ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳಿಂದ ಕರಾಳ ದಿನ

ನೋಟು ರದ್ದತಿ: ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ, ದೇಶದಾದ್ಯಂತ ಪ್ರತಿಭಟನಾ ಜಾಥಾ
Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನೋಟು ರದ್ದತಿ ನಿರ್ಧಾರದ ಒಂದು ವರ್ಷಾಚರಣೆಯ ದಿನವಾದ ಬುಧವಾರ ಕಾಂಗ್ರೆಸ್‌, ಎಡ ಪಕ್ಷಗಳು ಸೇರಿ ವಿರೋಧ ಪಕ್ಷಗಳು ದೇಶದಾದ್ಯಂತ ಕರಾಳ ದಿನ ಆಚರಿಸಿದವು. ಪ್ರತಿಭಟನಾ ರ‍್ಯಾಲಿ ನಡೆಸಿ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಹರಿಹಾಯ್ದವು.

ಗುಜರಾತ್‌ನ ಸೂರತ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಕಾಂಗ್ರೆಸ್‌ ಉ‍ಪಾಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸಿದ್ದರು. ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಸ್ಥಳೀಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು.

ಕೋಲ್ಕತ್ತ ವರದಿ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಬುಧವಾರ ರಾಜ್ಯದಾದ್ಯಂತ ಕರಾಳ ದಿನ ಆಚರಿಸಿತು. ಪಕ್ಷದ ಮುಖಂಡರು ಮತ್ತು ರಾಜ್ಯದ ಸಚಿವರು ಪ್ರತಿಭಟನಾ ರ‍್ಯಾಲಿಗಳ ನೇತೃತ್ವ ವಹಿಸಿದ್ದರು.

ಟಿಎಂಸಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗಳನ್ನು ದಹಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೋಟು ರದ್ದತಿಗೆ ‘ಡೆಮೊಡಿಸಾಸ್ಟರ್‌’ ಎಂಬ ಹ್ಯಾಶ್‌ಟ್ಯಾಗ್‌ ಮಾಡಿರುವ  (#DeMoDisaster) ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಟ್ವಿಟರ್‌ನಲ್ಲಿ ತಮ್ಮ ಖಾತೆಯ ಚಿತ್ರದ (ಡಿಪಿ–ಡಿಸ್‌ಪ್ಲೇ ಪಿಕ್ಚರ್‌) ಜಾಗದಲ್ಲಿ ಕಪ್ಪು ಬಣ್ಣ ಪ್ರದರ್ಶಿಸಿದ್ದಾರೆ.

ಕೇಂದ್ರದ ನಿರ್ಧಾರ ‘ದೊಡ್ಡ ಹಗರಣ’ ಎಂದು ಅವರು ಮಂಗಳವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದನ್ನು ಟ್ವಿಟರ್‌ನಲ್ಲಿ ಅವರು ಮರುಟ್ವೀಟ್‌ ಮಾಡಿದ್ದಾರೆ.

ಮದುರೆ ವರದಿ: ತಮಿಳುನಾಡಿನ ಮದುರೆಯಲ್ಲಿ ಡಿಎಂಕೆ ಕಾರ್ಯಕರ್ತರು ಪ್ರತಿಭಟನಾ ರ‍್ಯಾಲಿ ನಡೆಸಿದ್ದರು.

ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌ ನೇತೃತ್ವದಲ್ಲಿ ರ‍್ಯಾಲಿ ನಡೆಯಿತು. ಪಕ್ಷದ ಕಾರ್ಯಕರ್ತರು ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಿರುಚಿನಾಪಲ್ಲಿ ಮತ್ತು ಕೊಯಮತ್ತೂರಿನಲ್ಲಿ ಡಿಎಂಕೆಯ ಹಿರಿಯ ನಾಯಕರಾದ ದೊರೈ ಮುರುಗನ್‌ ಹಾಗೂ ಕನಿಮೋಳಿ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಕ್ಷದ ಮುಖಂಡರು ಸೇರಿದಂತೆ ಎಲ್ಲ ಪ್ರತಿಭಟನಾಕಾರರು ಕಪ್ಪು ದಿರಿಸು ಧರಿಸಿದ್ದರು.

ಭಾರಿ ಮಳೆಯಿಂದಾಗಿ ನೆರೆ ಹಾವಳಿಗೆ ತುತ್ತಾಗಿದ್ದ ರಾಜಧಾನಿ ಚೆನ್ನೈ ಸೇರಿ ಎಂಟು ಜಿಲ್ಲೆಗಳಲ್ಲಿ ಬೇರೆ ದಿನ ಪ್ರತಿಭಟನೆ ನಡೆಸಲಾಗುವುದು ಎಂದು ಡಿಎಂಕೆ ಹೇಳಿದೆ.

ಶಿವಸೇನಾ ವಿರೋಧ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷ ಶಿವಸೇನಾ ಕೂಡ ಕೇಂದ್ರದ ನಿರ್ಧಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿತ್ತು.
*
‘ಜನರ ಸಾವು, ಸಂಕಷ್ಟಗಳ ಸಂಭ್ರಮಾಚರಣೆ’
ನವದೆಹಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವೊಂದು ಜನರ ಸಾವು ಮತ್ತು ನರಳಾಟವನ್ನು ಸಂಭ್ರಮಿಸುತ್ತಿದೆ‌ ಎಂದು ಎಡಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ಕೇಂದ್ರದ ನೋಟು ರದ್ದತಿ ನೀತಿಯ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದ ಆರು ಎಡಪಕ್ಷಗಳು, ಸರತಿ ಸಾಲಲ್ಲಿ ನಿಂತು ಜನರು ಪ್ರಾಣ ಕಳೆದುಕೊಳ್ಳುವಂತೆ ಮಾಡಿ ಮತ್ತು ಕಪ್ಪು ಹಣ ಹೊಂದಿರುವವರಿಗೆ ಅದನ್ನು ಸಕ್ರಮಗೊಳಿಸಲು ನೆರವಾಗುವ ಮೂಲಕ ಕೇಂದ್ರ ಸರ್ಕಾರ ಎರಡು ದಾಖಲೆಗಳನ್ನು ನಿರ್ಮಿಸಿದೆ’ ಎಂದು ಟೀಕಿಸಿವೆ.

ನೋಟುರದ್ದತಿಯ ವರ್ಷಾಚರಣೆಯಂದು ‘ಕಪ್ಪು ಹಣ ವಿರೋಧಿ ದಿನ’ ಆಚರಿಸುವ ಬಿಜೆಪಿ ನಿರ್ಧಾರಕ್ಕೆ ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ಇನ್ನೂ ತನ್ನ ತಪ್ಪು ಒಪ್ಪಿಕೊಂಡಿಲ್ಲ’ ಎಂದು ಸಿಪಿಐ ಮುಖಂಡ ಅತುಲ್‌ ಅಂಜನ್‌ ಹೇಳಿದ್ದಾರೆ.
*
ಬಿಜೆಪಿಯಿಂದ ಕಪ್ಪು ಹಣ ವಿರೋಧಿ ದಿನ
ನವದೆಹಲಿ:
ವಿರೋಧ ಪಕ್ಷಗಳ ಕರಾಳ ದಿನಕ್ಕೆ ಪ್ರತಿಯಾಗಿ ಬಿಜೆಪಿ ದೇಶದಾದ್ಯಂತ ಬುಧವಾರ ಕಪ್ಪು ಹಣ ವಿರೋಧಿ ದಿನ ಆಚರಿಸಿತು.

ವಿವಿಧ ರಾಜ್ಯಗಳಲ್ಲಿ ಕೇಂದ್ರ ಸಚಿವರು, ಬಿಜೆಪಿ ಸಂಸದರು, ಶಾಸಕರು ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ರ‍್ಯಾಲಿಗಳು ನಡೆದವು. ಕರಾಳ ದಿನ ಆಚರಿಸಿದ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮುಖಂಡರು, ನೋಟು ರದ್ದತಿಯನ್ನು ಬಲವಾಗಿ ಸಮರ್ಥಿಸಿಕೊಂಡರು.

ಭಾಗವಹಿಸದ ಜೆಡಿಯು: ಬಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಪ್ಪು ಹಣ ವಿರೋಧಿ ದಿನಾಚರಣೆಯಲ್ಲಿ ಬಿಜೆಪಿಯ ಮಿತ್ರ ಪಕ್ಷ ಜೆಡಿಯು ಭಾಗವಹಿಸದೇ ಇದ್ದುದು ಸಂಶಯಕ್ಕೆ ಎಡೆ ಮಾಡಿದೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ  ವಶಿಷ್ಠ ನಾರಾಯಣ್‌ ಸಿಂಗ್‌, ‘ಕಪ್ಪು ಹಣ ವಿರುದ್ಧದ ಹೋರಾಟದಲ್ಲಿ ಪಕ್ಷ ಯಾವತ್ತೂ ಮೋದಿ ಅವರನ್ನು ಬೆಂಬಲಿಸಿದೆ. ಆದರೆ, ಬಿಜೆಪಿ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮ ಅಥವಾ ರ‍್ಯಾಲಿಯಲ್ಲಿ ಜೆಡಿಯು ಭಾಗವಹಿಸುವ ಅಗತ್ಯ ಇಲ್ಲ’ ಎಂದು  ಹೇಳಿದ್ದಾರೆ.

ವಿಡಿಯೊ: ನೋಟು ರದ್ದತಿಯ ನಿರ್ಧಾರದ ಲಾಭಗಳನ್ನು ಪಟ್ಟಿ ಮಾಡಿರುವ, 7.13 ನಿಮಿಷಗಳ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
*
ನೋಟು ರದ್ದತಿ: ಯಾರು ಏನಂದರು...?
ಭಾರತ ವಿರೋಧಿ ಶಕ್ತಿಗಳಿಗೆ ಈ ನಿರ್ಧಾರ ಹೊಡೆತ ನೀಡಿದೆ. ಅರ್ಥವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವಿಕೆ ಮತ್ತು ಹಣಕಾಸಿನ ಸೇರ್ಪಡೆ ಹೆಚ್ಚಾಗುವ ಮೂಲಕ ಕಡು ಬಡವರನ್ನು ಇದು ಸಶಕ್ತಗೊಳಿಸಿದೆ
–ಮನೋಹರ ಪರಿಕ್ಕರ್‌, ಗೋವಾ ಮುಖ್ಯಮಂತ್ರಿ

ಪ್ರಧಾನಿ ಮೋದಿ ಅವರ ನೋಟು ರದ್ದತಿ ನೀತಿ ಭ್ರಷ್ಟಾಚಾರವನ್ನು ನಿಲ್ಲಿಸಿದೆ. ಕಪ್ಪುಹಣ ಹೊಂದಿರುವ ಕಾಂಗ್ರೆಸ್‌ ನಾಯಕರು ಕಳೆದ ವರ್ಷದ ನವೆಂಬರ್‌ 8ರಿಂದ ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ
–ಕಿರಣ್‌ ರಿಜಿಜು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ

ಕಪ್ಪುಹಣದ ವಿಚಾರದಲ್ಲಿ ಸರ್ಕಾರ ಅತ್ಯಂತ ಗಂಭೀರವಾಗಿದೆ. ಅದರ ನಿಯಂತ್ರಣಕ್ಕೆ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಅಕ್ರಮ ಸಂಪತ್ತಿನ ವಿರುದ್ಧ ಕೈಗೊಂಡ ಅತ್ಯಂತ ಪ್ರಮುಖ ನಿರ್ಣಯಗಳಲ್ಲಿ ನೋಟು ರದ್ದತಿಯೂ ಒಂದು
–ಸುರೇಶ್‌ ಪ್ರಭು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ

ಕೇಂದ್ರ ಸರ್ಕಾರದ ನಿರ್ಧಾರದ ನಂತರ ಡಿಜಿಟಲ್‌ ವಹಿವಾಟಿನ ಪ್ರಮಾಣ ಶೇ 58ರಷ್ಟು ಹೆಚ್ಚಿದೆ. ತೆರಿಗೆದಾರರ ಸಂಖ್ಯೆ 56 ಲಕ್ಷ ಹೆಚ್ಚಾಗಿದೆ. ಕಪ್ಪು ಹಣದ ಕುಳಗಳಿಗೆ ನೋಟು ರದ್ದತಿಯಿಂದ ತೊಂದರೆಯಾಗಿದೆ ಎಂಬುದು ನಮಗೆ ತಿಳಿದಿದೆ
–ನಿತಿನ್‌ ಗಡ್ಕರಿ, ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ

ನೋಟು ರದ್ದತಿಯಿಂದಾಗಿ ಕಪ್ಪು ಹಣವನ್ನು ಸಕ್ರಮಗೊಳಿಸುವುದು ಸುಲಭವಾಯಿತು. ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಂಬಿಸಿ ಅವರನ್ನು ಮೂರ್ಖರನ್ನಾಗಿ ಮಾಡಲಾಗಿದೆ
–ಲಾಲು ಪ್ರಸಾದ್, ಆರ್‌ಜೆಡಿ ಮುಖ್ಯಸ್ಥ

ಮೋದಿ ಸರ್ಕಾರ ತರಾತುರಿಯಲ್ಲಿ ಈ ತೀರ್ಮಾನ ಕೈಗೊಂಡಿತ್ತು. ದೇಶದ 125 ಕೋಟಿ ಜನ ಅದರಲ್ಲೂ ಬಡವರು, ರೈತರು ಮತ್ತು ಶ್ರಮಜೀವಿಗಳ ಮೇಲೆ ಇದರ ಪರಿಣಾಮ ತಟ್ಟಿತು. ಭಾರತದ ಇತಿಹಾಸದಲ್ಲಿ ಇದೊಂದು ಕಪ್ಪು ಅಧ್ಯಾಯ
–ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

ಕಪ್ಪು ಹಣದ ಮೋಹಿಗಳು, ಮತ್ತು ಕೋಟ್ಯಂತರ ರೂಪಾಯಿಗಳಷ್ಟು ಮೊತ್ತವನ್ನು ಸಂಗ್ರಹಿಸಿಟ್ಟುಕೊಂಡವರು ಕರಾಳ ದಿನ ಆಚರಿಸುತ್ತಿದ್ದಾರೆ
–ಸುಶೀಲ್‌ ಕುಮಾರ್‌ ಮೋದಿ, ಬಿಹಾರ ಉಪಮುಖ್ಯಮಂತ್ರಿ

1947ರಲ್ಲಿ ಮಧ್ಯರಾತ್ರಿಯಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತ್ತು. 2016ರ ನವೆಂಬರ್‌ 8ರ ಮಧ್ಯರಾತ್ರಿ ನಾವು ಅದನ್ನು ಕಳೆದುಕೊಂಡೆವು. ಕೇಂದ್ರದ ನಿರ್ಧಾರದಿಂದ ಜನಸಾಮಾನ್ಯರು ಯಾತನೆ ಪಡುವಂತಾಯಿತು
–ಎಂ.ಕೆ. ಸ್ಟಾಲಿನ್‌, ಡಿಎಂಕೆ ಕಾರ್ಯಾಧ್ಯಕ್ಷ

ದೇಶದ ಮೇಲೆ ತೀವ್ರ ಪರಿಣಾಮ ಬೀರಿರುವ ಈ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲಾಗಿದೆ. ಇದರ ಹಿಂದಿನ ನಿಜವಾದ ಉದ್ದೇಶವನ್ನು ಅರಿಯುವುದಕ್ಕಾಗಿ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು
–ಪೃಥ್ವಿರಾಜ್‌ ಚವಾಣ್‌, ಕಾಂಗ್ರೆಸ್‌ ಮುಖಂಡ

ಕಪ್ಪು ಹಣವನ್ನು ಹೊಸ ನೋಟುಗಳಾಗಿ ಪರಿವರ್ತಿಸಲು ಸಿರಿವಂತರು ದಾರಿಗಳನ್ನು ಕಂಡುಕೊಂಡಿದ್ದಾರೆ. ಈ ವಿಚ್ಛಿದ್ರಕಾರಕ ನಿರ್ಧಾರ ಲಕ್ಷಾಂತರ ಜನರು ಅಸಹಾಯಕರಾಗಿ ನರಳುವಂತೆ ಮಾಡಿದೆ. ಅಸಂಘಟಿತ ವಲಯದ ಕಾರ್ಮಿಕರು ಕಷ್ಟಕ್ಕೆ ತುತ್ತಾದರು. ನಮ್ಮ ಕಾಲದಲ್ಲಿ ನಡೆದ ಈ ಬಹುದೊಡ್ಡ ಎಡವಟ್ಟಿಗೆ ನೀವು ಕ್ಷಮೆ ಕೇಳಲು ಸಿದ್ಧರಿದ್ದೀರಾ?
–ಪ್ರಕಾಶ್‌ ರೈ, ಚಿತ್ರ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT