆ ಬರೋ ಸಂಬಳ ಯಾವುದಕ್ಕೂ ಸಾಲುತ್ತಿರಲಿಲ್ಲ. ಮಕ್ಕಳ ಹೊಟ್ಟೆ ಬಟ್ಟೆಗೆ ವ್ಯವಸ್ಥೆ ಮಾಡೋದರಲ್ಲೆ ಎಲ್ಲ ಖರ್ಚಾಗ್ತಿತ್ತು. ತಂದೆ ನಿವೃತ್ತಿ ಆದ ಮೇಲೆ ಪರಿಸ್ಥಿತಿ ಇನ್ನೂ ಗಂಭೀರ ಆಯ್ತು. ಮಕ್ಕಳೆಲ್ಲ ಬೆಳಿತಾ ಬಂದ್ರು. ಖರ್ಚು ಹೆಚ್ಚಾಗ್ತಾ ಬಂತು. ನಮ್ಮಮ್ಮನಿಗೆ ಪೊಲೀಸ್‌ ಕೆಲಸ್‌ ಇಷ್ಟಾ ಇರಲಿಲ್ಲ. ಹಾಗಾಗಿ ನಮಗೂ ಆ ಕೆಲಸ ಮಾಡೊಕ್ ಬೇಡಾ ಅಂದ್ರು. ನಾವೆಲ್ಲ ಬೇರೆ ಕೆಲಸ ಹುಡುಕೋದು ಅನಿವಾರ್ಯ ಆಯ್ತು. ಚಿಕ್ಕಂದಿನಿಂದಾನೇ ಬೂಟ್‌ ಪಾಲಿಶ್‌ ಮಾಡೋ ಕೆಲಸ ಆರಂಭಿಸಿದೆ. ಸದ್ಯ ಅಪ್ಪನೂ ಇಲ್ಲ, ಅವ್ವನೂ ಇಲ್ಲ. ಅವ್ರು ತೀರಿ ಹೋಗಿ 30 ವರ್ಷ ಆಗ್ತಾ ಬಂತು.

ನಾನು ಮದುವೆ ವಯಸ್ಸಿಗೆ ಬಂದೆ. ಬದುಕು ಕಟ್ಟಿಕೊಳ್ಳ‌ಲೇಬೇಕಾದ ಅನಿವಾರ್ಯತೆ ಬಂತು. 33ನೇ ವಯಸ್ಸಿಗೆ ಮದುವೆ ಆಯ್ತು. ನನ್ನ ಹೆಂಡತಿನೂ 8ನೇ ಕ್ಸಾಸ್‌ವರೆಗೂ ಓದಿದ್ದಾಳೆ. ನಮ್ಮ ಕುಟುಂಬಕ್ಕೂ ಕಿತ್ತು ತಿನ್ನೋ ಬಡತನ ಬೆನ್ನುಬಿಡದೆ ಬಂತು. ಮೊದಲು ಇಡೀ ಊರು ತಿರುಗಿ ಬೂಟ್ ಪಾಲೀಶ್ ಮಾಡ್ತಿದ್ದೆ. ಈಗ ಟ್ರಿನಿಟಿ ಸರ್ಕಲ್‌ ಹತ್ರ ಕೂತು ಕೆಲಸ ಮಾಡ್ತಿದ್ದೀನಿ.

ಒಂದು ಜೊತೆ ಬೂಟ್‌ ಪಾಲಿಶ್‌ಗೆ 20 ರೂಪಾಯಿ ತಗೋತೀನಿ. ಒಂದು ದಿನಕ್ಕೆ ಅಬ್ಬಬ್ಬಾ ಅಂದ್ರೂ ₹200–300 ಬರುತ್ತೆ. ಹಲಸೂರಿನಲ್ಲಿ ಬಾಡಿಗೆ ಮನೆ ಇದೆ. ತಿಂಗಳಿಗೆ ₹5000 ಬಾಡಿಗೆಗೆ ಹೋಗುತ್ತೆ. ಇಬ್ಬರು ತಂಗಿಯರಿಗೆ ಮದ್ವೆ ಆಗಿಲ್ಲ. ಅವರಿಗೂ ವಯಸ್ಸಾಗಿದೆ. ಚಿಕ್ಕಂದಿನಿಂದ ಅವರನ್ನ ನಾನೇ ನೋಡಿಕೊಂಡು ಬಂದಿದ್ದೀನಿ. ಈಗಲೂ ಅವರಿಬ್ಬರ ಜವಾಬ್ದಾರಿ ನನ್ನ ಮೇಲೆ ಇದೆ. ಜಗ್ಗದಾಟದ ಹರಕಲು ಮುರಕಲು ಸಂಸಾರದಾಗೆ 7 ಜನರ ಬದುಕಿನ ಬಂಡಿ ಹೆಂಗೊ ಸಾಗ್ತಾ ಅದೆ.

ಕಷ್ಟ ಅಂತಾ ಕೂತ್ರೆ ಯಾವುದನ್ನೂ ಮಾಡೋಕೆ ಆಗಲ್ಲ. ಯಾವತ್ತೂ ನೆಮ್ಮದಿಯಿಂದ ಇರೋಕೂ ಆಗಲ್ಲ. ನನಗೇನು ಆಫೀಸರ್‌ ಆಗೋ, ಕಂಪೆನಿಯಲ್ಲೋ ಕೆಲಸ ಮಾಡಬೇಕು ಅನ್ನೋ ಆಸೆ ಇರಲಿಲ್ಲ. ಈ ಕೆಲಸ ಮಾಡೋಕೆ ನನಗೆ ಮುಜುಗರ, ಅಸಹ್ಯ, ಬೇಸರ ಇಲ್ಲ. ಸ್ವಂತದ ದುಡಿಮೇಲಿ ನಮಗ್‌ ನಾವೇ ರಾಜಾ, ನಾವೇ ಮಂತ್ರಿ. ಯಾವಾಗ್ ಬೇಕಾದ್ರೂ, ಎಲ್ಲಿ ಬೇಕಾದ್ರೂ, ಹೆಂಗ್‌ ಬೇಕಾದ್ರೂ ಹೋಗಬಹುದು, ಬರಬಹುದು. ಹೇಳೊರಿಲ್ಲ-ಕೇಳೊರಿಲ್ಲ. ತುಂಬಾ ಖುಷಿ ಇದೆ ಕಣಮ್ಮ ಈ ಕೆಲಸದಲ್ಲಿ. ನನ್ನ ಸಂಸಾರಕ್ಕೆ ಅನ್ನ ಕೊಡ್ತಿರೋ ದೇವರು ಇದು. ಕಾಯಕಾನೇ ದೈವ ನೋಡು.

ದಿನಪೂರ್ತಿ ಕೂತು ಕೂತು, ಕೆಲಸ ಮಾಡೋದ್ರಿಂದಾ ಬೆನ್ನು ನೋವು, ಮಂಡಿ ನೋವು ಬರುತ್ತೆ. ನೋವು ಮರೆಯೋಕೆ ಕುಡಿತ ಬೇಕು ಅನಿಸುತ್ತೆ. ನಮ್ಮಂಥ ಬಡವರಿಗೂ ಬಿಪಿ, ಶುಗರ್‌ ಬಂದಿದೆ ನೋಡು. ಮನೇಲಿ ಹೆಂಡ್ತಿ, ಮಕ್ಕಳು ಕುಡಿಬೇಡಾ ಕುಡಿಬೇಡಾ ಅಂತಾ ಬೈತಾರೆ. ಈಗ ಕುಡಿತ ಸ್ವಲ್ವ ಕಡಿಮೆ ಮಾಡಿದ್ದೀನಿ. ಇರೋಕೆ ಸರಿಯಾದ ಸೂರಿಲ್ಲ. ಆದ್ರೆ ಕಾಯಿಲೆಗಳಿಗೆ ದುಡ್ಡು ಸುರಿತಾನೇ ಇರಬೇಕು.

ಕಾಯಿಲೆ ಇದೆ ಅಂತಾ ಹಣೆ ಮೇಲೆ ಕೈಹೊತ್ತು ಕೂತ್ರೆ, ಟೆನ್ಷನ್‌ ಆಗಿ, ಹುಚ್ಚು ಹಿಡಿಯುತ್ತೆ ಅಷ್ಟೇ. ಕಾಲಾ ಬದಲಾಗ್ತಾ ಇದ್ದಂಗೆ ಎಲ್ಲಾನೂ ಬದ್ಲಾಗ್ತಾ ಹೋಗುತ್ತೆ. ಇರೋವಷ್ಟು ದಿನಾ ಇದ್ದುದ್ದರಲ್ಲೆ ಸುಖ, ಆನಂದದಿಂದ ಬದುಕಬೇಕು. ಬಂದಿದ್ದು ಬರಲಿ, ಎದುರಿಸ್ತೀನಿ ಅನ್ನೋ ಧೈರ್ಯ ಇದ್ರೆ ಜಗತ್ತನ್ನೆ ಗೆಲ್ತೀವಿ.⇒v

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.