7

ಸ್ಥಾಪನೆಯಾಗದ ಸಕ್ಕರೆ ಕಾರ್ಖಾನೆ: ಭೂಮಿ ನೀಡಿದ ರೈತರ ಧರಣಿ

Published:
Updated:
ಸ್ಥಾಪನೆಯಾಗದ ಸಕ್ಕರೆ ಕಾರ್ಖಾನೆ: ಭೂಮಿ ನೀಡಿದ ರೈತರ ಧರಣಿ

ಯಾದಗಿರಿ: ‘ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿ ಮುಷ್ಟೂರಿನ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.

‘ಹೈದರಾಬಾದಿನ ಕೀರ್ತಿ ಇಂಡಸ್ಟ್ರೀಸ್ ಸಂಸ್ಥೆ ಆಡಳಿತ ಮಂಡಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಮುಷ್ಟೂರು ಗ್ರಾಮದಲ್ಲಿ 2006–07ರಲ್ಲಿ ರೈತರಿಂದ ಸುಮಾರು 200 ಎಕರೆ ಭೂಮಿ ಖರೀದಿಸಿದೆ. ಭೂಮಿ ಖರೀದಿಸುವಾಗ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ. ಭೂಮಿ ಖರೀದಿಸಿ 12 ವರ್ಷ ಗತಿಸಿದರೂ ಕಾರ್ಖಾನೆ ಸ್ಥಾಪಿಸದೇ ಇರುವುದರಿಂದ ಭೂಮಿ ನೀಡಿದ ರೈತರಿಗೆ ಯಾವುದೇ ಉದ್ಯೋಗ ಇಲ್ಲದಂತಾಗಿದೆ. ಇತ್ತ ಉದ್ಯೋಗವೂ ಇಲ್ಲ; ಅತ್ತ ಭೂಮಿಯೂ ಇಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘3,500 ಮೆಟ್ರಿಕ್‌ ಟನ್ ಸಕ್ಕರೆ ಕಾರ್ಖಾನೆ ಹಾಗೂ 2,500 ಮೆಗಾವಾಟ್‌ ಸಾಮರ್ಥ್ಯದ ವಿದ್ಯುತ್‌ ಘಟಕ ಸ್ಥಾಪಿಸಿ ಭೂಮಿ ನೀಡಿದ ರೈತ ಕುಟುಂಬಗಳಿಗೆ ವಸತಿ ಸೌಕರ್ಯ, ಉದ್ಯೋಗ, ಆರೋಗ್ಯ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಸ್ಥೆಗೆ ಭೂಮಿ ನೀಡಲಾಗಿತ್ತು. ಆದರೆ, ಕಂಪೆನಿ ಏನನ್ನೂ ಮಾಡದೆ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದೆ’ ಎಂದು ದೂರಿದರು.

‘ಜಿಲ್ಲಾಡಳಿತ ಕೀರ್ತಿ ಇಂಡಸ್ಟ್ರೀಸ್‌ ಹೈದರಾಬಾದ್‌ ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಭೂಮಿ ಕಳೆದುಕೊಂಡ ರೈತರಿಗೆ ಮರಳಿ ಭೂಮಿ ಒದಗಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಫಕೀರಪ್ಪ ನಾಯಕ, ಮನು ಐಕೂರ, ಶರಣು ನಾಯಕ ಮುದ್ನಾಳ, ಎಚ್‌.ಕೆ.ಯಲ್ಲಪ್ಪ ನಾಯಕ, ಶಿವಮಾನಯ್ಯ ಗೋನಾಲ, ಶ್ರೀಧರ ಎಸ್.ಚವ್ಹಾಣ, ಮಲ್ಲಪ್ಪ ತಡಬಿಡಿ ಅಂಬುರಾಜ ನಾಯಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry